ಪಿಡಿಓ ಮೇಲೆ ಕ್ರಮಕ್ಕೆ ಆಗ್ರಹಿಸಿ ಗ್ರಾಮ ಪಂಚಾಯತಿ ಕಛೇರಿಗೆ ಬೀಗ ಹಾಕಿ ಪ್ರತಿಭಟನೆ

ಹಟ್ಟಿ: ಅಭಿವೃದ್ಧಿಗೆ ಸಹಕಾರ ನೀಡದ ಪಿಡಿಓ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗೆಜ್ಜಲಗಟ್ಟಾ ಗ್ರಾಮ ಪಂಚಾಯತಿ ಕಛೇರಿಗೆ ಬೀಗ ಹಾಕಿದ ಸದಸ್ಯರು ಬಾಗಿಲ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೆಜ್ಜಲಗಟ್ಟಾ ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಸಹಕಾರ ನೀಡದೇ ಪಂಚಾಯತಿ ಅನುದಾನ ದುರ್ಬಳಕೆ ಮಾಡುತ್ತಿರುವ ಪಿಡಿಓ ಅಮರಗುಂಡಮ್ಮ ಮೇಲೆ ಕ್ರಮಕ್ಕೆ ಆಗ್ರಹಿಸಿದರು.

ಬೋರ್‌ವೆಲ್‌ ರೀಪೇರಿ, ಚರಂಡಿಗಳ ಹೂಳೆತ್ತುವುದು, ಫಾಗಿಂಗ್, ಕುಡಿಯುವ ನೀರು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ನಿರ್ಲಕ್ಷ್ಯತೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಕಾಲಕಾಲಕ್ಕೆ ವಾರ್ಡ್ ಸಭೆ, ಗ್ರಾಮ ಸಭೆ, ಸಾಮಾನ್ಯ ಸಭೆ, ಕೆಡಿಪಿ ಸಭೆಗಳನ್ನು ನಡೆಸದೇ ಅಭಿವೃದ್ಧಿಗೆ ತೊಡಕಾಗಿದ್ದಾರೆ. ಈ ಬಗ್ಗೆ ಸದಸ್ಯರು ಹಲವು ಬಾರಿ ತಿಳಿಹೇಳಿದರೂ ತಿದ್ದಿಕೊಳ್ಳದ ಹಿನ್ನೆಲೆಯಲ್ಲಿ 5 ಗ್ರಾಮಗಳ ಸದಸ್ಯರು ಸೇರಿ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ತಾಲೂಕು ಪಂಚಾಯತಿಯ ಟಿಸಿ ಕೂಡಲೇ ಸಮಸ್ಯೆ ಪರಿಹಾರಕ್ಕೆ ಸೂಚಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ವೀರಾಪೂರು, ರುದ್ರಮ್ಮ ಗೆಜ್ಜಲಗಟ್ಟಾ, ಸಂಜೀವಪ್ಪ, ಬಸವರಾಜ ಭಜಂತ್ರಿ, ಅಯ್ಯಣ್ಣ ನಿಲೋಗಲ್, ಅಮರಪ್ಪ ಕುರ್ಡಿ, ತಿಪ್ಪಣ್ಣ ಹಿರೇಹೆಸರೂರು, ವಿವಿಧ ಗ್ರಾಮಗಳ ಮುಖಂಡರಾದ ಶರಣಪ್ಪ ನಿಲೋಗಲ್, ಅಮರಯ್ಯ ಸ್ವಾಮಿ ಚಿಕ್ಕನಗನೂರು, ಹನುಮಂತಪ್ಪ ನಿಲೋಗಲ್, ಸಾಬುದ್ದೀನ್ ಗೆಜ್ಜಲಗಟ್ಟಾ, ಸುಬಾನೆ ಅಲ್ಲಬಾಷಾ, ನಿಂಗಪ್ಪ ಎಂ, ಶಿವರಾಜ್ ಕಪಗಲ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *