ಕಡಿಮೆ ವಯಸ್ಸಿನಲ್ಲಿಯೇ ಅಗಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 46ನೇ ವಯಸ್ಸಿನಲ್ಲಿ ಅಕಾಲಿಕ ಸಾವಿಗೆ ಏನು ಕಾರಣವಿರಬಹುದು ಎನ್ನುವ ಚರ್ಚೆಗಳು ಆರಂಭವಾಗಿದೆ. ಯಾಕೆಂದರೆ, ದೈಹಿಕವಾಗಿ ಉತ್ತಮ ಆರೋಗ್ಯದಿಂದ ಇರುತ್ತಿದ್ದ ಪುನೀತ್ ರಾಜಕುಮಾರ್ ಸಣ್ಣ ವಯಸ್ಸಿನಲ್ಲಿ ಮರಣ ಹೊಂದಿದ್ದಾರೆ.
ಸ್ವಲ್ಪವೂ ಆರೋಗ್ಯದ ಸಮಸ್ಯೆ ಇರದ ಪುನೀತ್ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಎಂದರೆ ಅತಿಯಾದ ಕಸರತ್ತು ಕೂಡಾ ಸಮಸ್ಯೆಯಾಗಲಿದೆಯಾ ಎನ್ನುವ ಚರ್ಚೆಗಳು ನಡೆಯುತ್ತಿವೆ.
ಶುಕ್ರವಾರ ಬೆಳಗ್ಗೆ ಎರಡು ಗಂಟೆಯ ಕಾಲ ಪುನೀತ್ ರಾಜಕುಮಾರ್ ಕಸರತ್ತು ಮಾಡಿದ್ದರು. ಆ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಇಸಿಜಿಯಲ್ಲಿ ಅವರಿಗೆ ಹೃದಯಾಘಾತ ಆಗಿರುವುದು ದೃಢಪಟ್ಟಿದ್ದರಿಂದ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
“ಮಾರ್ಗ ಮಧ್ಯೆದಲ್ಲಿಯೇ ಅವರಿಗೆ ಹಾರ್ಟ್ ಅಸಿಸ್ಟೋಲ್ (ಹೃದಯದ ಚಲನೆ ನಿಲ್ಲುವುದು) ಆಗಿತ್ತು. ಭಾರೀ ಹೃದಯಾಘಾತವೇ ಆಗಿತ್ತು ಮೂರು ಬಾರಿ ಅವರನ್ನು ಬದುಕುಳಿಸುವ ಪ್ರಯತ್ನವನ್ನು ಆದರೂ ಮೂರು ಗಂಟೆಗಳ ಕಾಲ ಅವರನ್ನು ವೆಂಟಿಲೇಟರ್ನಲ್ಲಿಟ್ಟು ಬದುಕುಳಿಸಲು ನಾನಾ ರೀತಿಯಲ್ಲಿ ಪ್ರಯತ್ನ ಪಟ್ಟೆವು. ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆವು. ಆದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಹಾರ್ಟ್ ಅಸಿಸ್ಟೋಲ್ ಸ್ಥಿತಿಯಲ್ಲೇ ಇತ್ತು. ವೈದ್ಯರ ತಂಡ ಸಾಕಷ್ಟು ಪ್ರಯತ್ನಪಟ್ಟರು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ”ಎಂದು ವಿಕ್ರಂ ಆಸ್ಪತ್ರೆ ವೈದ್ಯರಾದ ಡಾ.ರಂಗನಾಥ್ ಹೇಳಿದರು.
ಅತಿಯಾದ ಕಸರತ್ತು, ಸಿಕ್ಸ್ ಪ್ಯಾಕ್ ಗೆ ದೇಹವನ್ನು ಒಗ್ಗಿಸಿಕೊಳ್ಳುವುದು. ಈ ರೀತಿಯ ಸಮಸ್ಯೆ ಆಗಲಿದೆ ಎಂದು ಹಲವು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಕುಟುಂಬ ವೈದ್ಯ ರಮಣರಾವ್
ನಟ ಪುನೀತ್ ನನ್ನನ್ನು ಅಪ್ಪಾಜಿ ಎಂದು ಕರೆಯುತ್ತಿದ್ದರು. ನಿನ್ನೆ 11.15ಕ್ಕೆ ಪುನೀತ್ ನಮ್ಮ ಕ್ಲಿನಿಕ್ಗೆ ಬಂದಿದ್ದರು. ಕ್ಲಿನಿಕ್ಗೆ ಬರುತ್ತಿದ್ದಂತೆ ಒಳಗೆ ಕರೆದುಕೊಂಡು ಮಾತಾಡಿದೆ. ಪುನೀತ್ ರಾಜ್ಕುಮಾರ್ ಕ್ಲಿನಿಕ್ಗೆ ಬಂದಾಗ ಬೆವರುತ್ತಿದ್ದರು. ಕೇಳಿದ್ರೆ ಇಲ್ಲಾ ನಾನು ಜಿಮ್ನಿಂದ ಬರುತ್ತಿದ್ದೇನೆ ಎಂದರು. ಆದರೂ ಇರಲಿ ಎಂದು ನಾವು ಇಸಿಜಿ ಮಾಡಿಸಿದ್ದೆವು. ಇಸಿಜಿ ಪರೀಕ್ಷೆಯಲ್ಲಿ ಸಮಸ್ಯೆ ಕಾಣಿಸಿತ್ತು. ಕೂಡಲೇ ಆಸ್ಪತ್ರೆಗೆ ಹೋಗುವಂತೆ ಪುನೀತ್ಗೆ ಸೂಚಿಸಿದ್ದೆ. ಐದೇ ನಿಮಿಷದಲ್ಲಿ ವಿಕ್ರಂ ಆಸ್ಪತ್ರೆಗೆ ಪುನೀತ್ ದಾಖಲಾದರು. ಅವರದು ಅಕಾಲಿಕ ಮರಣʼ ಎಂದು ಕುಟುಂಬ ವೈದ್ಯ ಡಾ.ರಮಣರಾವ್ ಹೇಳಿದ್ದಾರೆ.
ಅಕಾಲಿಕ ಮರಣಕ್ಕೆ ನಿರ್ದಿಷ್ಟ ಕಾರಣ ಏನೆಂದು ಗೊತ್ತಾಗುವುದಿಲ್ಲ. ಅವರ ನಿಧನಕ್ಕೆ ಅಕಾಲಿಕ ಅಥವಾ ಕಾರ್ಡಿಯಾಕ್ ಅರೆಸ್ಟ್ ಇರಬೇಕು. ಈ ಹಿಂದೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದರು.
ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್
“17 ಮತ್ತು 23 ವಯಸ್ಸಿನ ಹೃದಯ ಸಂಬಂಧಿ ಸಮಸ್ಯೆಯಿಂದ ಇಬ್ಬರು ನಮ್ಮ ಆಸ್ಪತ್ರೆಗೆ ಇತ್ತೀಚೆಗೆ ಬಂದಿದ್ದರು, ಇವರಿಬ್ಬರಿಗೂ ಭಯಪಡುವಂತಹ ಅಂಶಗಳಿರಲಿಲ್ಲ ಅಥವಾ ಅವರ ಕುಟುಂಬದಲ್ಲಿ ಯಾರಿಗೂ ಹೃದಯ ಕಾಯಿಲೆ ಇರಲಿಲ್ಲ. ಟ್ರೆಕ್ಕಿಂಗ್ ಮುಗಿಸಿ ಬಂದ ಮೂರು ದಿನದ ಬಳಿಕ ಇವರಿಬ್ಬರಿಗೂ ನೋವು ಕಾಣಿಸಿಕೊಂಡಿದೆ. ಸಾಮಾನ್ಯವಾಗಿ, ಯುವಕರಿಗೆ ಬಿಪಿ/ಶುಗರ್ ಕಾಯಿಲೆ ಇರುವುದು ಕಮ್ಮಿ. ಹೃದಯಾಘಾತದ ಸಮಯದಲ್ಲಿ, ಕೆಲವು ದುರದೃಷ್ಟಕರ ರೋಗಿಗಳಿಗೆ ಕೆಲವೇ ನಿಮಿಷಗಳಲ್ಲಿ ventricular fibrillation ನಿಂದಾಗಿ ಹೃದಯ ಸ್ತಂಭನ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಲೂ ಸಮಯ ಇರುವುದಿಲ್ಲ. ಯಾಕೆಂದರೆ ಹೃದಯ ಸ್ನಾಯುಗಳಿಗೆ ರಕ್ತ ಪೂರೈಕೆ ಸ್ಥಗಿತಗೊಳ್ಳುತ್ತದೆ, ನಮ್ಮ ಪುನೀತ್ ರಾಜಕುಮಾರ್ ವಿಚಾರದಲ್ಲಿ ನಡೆದದ್ದು ಇದೇ” ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
“ಪುನೀತ್ ಅವರ ವಿಚಾರದಲ್ಲಿ ರಕ್ತ ಹೆಪ್ಪುಗಟ್ಟಿ ಕಾರ್ಡಿಯಾಕ್ ಅರೆಸ್ಟ್ ಆಗಿರುವ ಸಾಧ್ಯತೆಯಿದೆ. ಇದು ಯಾವುದೇ ಮುನ್ಸೂಚನೆ ಇಲ್ಲದೇ ಬರುವಂತದ್ದು. ಇನ್ನೊಂದು ಆಯಾಮ ಎಂದರೆ ಕುಟುಬದಲ್ಲಿ ಈ ರೀತಿಯ ಸಮಸ್ಯೆ ಇದ್ದರೂ ಆಗಬಹುದು. ಅವರ ಇಬ್ಬರು ಸಹೋದರರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರಿಗೆ ಹೃದಯಾಘಾತವಾಗಿತ್ತು” ಎಂದು ಡಾ.ಮಂಜುನಾಥ್ ಹೇಳಿದ್ದಾರೆ.
ಶಿವರಾಜ್ ಕುಮಾರ್ 2015ರ ಅಕ್ಟೋಬರ್ ನಲ್ಲಿ ಮತ್ತು ರಾಘವೇಂದ್ರ ರಾಜ್ಕುಮಾರ್ 27ನೇ ವಯಸ್ಸಿನಲ್ಲೇ ಹೃದಯ ಸಮಸ್ಯೆ ಉಂಟಾಗಿ ಆ್ಯಂಜಿಯೋಪ್ಲಾಸ್ಟ್ ಮಾಡಲಾಗಿತ್ತು. ಇವರಿಗೆ ಎರಡು ಬಾರಿ ಈ ಸಮಸ್ಯೆ ಎದುರಾಗಿತ್ತು.
ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಪ್ರಸಾದ್ ಶೆಟ್ಟಿ
“ಕಳೆದ ಕೆಲವು ವರ್ಷಗಳಲ್ಲಿ, ನಾನು ವೈಯಕ್ತಿಕವಾಗಿ ಬಲ್ಲ ಕನಿಷ್ಠ 8 ರಿಂದ 9 ಜನರನ್ನು ಕಳೆದುಕೊಂಡಿದ್ದೇನೆ. ಮತ್ತು, 40ರ ಹರೆಯದ ಕೆಲವು ಸೆಲೆಬ್ರಿಟಿಗಳು ಫಿಟ್ ಆಗಿರಲು ಹೆಚ್ಚು ವರ್ಕೌಟ್ ಮಾಡಿದ್ದರಿಂದ ಸಾವನ್ನಪ್ಪಿದ್ದಾರೆ. ದುರದೃಷ್ಟವಶಾತ್ ಅವರು ಕೇವಲ ಫಿಟ್ ಆಗಿ ಕಾಣುತ್ತಿದ್ದರೂ, ಸಿಕ್ಸ್ ಪ್ಯಾಕ್ ಎಲ್ಲಾ ಇದ್ದರೂ ನಮ್ಮನ್ನು ಅಗಲಿ ಹೋಗಿರುವುದು ಸತ್ಯ. ಇಂದು ಈ ಪಟ್ಟಿಗೆ ಪುನೀತ್ ರಾಜ್ಕುಮಾರ್ ಸೇರ್ಪಡೆಯಾಗಿದ್ದಾರೆ” ಎಂದು ಡಾ. ದೇವಿ ಶೆಟ್ಟಿ ಹೇಳಿದ್ದಾರೆ.
ಸಾಮಾನ್ಯವಾಗಿ ಎಲ್ಲರಲ್ಲೂ ನಲವತ್ತು ವರ್ಷದ ಮೇಲೆಯೂ ಯಾವುದೇ ತೊಂದರೆಯಿಲ್ಲದಿದ್ದರೆ ಕೃತಜ್ಞರಾಗಿರಿ, ನಿಮ್ಮ ದೈನಂದಿನ ಕೆಲಸಗಳನ್ನು ನಿಧಾನಗೊಳಿಸಿ. ಈ ವಯಸ್ಸಿನ ನಂತರ, ನಿಮ್ಮ ದೇಹ ಮತ್ತು ಮನಸ್ಸು ಒಮ್ಮೆ ನೀವು ಅನುಭವಿಸಿದ ಒತ್ತಡವನ್ನು ಮತ್ತೆ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿರುವುದಿಲ್ಲ. ಹೊರನೋಟಕ್ಕೆ ನೀವು ಚೆನ್ನಾಗಿ ಕಾಣುತ್ತಿರಬಹುದು, ಆದರೆ ದೇಹದ ಅಂಗಾಂಗಳಿಗೆ ವಯಸ್ಸಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಿ ಎಂದು ಎಚ್ಚರಿಸಿದ್ದಾರೆ.
ಹೃದಯಘಾತ ಸಂಭವದ ಕೆಲವು ಅಂಶಗಳು
ಬಹುತೇಕ ಹೃದಯಾಘಾತ ಪ್ರಕರಣಗಳು ರಕ್ತನಾಳಗಳಲ್ಲಿ ಸಮರ್ಪಕವಾದ ರಕ್ತಪೂರೈಕೆ ಆಗದೆ ಇದ್ದರೆ ಉಂಟಾಗುತ್ತದೆ. ಯಾವ ಸಂದರ್ಭದಲ್ಲಿ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಅಂಶ, ಕೆಟ್ಟ ಕೊಬ್ಬಿನ ಅಂಶ ಮತ್ತು ಬಿಳಿರಕ್ತಕಣಗಳು ಸೇರ್ಪಡೆಯಾಗುತ್ತವೆ ಆಗ ಸರಿಯಾಗಿ ರಕ್ತಸಂಚಾರವಾಗುವುದಿಲ್ಲ. ಇದು ಹೃದಯದ ಮಾಂಸಖಂಡಗಳ ಮೇಲೆ ಅತಿಯಾದ ಒತ್ತಡವನ್ನು ಉಂಟು ಮಾಡುತ್ತದೆ.
ಒಂದುವೇಳೆ ರಕ್ತನಾಳಗಳಲ್ಲಿ ಶೇಖರಣೆಯಾಗಿರುವ ಕೊಬ್ಬಿನ ಅಂಶ ಸಣ್ಣ ಸಣ್ಣ ಚೂರುಗಳಾಗಿ ಹೃದಯದ ಒಳಭಾಗಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ದೇಹದ ಹಲವು ಭಾಗಗಳಿಗೆ ಪೂರೈಕೆಯಾಗಿ ಆಯಾ ಅಂಗಾಂಗಗಳ ಕಾರ್ಯಚಟುವಟಿಕೆಯಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ.
ರಕ್ತನಾಳಗಳಿಗೆ ತೊಂದರೆ ಇದೆ ಎಂದು ತಿಳಿದು ಕೆಂಪು ರಕ್ತ ಕಣಗಳು ಮತ್ತು ಬಿಳಿ ರಕ್ತ ಕಣಗಳು ರಕ್ತನಾಳಗಳಲ್ಲಿ ಶೇಖರಣೆಯಾಗಿರುವ ಪ್ಲೇಕ್ ಗಳಿಗೆ ಅಂಟಿಕೊಂಡು, ಕೊನೆಗೆ ಸಂಪೂರ್ಣ ರಕ್ತನಾಳಗಳ ಮುಚ್ಚುವಿಕೆಯಲ್ಲಿ ಯಶಸ್ವಿಯಾಗುತ್ತವೆ.
ಈ ಸಂದರ್ಭದಲ್ಲಿ ರಕ್ತ ಹೃದಯಕ್ಕೆ ಪೂರೈಕೆಯಾಗುವ ಸಾಧ್ಯತೆ ತಪ್ಪುತ್ತದೆ. ಹೃದಯದ ಮಾಂಸಖಂಡಗಳಿಗೆ ಕೂಡ ರಕ್ತದ ಪೂರೈಕೆ ಇರುವುದಿಲ್ಲ. ಅತಿಯಾದ ಆಮ್ಲಜನಕದ ಕೊರತೆಯಿಂದ ಹೃದಯದ ಮಾಂಸಖಂಡಗಳು ಕ್ರಮೇಣವಾಗಿ ನಿಷ್ಕ್ರಿಯವಾಗುತ್ತ ಬರುತ್ತವೆ.
ಯಾವುದೇ ವ್ಯಕ್ತಿ ಹೃದಯಾಘಾತಕ್ಕೆ ಒಳಗಾದ ಸಂದರ್ಭದಲ್ಲಿ ಮೊದಲ ಒಂದು ಗಂಟೆಯ ಸಮಯ ತುಂಬಾ ಅಮೂಲ್ಯವಾದದ್ದು ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ವೈದ್ಯರ ಚಿಕಿತ್ಸೆ ದೊರೆತರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಜಾಸ್ತಿ ಇರುತ್ತದೆ.
ಏಕೆಂದರೆ ನಿಷ್ಕ್ರಿಯವಾಗುತ್ತಿರುವ ಹೃದಯದ ಮಾಂಸಖಂಡಗಳನ್ನು ಸಂಪೂರ್ಣವಾಗಿ ಹಾಗಾಗಲು ಬಿಡದೆ ಮತ್ತೆ ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡಬಹುದು. ಆದರೆ ಒಂದು ಗಂಟೆ ಕಳೆದ ನಂತರ ಇದು ಸಾಧ್ಯವಿರುವುದಿಲ್ಲ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.