ಬೆಂಗಳೂರು : ಭಾರೀ ಸುದ್ದಿಯಾಗಿದ್ದ, ರಾಜಕೀಯ ಕೆಸರೆರಚಾಟಕ್ಕೂ ಸಾಕ್ಷಿಯಾಗಿದ್ದ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೊನೆಗೂ 18 ದಿನಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಪುಣೆಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣದ ಕಿಂಗ್ಪಿನ್ ಎನ್ನಲಾಗಿದ್ದ ಕಲಬುರಗಿಯ ಗೋಕುಲ ಬಡಾವಣೆಯಲ್ಲಿರೋ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ ಒಡತಿಯಾಗಿದ್ದ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದರು. ಆಕೆಯ ಪತಿಯ ಬಂಧನವಾಗಿದ್ದರೂ ದಿವ್ಯ ಸುಳಿವು ಪತ್ತೆಯಾಗಿರಲಿಲ್ಲ. ಸಿಐಡಿ ಅಧಿಕಾರಿಗಳು ವಿವಿಧ ತಂಡಗಳನ್ನು ನಡೆಸಿ ಪತ್ತೆ ಕಾರ್ಯ ಮಾಡಿದ್ದರೂ ಕೂಡ ಪದೇ ಪದೆ ಸ್ಥಳ ಬದಲಾವಣೆ ಮಾಡುತ್ತಿದ್ದ ಕಾರಣ 18 ದಿನಗಳಿಂದ ಬಂಧನ ಸಾಧ್ಯವಾಗಿರಲಿಲ್ಲ.
ತಪ್ಪಿಸಿಕೊಳ್ಳುತ್ತಿದ್ದದ್ದು ಹೇಗೆ : ಸಿಐಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ದಿವ್ಯಾ ಹಾಗರಗಿ ಬಂಧನ ಆಗಿದ್ದು ಹುಬ್ಬೇರಿಸುವಂತೆ ಮಾಡಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಊರು ತೊರದ ದಿವ್ಯಾ ಹಾಗರಿಗಿ, ದಿನವೊಂದಕ್ಕೆ ಸ್ಥಳ ಬದಲಾಯಿಸಿ, ಸಿಮ್ ಗಳನ್ನು ಬದಲಿಸುತ್ತಿದ್ದರಂತೆ. ಸಿಐಡಿಯಿಂದ ಲಭ್ಯವಾದ ಮಾಹಿತಿ ಪ್ರಕಾರ ಇಲ್ಲಿಯವರೆಗೆ ದಿವ್ಯಾ ಹಾಗರಿಗಿ 50 ಸಿಮ್ ಬಳಸಿದ್ದಾರೆ ಎಂಬ ಸ್ಪೋಟಕ ಅಂಶ ಹೊರ ಬಿದ್ದಿದೆ.
ಗುಜರಾತ್, ಮಹಾರಾಷ್ಟ್ರ, ಆಂದ್ರಪ್ರದೇಶ್, ತೆಲಂಗಾಣ ರಾಜ್ಯಗಳಲ್ಲಿ ಇವರು ವಾಸ್ತವ್ಯವನ್ನು ಮಾಡುತ್ತಿದ್ದರು. ಪ್ರತಿ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪರಾರಿಯಾಗುವಾಗ ಸಿಮ್ ಬದಲಾವಣೆ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ದಿವ್ಯಾ ಹಾಗರಗಿಯನ್ನು ಪತ್ತೆ ಮಾಡಲು 6 ತಂಡಗಳನ್ನು ರಚಿಸಲಾಗಿತ್ತು. ಸಿಮ್ ಬದಲಾವಣೆ ಮಾಡುತ್ತಿದ್ದ ಕಾರಣ ನೆಟ್ವರ್ಕ್ ಟ್ರೇಸ್ ಮಾಡಲು ಕಷ್ಟವಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಪುಣೆಗೆ ತೆರಳಿ ಗುರುವಾರ ತಡ ರಾತ್ರಿ ಬಂಧನ ಮಾಡಿದ್ದಾರೆ.
ಈ ಮೇಡಂ ಹತ್ತಿರ ಅಪರಾಧ ಮಾಡಿ ತಪ್ಪಿಸಿಕೊಳ್ಳೋದು ಹೇಗೆಂಬ ಟ್ಯೂಷನ್ ತಗೋಬಹುದು
ನಾಚಿಗೆ ಆಗಬೇಕು ಇವರ ಜನ್ಮಕ್ಕೆ…..
ಅಪರಾಧ ಸಾಬಿತಾಗುತ್ತದೆ…ಇವರಿಗೆ ನೀಡುವ ಶಿಕ್ಷೆ ಮತ್ತೊಬ್ಬರಿಗೆ ಪಾಠವಾಗಬೇಕು ಹಣ ನೀಡಿದ ಅಭ್ಯರ್ಥಿಗಳನ್ನು ಬಂಧಿಸಬೇಕು ಹಣವನ್ನು ಸರ್ಕಾರದ ವಶಕ್ಕೆ ಪಡೆಯಬೇಕು