ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಪರ – ವಿರುದ್ಧ ಪ್ರತಿಭಟನೆ

ಮೈಸೂರು : ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪರನ್ನು ವಜಾಗೊಳಿಸುವಂತೆ ಆಗ್ರಹಿಸಿ ಮೈಸೂರಿನ ರಂಗಕರ್ಮಿಗಳು, ಸಂಘಟನೆಗಳ ಸದಸ್ಯರು ನಡೆಸುತ್ತಿರುವ ಹೋರಾಟ ಮತ್ತೊಂದು ಹಂತಕ್ಕೇರಿದೆ. ಒಂದೆಡೆ ಅಡ್ಡಂಡ ಕಾರ್ಯಪ್ಪ ವಿರುದ್ಧ ಪ್ರತಿಭಟನೆ ನಡೆದರೆ, ಇನ್ನೊಂದೆಡೆ ರಂಗಾಯಣದ ನಿರ್ದೇಶಕರ ಪರವಾದ ಪ್ರತಿಭಟನೆ ಸಹ ನಡೆದಿದೆ. ಆ ಮೂಲಕ ರಂಗಾಯಣದ ನಿರ್ದೇಶಕರ ವಿರುದ್ಧ ಪರ- ವಿರೋಧದ ಹೋರಾಟ ನಡೆಯುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.

ರಂಗಾಯಣ ಉಳಿಸಿ ಹೋರಾಟ ಸಮಿತಿ ಮುಖಂಡರು ಕುಕ್ಕರಹಳ್ಳಿ ಕೆರೆಯಿಂದ ಮೆರವಣಿಗೆ ಬಂದು ರಂಗಾಯಣದ ಗೇಟಿನ ಮುಂದೆ ಕುಳಿತು, ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿದರು.

ಇದಕ್ಕೆ ಪ್ರತಿಯಾಗಿ ಮೈಸೂರು ರಕ್ಷಣಾ ವೇದಿಕೆ ಹಾಗೂ ಮತ್ತಿತ್ತರೆ ಸಂಘಟನೆಗಳ ಸದಸ್ಯರು ಅಡ್ಡಂಡ ಕಾರ್ಯ‍ಪ್ಪ ಅವರನ್ನು ಮುಂದುವರಿಸಬೇಕು. ಅವರ ಕರ್ತವ್ಯಕ್ಕೆ ಹಾಗೂ ರಂಗಾಯಣದ ಚಟುವಟಿಕೆಗಳಿಗೆ ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿ ಗೇಟಿನ ಪಕ್ಕದಲ್ಲೆ ಧರಣಿ ಕುಳಿತರು.
ಎರಡೂ ಕಡೆಯ ಘೋಷಣೆಗಳು ಹೆಚ್ಚಾಗುತ್ತಿದ್ದಂತೆ ಇಬ್ಬರ ಮಧ್ಯೆ ಬ್ಯಾರಿಕೇಡ್‌ಗಳನ್ನು ಪೊಲೀಸರು ಇರಿಸಿ, ಸ್ಥಳದಿಂದ ತೆರಳುವಂತೆ ಹಲವು ಬಾರಿ ಎಚ್ಚರಿಕೆ ನೀಡಿದರು. ಅಂತಿಮವಾಗಿ ಎಸಿಪಿ ಶಶಿಧರ್ ಬಂಧಿಸುವ ಎಚ್ಚರಿಕೆ ನೀಡಿ ಪೊಲೀಸ್ ವಾಹನವನ್ನು ಸ್ಥಳಕ್ಕೆ ಕರೆಸಿದರು. ರಂಗಾಯಣ ಉಳಿಸಿ ಹೋರಾಟ ಸಮಿತಿಯವರು ಜಗದ ಕವಿ,ರಾಷ್ಟ್ರ ಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಓ ನನ್ನ ಚೇತನ ಹಾಡು ಹಾಡಿದ್ದು ವಿಶೇಷವಾಗಿತ್ತು.

ರಂಗಾಯಣ ಉಳಿಸಿ ಹೋರಾಟ ಸಮಿತಿಯ ಪರವಾಗಿ ಹೋರಾಟಗಾರರಾದ ಪ.ಮಲ್ಲೇಶ್, ಜನರ್ಧನ್ (ಜನ್ನಿ), ಬಿ.ಪಿ.ಮಹೇಶ್‌ಚಂದ್ರಗುರು, ಅರವಿಂದ ಮಾಲಗತ್ತಿ, ಜಗದೀಶ್ ಸೂರ್ಯ ಇದ್ದರು.

ಅಡ್ಡಂಡ ಕಾರ್ಯಪ್ಪ ಪರ ಪಾಲಿಕೆ ಸದಸ್ಯ ಸುಬ್ಬಯ್ಯ, ಮೈ.ಕಾ.ಪ್ರೇಮಕುಮಾರ್, ವಿಕ್ರಂ ಅಯ್ಯಂಗಾರ್ ಇದ್ದರು.

Donate Janashakthi Media

Leave a Reply

Your email address will not be published. Required fields are marked *