ಬೆಂಗಳೂರು: ಮುಂದಿನ ತಿಂಗಳು ಮೇ 10ರಂದು ಒಂದೇ ಹಂತದಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಇಂದು ಬುಧವಾರ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಈ ಬಾರಿ ರಾಜ್ಯದಲ್ಲಿ ಒಟ್ಟಾರೆ 5,30,85,566 ಮತದಾರರು ಇದ್ದು, ಪುರುಷ ಮತದಾರರ ಸಂಖ್ಯೆ 2,66,82,156 ಹಾಗೂ ಮಹಿಳಾ ಮತದಾರರ ಸಂಖ್ಯೆ 2,63,98,483 ಆಗಿದೆ. 16,04,285 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅವರಲ್ಲಿ 11,71,558 ಯುವ ಮತದಾರರಾಗಿದ್ದು, 18-19 ವಯಸ್ಸಿನವರಾಗಿದ್ದಾರೆ ಎಂದರು. 2022ರ ಸೆಪ್ಟೆಂಬರ್ 1 ರಿಂದ 38 ಲಕ್ಷ ವೋಟರ್ ಐಡಿ ನೀಡಲಾಗಿದೆ.ರಾಜ್ಯದಲ್ಲಿ 58,545 ಪೋಲಿಂಗ್ ಸ್ಟೇಷನ್ ಸ್ಥಾಪಿಸಲಾಗುವುದು.1,15,709 ಇವಿಎಂ, 89379 ವಿವಿಪ್ಯಾಟ್ ಯಂತ್ರ ಅಳವಡಿಸಲಾಗುವುದು.47,488 ಯೋಧರಿಗೆ ಅಂಚೆ ಮತಪತ್ರಗಳನ್ನು ಕಳುಹಿಸಲಾಗಿದೆ.80 ವರ್ಷ ದಾಟಿದ 80,250 ಜನರು ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿದ್ದಾರೆ.ಪ್ರತಿ ಬೂತ್ ನಲ್ಲಿ ನೋಂದಾಯಿಸಿದ ಮತದಾರರಿಗೆ ಪೂರ್ವ ಮಾಹಿತಿ ನೀಡಲಾಗುವುದು.19279 ವಿಕಲ ಚೇತನರು, 13771 ಅಗತ್ಯ ಸೇವೆ ಒದಗಿಸುವವರು ನೋಂದಾಯಿಸಿದ್ದಾರೆ ಎಂದರು.
80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ: ಮತದಾನ ಸಿಬ್ಬಂದಿ, ಪೊಲೀಸರು, ಪೋಲಿಂಗ್ ಏಜೆಂಟ್ ಮನೆಯಿಂದಲೇ ಮತದಾನ ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಿದವರ ಮನೆಗೆ ತೆರಳಲಿದ್ದಾರೆ. ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದೆ. ಮನೆಯಿಂದಲೇ ಮತದಾನದ ವಿಡಿಯೋಗ್ರಾಫ್ ಮಾಡಲಾಗುವುದು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ : ಜನಮತ 2023 : ಅಂತಿಮವಾಗಿ ವಿಧಾನಸಭಾ ಸಮರಕ್ಕೆ 2,613 ಅಭ್ಯರ್ಥಿಗಳು ಸಜ್ಜು!
ಅನಧಿಕೃತ ರ್ಯಾಲಿಗಳ ವಿರುದ್ಧ ಕ್ರಮ, 265 ಕೋಟಿ ರೂ. ಜಪ್ತಿ: ಅನಧಿಕೃತ ರ್ಯಾಲಿಗಳ ಸಂಬಂಧ ಈವರೆಗೆ 53 ಎಫ್ಐಆರ್ ದಾಖಲಿಸಲಾಗಿದೆ. ಗುಂಪು ಘರ್ಷಣೆ ಸಂಬಂಧ 15 ಎಫ್ಐಆರ್ ಹಾಗೂ ದ್ವೇಷ ಭಾಷಣ ಸಂಬಂಧ 5 ಎಫ್ಐಆರ್ ಸೇರಿದಂತೆ ಒಟ್ಟು 673 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 265 ಕೋಟಿ ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.