ನವದೆಹಲಿ: ಅನ್ಯ ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಯಂತ್ರಿಸಲು ಕೇಂದ್ರ-ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯು ಕೇವಲ ಪ್ರಚಾರ ಹಿತಾಸಕ್ತಿಯ ಮನವಿಯಾಗಿದೆ ಎಂದು ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ನೇತೃತ್ವದ ಪೀಠ ಹೇಳಿದೆ.
ಇದನ್ನು ಓದಿ : ಗ್ಯಾನವಾಪಿ ಮಸೀದಿ : ಸಿವಿಲ್ ಕೋರ್ಟಿನ ಆದೇಶ ಕಾನೂನಿನ ಉಲ್ಲಂಘನೆ:- ಸಿಪಿಐ(ಎಂ) ಪೊಲಿಟ್ ಬ್ಯುರೋ
ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಮಾಟಮಂತ್ರ, ಮೂಢನಂಬಿಕೆ ಹಾಗೂ ಕಾಣಿಕೆ ಮತ್ತು ಹಣದ ಆಮಿಷವೊಡ್ಡುವ ಮೂಲಕ ಧಾರ್ಮಿಕ ಮತಾಂತರ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು.
ನ್ಯಾಯಾಲಯವು 18 ವರ್ಷ ಮೇಲ್ಪಟ್ಟ ಯುವತಿ ಅಥವಾ ಯುವಕ ತನ್ನ ಇಚ್ಛೆಯ ಧರ್ಮವನ್ನು ಏಕೆ ಆಯ್ಕೆ ಮಾಡಿಕೊಳ್ಳಬಾರದು ಎಂಬುದಕ್ಕೆ ಕಾರಣಗಳನ್ನು ನೀಡಿಲ್ಲ ಎಂದು ನ್ಯಾಯಮೂರ್ತಿ ರೋಹಿಂಟನ್ ನಾರಿಮನ್, ಬಿ.ಆರ್. ಗವಾಯಿ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ಪೀಠ ಅರ್ಜಿದಾರರನ್ನು ಪ್ರಶ್ನಿಸಿತು.
ಇದನ್ನು ಓದಿ : ರಫೇಲ್ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ
ಭಾರತ ಸಂವಿಧಾನದ 25ನೇ ವಿಧಿಯನ್ನು ಉಲ್ಲೇಖಿಸಿದ ನ್ಯಾ. ನಾರಿಮನ್ ಅವರು “ಭಾರತೀಯ ಸಂವಿಧಾನದಲ್ಲಿ (ಧರ್ಮಾಚರಣೆಗೆ ಸಂಬಂಧಿಸಿದಂತೆ) ‘ಪ್ರಚಾರಪಡಿಸು’ ಎಂಬ ಪದವನ್ನು ಅಡಕಗೊಳಿಸಿರುವುದಕ್ಕೆ ಕಾರಣವಿದೆ” ಎಂದು ಹೇಳಿದ್ದಾರೆ.
‘ಪ್ರತಿ ವಾರ ದೇಶದಾದ್ಯಂತ ಹಲವಾರು ಮತಾಂತರ ಪ್ರಕರಣಗಳು ವರದಿಯಾಗುತ್ತಿವೆ. ಮತಾಂತರಗೊಳ್ಳುವಂತೆ ಬೆದರಿಕೆ ಹಾಗೂ ಹಣದ ಆಮಿಷವೊಡ್ಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಅರ್ಜಿದಾರರು ದೂರಿದ್ದರು.
ಅಂತಿಮವಾಗಿ ನ್ಯಾಯಪೀಠವು ಈ ಬಗ್ಗೆ ವಾದ ಮಂಡಿಸಿದರೆ ಅಪಾರ ದಂಡ ವಿಧಿಸಲಾಗುವುದು ಎಂದು ಅರ್ಜಿದಾರರಾದ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರಿಗೆ ಎಚ್ಚರಿಕೆ ನೀಡಿತು. ನಂತರ ತಮ್ಮ ಮನವಿ ಹಿಂಪಡೆಯಲು ನ್ಯಾಯಾಲಯ ಅವಕಾಶ ಕಲ್ಪಿಸಿತು.