ಬೆಂಗಳೂರು: ನವದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಪ್ರತಿ ವರ್ಷ ಹಮ್ಮಿಕೊಳ್ಳಲಾಗುವ ಪಥ ಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಗೊಳ್ಳುವುದಿಲ್ಲ. ಕಳೆದ 13 ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಸ್ತಬ್ಧಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಆದರೆ, ಇದೇ ಮೊದಲ ಬಾರಿ ಕೇಂದ್ರ ಸರ್ಕಾರ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.
ಜನವರು 26ರ ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ದೇಶದ ಬಹುತ್ವ ಪರಂಪರೆಯ ವೈವಿಧ್ಯತೆಯನ್ನು ವಿವಿಧ ರಾಜ್ಯಗಳು ಪ್ರದರ್ಶನ ನೀಡಲಿವೆ. ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಆಚಾರ, ವಿಚಾರಗಳು ಸೇರಿದಂತೆ ಹಲವಾರು ಅಂಶಗಳನ್ನು ಒಳಗೊಂಡಿರುವ ಸ್ತಬ್ಧ ಚಿತ್ರಗಳನ್ನು ರೂಪಿಸಿ, ಪ್ರದರ್ಶಿಸಲಾಗುತ್ತದೆ. ಭಾರತ ವಿವಿಧತೆಯಲ್ಲಿ ಏಕತೆ ಎಂಬುದನ್ನು ಸಾರುತ್ತದೆ.
ಇದನ್ನು ಓದಿ: ಗಣರಾಜ್ಯೋತ್ಸವ ಸ್ತಬ್ಧಚಿತ್ರ: ಕರ್ನಾಟಕದ ಕರಕುಶಲ ಕಲೆಗಳ ಅನಾವರಣ
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿರುವುದು ಕನ್ನಡಿಗರ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಆಡಳಿತ ನಡೆಸುತ್ತಿದ್ದರೂ, ಸಹ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಇದು ಇನ್ನಷ್ಟು ಪುಷ್ಠಿ ನೀಡುವಂತಾಗಿದೆ.
ಕರ್ನಾಟಕದಿಂದ ಪ್ರದರ್ಶನಗೊಳಿಸಲು ಈ ಬಾರಿ ಒಟ್ಟು ನಾಲ್ಕು ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಸಿರಿಧಾನ್ಯ, ನಾರಿಶಕ್ತಿ, ಸಾಲು ಮರದ ತಿಮ್ಮಕ್ಕ ಸೇರಿದಂತೆ ಒಟ್ಟು ನಾಲ್ಕು ಸ್ತಬ್ಧ ಚಿತ್ರಗಳನ್ನು ಅಂತಿಮಗೊಳಿಸಿ ಕೇಂದ್ರದ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ಕೇಂದ್ರದ ರಕ್ಷಣಾ ಇಲಾಖೆ ಮತ್ತು ಪ್ರಸಾರ ಖಾತೆ ಇಲಾಖೆಯು ಗಣರಾಜ್ಯೋತ್ಸವಕ್ಕೆ ಸ್ತಬ್ಧ ಚಿತ್ರಗಳನ್ನು ಅಂತಿಮಗೊಳಿಸಿ ಕಳುಹಿಸಿಕೊಡಬೇಕೆಂದು ಆಯಾ ರಾಜ್ಯಗಳಿಗೆ ಸೂಚನೆ ನೀಡಲಿದೆ. ಅದರಂತೆ ಕರ್ನಾಟಕದಿಂದ ಈ ಬಾರಿ ನಾಲ್ಕು ಸ್ತಬ್ಧ ಚಿತ್ರಗಳನ್ನು ಅಂತಿಮಗೊಳಿಸಿ ಸಮಿತಿಗೆ ಕಳುಹಿಸಿತ್ತು.
ಸ್ತಬ್ಧ ಚಿತ್ರವನ್ನು ಆಯ್ಕೆ ಮಾಡಬೇಕಾದರೆ ಆಯ್ಕೆ ಸಮಿತಿಯ ಮುಂದೆ ಆಯಾ ರಾಜ್ಯಗಳ ಅಧಿಕಾರಿಗಳು ಅದರ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. ಬಳಿಕವಷ್ಟೇ ಯಾವುದಾದರೂ ಒಂದು ಸ್ತಬ್ಧ ಚಿತ್ರ ಅಂತಿಮಗೊಳ್ಳಲಿದೆ.
ಇದನ್ನು ಓದಿ: ಗಣರಾಜ್ಯೋತ್ಸವ ಪರೇಡ್: ದೇಶದ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ
ಸಾಮಾನ್ಯವಾಗಿ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರದಲ್ಲಿ ಕರ್ನಾಟಕಕ್ಕೆ ಯಾವಾಗಲೂ ಅಗ್ರ ಪ್ರಾಶಸ್ತ್ಯವನ್ನು ನೀಡಲಾಗುತ್ತಿತ್ತು. ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ಮೈಸೂರು ಅರಮನೆ, ಜಗದ್‍ಜ್ಯೋತಿ ಬಸವೇಶ್ವರರು, ಅಕ್ಕಮಹಾದೇವಿ ಸೇರಿದಂತೆ ಕರ್ನಾಟಕದ ನೆಲ, ಜಲ, ಭಾಷೆ, ಇತಿಹಾಸ, ಸಂಸ್ಕೃತಿ, ಕಲಕುಶಲ, ಜೀವ ವೈವಿಧ್ಯ, ಜನಪದ ಹೀಗೆ ಹತ್ತಾರು ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಿ ಪ್ರದರ್ಶನ ಮಾಡಲಾಗಿತ್ತು. ಕೆಲವೊಮ್ಮೆ ರಾಜ್ಯದ ಸ್ತಬ್ಧ ಚಿತ್ರಕ್ಕೆ ಮೊದಲ ಬಹುಮಾನ ಸಿಕ್ಕಿದೆ. 2020 ಹಾಗೂ 2022ರಲ್ಲಿ ಗಣರಾಜ್ಯೋತ್ಸವ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ 2ನೇ ಬಹುಮಾನ ಸಿಕ್ಕಿತ್ತು.
ಕೇಂದ್ರದ ಆಯ್ಕೆ ಸಮಿತಿ ಈ ಬಾರಿ ಒಂದಷ್ಟು ಮಾರ್ಪಾಟು ಮಾಡಿ, ವಲಯಗಳನ್ನು ಗುರುತು ಮಾಡಿತು. ಅದರಂತೆ, ಈ ಬಾರಿ ಉತ್ತರ ವಲಯ, ದಕ್ಷಿಣ ವಲಯ, ಕೇಂದ್ರ ವಲಯ ಮತ್ತು ಮಧ್ಯ ವಲಯ ಎಂದು ನಾಲ್ಕು ವಿಭಾಗಗಳನ್ನು ಸೃಷ್ಟಿಸಿತು. ದಕ್ಷಿಣ ವಲಯದಲ್ಲಿ ತಮಿಳುನಾಡು ಮತ್ತು ಕೇರಳದ ಸ್ತಬ್ಧ ಚಿತ್ರಗಳು ಆಯ್ಕೆ ಮಾಡಲಾಗಿದೆ.
ಕಳೆದ ಬಾರಿ ಪ್ರದರ್ಶನದಲ್ಲಿ ಕೇರಳ ರಾಜ್ಯವು ಸಿದ್ಧಪಡಿಸಿದ ಸಮಾಜ ಸುಧಾರಕ ನಾರಾಯಣ ಗುರು ಅವರ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಿಂದ ಭಾರಿ ವಿವಾದವೇ ಸೃಷ್ಟಿಯಾಗಿತ್ತು. ಅಲ್ಲದೆ, ತಮಿಳು ನಾಡು ಮತ್ತು ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರಗಳಿಗೂ ಅವಕಾಶ ಮಾಡಿಕೊಡದಿರುವ ಬಗ್ಗೆ ಪ್ರಬಲವಾಗಿ ವಿರೋಧಿಸಿದರು.
ಇದನ್ನು ಓದಿ: ಬಿಜೆಪಿಯು ಮನುವಾದಿ ಜಾತಿ ಆಧಾರಿತ ಸಂಕುಚಿತರು: ಸೀತಾರಾಂ ಯೆಚೂರಿ
ದೇಶದ ಒಟ್ಟು 31 ರಾಜ್ಯಗಳ ಪೈಕಿ ಕೇವಲ 13 ರಾಜ್ಯಗಳ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ್ದು, ಕರ್ನಾಟಕವನ್ನು ಕಡೆಗಣಿಸಿರುವುದು ಕನ್ನಡಿಗರಿಗೆ ಮಾಡಿರುವ ವಂಚನೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಅನ್ಯಾಯ: ಸಂಸದ ಡಿಕೆ ಸುರೇಶ್
ಕರ್ನಾಟಕ ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ತನ್ನದೇ ಆದ ಇತಿಹಾಸ ಮತ್ತು ಛಾಪು ಹೊಂದಿರುವ ಪ್ರಗತಿಪರ ರಾಜ್ಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರತಿವರ್ಷವೂ ರಾಜ್ಯಕ್ಕೆ ತನ್ನದೇ ಆದ ಸ್ಥಾನಮಾನವನ್ನು ದೇಶವು ಕೊಟ್ಟುಕೊಂಡು ಬರುತ್ತಿತ್ತು. ಆದರೆ ಈ ಬಾರಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ನಮ್ಮ ಕರ್ನಾಟಕದ ಪರಂಪರೆ ಶಕ್ತಿ ತೋರಿಸಲು ಜನವರಿ 26ರ ಗಣರಾಜ್ಯೋತ್ಸವ ದಿನದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಕೇಂದ್ರ ಅವಕಾಶ ಮಾಡಿಕೊಟ್ಟಿಲ್ಲ. ರಾಜ್ಯಕ್ಕೆ ಯಾವ ಮಟ್ಟಕ್ಕೆ ಅನ್ಯಾಯವಾಗುತ್ತಿದೆ ಎಂಬುದು ಇದರಿಂದಲೇ ತಿಳಿಯುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಗುಜರಾತಿಗೆ ಕೊಡೋ ಆದ್ಯತೆಯನ್ನು ಉಳಿದ ರಾಜ್ಯಗಳಿಗೆ ಕೊಡುತ್ತಿಲ್ಲ. ಅಲ್ಲದೇ ಏರ್ ಶೋ ವಿಚಾರದಲ್ಲಿಯೂ ಗೊಂದಲಗಳನ್ನು ಸೃಷ್ಟಿಸಿತು. ಇದೀಗ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆಗುತ್ತಿರುವ ಅಪಮಾನವನ್ನು ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ. ಎಲ್ಲ ಸಂಸತ್ ಸದಸ್ಯರು ಪ್ರಧಾನಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಕೇಂದ್ರ ಸಚಿವರುಗಳಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ