ಪ್ರೀತಿ ಹಂಚಲು “ ಪ್ರೀತಿಪದ”- ಯುಗಾದಿ ಹಬ್ಬದ ಕವಿ-ಕಾವ್ಯ ಸಮ್ಮಿಲನ

ಬೆಂಗಳೂರು: ಯುಗಾದಿಯನ್ನು ಸೌಹಾರ್ದಯುತವಾಗಿ ಬರಮಾಡಿಕೊಳ್ಳೋಣ. ಎಲ್ಲರೂ  ಸಹಿಷ್ಣುತಾ ಭಾವದಿಂದ ರಂಜಾನ್‌ ಹಬ್ಬವನ್ನೂ ಸಹ ಆಹ್ವಾನಿಸೋಣ. ಎಲ್ಲೆಡೆ ಪ್ರೀತಿ ಹಂಚೋಣ ಎನ್ನುತ್ತಲೇ ಶುರುವಾದ ಪ್ರೀತಿಯ ಕಾರ್ಯಕ್ರಮ ನಾಡಿನ ಬಂಡಾಯ ಸಾಹಿತಿ ಆರ್.ವಿ. ಭಂಡಾರಿಯವರ ಸಾಲುಗಳಾದ “ಪ್ರೀತಿಯ ಕಾಳನು ಬಿತ್ತ ಬಯಸುವೆವು ಜಾಗ ಕೊಡುವಿರೇನು, ಹೃದಯದಿ ಜಾಗ ಕೊಡುವಿರೇನು” ಎನ್ನುವ ಹಾಡಿನ ನಿರೂಪಣೆಯೊಂದಿಗೆ ಸಮ್ಮಿಲನದಲ್ಲಿ ಕಾವ್ಯಗಳ ಪುಂಜಗಳೇ ಹರಿದವು. ಯುದ್ಧದ ಕುರಿತ ಕವಿತೆಗಳು ವಾಚನಗೊಂಡವು.‌ ಪ್ರೀತಿ 

ಕ್ರಿಯಾ ಮಾಧ್ಯಮದ ಪುಸ್ತಕ ಪ್ರೀತಿಯ ಅಂಗಳದಲ್ಲಿ ಶಾಂತಿ-ಪ್ರೀತಿ-ಸೌಹಾರ್ದತೆಗಾಗಿ ಈ ಕವಿ ಕಾವ್ಯ ಸಮ್ಮಿಲವನ್ನು ಯುಗಾದಿ ಮುನ್ನಾ ದಿನ ಅಡಿಬರಹದಡಿ ಆಯೋಜಿಸಲಾಗಿತ್ತು.

ಹಿರಿಯ ಕಿರಿಯ ಕವಿಗಳ ಸಮ್ಮಿಲನದಲ್ಲಿ ಕಾವ್ಯಗಳ ವಾಚನ ಜೊತೆಜೊತೆಗೆ ಯುದ್ಧ ವಿರೋಧಿ ಕವನಗಳ ನೇಯ್ಗೆ ಅಡಿಬರಹದಡಿ “ಪ್ರೀತಿಪದ” ಪುಸ್ತಕವನ್ನು ಹಿರಿಯ ಸಾಹಿತಿಗಳು, ಚಿಂತಕರ ನೇತೃತ್ವದಲ್ಲಿ ಮಕ್ಕಳಿಂದ ಅನಾವರಣಗೊಳಿಸಲಾಯಿತು. ಬಂದಿದ್ದ ಹಿರಿಯ ಕಿರಿಯ ಕವಿಗಳನ್ನು ಚಿಂತಕಿ ಕೆ.ಎಸ್.ವಿಮಲಾ ಸ್ವಾಗತಿಸಿದರು. ಬರಹಗಾರ್ತಿ ಯಮುನಾ ಗಾಂವ್ಕರ್‌ ನಿರೂಪಣೆಯಲ್ಲಿ ಕಾವ್ಯದ ಸಂಜೆ ತೇಲಿಬಂದಿತು.

ವೇದಿಕೆಯಲ್ಲಿದ್ದ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರಜಾಪ್ರಭುತ್ವ ಸತ್ತು ಹಬ್ಬಿದೆ ಹೆಣವಾಸನೆ ಪದ್ಯವನ್ನು ವಾಚಿಸಿ, ತಮ್ಮ ಮಾತುಗಳನ್ನು ಆರಂಭಿಸಿದರು. ಸಾಹಿತಿಗಳ,ಕಲಾವಿದರ,ಆಳುವವರ ಪರಿಸ್ಥಿತಿ ಜವಾಬ್ದಾರಿ ಸರ್ವಕಾಲಕ್ಕೂ ಅನ್ವಯವಾಗುವ ಲೋಕೋಕ್ತಿ “ರೋಮ್ ಹತ್ತಿ ಉರಿಯುತ್ತಿದ್ದಾಗ ಪಿಟಿಲು ಬಾರಿಸುತ್ತಿದ್ದನಂತೆ” ಎನ್ನುವಂತಾಗಿದೆ. ಸಾಂಸ್ಕೃತಿಕ ಸಾಹಿತ್ಯ ಇಲ್ಲದ ನಾಡು ಸ್ಮಶಾನ ಕಟ್ಟಿದಂತೆ. ದ್ವೇಷ ಕೊಡುವುದು ನಾಶವನ್ನೇ ಹೊರತು ಪ್ರೀತಿಯನ್ನ ಅಲ್ಲ, ಕನ್ನಡ ಸಾಹಿತ್ಯಪರಂಪರೆ ಸಹಿಷ್ಣುತೆಯನ್ನು ಕಟ್ಟಿಕೊಟ್ಟಿದೆ. ಸಮಕಾಲೀನ ಸಂದರ್ಭಕ್ಕೆ ಅಗತ್ಯವಾದ ಈ ಕಾವ್ಯವಚನ ಇದಾಗಿದೆ.“ಪ್ರೀತಿಪದ” ಪ್ರಸಕ್ತ ದಿನದ ಸ್ಥಿತಿಗೆ ಹೊಂದುವಂತಹ ಕವನಗಳ ನೇಯ್ಗೆ ಇದಾಗಿದೆ ಎಂದರು.

ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಮಹಾಭಾರತ ರಾಮಾಯಣ ಕಾಲಕ್ಕೂ ನಡೆಯದಂತಹ ಸುದೀರ್ಘ ಯುದ್ಧಗಳು ಈಗ ನಡೆಯುತ್ತಿವೆ. ತಿಂಗಳು ವರ್ಷಾನುಗಟ್ಟಲೇ ಯುದ್ಧಗಳಾಗುತ್ತಿವೆ. ಯುದ್ಧಗಳು ವಿಶ್ವವನ್ನು ನಾಶಮಾಡುತ್ತದೆ. ಇರುವುದೊಂದೇ ಭೂಮಿ.ಇದನ್ನು ಉಳಿಸಿಕೊಳ್ಳಲೇಬೇಕು. ಯುದ್ಧಕ್ಕೆ ಕುಮ್ಮಕ್ಕು ಕೊಡುವ ಪಿತೂರಿಗಳಿರುವುದು ದುರ್ದೈವ.ಇನ್ನು ಒಂದೂವರೆ ತಿಂಗಳು ಭಯಾನಕದ ದಿನಗಳಿವೆ.ಬಹಳ ಎಚ್ಚರದಿಂದ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ.ಇವತ್ತಿನ ಕೆಲ ರಾಜಕೀಯ ಪಕ್ಷದ ಮುಖಂಡರು ದ್ವೇಷದ ಜಾತಿಯ ರಾಜಕಾರಣದ ಸಮಾಜ ದೇಶ ನಿರ್ಮಿಸಲು ಹೊರಟಿದೆ ಎಂದು ಜಾಣಗೆರೆ ಬೇಸರ ವ್ಯಕ್ತಪಡಿಸಿದರು.

ಯುದ್ಧವಿರೋಧಿ ಕವನಗಳ ಸಂಗ್ರಹಣೆ ಅದ್ಭುತ. ಇಂತಹ ಕಾರ್ಯಕ್ರಮಗಳು ರಾಜಧಾನಿಯ ಬಹುತೇಕ ಕಡೆಯಾಗಬೇಕೆಂಬ ಆಶಯ ತಮ್ಮದಾಗಿದ್ದು, ಜಾತಿ,ಮತವನ್ನು ಧಿಕ್ಕರಿಸಿದ ಬದಲಾವಣೆಯ ಹಾದಿ ಹಿಡಿದ ತಮ್ಮ ಊರಿನ ಹಳೆಯ ಘಟನೆಯನ್ನು ಜಾಣಗೆರೆ ವೆಂಟರಾಮಯ್ಯ ಸ್ಮರಿಸಿದರು.

ಲೇಖಕಿ ಡಾ.ವಸುಂಧರಾ ಭೂಪತಿ ಮಾತನಾಡಿ, ಬಿಸಿಲ ಧಗೆ ಚುನಾವಣೆಯ ಧಗೆ ಮಧ್ಗೆ ಚುನಾವಣೆ ಎದುರಾಗಿದೆ. ಈ ಚುನಾವಣೆಯಲ್ಲಿ ಬೆಲ್ಲಕ್ಕಾಗಿ ಕೋಮುವಾದಿ ವಿರೋಧಿ ಪಕ್ಷಕ್ಕೆ ಮತಹಾಕುವ ಮನಸ್ಥಿತಿ ಬೆಳೆಸಿಕೊಳ್ಳಬೇಕು‌ ಎಂದು ಕರೆ ನೀಡಿದರು. ರಂಗಕರ್ಮಿ ಬೇಲೂರು ರಘುನಂದನ್-ಪ್ರೀತಿಗೆ ಇರುವ ದೊಡ್ಡಶಕ್ತಿಯನ್ನು ಪ್ರೀತಿಪದ ಹೇಳಿದೆ ಎಂದು “ಜೀವ ಕೇಳುವ ರಕ್ತಕ್ಕೆ ಜೀವವಿಲ್ಲ” ಎಂದು ಕವನ ವಾಚನ ಮಾಡಿದರು.

ಕವಿಗಳಾದ ದಯಾ ಗಂಗನಘಟ್ಟ, ಅಜಂ ಶಾಹಿದ್‌, ಹೆಚ್.ಆರ್.ಸುಜಾತಾ ,ಚಲಂ ಹಾಡ್ಳಹಳ್ಳಿ ಹಾಜೀರಾ ಖಾನಮ್‌, ಡಾ.ಪ್ರಕಾಶ್ ಮಂಠೇದ್, ಹರೀಶ್‌ ಸಿಂಗರಿಹಳ್ಳಿ, ಪುನೀತ್‌ ವಾಣಿ, ಮಂಜುಳಾ ಗೋನಾಳ,  ಸೇರಿದಂತೆ ಮತ್ತಿತ್ತರರು ಕವನ ವಾಚನ ಮಾಡಿದರು.

 

Donate Janashakthi Media

Leave a Reply

Your email address will not be published. Required fields are marked *