ಪ್ರತಿದಿನ 1471 ಟನ್‌ ಆಕ್ಸಿಜನ್‌ ಪೊರೈಸುವಂತೆ ಕೇಂದ್ರಕ್ಕೆ ಸಿಎಂ ಮನವಿ

Please follow and like us:

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಪ್ರತಿ ದಿನ 1471 ಟನ್‌ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಡಿಕೆ ಸಲ್ಲಿಸಿದರು.

ಕೋವಿಡ್‌ ಎರಡನೇ ಅಲೆ ಉಲ್ಭಣಗೊಂಡಿರುವ ಬೆನ್ನಲ್ಲೇ ಪ್ರಧಾನಿಯವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೊ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದ ಪರವಾಗಿ ಬೇಡಿಕೆ ಮಂಡಿಸಿದ ಯಡಿಯೂರಪ್ಪ, ರಾಜ್ಯದಲ್ಲಿ ಆಮ್ಲಜನಕ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಗುರುವಾರ ಒಂದೇ ದಿನ ರಾಜ್ಯದಲ್ಲಿ 500 ಟನ್‌ ಆಮ್ಲಜನಕ ಬಳಕೆಯಾಗಿದೆ. ಕೇಂದ್ರವು ರಾಜ್ಯಕ್ಕೆ ಕೇವಲ 300 ಟನ್‌ ಆಮ್ಲ ಜನಕ ಹಂಚಿಕೆ ಮಾಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಹಲವು ಆರೋಗ್ಯ ಸೇವಾ ಕೇಂದ್ರಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ ಎಂದು ವಿವರಿಸಿದರು.

ಇದನ್ನೂ ಓದಿ : ಆಕ್ಸಿಜೆನ್ ಗಾಗಿ ಹಾಹಾಕಾರ. ಬೆಡ್‌ ಗಾಗಿ ಪರದಾಟ, ಇದು ಕರ್ನಾಟಕದ ಕರುಣಾಜನಕ ಕತೆ

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯಕ್ಕೆ ಏ.25 ರಿಂದ 1,142 ಟನ್‌ ಆಮ್ಲಜನಕದ ಅಗತ್ಯವಿದೆ. ಏ.30 ರ ಬಳಿಕ 1,471 ಟನ್‌ ಆಮ್ಲಜನಕ ಬೇಕಾಗುತ್ತದೆ. ಆದ್ದರಿಂದ ಕೂಡಲೇ 1,471 ಟನ್‌ ಆಮ್ಲಜನಕ ಪೂರೈಸಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪಾಸಿಟಿವ್‌ ಪ್ರಕರಣಗಳ ದರ ಶೇ 16 ರಷ್ಟಿದೆ. ಬೆಂಗಳೂರು ನಗರ ಅತಿ ಹೆಚ್ಚು ಪೀಡಿತವಾಗಿದೆ. ತುಮಕೂರು, ಬಳ್ಳಾರಿ, ಮೈಸೂರು, ಹಾಸನ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ರೆಮ್‌ಡಿಸಿವಿರ್ ಕೊರತೆಯಾಗದಂತೆ ಎಚ್ಚರ ವಹಿಸಲಾಗುತ್ತಿದ್ದು, ಮುಂದಿನ 10 ದಿನಗಳಿಗೆ 2 ಲಕ್ಷ ಡೋಸ್‌ಗಳಷ್ಟು ರೆಮ್‌ಡಿಸಿವಿರ್ ಒದಗಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಿದರು. ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಮುಖ್ಯಮಂತ್ರಿಗಳು, ನಗರದ 8 ವಲಯಗಳ ಕೋವಿಡ್ ನಿರ್ವಹಣೆ ಉಸ್ತುವಾರಿಗೆ ಸಚಿವರನ್ನು ನೇಮಕ ಮಾಡಲಾಗಿದೆ. ಹಿರಿಯ ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

Please follow and like us:
Donate Janashakthi Media

Leave a Reply

Your email address will not be published. Required fields are marked *