ದೇಶಾದ್ಯಂತ 5 ವರ್ಷ ಪಿಎಫ್ಐ ನಿಷೇಧ, ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ : ಎನ್‌ಐಎ ದಾಳಿ ನಡೆಸಿದ ಬೆನ್ನಲ್ಲೇ ಪಿಎಫ್‌ಐಗೆ ನಿಷೇಧದ ಶಾಕ್ ನೀಡಲಾಗಿದೆ. ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳು ಕಾನೂನು ಬಾಹಿರ ಸಂಘಟನೆಗಳೆಂದು ಪರಿಗಣಿಸಿದ ಕೇಂದ್ರ ಗೃಹ ಸಚಿವಾಲಯ ಐದು ವರ್ಷ ನಿಷೇಧ ಹೇರಿದೆ.

ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಆಪಾದಿತ ಸಂಬಂಧಕ್ಕಾಗಿ UAPA ಕಾಯ್ದೆಯಡಿ ಗೃಹ ಸಚಿವಾಲಯ (ಎಂಎಚ್‌ಎ) ಬುಧವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ವನ್ನು 5 ವರ್ಷಗಳ ಕಾಲ ನಿಷೇಧಿಸಿದೆ. ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳು ಅಥವಾ ರಂಗಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಮಾಡಲಾಗಿದೆ.

ಉಗ್ರ ಸಂಘಟನೆಗಳೊಂದಿಗೆ ಮುಖಂಡರ ಸಂಪರ್ಕ, ದುಷ್ಕೃತ್ಯಕ್ಕೆ ಕೋಟ್ಯಂತರ ಹಣ ಬಳಕೆ ಆರೋಪದಡಿ ದೇಶವ್ಯಾಪಿ ಎನ್‌ಐಎ ನಡೆಸಿದ ದಾಳಿ ನಡೆಸಿತ್ತು. ಬಂಧನಗಳ ನಂತರ ಹಲವು ದಾಖಲೆಗಳನ್ನು ವಶಕ್ಕೆ ಪಡೆದು, PFI, 8 ಸಂಬಂಧಿತ ಸಂಸ್ಥೆಗಳನ್ನು 5 ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ.

PFI ಯ ಸಹವರ್ತಿ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್(RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್(AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್(NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್, ಕೇರಳ ಇವುಗಳನ್ನು ಸಹ ನಿಷೇಧಿಸಲಾಗಿದೆ.

ತನಿಖಾ ಸಂಸ್ಥೆಗಳ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ(NIA), ಜಾರಿ ನಿರ್ದೇಶನಾಲಯ(ED) ಮತ್ತು ರಾಜ್ಯ ಪೊಲೀಸರು PFI ಕಚೇರಿ ಮತ್ತು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದ್ದರು.

ಮೊದಲ ಸುತ್ತಿನ ದಾಳಿಯಲ್ಲಿ ಪಿಎಫ್‌ಐಗೆ ಸೇರಿದ 106 ಮಂದಿಯನ್ನು ಬಂಧಿಸಲಾಗಿತ್ತು. ಎರಡನೇ ಸುತ್ತಿನ ದಾಳಿಯಲ್ಲಿ PFI ಗೆ ಸೇರಿದ 247 ಜನರನ್ನು ಬಂಧಿಸಲಾಗಿದೆ. ತನಿಖಾ ಸಂಸ್ಥೆಗಳ ಸಾಕಷ್ಟು ಪುರಾವೆಗಳ ಆಧಾರದ ಮೇಲೆ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರ ಸರ್ಕಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *