ಪಂದ್ಯಶ್ರೇಷ್ಠ ಬಹುಮಾನದ ಮೊತ್ತವನ್ನು ಕ್ರೀಡಾಂಗಣ ಸಿಬ್ಬಂದಿಗೆ ನೀಡಿದ ಮೊಹಮ್ಮದ್ ಸಿರಾಜ್

ಏಷ್ಯಾಕಪ್​ನ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕರಾರುವಾಕ್ ದಾಳಿ ಮೂಲಕ ಮಿಂಚಿದ್ದರು. ಈ ಅದ್ಭುತ ಪ್ರದರ್ಶನಕ್ಕೆ ಲಭಿಸಿದ ಪ್ರಶಸ್ತಿ ಮೊತ್ತವನ್ನು ಇದೀಗ ಮೈದಾನದ ಸಿಬ್ಬಂದಿಗಳಿಗೆ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ಸಿರಾಜ್ ಅವರ ಈ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡವು ಕೇವಲ 50 ರನ್​ಗಳಿಗೆ ಆಲೌಟ್ ಆಯಿತು. ಅಲ್ಲದೆ 51 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 6.1 ಓವರ್​ಗಳಲ್ಲಿ ಟಾರ್ಗೆಟ್ ತಲುಪುವ ಮೂಲಕ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು.

ಮೊಹಮ್ಮದ್ ಸಿರಾಜ್ 4ನೇ ಓವರ್​ನಲ್ಲಿ 4 ವಿಕೆಟ್ ಕಬಳಿಸುವ ಲಂಕಾ ತಂಡಕ್ಕೆ ಆಘಾತ ನೀಡಿದರು. ಅಷ್ಟೇ ಅಲ್ಲ ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಿಮವಾಗಿ 7 ಓವರ್‌ಗಳಲ್ಲಿ 21 ರನ್‌ಗೆ 6 ವಿಕೆಟ್ ಉರುಳಿಸಿದ ಅವರು ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು.

 

ಸಿರಾಜ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ:

ಈ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಸಿರಾಜ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಆದರೆ ತನಗೆ ಸಿಕ್ಕಿದ 5 ಸಾವಿರ ಡಾಲರ್ (4.15 ಲಕ್ಷರೂ) ಪ್ರಶಸ್ತಿ ಮೊತ್ತವನ್ನು ಸಿರಾಜ್ ಕೊಲಂಬೊದ ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿದರು.

ಈ ಬಗ್ಗೆ ಮಾತನಾಡಿದ ಸಿರಾಜ್, ಮೈದಾನದ ಸಿಬ್ಬಂದಿಗಳು ಇರದಿದ್ದರೆ ಈ ಟೂರ್ನಿಯನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ನಗದು ಬಹುಮಾನ ಅವರಿಗೆ ಸಲ್ಲಬೇಕು. ಇದನ್ನು ನಾನು ಅವರಿಗೆ ನೀಡುತ್ತೇನೆ ಎಂದು ತಿಳಿಸಿದರು. ಇದೀಗ ಮೊಹಮ್ಮದ್ ಸಿರಾಜ್ ಅವರ ಮಾನವೀಯ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಟೂರ್ನಿ ಅಡೆತಡೆಗಳನ್ನು ಮೆಟ್ಟಿನಿಂತು ಫಲಿತಾಂಶ ಕಂಡಿರುವುದರ ಸಂಪೂರ್ಣ ಶ್ರೇಯಸ್ಸು ಕ್ರೀಡಾಂಗಣದ ಸಿಬ್ಬಂದಿಗೆ ಸಲ್ಲಬೇಕು ಎಂದು ಹೇಳಿದರು. ಮೊಹಮದ್ ಸಿರಾಜ್ ಅವರ ಈ ಕಾರ್ಯವನ್ನು ಕ್ರಿಕೆಟ್ ಪ್ರೇಮಿಗಳು ಶ್ಲಾಘಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *