ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಆಂಡ್ರಾಯ್ಡ್‌ ಮೊಬೈಲ್ ಪತ್ತೆ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಫೋನ್ ಪತ್ತೆಯಾಗಿದ್ದು, ಜೈಲು ಭದ್ರತಾ ವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳು ಮೂಡಿವೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹೈ ಸೆಕ್ಯುರಿಟಿ ವಿಭಾಗದಲ್ಲಿ ಮಂಗಳವಾರ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಸುಮಾರು ಐದು ಗಂಟೆಗಳ ಕಾಲ ದಾಳಿ ಹಾಗೂ ತಪಾಸಣೆ ನಡೆಸಿದರು. ಈ ವೇಳೆ ಪ್ರಜ್ವಲ್‌ ರೇವಣ್ಣ ಅವರ ಬ್ಯಾರಕ್‌ನಿಂದ ಒಂದು ಆಂಡ್ರಾಯ್ಡ್‌ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

ಮೊಬೈಲ್‌ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗವು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕರಣದ ಕುರಿತು ವಿವರವಾದ ತನಿಖೆಯನ್ನೂ ನಡೆಸಲಾಗುತ್ತಿದೆ.

ಜೈಲು ಅಧಿಕಾರಿಯ ಅಮಾನತು

ಮೊಬೈಲ್‌ ಫೋನ್‌ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದಡಿ ಸಹಾಯಕ ಅಧೀಕ್ಷಕ ಇರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ದಕ್ಷಿಣ ವಲಯದ ಡಿಐಜಿ ನೀಡಿದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ.

ಇದನ್ನೂ ಓದಿ : ಗಂಗಾ ಪ್ರವಾಹ ಪ್ರದೇಶದ ವ್ಯಾಖ್ಯೆ ವಿಸ್ತರಣೆ: ಐದು ವರ್ಷಕ್ಕೊಮ್ಮೆ ಮುಳುಗುವ ಪ್ರದೇಶಗಳಿಗೂ ರಕ್ಷಣೆ

ಇದಕ್ಕೂ ಮುನ್ನ ಆಗಸ್ಟ್‌ 6ರಂದು ಜೈಲು ಸಿಬ್ಬಂದಿ ಪ್ರಜ್ವಲ್‌ ರೇವಣ್ಣ ಅವರ ಬ್ಯಾರಕ್‌ ಪರಿಶೀಲನೆ ನಡೆಸಿದ್ದರು. ಆದರೆ ಆ ಸಂದರ್ಭದಲ್ಲಿ ಯಾವುದೇ ನಿಷೇಧಿತ ವಸ್ತು ಪತ್ತೆಯಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ 11ರಂದು ನಡೆದ ನಾಲ್ಕರಿಂದ ಐದು ಗಂಟೆಗಳ ತಪಾಸಣೆಯಲ್ಲಿ ಹೈ ಸೆಕ್ಯುರಿಟಿ ಜೈಲಿನ ಇತರ ಹೈಪ್ರೊಫೈಲ್‌ ಕೈದಿಗಳು ಸೇರಿದಂತೆ ಹಲವು ಕೈದಿಗಳ ಕೊಠಡಿಗಳನ್ನು ಪರಿಶೀಲಿಸಲಾಗಿದ್ದು, ಪ್ರಜ್ವಲ್‌ ರೇವಣ್ಣ ಅವರ ಬಳಿಯ ಮೊಬೈಲ್‌ ಹೊರತುಪಡಿಸಿ ಬೇರೆ ಯಾವುದೇ ನಿಷೇಧಿತ ವಸ್ತು ಪತ್ತೆಯಾಗಿಲ್ಲ ಎಂದು ಡಿಜಿಪಿ ತಿಳಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಅವರು 2019ರಿಂದ 2024ರವರೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 2024ರ ಮೇನಲ್ಲಿ ಬಂಧಿತರಾಗಿದ್ದ ಅವರು, 2025ರ ಆಗಸ್ಟ್‌ನಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದಿಂದ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ಇದನ್ನೂ ನೋಡಿ : ರೈತ–ಕಾರ್ಮಿಕರ ಜೈಲ್‌ ಭರೋ: ಕೇಂದ್ರದ ನೀತಿಗಳ ವಿರುದ್ಧ ದೇಶಾದ್ಯಂತ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *