ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಯಿಂದಾಗಿ ಸಂಭವಿಸುತ್ತಿರುವ ಅಪಘಾತದಿಂದಾಗಿ ಒಂದಲ್ಲ ಒಂದು ಪ್ರಕರಣಗಳು ದಾಖಲಾಗುತ್ತಿವೆ. ಆದರೂ, ಬಿಬಿಎಂಪಿ ಆಡಳಿತ ಯಾವುದೇ ಕ್ರಮವಹಿಸುತ್ತಿಲ್ಲ. ಕಳೆದ 10 ದಿನಗಳ ಹಿಂದ ಸುಜಾತ ಚಿತ್ರಮಂದಿರ ಹತ್ತಿರ ಸಂಭವಿಸಿದ ದುರಂತದಿಂದ ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನೋಟಿಸು ನೀಡಲಾಗಿದೆ.
ಮಲ್ಲೇಶ್ವರಂ ಸಂಚಾರಿ ಪೊಲೀಸರು ನೋಟಿಸು ಜಾರಿ ಮಾಡಿದ್ದಾರೆ. ಸುಜಾತ ಚಿತ್ರಮಂದಿರ ಬಳಿ ಗುಂಡಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ಸು ಹರಿದು ಮಹಿಳೆಯೊಬ್ಬಳ ಕಾಲಿಗೆ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಸಾವಿಗೀಡಾದ ಮಹಿಳೆ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಬಸ್ಸಿನ ಚಾಲಕನ ಮೇಲೂ ಪ್ರಕರಣ ದಾಖಲಾಗಿದೆ.
ಈಗ ಬಿಬಿಎಂಪಿಗೆ ನೋಟಿಸ್ಸು ನೀಡಿ ರಸ್ತೆ ಡಾಂಬರೀಕರಣ ಟೆಂಡರ್ ಯಾರಿಗೆ ನೀಡಲಾಗದೆ?, ರಸ್ತೆ ಡಾಂಬರೀಕರಣ ನಿರ್ವಹಣೆ ಹೊಣೆ ಹೊತ್ತಿದ್ದ ಎಂಜಿನಿಯರ್ ಯಾರು?, ಅಪಘಾತ ಆದ ಜಾಗದಲ್ಲಿ ಯಾವಾಗ ಡಾಂಬರೀಕರಣ ಆಗಿದ್ದು? ಇದೆಲ್ಲದರ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಯೋಜನಾ ವಿಭಾಗದ ಎಂಜಿನಿಯರ್ ಅವರಿಗೆ ನೋಟಿಸು ನೀಡಲಾಗಿದೆ. ರಸ್ತೆ ಗುಂಡಿಯಿಂದಲೇ ಸಾವನ್ನಪ್ಪಿರೋದು ಅಂತಾ ಮೃತ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗಿ ಸೂಕ್ತ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಅಪಘಾತವಾಗಿ 10 ದಿನಗಳಾದರೂ ಮೃತರ ಕುಟುಂಬಕ್ಕೆ ಬಿಬಿಎಂಪಿ ಪರಿಹಾರ ನೀಡಿಲ್ಲ. ರಸ್ತೆಗುಂಡಿಯಿಂದ ಅಪಘಾತ ಆಗಿದೆಯಾ ಅಥವಾ ಕೆಎಸ್‌ಆರ್‌ಟಿಸಿಯಿಂದ ಅಪಘಾತ ಆಗಿದೆಯಾ ಅಂತಾ ಬಿಬಿಎಂಪಿ ಮೀನಾಮೇಷ ಎಣಿಸುತ್ತಿದೆ.
ಬೆಂಗಳೂರು ನಗರದಲ್ಲಿನ ರಸ್ತೆಗುಂಡಿಗಳಿಂದ ಸಂಭವಿಸುತ್ತಿರುವ ಅಪಘಾತದ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ ಇಂತಹ ಪ್ರಕರಣ ಮರುಕಳಿಸದಂತೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.