ಪ್ರಬುದ್ಧಳ ಅಮಾನುಷ ಹತ್ಯೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು :  ವಿದ್ಯಾರ್ಥಿನಿ ಪ್ರಬುದ್ಧಳ ಅಮಾನುಷ ಹತ್ಯೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು. ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಭೀಕರವಾದ ಹಿಂಸಾಚಾರವನ್ನು ನಿಯಂತ್ರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳು ಫ್ರೀಡಂ ಪಾರ್ಕ್‌ ಬಳಿ ಪ್ರತಿಭಟನೆ ನಡೆಸಿದರು.

ರಾಜ್ಯ ವ್ಯಾಪಿ ನಡೆಯುತ್ತಿರುವ ಮಹಿಳೆಯರ ಮೇಲಿನ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ರಾಜ್ಯ ಸರ್ಕಾರ ಶೀಘ್ರವಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು ಎಂದು ಹೋರಾಟಗಾರರು, ಪ್ರಗತಿಪರ ಚಿಂತಕರು ಆಗ್ರಹಿಸಿದರು.

ಮಹಿಳೆಯರ, ವಿದ್ಯಾರ್ಥಿನಿಯರ, ಮಕ್ಕಳ ಕಗ್ಗೊಲೆಗಳನ್ನು ತಡೆಗಟ್ಟಲು, ಹೆಣ್ಣಿನ ಕುರಿತಾದ ತಾರತಮ್ಯ, ಲೈಂಗಿಕ ಕಿರುಕುಳ, ಹಿಂಸೆ, ಹಲ್ಲೆ, ಅತ್ಯಾಚಾರಗಳ ವಿರುದ್ಧ ಇಂದು ಮಹಿಳೆಯರ ಕುರಿತು ಕಾಳಜಿಯಿರುವ, ಸಮಾಜದ ಸ್ವಾಸ್ಥ್ಯದ ಬಗ್ಗೆ ಕಳಕಳಿಯಿರುವ ಪ್ರತಿಯೊಬ್ಬರೂ ಮಾತಾಡಲೇಬೇಕು ಎಂದು ಅಭಿಪ್ರಾಯ ಪಟ್ಟರು.

ಎಳೆಯ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ಕತ್ತು ಕತ್ತರಿಸಿ, ತಲೆ ಕತ್ತರಿಸಿ, ಬಹಿರಂಗವಾಗಿ ಇರಿದು ಕೊಲ್ಲುವಂತಹ ಭೀಕರ ಕೃತ್ಯಗಳು ಮಿತಿಮೀರಿ ಬೆಳೆಯುತ್ತಿವೆ.ಅಲ್ಲದೆ, ಭಾರತದಲ್ಲಿ ಪ್ರತಿ ಘಂಟೆಗೆ 26 ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಇತ್ತೀಚಿನ ಎನ್‌ಸಿಆರ್‌ಬಿ ದತ್ತಾಂಶಗಳ ಪ್ರಕಾರ ಮಹಿಳೆಯರ ವಿರುದ್ಧದ ಅಪರಾಧಗಳು ತೀವ್ರವಾಗಿ ಏರಿಕೆ ಕಂಡಿವೆ. 2021ರಲ್ಲಿ 14,468 ಪ್ರಕರಣಗಳು ನಡೆದಿರುವುದು ಕರ್ನಾಟಕದ ಮಟ್ಟಿಗೆ ಸಾರ್ವಕಾಲಿಕ ದಾಖಲೆಯಾಗಿದೆ. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 430 ಕೊಲೆಗಳು ಮತ್ತು 198 ಅತ್ಯಾಚಾರ ಪ್ರಕರಣಗಳು ನಡೆದಿರುವುದಾಗಿ ಮಾಧ್ಯಮ ವರದಿಗಳು ಹೇಳುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿಯ ಪ್ರಕರಣಗಳು 2020 ರಲ್ಲಿದ್ದ 9ರಿಂದ 2021ರಲ್ಲಿ 37ಕ್ಕೆ ಮತ್ತು 2022 ರಲ್ಲಿ 41ಕ್ಕೆ ಹೆಚ್ಚಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ ಪ್ರಬುದ್ಧ ಕೊಲೆ ಪ್ರಕರಣ : ಕೊಲೆಗೆ ಅಪ್ರಾಪ್ತ ಕಾರಣ!- 2 ಸಾವಿರ ರೂಪಾಯಿಗೆ ನಡೆಯಿತು ಕೊಲೆ

ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಕನಿಂದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ. ತೋಟದ ಮನೆಯೊಂದರಲ್ಲಿ 900ಕ್ಕೂ ಹೆಚ್ಚು ಹೆಣ್ಣುಭ್ರೂಣಹತ್ಯೆ ಪ್ರಕರಣಗಳು, ಪಾಂಡವಪುರದಲ್ಲಿ ಕಾನೂನು ಬಾಹಿರವಾಗಿ ಲಿಂಗಪತ್ತೆಯಲ್ಲಿ ತೊಡಗಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಬಂಧನ ಹೀಗೆ ಕ್ರೂರ ಪ್ರಕರಣಗಳ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಒತ್ತಾಯಿಸಿದರು.

ಕಳೆದ ಕೆಲವು ತಿಂಗಳುಗಳಲ್ಲಿ ನಡೆದಿರುವ ಮಹಿಳೆಯರು, ವಿದ್ಯಾರ್ಥಿನಿಯರ ಕಗ್ಗೊಲೆಗಳ, ಹೆಣ್ಣುಮಕ್ಕಳು ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳ, ಆಸಿಡ್ ದಾಳಿಗಳ ಎಲ್ಲ ಪ್ರಕರಣಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ನಿರ್ದಿಷ್ಟ ಕ್ರಮಗಳನ್ನು ಶಿಫಾರಸ್ಸು ಮಾಡಲು, ತಜ್ಞರು, ಕಾನೂನು ಪರಿಣತರು, ಸರ್ಕಾರದ ಪ್ರತಿನಿಧಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು ಎಂದು ಮನವಿ ಮಾಡಲಾಯಿತು.

ಇಂತಹ ಭೀಕರವಾದ ಕಗ್ಗೊಲೆಗಳು ಎಲ್ಲೋ ಅಲ್ಲಲ್ಲಿ ನಡೆಯುವ ಬಿಡಿ ಘಟನೆಗಳೆಂಬ ಮನೋಭಾವವನ್ನು ಬಿಟ್ಟು ಸರ್ಕಾರ ಈ ಕೂಡಲೇ ಇವುಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಕಾರ್ಯಪ್ರವೃತ್ತಗೊಳಿಸಬೇಕು. ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ಸಾರ್ವಜನಿಕರು ಇಂತಹ ತೊಂದರೆಗಳಲ್ಲಿ ಸಿಲುಕಿದ್ದರೆ, ಅವುಗಳ ಬಗ್ಗೆ ಧೈರ್ಯವಾಗಿ ಬಂದು ಪೊಲೀಸ್ ಇಲಾಖೆಯನ್ನು ಮತ್ತು ಸಂಬಂಧಪಟ್ಟ ಇತರ ಸರ್ಕಾರದ ಘಟಕಗಳನ್ನು ಸಂಪರ್ಕಿಸಲು ಉತ್ತೇಜಿಸುತ್ತಾ ವಿಸ್ತೃತವಾಗಿ ಜನರಿಗೆ ಸಂದೇಶ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ, ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಕೆ.ಎಸ್‌.ಲಕ್ಷ್ಮಿ, ಕರ್ನಾಟಕ ಜನಶಕ್ತಿಯ ಮಲ್ಲಿಗೆ, ಗೌರಿ, ರೈತ ನಾಯಕ ಸಿದ್ದನಗೌಡ ಪಾಟೀಲ್‌, ಹಿರಿಯ ವಕೀಲರಾದ ಎಸ್‌,. ಬಾಲನ್‌, ಬಿ.ಟಿ. ವೆಂಕಟೇಶ್, ವಿನಯ್‌ ಶ್ರೀನಿವಾಸ್‌, ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್‌, ಮಮತಾ ಯಜಮಾನ್‌, ಪ್ರಬುದ್ಧ ತಾಯಿ ಸೌಮ್ಯ ಕೆ.ಆರ್‌ ಸೇರಿದಂತೆ ಜನಪರ ಸಂಘಟನೆಗಳ ನಾಯಕರು ಇದ್ದರು.

ಇದನ್ನು ನೋಡಿಪ್ರಭುದ್ದಳ ಸಾವಿಗೆ ನ್ಯಾಯ ಸಿಗಬೇಕು – ಸಂಘಟನೆಗಳ ಆಕ್ರೋಶ

 

 

Donate Janashakthi Media

Leave a Reply

Your email address will not be published. Required fields are marked *