ನವದೆಹಲಿ: ದೇಶದ ಸಮಸ್ತ ಜನತೆಯ ವಿರೋಧಿಯಾದ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರ ನಂತರದಲ್ಲಿ ಪ್ರತಿಪಕ್ಷಗಳು ಒಳಗೊಂಡು ದೇಶದ ವಿವಿದೆಡೆಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ನಡುವೆ ದೆಹಲಿಯ ಗಾಜಿಪುರ ಗಡಿಯಲ್ಲಿ ಪ್ರತಿಭಟನಾನಿರತ ರೈತರು ‘ಜಿಲೇಬಿ’ ಹಂಚುವ ಮೂಲಕ ಸಂಭ್ರಮಿಸಿದರು.
ಇದನ್ನು ಓದಿ: ಕೃಷಿ ಕಾನೂನು ರದ್ದತಿಯು ರೈತರ ಸತ್ಯಾಗ್ರಹದಿಂದ ಅವರ ದುರಹಂಕಾರವನ್ನು ಸೋಲಿಸಿದೆ
ಮೂರು ಕೃಷಿ ಕಾಯ್ದೆಗಳ ರದ್ದುಗೊಳಿಸುವ ಬಗ್ಗೆ ಪ್ರಧಾನಿ ಮೋದಿ ಘೋಷಿಸುತ್ತಿದ್ದಂತೆ ರೈತರು ಪಟಾಕಿ ಸಿಡಿಸಿ ಖುಷಿ ಪಟ್ಟರು. ಕೃಷಿಕರ ವಿರೋಧಿಯಾದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಬಲವಂತದಿಂದ ಹೇರಲು ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿತ್ತು.
ಕಳೆದ ಒಂದು ವರ್ಷದಿಂದ ಕೋವಿಡ್ ಸಾಂಕ್ರಾಮಿತೆ ಹರಡುವಿಕೆಯನ್ನು ಲೆಕ್ಕಿಸದೆ ರೈತರು ಹೋರಾಟ ಮುಂದುವರೆಸಿದರು. ದೆಹಲಿಯ ಗಡಿಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾದ ರೈತರು ಕಾಯ್ದೆ ವಾಪಸ್ಸು ಪಡೆಯುವವರೆಗೂ ನಿರ್ಗಮಿಸುವುದಿಲ್ಲವೆಂದು ಪಟ್ಟುಹಿಡಿದರು. ರೈತರ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ರೈತರು ಹರ್ಷೋದ್ಘಾರ ಮೊಳಗಿಸಿದರು.
ಇದರ ನಡುವೆ “ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಸದ್ಯಕ್ಕೆ ಹಿಂಪಡೆಯುವುದಿಲ್ಲ. ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಣೆಯಾಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಎಂಎಸ್‌ಪಿ ಹೊರತುಪಡಿಸಿ ರೈತರ ಇತರ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಮಾತನಾಡಬೇಕು” ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಟ್ವೀಟ್ ಮಾಡಿದ್ದಾರೆ.
ವಿವಾದಿತ ಕೃಷಿ ಕಾಯ್ದೆಗಳಿವು
ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು. ಇದೇ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ದೇಶದ ಎಲ್ಲಡೆಗಳಲ್ಲಿ ನೂರಾರು ರೈತ ಸಂಘಟನೆಗಳ ನೇತೃತ್ವದಲ್ಲಿ ಧೀರೋದ್ಧಾತ ಹೋರಾಟಗಳು ನಡೆಯುತ್ತಿದ್ದವು.