ಬೆಂಗಳೂರು: ನಗರದಲ್ಲಿ ಭಾರೀ ಪ್ರಮಾಣದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಹರಿಯುವುದಕ್ಕೆ ಆಗದಿರುವ ಪರಿಣಾಮ ಜಲಾವೃತವಾಗುತ್ತಿದೆ. ಅದರಲ್ಲೂ ಬಿಬಿಎಂಪಿ ಕೆಲವು ವಲಯಗಳ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಒತ್ತುವರಿ ಪರಿಣಾಮ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ರಾಜಕಾಲುವೆ ಒತ್ತುವರಿದಾರರಿಗೆ ಸೂಚನೆ ನೀಡಿ ಜ್ಞಾಪನಾ ಪತ್ರ ನೀಡಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಸೂಚಿಸಿದೆ. ಈ ಬಗ್ಗೆ ಕಂದಾಯ ಇಲಾಖೆಯೆ ಪತ್ರ ಬರೆದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದರು.
ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ವಿವರಗಳನ್ನು ಪಟ್ಟಿ ಮಾಡಲಾಗಿದ್ದು, ಅದರಲ್ಲಿನ 600 ಕಟ್ಟಡದ ಮಾಲೀಕರಿಗೆ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ. ಮಹಾದೇವಪುರ ಭಾಗದಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದೆ. ಮಳೆ ಕಡಿಯಾಗಿರುವ ಕಾರಣ ಕಾರ್ಯಾಚರಣೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕೆಲವು ಕಡೆ ಒತ್ತುವರಿ ತೆರವು ಮಾಡಲಾಗಿದೆ. ಇಂದಿನಿಂದ ಪ್ರತಿಷ್ಠಿತ ವಿಲ್ಲಾಗಳ ಬಳಿಯೂ ಒತ್ತುವರಿ ತೆರವು ಮಾಡಲಾಗುತ್ತದೆ ಎಂದರು.
ಮಹದೇವಪುರದ ಬಸವನಗರದಲ್ಲಿನ ಗೋಪಾಲನ್ ಕಾಲೇಜ್ ಆಡಳಿತ ಮಂಡಳಿ ರಾಜಕಾಲುವೆ ಒತ್ತುವರಿ ಮಾಡಿ ಮೈದಾನ ನಿರ್ಮಾಣ ಮಾಡಿದೆ. ಮಳೆ ಬಂದಾಗೊಮ್ಮೆ ಮೈದಾನ ಬಳಿಯ ಜಾಗದಲ್ಲಿ ಪ್ರವಾಹ ಉಂಟಾಗಿತ್ತು. ಸದ್ಯ ಒತ್ತುವರಿ ಜಾಗದಲ್ಲಿ ಅಧಿಕಾರಿಗಳು ಅಳತೆ ಮಾಡಲಾಗುತ್ತಿದೆ. ಅದೇ ರೀತಿ ದೊಡ್ಡಾನೆಗುಂದಿ ರಸ್ತೆಯ ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್ನಿಂದ ರಾಜಕಾಲುವೆ ಒತ್ತುವರಿ ಮಾಡಲಾಗುತ್ತಿದೆ. ಒತ್ತುವರಿ ತೆರವು ಮಾಡಲು ಮುಂದಾದ ಜೆಸಿಬಿಯನ್ನು ಟೆಕ್ ಪಾರ್ಕ್ನ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ.
ರೈನ್ಬೋ ಡ್ರೈವ್ ಲೇಔಟ್ ವಿಲ್ಲಾಗಳಿಗೆ ಸೂಚನೆ
ರೈನ್ಬೋ ಡ್ರೈವ್ ಲೇಔಟ್ನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನ ನಿರ್ಮಿಸಿರುವುದು ಬಹಿರಂಗವಾಗಿದೆ. ಇದೀಗ ವಿಲ್ಲಾಗಳನ್ನ ತೆರವುಗೊಳಿಸುವಂತೆ ಬೆಂಗಳೂರು ಪೂರ್ವ ತಹಶೀಲ್ದಾರ್ ವಿಲ್ಲಾ ಮಾಲೀಕರಿಗೆ ಪತ್ರ ನೀಡಿದ್ದಾರೆ. ಒತ್ತುವರಿ ಜಾಗ ತೆರವು ಮಾಡದಿದ್ದರೆ, ನಾವೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕೆಂದು, 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್ ಪತ್ರದಲ್ಲಿ ತಿಳಿಸಿದ್ದಾರೆ.