ರಾಯಚೂರು : ರಾಯಚೂರಿನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆದರೆ ಮಾತ್ರವೇ ಧ್ವಜಾರೋಹಣ ನೆರವೇರಿಸುತ್ತೇನೆಂದು ಪಟ್ಟು ಹಿಡಿದು ಅಂಬೇಡ್ಕರ್ ಫೋಟೋ ತೆಗೆಸಿ ಉದ್ಧಟತನ ಮೆರೆದಿರುವ ಘಟನೆ ನಡೆದಿದೆ.
ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಒಟ್ಟಿಗೆ ಇಟ್ಟು ಹೂ ಮಾಲೆ ಹಾಕಿ, ಪೂಜೆ ಮಾಡಿ ಪುಷ್ಪಾರ್ಚನೆ ಮತ್ತು ಧ್ವಜಾರೋಹಣಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಇಡಬೇಕೆಂದು ಯಾವುದೇ ಸೂಚನೆ, ಆದೇಶವಿಲ್ಲ. ಹೀಗಾಗಿ ಅಂಬೇಡ್ಕರ್ ಫೋಟೋ ತೆಗೆಯಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ ಕಾರ್ಯಕ್ರಮ ಆಯೋಜಕರು ಅಂಬೇಡ್ಕರ್ ಫೋಟೋ ತೆಗೆಯಲು ಮುಂದಾದರು.
ಇದಕ್ಕೆ ಆಕ್ಷೇಪಿಸಿದ ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಕೀಲರು ಪ್ರತಿಭಟನೆ ನಡೆಸಿದ್ದು, ಧ್ವಜಾರೋಹಣ ಕಾರ್ಯಕ್ರಮವನ್ನು ವಿರೋಧಿಸಿ ಹೊರನಡೆದಿದ್ದು, ನ್ಯಾಯಾಧೀಶರು ಮತ್ತು ವಕೀಲರ ನಡುವೆ ಕೆಲ ಕಾಲ ಜಟಾಪಟಿ ನಡೆಯಿತು.
ನ್ಯಾಯಾದೀಶರ ನಡೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ ಇವರಿಂದ ಸಂವಿಧಾನ ರಕ್ಷಣೆ ಸಾಧ್ಯವೆ, ನ್ಯಾಯಾಂಗ ಬಲಗೊಳ್ಳಲು ಸಾಧ್ಯವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.