ನವದೆಹಲಿ: ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೇನಾ ಸಮವಸ್ತ್ರ ಧರಿಸಿ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸಿದರು. ಇದೀಗ ಸೇನಾ ಸಮವಸ್ತ್ರ ಧರಿಸಿದ್ದಕ್ಕೆ ಪ್ರಧಾನಮಂತ್ರಿ ಕಚೇರಿಗೆ ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಲಯ ನೋಟಿಸು ಜಾರಿಗೊಳಿಸಿದೆ.
ವಕೀಲ ರಾಕೇಶ್ ನಾಥ್ ಪಾಂಡೆ ಅವರು ಅಪರಾಧ ಪ್ರಕ್ರಿಯೆಗಳ ಸಂಹಿತೆಯ ಸೆಕ್ಷನ್ 156 (3) ಅಡಿ (ಗ್ರಹಿಸಬಹುದಾದ ಅಪರಾಧ ಪ್ರಕರಣದಲ್ಲಿ ತನಿಖೆಗೆ ಆದೇಶಿಸಲು ಮ್ಯಾಜಸ್ಟ್ರೇಟ್‌ಗೆ ಅಧಿಕಾರ ನೀಡುವ) ಅರ್ಜಿಯನ್ನು ಸಲ್ಲಿಸಿದ್ದರು.
ಭಾರತೀಯ ಸೇನೆಯ ಅಂದರೆ ಭೂಸೇನೆ ಸೈನಿಕರು, ನೌಕಾಪಡೆ ಯೋಧರ ಮತ್ತು ವಾಯುಪಡೆ ಯೋಧರ ಸಮವಸ್ತ್ರ ಧರಿಸುವುದು ಮತ್ತು ಆರ್ಮಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು ಬೇರೆಯವರು ಕೊಂಡೊಯ್ಯುವುದು, ಭಾರತೀಯ ದಂಡಸಂಹಿತೆ 140ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಉಲ್ಲೇಖಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾತ್ಸವ್ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸು ಕಳಿಸಿದ್ದಾರೆ.
ಸೇನಾ ಸಮವಸ್ತ್ರ ಧರಿಸಿದ್ದಕ್ಕಾಗಿ ಪ್ರಯಾಗ್‌ರಾಜ್ ಜಿಲ್ಲಾ ನ್ಯಾಯಾಲಯ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಸೇನಾ ಸಮವಸ್ತ್ರದಲ್ಲಿರುವ ಮೋದಿ ಶಿಕ್ಷಾರ್ಹ ಅಪರಾಧ ಎಂದು ಕೋರ್ಟ್ ಹೇಳಿದೆ.
ನವೆಂಬರ್ 4, 2021 ರಂದು 2021ರ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ನೌಶೇರಾ ವಲಯಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಅವರು ಭಾರತೀಯ ಸೇನೆ ಸಮವಸ್ತ್ರ ಧರಿಸಿದ್ದರು. ಈ ಸಂಬಂಧ ಮೋದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ವಕೀಲ ಪಾಂಡೆಯವರು ಮೊದಲು 2021ರ ಡಿಸೆಂಬರ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮುಖ್ಯ ನ್ಯಾಯಾಂಗ ಮೆಜಿಸ್ಟ್ರೇಟ್ ಹರೇಂದ್ರ ನಾಥ್ ಅವರು ಈ ಅರ್ಜಿಯನ್ನು ತಿರಸ್ಕರಿಸಿ, ಇದು ನಮ್ಮ ಕೋರ್ಟ್ನ ನ್ಯಾಯಾಂಗ ಆಡಳಿತದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ವಿಷಯ ವಿಚಾರಣೆ ಮಾಡುವ ಅಧಿಕಾರ ವ್ಯಾಪ್ತಿ ಹೊಂದಿರುವ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದು ಒಳಿತು ಎಂದು ಹೇಳಿದ್ದರು.
ಈ ಸಂಬಂಧ ಮುಂಚಿನ ವಿಚಾರಣೆ ಮಾರ್ಚ್ 2ರಂದು ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2016ರಿಂದಲೂ ಪ್ರತಿ ಬಾರಿ ದೀಪಾವಳಿ ವೇಳೆ ಭಾರತೀಯ ಯೋಧರ ಜತೆ ಸಮಯ ಕಳೆಯುತ್ತಿದ್ದಾರೆ. 2017ರಿಂದ ಅವರು ಪ್ರತಿ ಭೇಟಿಯ ವೇಳೆ ಭಾರತೀಯ ಸೇನಾ ಸಮವಸ್ತ್ರ ಧರಿಸುತ್ತಿದ್ದಾರೆ.