ಪ್ರಧಾನಿಗಳಿಗೆ ಆಮ್ಲಜನಕ ಹಾಗೂ ಔಷಧಿ ಪೂರೈಸಲು ಹಲವು ರಾಜ್ಯಗಳಿಂದ ಬೇಡಿಕೆ

ನವದೆಹಲಿ: ಕೊರೊನಾ ಸೋಂಕಿತರನ್ನು ಗುಣಮುಖರನ್ನಾಗಿಸಲು ತಕ್ಷಣದಲ್ಲೇ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ ಡಿಸಿವಿರ್ ನಂತಹ ಔಷಧಿಗಳ ಬಗ್ಗೆ ಪರಿಣಾಮಕಾರಿಯಾಗಿ ಕ್ರಮವಹಿಸಬೇಕೆಂದು ಇಂದು ಪ್ರಧಾನಿ ನರೇಂದ್ರ ಮೋದಿರವರೊಂದಿಗೆ ನಡೆದ ಪ್ರಧಾನಿ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ತಿಳಿದು ಬಂದಿದೆ.

ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.

ಇದನ್ನು ಓದಿ: ಪ್ರತಿದಿನ 1471 ಟನ್‌ ಆಕ್ಸಿಜನ್‌ ಪೊರೈಸುವಂತೆ ಕೇಂದ್ರಕ್ಕೆ ಸಿಎಂ ಮನವಿ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಸಭೆಯಲ್ಲಿ ಕರ್ನಾಟಕ, ಕೇರಳ, ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಛತ್ತೀಸ್‌ಘಡ, ಪಂಜಾಬ್‌, ಗುಜರಾತ್‌, ಮಧ್ಯ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕೋವಿಡ್-19 ಪರಿಸ್ಥಿತಿ ಕುರಿತು  ನಡೆದ ಸಭೆಯಲ್ಲಿ ಈಗ ಎದುರಾಗಿರುವ ಗಂಭೀರ ಸಮಸ್ಯೆಯನ್ನು ಎದುರಿಸಲು ಆರೋಗ್ಯ ಸೇವಾ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.

ಮುನ್ನೆಚ್ಚರಿಕೆಯ ಕ್ರಮಗಳನು ಜಾರಿಗೊಳಿಸುವುದು, ಆಸ್ಪತ್ರೆಗಳಲ್ಲಿ ತೀವ್ರವಾದ ಆರೋಗ್ಯ ಸಮಸ್ಯೆ ಇರುವವರನ್ನು ಮಾತ್ರ ದಾಖಲಿಸುವುದು, ಆಮ್ಲಜನಕದ ಸಮರ್ಪಕ ಹಾಗೂ ಮಿತಬಳಕೆಗೆ ಆದ್ಯತೆ ನೀಡುವುದು ಮತ್ತು ಜನರಲ್ಲಿ ವಿಶ್ವಾಸ ಮೂಡಿಸುವುದು ಅತಿ ಅಗತ್ಯ ಎಂದು ಒತ್ತಿ ಹೇಳಿದ್ದಾರೆ.

ಇದನ್ನು ಓದಿ: ಆಕ್ಸಿಜೆನ್ ಗಾಗಿ ಹಾಹಾಕಾರ. ಬೆಡ್‌ ಗಾಗಿ ಪರದಾಟ, ಇದು ಕರ್ನಾಟಕದ ಕರುಣಾಜನಕ ಕತೆ

ಆಮ್ಲಜನಕ ದುರ್ಬಳಕೆಯಾಗದಂತೆ ಆಕ್ಸಿಜನ್ ಆಡಿಟ್ ಮಾಡಿಸುವಂತೆ ಸಲಹೆ ನೀಡಿದ ಪ್ರಧಾನಿ, ಆಮ್ಲಜನಕದ ಟ್ಯಾಂಕರು ಗಳ ಸುಗಮ ಸಂಚಾರಕ್ಕೆ ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಬೇಕು. ತುರ್ತು ನಿರ್ವಹಣೆಗಾಗಿ ಮಾನವ ಸಂಪನ್ಮೂಲ ಹೆಚ್ಚಿನ ಅವಶ್ಯಕತೆ ಇದ್ದು, ಇದಕ್ಕಾಗಿ ನಿವೃತ್ತರಾದ ಸಿಬ್ಬಂದಿಯ ಸೇವೆ ಬಳಸಿಕೊಳ್ಳಲು ಸಲಹೆ ನೀಡಿದ್ದಾರೆ.

ಜನರಲ್ಲಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳದಂತೆ ತಡೆಯಲು ಮುಂದಿನ ಎರಡು ತಿಂಗಳು ಜನರಿಗೆ ಉಚಿತ ಆಹಾರ ಧಾನ್ಯ ನೀಡುವುದಾಗಿ ಪ್ರಕಟಿಸಿದ್ದು ಮೇ ಮತ್ತು ಜೂನ್‌ನಲ್ಲಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಎನ್‌ಎಫ್‌ಎಸ್‌ಎ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ) ಫಲಾನುಭವಿಗಳಿಗೆ ಹೆಚ್ಚುವರಿ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿ ಕೋವಿಡ್ ಎರಡನೇ ಅಲೆಯನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಜನರಿಗೆ ಪೌಷ್ಠಿಕಾಂಶ ಆಹಾರದ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹೇಳಿದ್ದಾರೆಂದು ತಿಳಿದುಬಂದಿದೆ.

ಇದನ್ನು ಓದಿ: ಬಿಜೆಪಿಯವರಿಂದ ರಾಜ್ಯಕ್ಕೆ ಬರುವ ಆಕ್ಸಿಜನ್‌ ಟ್ಯಾಂಕರ್‌ ತಡೆ: ಕೇಜ್ರಿವಾಲ್‌

ಉಳಿದಂತೆ ಒಂದು ರಾಷ್ಟ್ರವಾಗಿ ಕೆಲಸ ಮಾಡಿದರೆ, ಸಂಪನ್ಮೂಲಗಳ ಕೊರತೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಮ್ಲಜನಕ ಟ್ಯಾಂಕರ್‌ ಸಾಗಣೆಗಾಗಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ರೈಲ್ವೆ ಮತ್ತು ವಾಯುಪಡೆಯನ್ನು ನಿಯೋಜಿಸಲಾಗುತ್ತಿದೆ. ಅಗತ್ಯ ಔಷಧಿಗಳು ಚುಚ್ಚುಮದ್ದುಗಳು ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮವಹಿಸಲು ಪ್ರಧಾನಿ ತಿಳಿಸಿದ್ದಾರೆ.

ಸಂವಾದದ ಸಮಯದಲ್ಲಿ, ರಾಜ್ಯಗಳ ಮುಖ್ಯಮಂತ್ರಿಗಳು ಪ್ರಸ್ತುತ ಎರಡನೇ ಅಲೆಯ ತೀವ್ರತೆಯ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿಗೆ ವಿವರಿಸಿದರು. ಪ್ರಧಾನಿಗಳ ನಿರ್ದೇಶನಗಳು ಮತ್ತು ನೀತಿ ಆಯೋಗದ ಯೋಜನೆಗಳ ಪರಿಣಾಮಕಾರಿ ಜಾರಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಪ್ರಧಾನಿಗಳು ಸಲಹೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *