ʻʻಬೊಟ್ಟು ಯಾಕಿಟ್ಟಿಲ್ಲʼʼ : ಮುನಿಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬೆಂಗಳೂರು : ಕೋಲಾರದ ಸಂಸದ ಮುನಿಸ್ವಾಮಿ ಅವರು ಮಹಿಳಾ ದಿನಾಚರಣೆಯಂದು ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರಿಗೆ ನೀನು ಹಣೆಗೆ ಕುಂಕುಮ ಇಟ್ಟಿಲ್ಲ ಏಕೆ ? ನಿನ್ನ ಗಂಡ ಬದುಕಿದ್ದಾನೆ ತಾನೇ ? ನಿನಗೆ ಕಾಮಾನ್‌ ಸೆನ್ಸ್‌ ಇಲ್ಲವಾ ? ಎಂದು  ಮಹಿಳೆಯನ್ನು ನಿಂದಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವಾರು ಮಹಿಳಾ ಪರ ಸಂಘಟನೆಗಳು ಮುನಿಸ್ವಾಮಿ ಅವರ ವಿರುದ್ಧ ಸಿಡಿದೇಳುವ  ಮೂಲಕ ಮುನಿಸ್ವಾಮಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದ್ದು, ಮುನಿಸ್ವಾಮಿ ರಾಜೀನಾಮೆಗೆ ಆಗ್ರಹಗಳು ಕೇಳಿಬರುತ್ತಿವೆ.

ಮುನಿಸ್ವಾಮಿ ಅವರ ಈ ನಡೆ ಬಗ್ಗೆ ಖ್ಯಾತ ಸಾಹಿತಿಗಳು, ಪ್ರಗತಿಪರ ಹೋರಾಟಗಾರರು, ಮಹಿಳೆಯರು ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

ಡಾ. ಪುರುಷೋತ್ತಮ ಬಿಳಿಮಲೆರವರು ಖ್ಯಾತ ಸಾಹಿತಿ

ಮುನಿಸ್ವಾಮಿ ನಡೆ ಸಂವಿಧಾನ ವಿರೋಧಿಯಾದುದು :
ಪುರುಷ ಪ್ರಧಾನ ಚಿಂತನಾಕ್ರಮವನ್ನು ಹುಟ್ಟಿಸುವ ಕ್ರೌರ್ಯದ ಪರಮಾವಧಿ ಇದಾಗಿದೆ. ಒಬ್ಬ ಹೆಣ್ಣು  ಮಗಳು ಏಕಾಂಗಿಯಾಗಿ ನಿಂತಿರುವಾಗ ನೀನು ಕುಂಕುಮ ಹಾಕಿದ್ದೀಯಾ ? ನಿನ್ನ ಗಂಡ ಜೀವಂತವಿದ್ದಾನ ಎಂದು ಕೇಳುವ ಹಕ್ಕನ್ನು ಭಾರತ ಸಂವಿಧಾನ ಯಾವ ಸಂಸದನಿಗೂ ನೀಡಿಲ್ಲ. ಆದ್ದರಿಂದ ಮುನಿಸ್ವಾಮಿ ಅವರ ನಡೆ ಸಂವಿಧಾನ ವಿರೋಧಿಯಾದ ನಡೆಯಾಗಿದೆ, ಅವರಾಡಿದ ಮಾತುಗಳ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದೇ ಆದರೆ ಕ್ರಿಮಿನಲ್‌ ಮೊಕದ್ದಮೆ ಹೂಡಬಹುದಾದ ಮಾತುಗಳು ಇವಾಗಿವೆ. ಆದ್ದರಿಂದ ಅಮಾಯಕ ಹೆಣ್ಣಿನ ಮೇಲೆ ಬಹಿರಂಗವಾಗಿ ನಡೆಸಿದ ಈ ದೌರ್ಜನ್ಯವನ್ನು ನಾನೊಬ್ಬ ಲೇಖಕನಾಗಿ ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಸದ ಮುನಿಸ್ವಾಮಿ ಅವರ ವಿರುದ್ಧ ಅತ್ಯಂತ ತುರ್ತು ಕ್ರಮವನ್ನು ಕೈಗೊಳಬೇಕೆಂದು ನಾನು ಆಗ್ರಹಿಸುತ್ತೇನೆ.

 


ದು.ಸರಸ್ವತಿರವರು. ರಂಗಭೂಮಿ ಕಲಾವಿದರು ಹಾಗೂ ಸಾಮಾಜಿಕ ಹೋರಾಟಗಾರರು.


ಮುನಿಸ್ವಾಮಿಗೆ  ಸಂವಿಧಾನಕ್ಕಿಂತ ಮನುಸ್ಮೃತಿಯೇ ಹೆಚ್ಚಾಗಿದೆ :

ಕೋಲಾರದ ಸಂಸದರಾದ ಎಸ್.ಮುನಿಸ್ವಾಮಿಯವರು ಕುಂಕುಮ ಇಟ್ಟುಕೊಳ್ಳದೆ ಇರುವುದಕ್ಕಾಗಿ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ನಿಂದಿಸಿರುವುದು ಖಂಡನೀಯ. ಇದು ಸರ್ವರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಗೌರವಿಸುವ ಸಂವಿಧಾನದ ಆಶಯಕ್ಕೆ ಎಸೆಗಿರುವ ಅಪಚಾರ. ಮಹಿಳೆಯರು ಯಾರದೋ ಹೆಂಡತಿ, ಮಗಳು, ಸೊಸೆ, ಸೋದರಿ ಎಂಬ ಕಾರಣಕ್ಕಾಗಿ ಅಲ್ಲದೆ ಸಮಾನಳಾಗಿ ಚಳವಳಿಯಲ್ಲಿ ಭಾಗಿಯಾಗಬೇಕೆಂದು ಪ್ರತಿಪಾದಿಸಿದ, ಹೆಣ್ಣನ್ನು ತುಚ್ಛವಾಗಿ ಕಾಣುವ ಸ್ಮೃತಿ ಗಳನ್ನು ವಿರೋಧಿಸಿ ಸಮಾನರಾಗಿ ಕಾಣುವ ಕಾನೂನು ರಚಿಸಿದ ಅಂಬೇಡ್ಕರ್ ಅವರ ಧ್ಯೇಯೋದ್ದೇಶಗಳಿಗೆ ಮಾಡಿರುವ ಅಪಚಾರ. ಸಂವಿಧಾನವು ಕೊಟ್ಟಿರುವ ಸಮಾನತೆಯಿಂದಾಗಿ ದಲಿತರಾಗಿಯೂ ಸಂಸದರಾಗಿರುವ ಎಸ್.ಮುನಿಸ್ವಾಮಿಯವರು ನಡೆದುಕೊಂಡ ರೀತಿ ಅವಮಾನಕರ. ಸಂವಿಧಾನಕ್ಕಿಂತ ಮನುಸ್ಮೃತಿ ಇವರಿಗೆ ಹೆಚ್ಚೆನಿಸಿದರೆ ಇವರು ರಾಜೀನಾಮೆ ಕೊಟ್ಟು ಹೊರಬರಲಿ.

 


ಡಾ.ಎಚ್‌.ಎಲ್‌.ಪುಷ್ಪರವರು. ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರು.

ಮಹಿಳೆಯರನ್ನು ಮತ್ತೆ ಪದರೆಯೊಳಗೆ ಕೂರಿಸುವ ಯತ್ನ: 
ಮೊದಲನೆಯದಾಗಿ ಮುನಿಸ್ವಾಮಿ ಅವರಿಗೆ ಯಾವಾಗ ಎಲ್ಲಿ ಹೇಗೆ ಮಾತನಾಡಬೇಕೆಂಬ ಸೌಜನ್ಯವಿಲ್ಲ, ದುಡಿಯುವ ಮಹಿಳೆಯರು ಕೆಲಸದ ಅವಧಿಯಲ್ಲಿ ಕುಂಕುಮ, ಸೆರಗು ಇವುಗಳ ಬಗ್ಗೆ ತಲೆಕೆಡಿಸಿಕೊಂಡು ಕೂರಲಿಕ್ಕೆ ಆಗುವುದಿಲ್ಲ, ಗ್ರಾಮೀಣ ಮಹಿಳೆಯರು ಹೆಚ್ಚಾಗಿ ಬೆವರಿನಲ್ಲಿ ಕೆಲಸ ಮಾಡುವುದರಿಂದ ಇಂತಹ ಸಂದರ್ಭದಲ್ಲಿ ಕುಂಕುಮ ಅಳಿಸಿ ಹೋಗಿರಲೂಬಹುದಲ್ಲವೇ ? ಕುಂಕುಮ ಇಟ್ಟುಕೊಂಡರೇ ಮಾತ್ರ ಹೆಣ್ಣು ಎನ್ನುವಂತಹ ಪೂರ್ವಗ್ರಹ ಮನಸ್ಥಿತಿ  ಹೋಗಬೇಕು. ಕಾಲ ಬದಲಾಗಿದೆ. ಯಾವುದು ಇಲ್ಲದೆಯೇ ಮಹಿಳೆಯರು ಬದುಕುವಂತಹ ಕಾಲವಿದು. ಹಿಂದಿನ ಕಾಲದ ಸಂಪ್ರದಾಯಸ್ಥರೇ ಎಲ್ಲವನ್ನೂ ದಿಕ್ಕರಿಸಿ ನಡೆಯುವಂತಹ ಈ ಹೊತ್ತಿನಲ್ಲಿ ಇಂತಹ ಅಸಮಂಜಸವಾದ ಪ್ರಶ್ನೆಗಳನ್ನು ಕೇಳುವ ಅಗತ್ಯವಿರಲಿಲ್ಲ. ಮುಂದಾದರೂ ಪುರುಷರು ಮಹಿಳೆಯರ ಕುರಿತು ಮಾತನಾಡುವ ಮುನ್ನ ಯೋಚಿಸುವ ಅಗತ್ಯ ಇದೆ. ಹಣೆಗೆ ಸ್ಟಿಕ್ಕರ್‌ ಎನ್ನುವುದು ಒಂದು ಸಂಕೇತವಷ್ಟೆ ಅದನ್ನು ಇಟ್ಟುಕೊಳ್ಳಬಹುದು, ಬಿಡಲೂ ಬಹುದು ಇದು ಆಕೆಗೆ ಸಂಬಂಧಪಟ್ಟ ವಿಚಾರವಾಗಿದೆ. ತಾಳಿ, ಕಾಲುಂಗುರ, ಕುಂಕುಮ, ಚೈನು ಇವುಗಳಿಂದಲೇ ಮಹಿಳೆಯರನ್ನು ಸಂಕೇತಿಸುತ್ತಾರೆಂದರೆ ಮಹಿಳೆ ಇನ್ನೂ ಸಹ ಅದೇ ಜಾಡಿನಲ್ಲಿ ನಡೆಯಬೇಕೆನ್ನುವುದು ಮುನಿಸ್ವಾಮಿ ಶತದಡ್ಡ ಎನ್ನುವುದನ್ನು ಸೂಚಿಸುತ್ತದೆ. ಮಹಿಳೆಯರನ್ನು ಮತ್ತೆ ಪರದೆ ಒಳಗೆ ಕೂರಿಸುವಂತಹ ಪ್ರಯತ್ನ ಇದಾಗಿದೆ.

 



ಮುನಿಸ್ವಾಮಿ ರಾಜೀನಾಮೆ ನೀಡಬೇಕು : ಮಹಿಳೆ ತನ್ನ ಹಣೆಗೆ ಬೊಟ್ಟು ಇಟ್ಟುಕೊಳ್ಳುತ್ತಾಳಾ ? ಬಳೆ ಹಾಕಿಕೊಳ್ಳುತ್ತಾಳಾ ಎಂಬುದು ಆಕೆಯ ವೈಯಕ್ತಿಕ ವಿಷಯ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ಈ ಬಗ್ಗೆ ಕೇಳುವ, ಮಾತನಾಡುವ ಅಧಿಕಾರವಿಲ್ಲ. ಮುಖ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಆಕೆಯನ್ನು ನಿಂದಿಸಿರುವುದು  ಸರಿಯಾದ ಕ್ರಮವಲ್ಲ, ಇಡೀ ರಾಜ್ಯದ ಹೆಣ್ಣು ಮಕ್ಕಳ ಪರವಾಗಿ ಸಂಸದ ಮುನಿಸ್ವಾಮಿ ಅವರು ಕ್ಷಮೆಯನ್ನು ಕೇಳಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಮನುವಾದವನ್ನ ಮಹಿಳೆಯರ ಮೇಲೆ ಬಲವಂತವಾಗಿ  ಏರಿ, ಸಾರ್ವಜನಿಕವಾಗಿ ಆಕೆಯನ್ನು ನಿಂದಿಸಿರುವುದನ್ನು ಜನವಾದಿ ಮಹಿಳಾ ಸಂಘಟನೆಯು ತೀವ್ರವಾಗಿ ಖಂಡಿಸುವ ಮೂಲಕ ಸಂಸದ ಮುನಿಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತೇವೆ.

ದೇವಿರವರು
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ



ನೊಂದ ಮಹಿಳೆಗೆ ನ್ಯಾಯ ದೊರಕಬೇಕು :
ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯಾಗಿ ಒಬ್ಬ ಮಹಿಳೆಗೆ ಅವಮಾನ ಮಾಡಿರುವುದು ಸರಿಯಲ್ಲ ನೊಂದ ಮಹಿಳೆಗೆ ನ್ಯಾಯ ದೊರಕಬೇಕು. ಅದು ಅಲ್ಲದೆ ಒಬ್ಬ ಜವಾಬ್ದಾರಿಯುತ ಸಂಸದರಾಗಿ ಮಾತನಾಡಬಾರದು ಇದು ಹೆಣ್ಣಿನ ಕುಲಕ್ಕೆ ಅವಮಾನ ಮಾಡಿದಂತೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಆಕೆಯ ಸಾಧನೆ, ತ್ಯಾಗಗಳನ್ನು ಅಭಿನಂದಿಸಬೇಕೆ ವಿನಃ ನಿಂದಿಸುವುದು ಸರಿಯಲ್ಲ. ನಾನು ಇದನ್ನ ತೀವ್ರವಾಗಿ ಖಂಡಿಸುತ್ತೇನೆ.

ಪರಶಿವಮೂರ್ತಿ ಎನ್.ಪಿ, ಶಿಕ್ಷಕರು, ನಂಜೀಪುರ, ಸರಗೂರು ತಾಲ್ಲೂಕು


ಸಂಸದ ಮುನಿಸ್ವಾಮಿ ಉಢಾಳನಂತೆ ವರ್ತಿಸಿರುವುದು ಅಕ್ಷಮ್ಯ ಅಪರಾಧ: ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂಸದರೊಬ್ಬರು ಸಂವಿಧಾನದ ಆಶಯದ ವಿರುದ್ದವಾಗಿ ಸಾರ್ವಜನಿಕರೊಡನೆ ವರ್ತಿಸಿದಾಗ ಖಂಡಿತಾ ಅವರ ವಿರುದ್ದ ಕ್ರಮ ಜರುಗಿಸಲೇಬೇಕಾಗುತ್ತದೆ. ಕೋಲಾರ ಎಂದರೆ ಕುಡಿಯುವ ನೀರು ಸಮಸ್ಯೆ ಅತ್ಯಂತ ವಿಷಕಾರಿಯಾಗಿ ಬೆಳೆದು ನಿಂತಿದೆ. ಮನುಷ್ಯರು ಸ್ವಚ್ಚ ನೀರು ಸಿಗದೆ ಪ್ಲೋರೈಡ್ ಯುಕ್ತ ನೀರಿನಿಂದ ಅನೇಕ ರೋಗಕ್ಕೆ ತುತ್ತಾಗುತಿದ್ದಾರೆ.ಇಂತಹ ಗಂಭೀರ ವಿಷಯದ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಬೇಕಾದ ಸಂಸದನೊಬ್ಬ  ಉಢಾಳನಂತೆ ವರ್ತಿಸಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ. ಸಂವಿಧಾನ ಅರಿಯದ ಈತನಿಗೆ ಸಂವಿಧಾನದ ಅಡಿಯಲ್ಲೇ ಶಿಕ್ಷೆ ನೀಡಬೇಕಿದೆ.

ಗಾನಾಸುಮಾಪಟ್ಟಸೋಮನಹಳ್ಳಿ.
ಕವಿ,ಗಾಯಕ,ಬರಹಗಾರರು


ಏನಿದು ಮುನಿಸ್ವಾಮಿ ವಿವಾದ : ಮಾರ್ಚ್‌ 8 ರ ಮಹಿಳಾ ದಿನಾಚರಣೆಯಂದು ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಅವರು ಸಾರ್ವಜನಿಕ ಸ್ಥಳದಲ್ಲಿ ಹಣೆ ಬೊಟ್ಟುಇಟ್ಟಿಲ್ಲವೆಂಬ ವಿಚಾರಕ್ಕೆ ಮಹಿಳೆಯೊಬ್ಬರನ್ನು ಸಾರ್ವಜನಿಕ ಸ್ಥಳದಲ್ಲಿ ಅವಮಾನಿಸಿ ನಿಂದಿಸಿರುವ ಘಟನೆ ನಡೆದಿತ್ತು.

ಇದನ್ನೂ ಓದಿ : ನಿನ್ನ ಗಂಡ ಬದುಕಿದ್ದಾನೆ ತಾನೇ? : ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ನಿಂದಿಸಿದ ಬಿಜೆಪಿ ಸಂಸದ ಮುನಿಸ್ವಾಮಿ

ರಸ್ತೆ ಬದಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮಹಿಳೆಯೊಬ್ಬರಿಗೆ ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಹಾಕಿಲ್ಲ? ಗಂಡ ಬದುಕಿದ್ದಾನೆ ತಾನೇ? ವೈಷ್ಣವಿ ಎಂದು ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ? ಇವಳಿಗೆ ಹಣೆಗೆ ಇಟ್ಟುಕೊಳ್ಳಲು ಬಿಂದಿ ಕೊಡಿ ಎಂದು ಮಹಿಳೆಯ ಕುರಿತಾಗಿ ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿ ಅವಮಾನಿಸಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ನಿಂದನೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಮುನಿಸ್ವಾಮಿ ಈ ನಡೆ ವಿರುದ್ಧ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಗತಿಪರ ಹೋರಾಟಗಾರರು, ಮಹಿಳಾ ಹೋರಾಟಗಾರರು, ಸಾಹಿತಿಗಳು ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತಿರುವ ಈ ಹೊತ್ತಿನಲ್ಲಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದ ಎಂಬುದನ್ನು ಸದ್ಯ ಕಾದುನೋಡಬೇಕಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

2 thoughts on “ʻʻಬೊಟ್ಟು ಯಾಕಿಟ್ಟಿಲ್ಲʼʼ : ಮುನಿಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

  1. I totally agree with this article, right to dress is a fundamental right. Who the hell muniswamy, it is a serious offence

  2. A man without least public manners has no right to take part in public function, that too on international women’s day. He deserves suitable legal action and removal from his position

Leave a Reply

Your email address will not be published. Required fields are marked *