ಬೆಂಗಳೂರು: ಶಾಲಾ ಪಠ್ಯಪುಸ್ತಕ ಸಮಿತಿಯ ಸಾಲು-ಸಾಲು ವಿವಾದಗಳ ಕೇಂದ್ರ ಬಿಂದುವಾಗಿದ್ದ ರೋಹಿತ್ ಚಕ್ರತೀರ್ಥ ಅವರನ್ನು ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಧಿಕೃತ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಅವರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಪಠ್ಯ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಅವರನ್ನು ಈ ಮೊದಲು ಸರ್ಕಾರವು ನೇಮಿಸಿತ್ತು. ಆದರೆ ಸಾಲುಸಾಲು ವಿವಾದಗಳು ಎದುರಾಗಿತ್ತು. ಇದೀಗ ರೋಹಿತ್ ಚಕ್ರತೀರ್ಥ ಅವರನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ. ದ್ವಿತೀಯ ಪಿಯುಸಿ ಅಧ್ಯಾಯ 4.2 ಪರಿಷ್ಕರಣೆಯಲ್ಲಿ ಹೊಸ ಧರ್ಮಗಳ ಉದಯದ ಕುರಿತಾದ ಅಂಶಗಳನ್ನು ಸೇರಿಸಲಾಗಿತ್ತು. ಈ ಪರಿಷ್ಕರಣೆ ಕಾರ್ಯವನ್ನು ರೋಹಿತ್ ಚಕ್ರತೀರ್ಥ ಅವರಿಗೆ ನೀಡಲಾಗಿತ್ತು. ಆದರೆ, ಇದೀಗ ರೋಹಿತ್ ಸಮಿತಿಯನ್ನು ವಿಸರ್ಜಿಸಲಾಗಿದೆ. ಹಾಗಾಗಿ ಪಿಯುಸಿ ಪಠ್ಯ ಪರಿಷ್ಕರಣಾ ವರದಿಯನ್ನು ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಬಸವಣ್ಣ ವಿಚಾರವನ್ನು ಪಠ್ಯದಲ್ಲಿ ಕೈಬಿಟ್ಟ ವಿಚಾರವಾಗಿ, ಬರಗೂರು ರಾಮಚಂದ್ರಪ್ಪ ನೀಡಿದ ಪಠ್ಯವನ್ನೇ ಮುಂದುವರೆಸಲಿದ್ದೇವೆ. ಅದರಲ್ಲಿರುವ ಅಂಶಗಳ ಬಗ್ಗೆ ಯಾರಿಗೂ ಆಕ್ಷೇಪ ಇಲ್ಲ.ಹಾಗಾಗಿ ಬರಗೂರು ಪಠ್ಯಪುಸ್ತಕ ಸಮಿತಿ ನೀಡಿದ ಬಸವಣ್ಣ ಪಠ್ಯ ಮುಂದುವರೆಯಲಿದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರೆ ಪಠ್ಯಗಳಲ್ಲಿರೋ ಲೋಪಗಳನ್ನೂ ಸರಿಪಡಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಶಾಲಾ ಪಠ್ಯ ಪರಿಷ್ಕರಣೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ (ಜೂನ್ 3) ವಿಸರ್ಜಿಸಿದ್ದರು. ಈಗ ಪಿಯು ಪರಿಷ್ಕರಣೆಯಿಂದ ಅವರನ್ನು ಕೈ ಬಿಡಲಾಗಿದೆ. ಅವರಿದ್ದ ಸಮಿತಿಯನ್ನು ವಜಾ ಮಾಡಬೇಕು , ಬರಗೂರು ಸಮಿತಿಯ ಪಠ್ಯವನ್ನೆ ಮುಂದುವರಿಸಬೇಕು ಎಂದು ಪ್ರತಿಭಟನೆಗಳು ವ್ಯಾಪಕಗೊಂಡಿದ್ದವು. ವಿದ್ಯಾರ್ಥಿ ಸಂಘಟನೆಗಳು, ಚಿಂತಕರು, ಸಾಹಿತಿಗಳು ಸಾಲು ಸಾಲು ಪ್ರತಿಭಟನೆ, ಸಮಾವೇಶಗಳನ್ನು ನಡೆಸಿದ್ದರು. ಕೊನೆಗೂ ಸರಕಾರ ಹೋರಾಟಕ್ಕೆ ಮಣಿದಿದೆ. ಪಠ್ಯಕ್ರಮಕ್ಕೆ ಖರ್ಚಾದ ಹಣವನ್ನು ರೋಹಿತ್ ಚಕ್ರತೀರ್ಥ ಹಾಗೂ ತಂಡದವರಿಂದ ವಸೂಲು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.