ಚರಂಡಿಯಲ್ಲಿರಬೇಕಾದವನನ್ನ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ- ಬಿಕೆ ಹರಿಪ್ರಸಾದ್ ವಾಗ್ದಾಳಿ

  • ಏನೂ ಅರ್ಹತೆ ಇಲ್ಲದ ವ್ಯಕ್ತಿಇಂದು ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ
  • ಆರ್ ಎಸ್ ಎಸ್ ಗೆ ಪುರಾವೆ ಇಲ್ಲ, ಅದು ನೊಂದಾಯಿತ ಸಂಸ್ಥೆಯೇ ಅಲ್ಲ, ಅದಕ್ಕೆ ಅಸ್ತಿತ್ವವೇ ಇಲ್ಲ.

ಮಂಗಳೂರು:-  ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಈ ರಾಜ್ಯದಲ್ಲಿ ಸಾಹಿತಿಗಳಿದ್ದಾರೆ, ಪ್ರಾಧ್ಯಾಪಕರು, ಶಿಕ್ಷಣ ತಜ್ಞರಿದ್ದಾರೆ. ಅವರೆಲ್ಲರನ್ನು ಬಿಟ್ಟು ಶಿಕ್ಷಣ ಸಚಿವರು ಅವನ್ಯಾರೋ ಚರಂಡಿಯಲ್ಲಿರಬೇಕಾದವನನ್ನ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವನು ಫ್ರೋಫೆಸರ್ ಅಂತಾ ಹೇಳಿ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಫ್ರೋಫೆಸರ್ ಅಲ್ಲ ಎಂದು ಅವನೇ ಹೇಳಿಕೆ ನೀಡಿದ್ದಾನೆ. ಶಿಕ್ಷಣ ಸಚಿವರು ಸಿಇಟಿ ಫ್ರೋಫೆಸರ್ ಅಂತಾ ಹೇಳ್ತಿದಾರೆ. ಏನೂ ಅರ್ಹತೆ ಇಲ್ಲದವರನ್ನ ಕರೆ ತಂದು ನಾಗಪುರದ ಹಿಡನ್ ಕಾರ್ಯಸೂಚಿಗಳನ್ನ ಜಾರಿಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ನಾವು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದೇ ಮತ, ಒಂದೇ ಜಾತಿ, ಒಂದೇ ದೇವರು ಎಂದು ದೇಶದ ಏಕತೆಯ ಸಂದೇಶ ಸಾರಿದ ಮಹನೀಯರ ವಿಚಾರಧಾರೆಗಳನ್ನ ಪಠ್ಯದಿಂದ ಕೈ ಬಿಡಲಾಗಿದ್ದು, ರಾಣಿ ಅಬ್ಬಕ್ಕ, ನಾರಾಯಣ ಗುರುಗಳ ಪಾಠ ಕೈ ಬಿಟ್ಟಿರುವುದರ ಬಗ್ಗೆ ಜನರಿಗೆ ಮನದಟ್ಟಾಗಿದೆ, ಸರ್ಕಾರಕ್ಕೆ ಬಿಸಿ‌ಮುಟ್ಟಿಸಲು ಸನ್ನದ್ಧರಾಗಿದ್ದಾರೆ. ಆರ್ ಎಸ್ ಎಸ್ ಕಾರ್ಯಸೂಚಿಯನ್ನ ಹಿಂಬಾಗಿಲಿನಿಂದ ಅನುಷ್ಠಾನಕ್ಕೆ ತರುವ ಪ್ರಯತ್ನಗಳ ಬಗ್ಗೆ ಮನದಟ್ಟಾಗಿದೆ. ಸ್ವಾರ್ಥಕ್ಕಾಗಿ ಯಾರನ್ನ ಬೇಕಾದರೂ ಬಲಿ ಕೊಡುತ್ತಾರೆ ಎಂಬುದು ಅರ್ಥವಾಗಿದೆ ಎಂದರು.

“ರೋಹಿತ್ ಚಕ್ರತೀರ್ಥನೋ, ವಕ್ರತೀರ್ಥನೋ ಎಂಬುದು ಗೊತ್ತಿಲ್ಲ. ನಾಗಪುರ ವಿಶ್ವವಿದ್ಯಾಲಯದಿಂದ ಬಂದ ಇವರುಗಳಿಗೆ ಜವಾಬ್ದಾರಿ ಇಲ್ಲ. ಪಠ್ಯ ಪುಸ್ತಕದಲ್ಲಿ ನಾಳೆ ಆರ್ ಎಸ್ ಎಸ್ ಸೇರಿಸುವ ಅಂಶಗಳಿಗೆ ಪುರಾವೆ ಇರುವುದಿಲ್ಲ. ಆರ್ ಎಸ್ ಎಸ್ ಗೆ ಪುರಾವೆ ಇಲ್ಲ ಅದು ನೊಂದಾಯಿತ ಸಂಸ್ಥೆಯೇ ಅಲ್ಲ, ಅದಕ್ಕೆ ಅಸ್ಥಿತ್ವವೇ ಇಲ್ಲ. ಖಾಕಿ ಚೆಡ್ಡಿ, ಕರಿ ಟೋಪಿಯನ್ನ ಸುಡುವ ಮೂಲಕ ಅವರ ಅಸ್ತಿತ್ವ ನಾಶಪಡಿಸುವುದನ್ನೇ ಸಿದ್ದರಾಮಯ್ಯನವರು ” ಚಡ್ಡಿ ಸುಡುವ ಅಭಿಯಾನ” ಎಂದು ಹೇಳಿದ್ದಾರೆ.

ಖಾಕಿ ಚೆಡ್ಡಿ, ಕರಿ ಟೋಪಿ, ದೊಣ್ಣೆ ಹಿಡಿದುಕೊಂಡವರು ಈ ದೇಶವನ್ನ ಕಾಪಾಡುತ್ತಿದ್ದಾರೆ ಎನ್ನುವ ಮೂಲಕ ಈ ದೇಶದ ಮಿಲಿಟರಿ, ಅರೆಸೇನೆ, ಪೊಲೀಸ್ ವ್ಯವಸ್ಥೆಯನ್ನ ಬಿಜೆಪಿ ಅವಮಾನಿಸುತ್ತಿದೆ. 100ವರ್ಷಗಳ ಈಚೆಗೆ ಬಂದ ಇವರು ನಾವು ಮಾತ್ರ ಹಿಂದೂ ಧರ್ಮವನ್ನ ಕಾಪಾಡುತ್ತೇವೆ ಎಂದು ಜನರ ಕಣ್ಣಿಗೆ ಮಣ್ಣರೆಚುವ ತಂತ್ರ ಮಾಡುತ್ತಿದ್ದಾರೆ. ವೇದ ಉಪನಿಷತ್ತು, ಭಗವದ್ಗೀತೆ ಸೇರಿದಂತೆ ಎಲ್ಲೂ ಕೂತು ಖಾಕಿ ಚೆಡ್ಡಿ, ಕರಿ ಟೋಪಿಯ ಉಲ್ಲೇಖವಿಲ್ಲ. ಪ್ರಪಂಚದಲ್ಲಿ ಇದು ಕಾಣ ಸಿಗುವುದು ಜರ್ಮನಿಯ ಹಿಟ್ಲರ್ ಸೇನೆಯಲ್ಲಿ ಮಾತ್ರ. ಸುಳ್ಳು ಹೇಳುವುದೇ ಅವರ ಕಾಯಕ, ದೇಶವನ್ನ ಧರ್ಮಾಂಧತೆಯ ಅಫೀಮಿನಿಂದ ರಕ್ಷಿಸಬೇಕಿದೆ. ” ಈಗ ಖಾಕಿ ಚೆಡ್ಡಿ ಬದಲು ಪ್ಯಾಂಟ್ ಬಂದಿದೆ. ಅವರ ಅಸ್ಮಿತೆಯನ್ನೇ ಅವ್ರು ಕಳೆದುಕೊಂಡಿರುವುದರ ಸಂಕೇತ. ಸರಳತೆ, ತ್ಯಾಗ ಎಂದು ಹೇಳುತ್ತಿದ್ದವರು ಈಗ ಯಾಕೆ ಪ್ಯಾಂಟ್ ಗೆ ಬದಲಾಯಿಸಿದ್ದಾರೆ.? ಅದಕ್ಕೆ ಕಾರಣ 40% ಕಮಿಷನ್. ಕಮಿಷನ್ ಹಣದಿಂದಲೇ ಪ್ಯಾಂಟ್ ಹಾಗೂ ಹತ್ತು ಲಕ್ಷದ ಕೋಟ್ ಬಂದಿದೆ ಎಂದು ವ್ಯಂಗ್ಯವಾಗಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ದವಾಗಿದ್ದವರು ಆರ್ ಎಸ್ ಎಸ್, ಹಿಂದಿ ಭಾಷಿಕ ರಾಜ್ಯಗಳು ಬಿಟ್ಟು ಬೇರೆ ಕಡೆ ಅವರ ಪ್ರಭಾವ ಬೀರಿದೆಯಾ? ದೇಶ ಅಂದ್ರೆ ಕೇವಲ ಹಿಂದಿ ರಾಜ್ಯಗಳಲ್ಲ, ಎಲ್ಲರನ್ನೂ ಒಳಗೊಳ್ಳಬೇಕೆಂದು ನೆಹರೂ ಅವ್ರು ತಮ್ಮ ಸಂಪುಟದಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯ ಇದ್ದ ಶ್ಯಾಂ ಪ್ರಸಾದ್ ಮುಖರ್ಜಿಯನ್ನ ಸಚಿವರನ್ನಾಗಿ ಮಾಡಿದ್ದರು. ಅಂಬೇಡ್ಕರ್ ಅವರಿಗೂ ಅವಕಾಶ ನೀಡಿದ್ದರು‌ ಕೆಲವು ಮುಸ್ಲಿಂ ಲೀಗ್ ನವರಿಗೂ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ನರೇಂದ್ರ ಮೋದಿ ಬಂದ ಮೇಲೆ ಅವರ ವಿರುದ್ಧ ಮಾತಾಡುವವರು ದೇಶದ್ರೋಹಿಗಳೆಂದು ಪಟ್ಟ ಕಟ್ಟಲಾಗ್ತಿದೆ. ಎಂಟು ವರ್ಷಗಳಲ್ಲಿ ದೇಶಕ್ಕೆ ಒಂದೇ ಒಂದು ಕೆಲಸ ಮಾಡಲಿಲ್ಲ ಎಂದರು.

ಹಿಜಾಬ್ ಪ್ರತಿಕ್ರಿಯೆ ಉದ್ದೇಶಿಸಿ ಮಾತನಾಡಿದ ಅವರು ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಹಿಜಾಬ್ ವಿದ್ಯಾರ್ಥಿನಿಯರಿಗೆ ನನ್ನ ಅಭಿನಂದನೆಗಳು. ‌ನ್ಯಾಯಾಲಯದ ಆದೇಶ ಪಾಲಿಸಬೇಕಿದೆ. ಪ್ರಕರಣ ಇನ್ನೂ ಕೋರ್ಟ್ ನಲ್ಲಿದೆ. ಎಸ್ ಡಿ ಪಿಐ ಹಾಗೂ ಸಂಘಪರಿವಾರದವರು ಇಂತಹ ಘಟನೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತಿರುವವರಿಗೆ ನಮ್ಮ ಬೆಂಬಲವಿದೆ. ದೇಶದಲ್ಲಿ 33 ಕೋಟಿಗೂ ಹೆಚ್ಚು ದೇವರಿದ್ದಾರೆ. ಉತ್ತರಪ್ರದೇಶದ ಎಲ್ಲಾ ಮಹಿಳೆಯರು ಗುಂಗಟ್ ಹಾಕುತ್ತಾರೆ. ಅವರವರ ಇಷ್ಟದ ಪ್ರಕಾರ ಬಟ್ಟೆ ಧರಿಸಲಿ. ಅವರ ಸಂಪ್ರದಾಯದ ಪ್ರಕಾರ ಧರಿಸಲು ಅವಕಾಶ ಮಾಡಿಕೊಡಬೇಕು ಎಂದರು.

Donate Janashakthi Media

Leave a Reply

Your email address will not be published. Required fields are marked *