ತಮಿಳುನಾಡು ಚುನಾವಣೆಯಲ್ಲಿ ಮತ ಚಲಾಯಿಸಿದ ಆರೋಪ : 20 ವಿದೇಶಿ ನಾಗರಿಕರ ಬಂಧನ

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವಾಗಿ ಮತ ಚಲಾಯಿಸಿದ ಆರೋಪದ ಮೇಲೆ ಸುಮಾರು 20 ವಿದೇಶಿ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ. ಚುನಾವಣೆಯ ಬಳಿಕ ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ ನಡೆದ ತಪಾಸಣೆಯ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡು

ಚುನಾವಣಾ ಆಯೋಗದ ಸೂಚನೆಯಂತೆ ವಲಸೆ ಅಧಿಕಾರಿಗಳು ವಿದೇಶಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬೆರಳಿನ ಮೇಲೆ ಮತದಾನ ಗುರುತು ಇರುವುದನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಹಲವರ ಬೆರಳಿನ ಮೇಲೆ ಮತದಾನ ಮಸಿ ಗುರುತು ಕಂಡುಬಂದ ಹಿನ್ನೆಲೆ ಅವರನ್ನು ವಶಕ್ಕೆ ಪಡೆಯಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ 15 ಮಂದಿಯನ್ನು ತಡೆಹಿಡಿಯಲಾಗಿದ್ದು, ಮಧುರೈ ವಿಮಾನ ನಿಲ್ದಾಣದಲ್ಲೂ ಕೆಲವರನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಶ್ರೀಲಂಕಾ, ಬ್ರಿಟನ್‌, ಇಂಡೋನೇಷ್ಯಾ ಹಾಗೂ ಕೆನಡಾ ಪೌರತ್ವ ಪಡೆದವರು ಸೇರಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇವರು ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ ಮತ್ತು ಮಧುರೈ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮತ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಇಂಧನ ದರ ಏರಿಕೆ : ಜನರ ಜೇಬಿಗೆ ಮತ್ತೊಂದು ಹೊರೆ?

ಭಾರತೀಯ ನಾಗರಿಕತ್ವ ತ್ಯಜಿಸಿ ವಿದೇಶಿ ಪೌರತ್ವ ಪಡೆದ ವ್ಯಕ್ತಿಗಳಿಗೆ ಭಾರತದಲ್ಲಿ ಮತದಾನ ಹಕ್ಕು ಇರುವುದಿಲ್ಲ. ಆದರೂ ಇವರ ಹೆಸರು ಮತದಾರರ ಪಟ್ಟಿಗೆ ಹೇಗೆ ಸೇರಿತು, ನಕಲಿ ದಾಖಲೆಗಳನ್ನು ಬಳಸಲಾಗಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಪೊಲೀಸರು ಈಗಾಗಲೇ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಘಟನೆ ಚುನಾವಣಾ ಆಯೋಗ ನಡೆಸಿದ್ದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಮೇಲೂ ಪ್ರಶ್ನೆ ಎಬ್ಬಿಸಿದೆ. ವಿದೇಶಿ ಪೌರತ್ವ ಹೊಂದಿದವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿದಿರುವುದು ಹೇಗೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.

ಇದನ್ನೂ ನೋಡಿ : ಕರ್ನಾಟಕಕ್ಕೂ ಬಂದೇ ಬಿಡ್ತು..SIR….ಎಚ್ಚರ ಎಚ್ಚರ Janashakthi Media

Donate Janashakthi Media

Leave a Reply

Your email address will not be published. Required fields are marked *