ಬೆಂಗಳೂರು: ನ್ಯಾನೋ ತಂತ್ರಜ್ಞಾನದ ಮೂಲಕ ತಯಾರಿಸಿರುವ ನ್ಯಾನೋ ಯೂರಿಯಾ ರಸಗೊಬ್ಬರವು ಪರೀಕ್ಷಾ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ರೈತರ ಬದುಕನ್ನು ಹಸನಾಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವರ್ಚುಯಲ್ ಮಾದರಿಯಲ್ಲಿ ಏರ್ಪಡಿಸಿರುವ ಮೂರು ದಿನಗಳ ʻ12ನೇ ವರ್ಷದ ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾನೋ ಯೂರಿಯಾವನ್ನು ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಳ್ಳೆಯ ಫಲಿತಾಂಶ ಬಂದಿದೆ. ಇದು ಮುಂಬರುವ ದಿನಗಳಲ್ಲಿ ಕೃಷಿಕರ ಅವಿಭಾಜ್ಯ ಅಂಗವಾಗಲಿದ್ದು, ನ್ಯಾನೋ ತಂತ್ರಜ್ಞಾನವು ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಕ ಜನಜೀವನವನ್ನು ಸುಧಾರಿಸಬೇಕು ಎನ್ನುವುದು ಪ್ರಧಾನಿ ಮೋದಿಯವರ ಕನಸೂ ಆಗಿದೆ’ ಎಂದು ಅವರು ನುಡಿದರು.
ವರ್ಚುವಲ್ ಮೂಲಕ ನಡೆಯುತ್ತಿರುವ ನ್ಯಾನೋ ಸಮ್ಮೇಳನಕ್ಕೆ 2500ಕ್ಕೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಸಮ್ಮೇಳನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿದ್ಯಾರ್ಥಿಗಳು ನ್ಯಾನೋ ಟೆಕ್ನಾಲಜಿಯನ್ನು ಬಳಸಬೇಕು. ಇದರಿಂದ ನಮ್ಮ ಬದುಕು ಸುಧಾರಿಸಲು ಸಾಧ್ಯವಾಗುತ್ತೆ. ನ್ಯಾನೋ ಮೇಳದಲ್ಲಿ 2000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿದ್ದು, ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ನ್ಯಾನೋ ಟೆಕ್ ಸಂಶೋಧನಾ ಕೇಂದ್ರ ಬೆಂಗಳೂರಿನಲ್ಲಿದೆ. ಸಂಶೋಧನೆಯಿಂದ ಜನರ ಬದುಕು ಸುಧಾರಿಸಬೇಕು. ನ್ಯಾನೋ ಟೆಕ್ನಾಲಜಿ ಮುಂದಿನ ಭವಿಷ್ಯವಾಗಿದೆ ಎಂದರು.
ಬೆಂಗಳೂರಿನಲ್ಲಿ ಸರಕಾರಿ ಮತ್ತು ಖಾಸಗಿ ವಲಯ ಎರಡೂ ಸೇರಿ ವಿಶ್ವದರ್ಜೆಯ 180 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಇವು ನ್ಯಾನೋ ತಂತ್ರಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯಲಿವೆ. ಒಂದು ಅಣುವಿನಲ್ಲಿರುವ ಅಗಾಧ ಶಕ್ತಿಯನ್ನು ಮನುಕುಲದ ಒಳಿತಿಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎನ್ನುವುದೇ ನ್ಯಾನೋ ತಂತ್ರಜ್ಞಾನದ ವೈಶಿಷ್ಟ್ಯವಾಗಿದೆ. ಹೀಗಾಗಿ ಇದು ಸೀಡ್ ತಂತ್ರಜ್ಞಾನವಾಗಿದ್ದು, ಸುಸ್ಥಿರತೆ ಮತ್ತು ಅವಕಾಶ ಎರಡನ್ನೂ ಹೊತ್ತು ತರಲಿದೆ ಎಂದು ಅವರು ಪ್ರತಿಪಾದಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಸರಕಾರವು ಸದ್ಯದಲ್ಲೇ ಸಮಗ್ರ ನ್ಯಾನೋ ತಂತ್ರಜ್ಞಾನ ನೀತಿಯನ್ನು ಹೊರತರಲಿದೆ. ಈ ಮೂಲಕ ಸಂಶೋಧನಾ ಮತ್ತು ಔದ್ಯಮಿಕ ವಲಯಗಳೆರಡನ್ನೂ ಪರಸ್ಪರ ಹತ್ತಿರಕ್ಕೆ ತರಲಾಗುವುದು. ಇದರಿಂದಾಗಿ, ನ್ಯಾನೋ ತಂತ್ರಜ್ಞಾನದ ಲಾಭವು ಸಮಾಜಕ್ಕೆ ಸಿಗಲಿದೆ’ ಎಂದರು.
ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಪ್ರೀತಿಯನ್ನು ಬೆಳೆಸಬೇಕೆನ್ನುವ ಉದ್ದೇಶದಿಂದ ವಿಜ್ಞಾನ ಪ್ರತಿಭಾ ಶೋಧವನ್ನು ಹಮ್ಮಿಕೊಳ್ಳಲಾಗಿದ್ದು, ಶಿಷ್ಯವೇತನಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ, ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವೈಜ್ಞಾನಿಕ ಚಿಂತನೆಯ ಬೆಳವಣಿಗೆಗೆ ಒತ್ತು ನೀಡುವಂತಿದ್ದು, ಇದುವರೆಗಿದ್ದ ಅಂತರವನ್ನು ನೀಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತಂಜಾವೂರಿನ ಶಾಸ್ತ್ರ ವೈಜ್ಞಾನಿಕ ಅಧ್ಯಯನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್. ಸ್ವಾಮಿನಾಥನ್ ಅವರಿಗೆ ಪ್ರತಿಷ್ಠಿತ ಸಿಎನ್ಆರ್ ರಾವ್ ವಿಜ್ಞಾನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಸಮ್ಮೇಳನದ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಪ್ರೊ.ಅಜಯಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಬಸವರಾಜು ಇದ್ದರು. ಡಾ.ಸಿಎನ್ಆರ್ ರಾವ್ ವರ್ಚುಯಲ್ ರೂಪದಲ್ಲಿ ಭಾಗವಹಿಸಿದ್ದರು.