ಮುಂಬೈ: ರಾಂಚಿ/ಮುಂಬೈ: ಜಾರ್ಖಂಡ್‌ನಲ್ಲಿ 38 ವಿಧಾನಸಭೆ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಬುಧವಾರ ನಡೆಯಿತು. ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಎರಡೂ ರಾಜ್ಯಗಳಲ್ಲಿ ಮತದಾನವು ಬಹುತೇಕ ಶಾಂತಿಯುತವಾಗಿ ನಡೆದಿದೆ. ಆದರೆ, ಮಹಾರಾಷ್ಟ್ರದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿ ಮಧ್ಯೆ ವಾಕ್ಸಮರ ನಡೆದಿದೆ. ಶಿವಸೇನಾ ಅಭ್ಯರ್ಥಿ ಮೇಲೆ ಗುಂಡಿನ ದಾಳಿ ಆಗಿರುವ ಘಟನೆಯೂ ನಡೆದಿದೆ.
ಬುಧವಾರ ಬೆಳಿಗ್ಗೆ ನಕ್ಸಲರು ಜಾರ್ಖಂಡ್‌ನ ಲತೆಹ ಜಿಲ್ಲೆಯಲ್ಲಿ ದಾಳಿ ನಡೆಸಿದ್ದಾರೆ. ಮತದಾರರಲ್ಲಿ ಭಯ ಹುಟ್ಟಿಸುವ ಸಲುವಾಗಿ ನಿಷೇಧಿತ ಸಂಘಟನೆಯಾದ ‘ಜಾರ್ಖಂಡ್ ಪ್ರಸ್ತುತಿ ಸಮಿತಿ’ (ಜೆಪಿಸಿ) ನಕ್ಸಲರು ಐದು ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆ ಹೊರತುಪಡಿಸಿ, ನಕ್ಸಲ್ ಬಾಧಿತ ಇತರ ಜಿಲ್ಲೆಗಳಲ್ಲಿ ಮತದಾನವು
ಶಾಂತಿಯುತವಾಗಿತ್ತು.
‘ಮಹಾಯುತಿ’ ಹಾಗೂ ‘ಮಹಾ ವಿಕಾಸ ಆಘಾಡಿ’ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿರುವ ಮಹಾರಾಷ್ಟ್ರದಲ್ಲಿ ಬುಧವಾರ ಹಲವು ಘಟನೆಗಳು ಸಂಭವಿಸಿವೆ. ಬಿಜೆಪಿ, ಶಿವಸೇನಾ, ಶಿವಸೇನಾ (ಉದ್ಧವ್ ಬಣ) ಹಾಗೂ ಎನ್‌ಸಿಪಿ (ಶರದ್ ಬಣ) ಅಭ್ಯರ್ಥಿಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿವೆ.
ಇದನ್ನೂ ಓದಿ: ಕೊರೊನ ಕಾಲದ ಖರೀದಿ ಹಗರಣ: ‘ಬೆಂದ ಮನೆಯಲ್ಲಿ ಗಳ ಇರಿ’ದಿರುವ ಬಿಜೆಪಿ ನಾಯಕ ಗಣ
ಮಹಾರಾಷ್ಟ್ರ: ಶೇ 65.02ರಷ್ಟು ಮತ
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬುಧವಾರ ರಾತ್ರಿ 11.45ರವರೆಗಿನ ಮಾಹಿತಿ ಪ್ರಕಾರ ಶೇ 65.02ರಷ್ಟು ಮತದಾನವಾಗಿದೆ. ಕೊಲ್ಲಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು, ಶೇ 76 ಮತ್ತು ಗಡಚಿರೋಲಿ ಜಿಲ್ಲೆಯಲ್ಲಿ ಶೇ 73.68ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ನಗರದಲ್ಲಿ ಅತಿ ಕಡಿಮೆ ಅಂದರೆ, ಶೇ 52.07, ಮುಂಬೈ ಉಪನಗರ ಶೇ 55.77 ಹಾಗೂ ಠಾಣೆ ಜಿಲ್ಲೆಯಲ್ಲಿ ಶೇ 56.05ರಷ್ಟು ಮತದಾನವಾಗಿದೆ. ಸಾಂಗ್ಲಿ ಶೇ 71.89, ಸತಾರ ಶೇ 71.71, ಜಾಲ್ನಾ ಶೇ 72.30, ಹಿಂಗೋಲಿ ಶೇ 71.10, ಚಂದ್ರಾಪುರ ಶೇ 71.27, ಅಹಮದ್‌ನಗರ ಶೇ 71.73, ಪರ್ಬಾನಿ ಶೇ 70.38) ಹಾಗೂ ಬುಲ್ಲಾನದಲ್ಲಿ ಶೇ 70.32ರಷ್ಟು ಮತದಾನವಾಗಿದೆ.
ಜಾರ್ಖಂಡ್: ಶೇ 68.45ರಷ್ಟು ಮತದಾನ
ರಾಂಚಿ (ಪಿಟಿಐ): ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆದ ಜಾರ್ಖಂಡ್‌ನ 38 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಸಂಜೆ 5 ಗಂಟೆಯವರೆಗೆ ಸುಮಾರು ಶೇ 68.45ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ಜಿಲ್ಲೆಗಳ 14,218 ಬೂತ್‌ಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಿತು. ಆದರೆ, 31 ಬೂತ್‌ಗಳಲ್ಲಿ ಸಂಜೆ 4 ಗಂಟೆಗೆ ಮತದಾನ ಮುಗಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 528 ಅಭ್ಯರ್ಥಿಗಳ ಅದೃಷ್ಟ ಮತಪೆಟ್ಟಿಗೆ ಸೇರಿದೆ. ಮೊದಲ ಹಂತದಲ್ಲಿ 43 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಮತ ಎಣಿಕೆ ಇದೇ 23ರಂದು ನಡೆಯಲಿದೆ.
ಜಮ್ಮಾರಾ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ 77.29 ರಷ್ಟು ಮತದಾನವಾಗಿದೆ. ಪಾಕು ಶೇ 76.60, ದೇವಫರ್ ಶೇ 72.62 ಮತ್ತು ರಾಂಚಿ ಶೇ 72.04, ರಾಮಗಢ ಶೇ 72.41, ದುಮ್ಮಾ ಶೇ 71.99, ಗೊಡ್ಡಾ ಶೇ 68.51, ಸಾಹೇಬಗಂಜ್ ಶೇ 68.95, ಗಿರಿದಿಹ್ ಶೇ 66.41, ಹಜಾರಿಬಾಗ್ ಶೇ 64.97 ಮತ್ತು ಧನ್‌ಬಾದ್ ಶೇ 63.40 ಹಾಗೂ ಬೊಕಾರೊ ಜಿಲ್ಲೆಯಲ್ಲಿಶೇ 63.22ರಷ್ಟು ಮತದಾನವಾಗಿದೆ.
ಇದನ್ನೂ ನೋಡಿ: ಆರ್.ಬಿ. ಮೋರೆ | ಈ ಪುಸ್ತಕ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದರಿಂದ ಸರಳವಾಗಿ ಅನುವಾದಿಸಿದೆ – ಅಬ್ದುಲ್ ರೆಹಮಾನ ಪಾಷಾ