ರಂಗ ಸಂಪದ ಪ್ರಸ್ತುತಿ:ಲೋಕದ ಒಳ ಹೊರಗೆ

ಗುಂಡಣ್ಣ ಚಿಕ್ಕಮಗಳೂರು

ಬಹಳ ತೀಕ್ಷ್ಮವಾದ ಸಂಭಾಷಣೆಯನ್ನು ಈ ನಾಟಕ ಹೊಂದಿದೆ ಮತ್ತು ಪ್ರತಿಯೊಂದು ಮಾತು ಸಹ ವಿಶ್ಲೇಷಣಾತ್ಮಕವಾಗಿದೆ; ಸಂಭಾಷಣೆಯ ಸಾರ, ನೋಡುವ ಪ್ರೇಕ್ಷಕರ ಕಣ್ಣಿಗೆಕಟ್ಟುವ ಹಾಗೆ ಅನಾವರಣಗೊಳಿಸುತ್ತದೆ; ದೇಶದೊಳಗಿನ ದಳ್ಳುರಿ ಮತ್ತು ಮನೆಯೊಳಗಿನ ಉರಿ ಎರಡನ್ನೂ ಸಮಾನಾಂತರವಾಗಿ ಪರಿಚಯಿಸುತ್ತಾ, ಎರಡೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದರೆ ಆಗುವ ಪರಿಣಾಮವು ಆಘಾತಕಾರಿ ಎನ್ನುವ ಸಂದೇಶವನ್ನು ಬಹಳ ಸಂಯಮದಿಂದ, ನಯವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಲೋಕದ

ಗುರುದೇವರ ವೀಂದ್ರನಾಥ ಠಾಗೂರ್‌ ಅವರ ಬಹಳ ಜನಪ್ರಿಯ ಕಾದಂಬರಿ ಘರೆ-ಬೈರೆ.ಈ ಕಾವ್ಯಮಯ ಕಾದಂಬರಿಯನ್ನು ಠಾಗೂರ್‌ ಅವರು 1916ರಲ್ಲಿ ರಚಿಸುತ್ತಾರೆ.1905ರಲ್ಲಿ ಬಂಗಾಲ ವಿಭಜನೆಯಾಗುತ್ತದೆ.ಇದಕ್ಕೆ ಪ್ರತಿರೋಧ ಎನ್ನುವ ರೀತಿಯಲ್ಲಿ 1905ರಿಂದ 1908ರ ವರೆಗೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮತ್ತೊಂದು ಹಂತದ ಚಳುವಳಿಯಾಗಿ ಬಂಗಾಲದ ರಾಷ್ಟ್ರೀಯತಾವಾದಿಗಳು ಬಂಗಾಲ ವಿಭಜನೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ ಮತ್ತು ಸ್ವದೇಶಿ ಚಳುವಳಿ (ಸ್ವದೇಶಿ ಆಂದೋಲನ)ವನ್ನು ಪ್ರಾರಂಭಿಸುತ್ತಾರೆ. ಥಾನುಥಾನು ವಿದೇಶಿ ಬಟ್ಟೆಗಳನ್ನು ಅಂಗಡಿಗಳಿಂದ ಲೂಟಿ ಮಾಡಿ, ರಸ್ತೆಗೆತಂದು ಬೆಂಕಿ ಕೊಟ್ಟು ಸುಟ್ಟು ಹಾಕುತ್ತಿದ್ದ ಈ ಚಳುವಳಿಯ ಬಗ್ಗೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರಲ್ಲೂ ಮತ್ತು ಕಾಂಗ್ರೆಸ್ ಪಕ್ಷದಲ್ಲೂ ಭಿನ್ನಅಭಿಪ್ರಾಯವಿದ್ದಿತು. ಕಾಂಗ್ರೆಸ್ ಪಕ್ಷದೊಳಗೆ ಇದ್ದ ಸಮಾಜವಾದಿಗಳು ಮತ್ತು ಕಾಂಗ್ರೆಸ್‌ನ ಹಲವು ಪ್ರಮುಖರು ಒಪ್ಪದ ಆಂದೋಲನ ಇದಾಗಿತ್ತು.ದೇಶದ ಲಕ್ಷಾಂತರ ಜನರಿಗೆ ಉಡಲು ಬಟ್ಟೆಇಲ್ಲದಿರುವಾಗ, ಹೀಗೆ ವಿದೇಶಿ ಬಟ್ಟೆಯ ಹೆಸರಿನಲ್ಲಿ ಲೂಟಿ ಮಾಡಿ ಅದನ್ನು ಯಾರ ಉಪಯೋಗಕ್ಕೂ ಬಾರದ ಹಾಗೆ ಸುಡುವುದು ಎಷ್ಟು ಅರ್ಥಪೂರ್ಣ ಎಂಬ ಚರ್ಚೆಯನ್ನು ಸಮಾಜವಾದಿಗಳು ಹುಟ್ಟುಹಾಕಿದರೆ, ಬಂಗಾಲದಲ್ಲಿ ವಿದೇಶಿ ಬಟ್ಟೆಗಳನ್ನು ಮಾರುತ್ತಿದ್ದ ಮುಸ್ಲಿಂ ಬಂಧುಗಳ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಲೂಟಿ ಮಾಡುವುದು; ಹಿಂದೂ-ಮುಸ್ಲಿಂ ವಿರೋಧಿ ಬಾವನೆಗಳನ್ನು ಕಾಂಗ್ರೆಸ್ ಒಳಗೇ ಇದ್ದ ಕೆಲವು ಕೋಮುವಾದಿ ಹೋರಾಟಗಾರರು ಹುಟ್ಟುಹಾಕುತ್ತಿದ್ದುದು.

ಈ ವಿಭಜನೆ ವಿರೋಧಿ ಆಂದೋಲನವು ಆಗಸ್ಟ್ 07, 1905ರಂದು ಕಲ್ಕತ್ತಾದ ಟೌನ್‌ಹಾಲ್ ಮುಂದುಗಡೆ ಪ್ರಾರಂಭವಾಗುತ್ತದೆ.ಇಂದಿಗೆ ಸರಿಯಾಗಿ 118 ವರ್ಷಗಳು ಕಳೆದಿದೆ.ರಂಗ ಸಂಪದ, ಬಿ ಸುರೇಶ ಅವರ ನಿರ್ದೇಶನದಲ್ಲಿ ಘರೆ-ಭೈರೆ ಕಾದಂಬರಿ ಆಧಾರಿತ ನಾಟಕವನ್ನುಆಗಸ್ಟ್ 26 ಮತ್ತು 27 ರಂದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರಸ್ತುತ ಪಡಿಸಿತು. ಸಮಕಾಲೀನ ಸಮಾಜೋ-ರಾಜಕೀಯ ಬೆಳವಣಿಗೆಗಳಿಗೆ ಕನ್ನಡಿ ಹಿಡಿದಿರುವಂತಹ ಒಂದು ರಂಗ ಪ್ರಸ್ತುತಿ “ಲೋಕದ ಒಳಹೊರಗೆ”.ಸತ್ಯಜಿತ್‌ರೇ ಅವರು ಈ ಕಾದಂಬರಿಯನ್ನು ಇದೇ ಹೆಸರಿನಲ್ಲಿ 1984ರಲ್ಲಿ ನಿರ್ದೇಶನ ಮಾಡಿ, 1985ರಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಿದರು.

ಬಂಗಾಲದ ಭದ್ರ ಲೋಕದ ಕೌಟುಂಬಿಕ ಕಥೆಯನ್ನು ಹೊಂದಿರುವ ಈ ಪ್ರಸ್ತುತಿ, ಛದ್ಮವೇಷದ ದೇಶ ಭಕ್ತರ, ಹುಸಿ ಸ್ವಾತಂತ್ರ್ಯ ಹೋರಾಟಗಾರರ ಮುಖ ಚಹರೆಯನ್ನೂ, ಕಪಟ ಬದಕನ್ನೂ ಬಯಲುಗೊಳಿಸುತ್ತದೆ. ಮನೆಯ ಒಳಗಡೆಯೇ ಇದ್ದುಕೊಂಡು, ದೀನ ದಲಿತರ ಸೇವೆ ಮಾಡುತ್ತೇನೆ ಎಂಬ ಹಂಬಲ ಹೊಂದಿರುವ ಸಹಸ್ರಾರು ಜನಗಳಿಗೆ ಹೊರಗಿನ ಲೋಕವನ್ನು, ಜನರನ್ನುಅರಿಯದೆ ನೀವು ಚಳುವಳಿಗಳನ್ನು ಕಟ್ಟಲಾರಿರಿ ಎನ್ನುವ ಸಂದೇಶವನ್ನು ನೇರವಾಗಿ ಹೇಳುತ್ತದೆ.

ಕೇವಲ ಮಾತುಗಾರಿಕೆಯ

ಕಲೆಯನ್ನು ಹೊಂದಿರುವ, ತಮ್ಮ ಆವೇಶ, ಆಕ್ರೋಶ ಭರಿತ ಭಾಷಣಗಳಿಂದ ಎಂತಹವರನ್ನೂ ಮರಳುಮಾಡಿ, ಸತ್ಯದತಲೆ ಹೊಡೆಯುವಂತಹ ಸುಳ್ಳುಗಳಿಂದ ಸಾಮಾನ್ಯಜನರನ್ನು ಮರಳುಮಾಡುವ, ಮೋಸದ ಬಲೆಗೆ ಸಿಗಿಸುವ ಢೋಂಗಿ ದೇಶಭಕ್ತರ ಮತ್ತು ಅವರ ಬಲೆಗೆ ಸಿಲುಕುವ ಪ್ರಾಮಾಣಿಕ ದೇಶ ಭಕ್ತರ, ಸ್ವಾತಂತ್ರ್ಯ ಹೋರಾಟಗಾರರ, ಮುಗ್ದ ಯುವ ಸಮೂಹದ ಕಥೆ ಇದಾಗಿದೆ.

ಇದನ್ನೂ ಓದಿ:ಕಲ್ಯಾಣ ಕರ್ನಾಟಕದಲ್ಲಿ ಅಮೃತ ಮಹೋತ್ಸವ:ಸಿಎಂ ಸಿದ್ದರಾಮಯ್ಯರಿಂದ ಧ್ವಜಾರೋಹಣ   

 ವಿಲಾಯಿತಿಯಲ್ಲಿ ಓದಿ, ಸ್ವದೇಶಕ್ಕೆ ಹಿಂದಿರುಗಿರುವ ಮನೆಯ ಯಜಮಾನ ಠಾಕೂರ್ ಸಿದ್ದಾರ್ಥ; ಮಧ್ಯಮ ವಯಸ್ಸಿನವನು. ಪ್ರಾಮಾಣಿಕ; ಸ್ವತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿರುವವ; ಬಡವರ ಆರ್ಥಿಕ ಏಳಿಗೆಗೆ, ಸೇವೆಗೆ ಸಮಯವನ್ನುಕೊಟ್ಟಿರುವ ಶ್ರೀಮಂತ; ಒಂದಿಷ್ಟು ಓದಿಕೊಂಡಿರುವ, ಸಾಮಾಜಿಕ ಮೌಲ್ಯಗಳನ್ನು ವಿವರಿಸಿದರೆ ಅರ್ಥಮಾಡಿಕೊಳ್ಳುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅತೀತ ಹಂಬಲದ ಶಾರದೆ ಅವನ ಮಡದಿ; ಪ್ರೀತಿ, ಪ್ರೇಮ, ಪ್ರಣಯ ಎಲ್ಲವೂ ಮೋಹಕವಾಗಿ ಸಮ್ಮಿಳಿತವಾಗಿರುವ ಕುಟುಂಬ. ವಿಲಾಯಿತಿಯಲ್ಲಿ ಓದಿದ ಕಾರಣ ಮತ್ತು ಅಂದು ಬಂಗಾಲದಲ್ಲಿ ಸ್ತ್ರೀಯರು ಸಹ ಸ್ವಾತಂತ್ರ್ಯ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೀತಿಯಂತೆ, ಸಿದ್ದಾರ್ಥ ಶಾರದೆಗೆ ಅವಳ ಇಚ್ಚೆಯಂತೆ ಬದುಕುವ, ಹೊರಗಿನ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ, ಸ್ವತಂತ್ರವಾಗಿ ತೀರ್ಮಾನಿಸುವ ಹಕ್ಕನ್ನು ಅವಳಿಗೆ ನೀಡುತ್ತಾನೆ. ಭದ್ರಲೋಕದ ನೀತಿ ನಿಯಮಗಳನ್ನು ಮೀರದೆ, ಮನೆಯೊಳಗೆ ಇದ್ದು ಸಮಾಜ ಸೇವೆಯನ್ನು ಮಾಡುವ, ಹಂಬಲ ವ್ಯಕ್ತಪಡಿಸುವ ಶಾರದೆಗೆ, ಹೊರಗಿನ ಪ್ರಪಂಚ ಅರಿಯದೆ, ದೇಶ ಮತ್ತು ಸಾಮಾನ್ಯ ಜನರ ಬದುಕನ್ನು ಪರಿಚಯಿಸಿಕೊಳ್ಳದೆ, ಸಮಾಜಸೇವೆ ಮಾಡಲು ಸಾಧ್ಯವಾಗದು ಎಂಬ ಎಚ್ಚರಿಕೆಯ ಸಾಮಾನ್ಯ ಜ್ಞಾನದ ಮಾತುಗಳನ್ನು ಆಡುತ್ತಾನೆ ಸಿದ್ದಾರ್ಥ.

ಬಾಲ್ಯದ ಗೆಳೆಯನಾಗಿ, ಶಾಲೆಯ ವಿಧ್ಯೆಯಲ್ಲಿ ಎತ್ತರಕ್ಕೆ ಏರಲಾರದೆ, ಮಾತಿನಿಂದ ಎಲ್ಲರನ್ನೂ ಸೆಳೆಯುವ, ಅತಿ ಭಾವುಕ ವ್ಯಕ್ತಿತ್ವದ ಅವನ ಬಾಲ್ಯ ಸ್ನೇಹಿತ, ಈಗಿನ ದೇಶಭಕ್ತ ಇಂದ್ರಜಿತ್; ಶ್ರೀಮಂತರನ್ನೂ, ಅವರ ಸಿರಿವಂತಿಕೆಯನ್ನೂ ಧಿಕ್ಕರಿಸುವ, ತನ್ನಉಗ್ರ ಭಾಷಣಗಳಲ್ಲಿ ಅಂತಹವರ ಮೇಲೆ ದ್ವೇಷಕಾರುವ ದೇಶ ಭಕ್ತ ಇಂದ್ರಜಿತ್; ಬಂಗಾಲದಲ್ಲಿ ಸ್ವದೇಶಿ ಆಂದೋಲನವನ್ನು ತೀವ್ರಗೊಳಿಸುವ ಆಶಯದಿಂದ, ಸಿದ್ದಾರ್ಥ ಇಂದ್ರಜಿತ್‌ನನ್ನು ಮನೆಗೆ ಕರೆಸಿಕೊಂಡು, ಚಳುವಳಿಗಾಗಿ ಅವನ ಖರ್ಚುಗಳನ್ನು ತಾನೇ ಭರಿಸುವ ಉಮೇದು ತೋರಿಸುತ್ತಾನೆ; ನೆಲೆಯಿಲ್ಲದ ಅವನಿಗೆ ತಾನೇ ಆಶ್ರಯ ನೀಡುತ್ತಾನೆ; ಸಿದ್ದಾರ್ಥ ಅವರ ಶ್ರೀಮಂತಿಕೆಯ ಜೀವನದ ರುಚಿಯನ್ನು ಕಂಡ ಇಂದ್ರಜಿತ್‌ನ ಹೋರಾಟದ ಜೀವನಕ್ರಮ ಬದಲಾಗುತ್ತದೆ; ಮನೆಯಲ್ಲೇ ಇದ್ದುಕೊಂಡು, ವಿಲಾಸಿ ಜೀವನದ ಸುಖವನ್ನು ಉಣ್ಣುತ್ತಾ ಬೀದಿಬದಿಯ ಬಡಜನಗಳಲ್ಲಿ ಸ್ವಾತಂತ್ರ್ಯ ಚಳುವಳಿಯ ಮಾತುಗಳ ಜೊತೆಜೊತೆಗೆ ಕೋಮು-ಜಾತಿಯ ದ್ವೇಷವನ್ನು ಹತ್ತಿಕ್ಕಿ, ಯುವಪಡೆಯನ್ನು ಹಾದಿ ತಪ್ಪಿಸುತ್ತಾನೆ. ಲೂಟಿಕೋರರನ್ನಾಗಿ ಮಾಡುತ್ತಾನೆ; ಸ್ವದೇಶಿ ಆಂದೋಲನದಲ್ಲಿ ತೊಡಗಿಕೊಳ್ಳುವ ಪ್ರಾಮಾಣಿಕ ಮನಸ್ಸಿನ ಮುಗ್ದ ಯುವಕರ ಪಡೆಯನ್ನುಇಂದ್ರಜಿತ್‌ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾನೆ, ಸಂಕಷ್ಟಗಳಿಗೆ ಸಿಲುಕಿಸುತ್ತಾ ಹೋಗುತ್ತಾನೆ; ಅಂತಿಮವಾಗಿತನ್ನ ಬಾಲ್ಯದ ಗೆಳೆಯ ಸಿದ್ದಾರ್ಥನ ಸಿರಿತನಕ್ಕೆ ಮಾತ್ರ ಹಂಬಲಿಸುವುದಿಲ್ಲ; ಬದಲಿಗೆ, ಎಲ್ಲ ಹೆಣ್ಣುಮಕ್ಕಳನ್ನೂ ಭಾರತ ಮಾತೆ ಎಂದೇ ಕರೆಯುವ ಇಂದ್ರಜಿತ್, ಶಾರದೆಯ ಮೇಲೂ ದೈಹಿಕವಾಗಿ ಆಸೆಪಟ್ಟು ಅವಳನ್ನು ಅನೈತಿಕವಾಗಿ ಕೂಡುತ್ತಾನೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಸಿದ್ದಾರ್ಥ, ಆಗಲೂ ಶಾರದೆಯನ್ನು ದಂಡಿಸುವ, ಅಪಮಾನಗೊಳಿಸುವ ಕ್ರಿಯೆಗೆ ಹೋಗದೆ, ಅವಳಿಗೆ ಬಿಡುಗಡೆಯನ್ನು ನೀಡುತ್ತಾನೆ; ಅವಳ ಬದುಕಿನ ಮುಂದಿನ ಆಯ್ಕೆಯ ಸ್ವಾತಂತ್ರ್ಯ ವನ್ನು ಅವಳಿಗೇ ನೀಡುತ್ತಾನೆ. ಅಂತಿಮವಾಗಿ, ಶಾರದೆಗೆ ಇಂದ್ರಜಿತ್‌ನ ಎಲ್ಲ ಮೋಸಗಳ ಅರಿವಾಗಿ, ತನ್ನ ಮುಗ್ದತನಕ್ಕೆ ಪಶ್ಚಾತಾಪಗೊಂಡು, ಸರಿಹಾದಿಗೆ ಮರಳುತ್ತಾಳೆ. ಇಂದ್ರಜಿತ್‌ನ ಅಡಿಯಲ್ಲಿದ್ದ ಯುವಪಡೆ, ಅವನನ್ನು ಧಿಕ್ಕರಿಸಿ, ಶಾರದೆ-ಸಿದ್ದಾರ್ಥ ಅವರ ಜೊತೆ ಗೂಡುತ್ತಾರೆ.  ಲೋಕದಲೋಕದ

ಮೊದಲಿಗೆ ಸಿದ್ದಾರ್ಥ-ಶಾರದ ಅವರ ಪ್ರೀತಿ-ಪ್ರೇಮ ಸಂಬಂಧಗಳ ಚಿತ್ರಗಳು ಅನಾವರಣಗೊಂಡರೆ, ನಂತರದಲ್ಲಿ ಅನಾವರಣಗೊಳ್ಳುವ ಶಾರದ-ಇಂದ್ರಜಿತ್-ಠಾಕೂರ್‌ ಅವರ ಸಂಕೀರ್ಣ ಸಂಬಂಧಗಳು ನಾಟಕವನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ. ಹರಿರಾಮ್-ಶಾರದ ಮತ್ತು ಇಂದ್ರಜಿತ್-ಸಿದ್ದಾರ್ಥ ಅವರ ನಡುವಿನ ಪ್ರತಿಯೊಂದು ಮಾತುಗಳು, ಪ್ರಸ್ತುತ ಕಾಲಘಟ್ಟದ, ಇಂದಿನ ಸಮಾಜದ ಯಾವುದೋ ಒಂದು ಘಟನೆಯನ್ನು ನೆನಪಿಸುತ್ತವೆ; ಇಂದಿನ ಢೋಂಗಿ ಸಮಾಜ ಸೇವಕರನ್ನೂ, ಹುಸಿ ದೇಶಭಕ್ತರನ್ನೂ ನೆನಪಿಸುತ್ತದೆ; ನಾಟಕದ ಪ್ರಸ್ತುತತೆಯನ್ನು ತೀವ್ರಗೊಳಿಸುತ್ತಾ ಹೋಗುತ್ತದೆ.

ಬಹಳ ತೀಕ್ಷ್ಮವಾದ ಸಂಭಾಷಣೆಯನ್ನು ಈ ನಾಟಕ ಹೊಂದಿದೆ ಮತ್ತು ಪ್ರತಿಯೊಂದು ಮಾತು ಸಹ ವಿಶ್ಲೇಷಣಾತ್ಮಕವಾಗಿದೆ; ಸಂಭಾಷಣೆಯ ಸಾರ, ನೋಡುವ ಪ್ರೇಕ್ಷಕರ ಕಣ್ಣಿಗೆಕಟ್ಟುವ ಹಾಗೆ ಅನಾವರಣಗೊಳಿಸುತ್ತದೆ; ದೇಶದೊಳಗಿನ ದಳ್ಳುರಿ ಮತ್ತು ಮನೆಯೊಳಗಿನ ಉರಿ ಎರಡನ್ನೂ ಸಮಾನಾಂತರವಾಗಿ ಪರಿಚಯಿಸುತ್ತಾ, ಎರಡೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದರೆ ಆಗುವ ಪರಿಣಾಮವು ಆಘಾತಕಾರಿ ಎನ್ನುವ ಸಂದೇಶವನ್ನು ಬಹಳ ಸಂಯಮದಿಂದ, ನಯವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಒಂದು ಮನೆಯೊಳಗಿನ ಸಂಕೀರ್ಣ ಸಮಸ್ಯೆಗಳನ್ನು ಮತ್ತು ದೇಶದ ತಪ್ಪು ಹೋರಾಟಗಳ ಸಮಸ್ಯೆಗಳಿಗೆ ಹೋಲಿಕೆ ಮಾಡಿ, ಢೋಂಗೀ ದೇಶಭಕ್ತರು, ದೇಶ ಸೇವಕರು ಹಚ್ಚುವ ಕಿಚ್ಚಿಗೆ ಗುರಿಯಾಗುವ ಸಾಮಾನ್ಯಜನರು ಎಚ್ಚೆತ್ತುಗೊಳ್ಳಬೇಕಾದ ಅರಿವನ್ನು ಮೂಡಿಸುತ್ತಾರೆ.

ದೇಶದ ಪ್ರಸ್ತುತ ಕಾಲಘಟ್ಟಕ್ಕೆ, ಪರಿಸ್ಥಿತಿಗೆ ಈ ನಾಟಕಕ್ಕಿಂತ ಅತ್ಯುತ್ತಮ ಆಯ್ಕೆ ಮತ್ತೊಂದಿರಲಾರದು ಅನ್ನಿಸುತ್ತದೆ.ನಾಟಕದ ಎಲ್ಲ ಸಂಭಾಷಣೆಗಳೂ ಸಹ ಮತ್ತೆ ಮತ್ತೆ ಮೆಲಕು ಹಾಕುವಂತಹ ಸಂಭಾಷಣೆಗಳೇ ಆಗಿವೆ. ಬಹಳ ಮುಖ್ಯವಾಗಿ, “ಹರಿವ ನದಿಗೆ ಮೈಯೆಲ್ಲಾ ಕಾಲು” ಎನ್ನುವ ಧೀರ್ಘ ಸಂಭಾಷಣೆ, ಬಹಳ ಪ್ರಮುಖವಾದದ್ದು.ಈ ಸಂಭಾಷಣೆಯ ಮಾತುಗಳನ್ನು ನಾವು ಬಹಳ ವೇಳೆ, ಬೇರೆ ಬೇರೆ ಅರ್ಥದಲ್ಲಿ ಕೇಳಿದ್ದೇವೆ; ಆದರೆ, ಈ ನಾಟಕದಲ್ಲಿ ಬರುವ ಈ ಮಾತುಗಳು ಒಟ್ಟಾರೆ ನಾಟಕದ ಸಾರಾಂಶವನ್ನೂ, ಸಂದೇಶವನ್ನೂಒಟ್ಟಾರೆಯಾಗಿಕಟ್ಟಿಕೊಡುವ ಪ್ರಮುಖ ಸಂಭಾಷಣೆಯಾಗಿ ಕೇಳಿಸುತ್ತದೆ.ಅತಿ ಅವಶ್ಯವೆನಿಸುವ  ಸಂಭಾಷಣೆಯಾಗಿ ಉಳಿಯುತ್ತದೆ.ಅದೇರೀತಿ, ಠಾಗೂರ್‌ ಅವರ ಗೀತಾಂಜಲಿಯನ್ನು ಬಳಸಿರುವ ರೀತಿಯೂ ವಿಭಿನ್ನವಾದದ್ದು; ನಾಟಕದ ಅಂತ್ಯಕ್ಕೆ, ದುಷ್ಟ ಶಕ್ತಿಗಳ ವಿಜೃಂಭಣೆಯ ಹಿನ್ನಲೆಯಲ್ಲಿ ಬರುವಗೀತಾಂಜಲಿ ಉಧ್ಘೋಷವು ಬಹಳ ಪರಿಣಾಮಕಾರಿಯಾಗಿ ಮೂಡುತ್ತದೆ.

ಇದನ್ನೂ ಓದಿ:ಅಮೆರಿಕಾದ ಸೇಬಿಗೆ ಆಮದು ಸುಂಕ ಕಡಿತದ ಲಾಭ, ಭಾರತದ ಸೇಬು ಬೆಳೆಗಾರರಿಗೆ ದುರಂತ

ರಂಗವಿನ್ಯಾಸ ಮತ್ತು ಸಜ್ಜಿಕೆ ನಯನ ಮನೋಹರವಾಗಿದೆ. ವೃತ್ತಿ ರಂಗಭೂಮಿಯ ಚಮಕ್‌ ಅನ್ನು ಹವ್ಯಾಸಿ ರಂಗಭೂಮಿಯಲ್ಲಿ ಝಲಕ್ ಮಾಡಿರುವ ಶಶಿ ಅಡಪಗೆ ಅಭಿಮಾನದ ಶುಭಾಷಯಗಳು.ಬೆಳಕು ಅವಶ್ಯಕತೆಗೆ ಪೂರಕವಾಗಿತ್ತು, ಆಹ್ಲಾದಕರವಾಗಿತ್ತು. ನಾಟಕದ ನಡು ನಡುವೆ ಬರುವ ಸಂಗೀತದಧ್ವನಿ ಸ್ವಲ್ಪ ತಗ್ಗಿದರೆ ಇನ್ನಷ್ಟು ಚೆಂದವಾಗುತ್ತದೆ;

ನಟನೆಯಲ್ಲಿ ಎಲ್ಲ ಪ್ರಮುಖ ನಟರೂ ಅತ್ತುತ್ಯಮವಾಗಿ ಅಭಿನಯಿಸಿದ್ದಾರೆ.ಅದರಲ್ಲೂ ಸಿದ್ದಾರ್ಥ ಪಾತ್ರದ, ನಮ್ಮ ನಡುವಿನ ಹುಡುಗ ಅನೂಪ್ ಮತ್ತು ಇಂದ್ರಜಿತ್ ಪಾತ್ರದ ಧನುಷ್ ಮನಸ್ಸಿನಲ್ಲಿ ಕಾಡುತ್ತಾರೆ.ಅನೂಪ್‌ ರಂಗ ಸಂಪದದ ಹಿರಿಯ ನಟ ರಾಮಮೂರ್ತಿಯ ಮಗ; ಅನೂಪ್‌ನ ಹಾವಭಾವ, ದೈಹಿಕ ಚಲನೆ ರಾಮಮೂರ್ತಿಯ ನೆನಪನ್ನು ತಂದುಕಣ್ಣಂಚಿನಲ್ಲಿ ನೀರು ತರಿಸಿತು.ಉತ್ತಮ ಭವಿಷ್ಯದ ಅನೂಪ್‌ಗೆ ಶುಭ ಹಾರೈಕೆಗಳು.

ರಂಗಸಂಪದ ತನ್ನ 5೦ ರ ಹರೆಯದಲ್ಲಿದೆ. ಹವ್ಯಾಸಿ ರಂಗಭೂಮಿಯ ಎಲ್ಲರ ಆತ್ಮೀಯ ತಂಡ ರಂಗಸಂಪದ. ತನ್ನ 50 ವರುಷಗಳ ಇತಿಹಾಸದಲ್ಲಿನ ಹಲವು ಪ್ರಯೋಗಗಳು ಹವ್ಯಾಸಿ ರಂಗಭೂಮಿಗೆ ದಿಕ್ಕು ತೋರುವ ಪ್ರಯೋಗಗಳೇ ಆಗಿವೆ. ರಂಗಸಂಪದದ ಕದಡಿದ ನೀರು, ಚೋಮ, ಒಡಲಾಳ ಮುಂತಾದ ಹಲವು ಪ್ರಯೋಗಗಳು ಕೇವಲ ರಂಗಪ್ರಸ್ತುತಿ ಆಗದೆ, ಸಾಮಾಜಿಕ-ವೈಚಾರಿಕ ಪ್ರಸ್ತುತಿಗಳೂ ಆಗಿವೆ; ರಂಗಸಂಪದ ತಂಡದ ಆಶಯ ನಾಟಕಗಳಾಗಿ ಮೂಡಿ ಬಂದಿವೆ; ಅಂತಹ ಪ್ರಸ್ತುತಿಗಳ ಸಾಲಿಗೆ ಸೇರುವ ಮತ್ತೊಂದು ಮುನ್ನಲೆ ನಾಟಕವೆಂದರೆ ಅದು ಲೋಕದ ಒಳ ಹೊರಗೆ. ಸುಮಾರು 15 ವರುಷಗಳ ಕಾಲ ಏನನ್ನೂ ಮಾಡದೆ ಮೌನವಾಗಿದ್ದರಂಗ ಸಂಪದ, ಈಗ ತನ್ನ ಮೌನವನ್ನು ಸರಿಯಾದ ಅರ್ಥದಲ್ಲಿ ಮುರಿದಿದೆ.ಲೋಕದ ಒಳ ಹೊರಗೆ ಹೆಚ್ಚು ಪ್ರಯೋಗಗಳನ್ನು ಕಾಣುವಂತಾಗಬೇಕು.ಅದು ರಂಗಸಂಪದ ತಂಡದ ಶ್ರೇಷ್ಠತೆಯನ್ನು ಮೆರೆಯಲಿಕ್ಕಾಗಿ ಅಲ್ಲ; ಬದಲಿಗೆ ಇಂದಿನ ದೇಶದ-ರಾಜ್ಯದ ಪರಿಸ್ಥಿತಿಯ ಅನಿವಾರ್ಯತೆಗಾಗಿ ಎಂದಷ್ಟೇ ಹೇಳಬಹುದು.

ಘರೆ-ಬೈರೆ ಅಂತಹ ಅತ್ಯುತ್ತಮ ಸಾಮಾಜಿಕ ಮೌಲ್ಯದ ಸಂವೇದನೆಯ ಕಾದಂಬರಿಯನ್ನು 1916ರ ಸುಮಾರಿಗೆ ಬರೆದ ಗುರುದೇವ ರವೀಂದ್ರನಾಥ ಠಾಗೂರ್‌ ಅವರಿಗೆ ಶಿರಬಾಗಿ ನಮನಗಳು.ಇಂತಹ ಒಂದು ಉತ್ತಮ ಕಥೆಯನ್ನು ನಾಟಕವನ್ನಾಗಿ ಪರಿವರ್ತಿಸಿ, ನಿರ್ದೇಶನ ಮಾಡಿದ ಬಿಸೂ ಬಿ.ಸುರೇಶನಿಗೆ ಸಾವಿರ ಸಲಾಮ್.

(ಮೂಲ ಕಾದಂಬರಿ: ಗುರು ದೇವರ ವೀಂದ್ರನಾಧ ಟಾಗೂರ್‌ ರಘರೆ-ಭೈರೆ ಅನುವಾದ: ರಂಗಪಠ್ಯ, ನಿರ್ದೆಶನ: ಬಿ ಸುರೇಶ)

 

ವಿಡಿಯೋ ನೋಡಿ:‘ಸಿನಿಮಾ’ ಸಾಮಾಜಿಕ ತಲ್ಲಣಗಳ ಪ್ರತಿಬಿಂಬ – ನಟ, ನಿರ್ದೇಶಕ ಬಿ.ಸುರೇಶ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *