- ಪ್ರತಿಭಟನಾ ರೈತರ ಭೇಟಿ ಮಾಡದ ಸರ್ಕಾರ
- ಡಿ.3ರಂದು ರೈತ ಸಂಘಟನೆಗಳೊಂದಿಗೆ ಮಾತುಕತೆ: ಕೇಂದ್ರ ಭರವಸೆ
ನವ ದೆಹಲಿ: ಕೇಂದ್ರ ಸರ್ಕಾರ ಮತ್ತು ರೈತರ ಎರಡು ದಿನಗಳ ಘರ್ಷಣೆ ನಂತರ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆಗೆ ಕೇಂದ್ರ ಸಿದ್ಧವಿದ್ದು, ಪ್ರತಿಭಟನೆಯನ್ನು ಕೈಬಿಡುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
“ರೈತರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಯಾವಾಗಲೂ ಸಿದ್ಧವಾಗಿದೆ. ಡಿಸೆಂಬರ್ 3 ರಂದು ಮತ್ತೊಂದು ಸುತ್ತಿನ ಮಾತುಕತೆಗೆ ನಾವು ರೈತರ ಸಂಘಟನೆಗಳನ್ನು ಆಹ್ವಾನಿಸಿದ್ದೇವೆ. COVID-19 ಮತ್ತು ಚಳಿಗಾಲದ ದೃಷ್ಟಿಯಿಂದ ಆಂದೋಲನವನ್ನು ಬಿಡುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ” ಎಂದು ತೋಮರ್ ಸುದ್ದಿ ಸಂಸ್ಥೆಗೆ ತಿಳಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ರೈತರು ದೆಹಲಿ ಚಲೋ ನಡೆಸುತ್ತಿದ್ದಾರೆ. ಗುರುವಾರ ಮತ್ತು ಶುಕ್ರವಾರ ರೈತರು ಹರಿಯಾಣದ ಬಿಜೆಪಿ ಸರ್ಕಾರ ಮತ್ತು ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರಗಳ ಭದ್ರತಾ ಸಿಬ್ಬಂದಿ ಜೊತೆ ಘರ್ಷಣೆ ನಡೆಸಿಕೊಂಡೇ ದೆಹಲಿ ತಲುಪಿದ್ದಾರೆ. ಭದ್ರತಾ ಸಿಬ್ಬಂದಿ ನಡೆಸಿದ ಅಶ್ರುವಾಯು ಸೆಲ್ ಮತ್ತು ಜಲಫಿರಂಗಿ ದಾಳಿ, ರೈತರ ವಾಹನಗಳ ಬರಸದಂತೆ ನಿರ್ಮಿಸಿದ ಬೃಹತ್ ಕಲ್ಲುಗಳು, ಮುಳ್ಳುತಂತಿಗಳ ಸುತ್ತಿದ್ದ ಬ್ಯಾರಿಕೇಡ್ಗಳ ಬೇಲಿಯನ್ನು ದಾಟಿ ರೈತರು ದೆಹಲಿ ತಲುಪಿದ್ದಾರೆ.
ಎರಡು ದಿನಗಳ ಘರ್ಷಣೆ ನಂತರ ಕೇಂದ್ರ ಸರ್ಕಾರ ದೆಹಲಿಗೆ ಪ್ರವೇಶ ಮಾಡಲು ಅನುಮತಿ ನೀಡಿತ್ತು, ಜೊತೆಗೆ ದೆಹಲಿಯ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿತ್ತು.