ರೈತರ ಮೇಲೆ ಹಿಂಸಾಚಾರ ವಿರೋಧಿಸಿ ಅ.18ರಂದು ರೈಲ್ ತಡೆ, ಅ.26ಕ್ಕೆ ಮಹಾಪಂಚಾಯತ್

ನವದೆಹಲಿ: ಉತ್ತರಪ್ರದೇಶ ರಾಜ್ಯದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್‌ 03ರಂದು ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾದ ಹಿಂಸಾಚಾರ ಘಟನೆಯನ್ನು ಖಂಡಿಸಿ ಅಕ್ಟೋಬರ್ 18 ರಂದು ರೈತ ಸಂಘಟನೆಗಳು ‘ರೈಲ್ ತಡೆʼ ಹಾಗೂ  26 ರಂದು ಲಕ್ನೊದಲ್ಲಿ ‘ಮಹಾಪಂಚಾಯತ್’ ನಡೆಸಲು ನಿರ್ಧರಿಸಿವೆ.

ರೈತ ಸಂಘಟನೆಗಳ ತೀರ್ಮಾನದ ಬಗ್ಗೆ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ದೇಶದಾದ್ಯಂತದ ರೈತರು ಅಕ್ಟೋಬರ್ 12 ರಂದು ಲಖಿಂಪುರ ಖೇರಿಯನ್ನು ತಲುಪುತ್ತಾರೆ. ಅಂದಿನ ಘಟನೆಯು ಜಲಿಯನ್‌ವಾಲಾಬಾಗ್ ಘಟನೆಗಿಂತ ಕಡಿಮೆ ಏನಿಲ್ಲ ಮತ್ತು ಅಲ್ಲಿ ಎಲ್ಲಾ ನಗರ ಸಂಸ್ಥೆಗಳು ಮತ್ತು ಸಂಘಟನೆಗಲು ಎಲ್ಲೆಡೆ ರಾತ್ರಿ 8 ಗಂಟೆಗೆ (ಅಕ್ಟೋಬರ್ 12 ರಂದು) ಮೇಣದಬತ್ತಿ ಬೆಳಕಿನ ಮೆರವಣಿಗೆ ಕೈಗೊಳ್ಳುವಂತೆ ಈಗಾಗಲೇ ತಿಳಿಸಲಾಗಿದೆʼʼ ಎಂದು ವಿವರಿಸಿದರು.

ಇದನ್ನು ಓದಿ: ರೈತರನ್ನು ಕೊಂದ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸಿ: ಸಂಯುಕ್ತ ಕಿಸಾನ್‌ ಮೋರ್ಚಾ

“ರೈತರು ಪ್ರತಿ ರಾಜ್ಯಕ್ಕೆ ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಚಿತಾಭಸ್ಮದೊಂದಿಗೆ ಹೋಗುತ್ತಾರೆ. ಬಳಿಕ ಅದನ್ನು ವಿಸರ್ಜಿಸುತ್ತಾರೆ.  ಅಕ್ಟೋಬರ್ 15ರಂದು ನಡೆಯುವ ದಸರಾ ದಿನದಂದು ಎಲ್ಲ ರೈತರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ಸುಡಲಿದ್ದಾರೆ. ಅಕ್ಟೋಬರ್ 18 ರಂದು ನಾವು ‘ ರೈಲ್ ತಡೆ’ ನಡೆಸುತ್ತೇವೆ ಮತ್ತು 26 ರಂದು ಲಕ್ನೋದಲ್ಲಿ ಬೃಹತ್ ಮಹಾಪಂಚಾಯತ್ ನಡೆಯಲಿದೆ’’ ಎಂದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಹಾಗೂ  ಎಫ್‌ಐಆರ್‌ನಲ್ಲಿ ಕೊಲೆ ಆರೋಪಿ ಎಂದು ಹೆಸರಿಸಲಾಗಿದ್ದರೂ ರಾಜೋರೋಷವಾಗಿ ಓಡಾಡುತ್ತಿರುವ ಸಚಿವರ ಮಗ ಆಶಿಶ್ ನನ್ನು ಬಂಧಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *