ಲೋಕಜನಶಕ್ತಿ ಪಕ್ಷ ಎರಡು ಗುಂಪಾಗಲು ಕಾರಣವೇನು? ಯಾರು ಇದಕ್ಕೆ ಹೊಣೆ

ನವದೆಹಲಿ: ಬಿಹಾರ ರಾಜಕೀಯದಲ್ಲಿ ಮತ್ತೆ ವಿಭಜನೆಯ ಮಾತು ಕೇಳಿ ಬರುತ್ತಿದೆ. ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನ ನಂತರ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ) ದ ಸಾರಥ್ಯವನ್ನು ವಹಿಸಿಕೊಂಡ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದಿರುವ ಐದು ಜನ ಸಂಸದರು ಲೋಕಸಭೆಯಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡಿಕೊಂಡಿದೆ.

ಪಶುಪತಿ ಕುಮಾರ್‌ ಪರಾಸ್‌ ಅವರು ಚಿರಾಗ್‌ ಪಾಸ್ವಾನ್‌ ಅವರ ಬದಲಾಗಿ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪರಾಸ್‌ ಅವರನ್ನು ಎಲ್‌ಜೆಪಿ ನಾಯಕನನ್ನಾಗಿ ಆಯ್ಕೆ ಮಾಡಿರುವ ನಿರ್ಧಾರವನ್ನು ಲೋಕಸಭಾ ಸ್ಪೀಕರ್‌ ಅವರಿಗೆ ಐವರು ಸಂಸದರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಸಿಎಂ ವೈ.ಎಸ್.ಜಗನ್ ರಾಜ್ಯಪಾಲ ಬಿಶ್ವಾಭೂಷಣ್ ಹರಿಚಂದನ್ ಅವರನ್ನು ಭೇಟಿ

ಹಾಜಿಪುರ ಸಂಸದರಾಗಿರುವ ಪರಾಸ್‌ ಅವರು ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಕಾರ್ಯವೈಖರಿಯನ್ನು ಹೊಗಳಿದ್ದಾರೆ. ‘ನಿತೀಶ್‌ ಕುಮಾರ್‌ ಉತ್ತಮ ನಾಯಕ ಮತ್ತು ಒಬ್ಬ ವಿಕಾಸ ಪುರುಷ’ ಎಂದು ಶ್ಲಾಘಿಷಿದ್ದಾರೆ. ಅಲ್ಲದೆ, ‘ನಾನು ಪಕ್ಷವನ್ನು ವಿಭಜಿಸುವ ಕಾರ್ಯ ಮಾಡಿಲ್ಲ. ಆದರೆ, ಪಕ್ಷ ಉಳಿಸುವ ಕಾರ್ಯ ಮಾಡಿದ್ದೇನೆ. ಬಿಹಾರದಲ್ಲಿನ ಘಟನೆಗಳ ಬಗ್ಗೆ ಎಲ್‌ಜೆಪಿಯ ಶೇಕಡ 99ರಷ್ಟು ಕಾರ್ಯಕರ್ತರಿಗೆ ಬೇಸರವಾಗಿದೆ’ ಎಂದು ಹೇಳಿದ್ದಾರೆ.

‘ನಾವು ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿ ಇರಲಿದ್ದೇವೆ. ಚಿರಾಗ್‌ ಪಾಸ್ವಾನ್‌ ಅವರಿಗೆ ಇಚ್ಛೆ ಇದ್ದರೆ ಈ ಸಂಘಟನೆಯ ಭಾಗವಾಗಬಹುದು’ ಎಂದು ಪಶುಪತಿ ಕುಮಾರ್‌ ಪರಾಸ್‌ ಅವರು ಚಿರಾಗ್‌ ರನ್ನು ಎಚ್ಚರಿಕೆ ನೀಡಿದ್ದಾರೆ.

“ನಮ್ಮ ಪಕ್ಷದಲ್ಲಿ 6 ಸಂಸದರು ಇದ್ದಾರೆ. ನಮ್ಮ ಪಕ್ಷವನ್ನು ಉಳಿಸಬೇಕೆಂಬುದು 5 ಸಂಸದರ ಬಯಕೆಯಾಗಿತ್ತು. ಆದ್ದರಿಂದ, ನಾನು ಪಕ್ಷವನ್ನು ಮುರಿಯಲಿಲ್ಲ, ಅದನ್ನು ಉಳಿಸಿದ್ದೇನೆ. ಚಿರಾಗ್ ಪಾಸ್ವಾನ್ ನನ್ನ ಅಣ್ಣನ ಮಗ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ.  ಅವರ ವಿರುದ್ಧ ಯಾವುದೇ ಆಕ್ಷೇಪಣೆ ಇಲ್ಲ “ಎಂದು ಪ್ರಸ್ತುತ ಬಿಹಾರದ ಹಾಜಿಪುರ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುತ್ತಿರುವ ಪಾರಸ್ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನು ಓದಿ: ಸರ್ವಾಧಿಕಾರಶಾಹೀ ಕೇಂದ್ರೀಕರಣಕ್ಕೆ ಎದುರಾಗಿ

ಎಲ್​ಜೆಪಿ  2019 ರ ಲೋಕಸಭೆಯಲ್ಲಿ ವೈಶಾಲಿ (ಬಿನಾ ದೇವಿ), ಸಮಸ್ತಿಪುರ (ರಾಮ್ ಚಂದ್ರ ಪಾಸ್ವಾನ್ ಮತ್ತು ನಂತರ ಅವರ ಮಗ ಪ್ರಿನ್ಸ್ ರಾಜ್), ಖಗರಿಯಾ (ಚೌಧರಿ ಮೆಹಬೂಬ್ ಅಲಿ ಖೈಸರ್), ನವಾಡಾ (ಚಂದನ್ ಕುಮಾರ್) ಮತ್ತು ಜಮುಯಿ (ಚಿರಾಗ್ ಪಾಸ್ವಾನ್) ಹೀಗೆ ಒಟ್ಟು ಆರು ಸ್ಥಾನಗಳನ್ನು ಪಡೆದುಕೊಂಡಿತ್ತು.

ಸಂಸದರಾದ ಪ್ರಿನ್ಸ್‌ ರಾಜ್‌, ಚಂದನ್‌ ಸಿಂಗ್‌, ವೀನಾ ದೇವಿ ಮತ್ತು ಅಲಿ ಕೈಸರ್‌ ಅವರು ಚಿರಾಗ್‌ ಪಾಸ್ವಾನ್‌ ಕಾರ್ಯವೈಖರಿ ಬಗ್ಗೆ ಹಲವು ದಿನಗಳಿಂದ ಅಸಮಾಧಾನ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ಪಕ್ಷದ ಅಧ್ಯಕ್ಷ ಚಿರಾಗ್‌ ಪಾಸ್ವಾನ್ ಈಗ ಬಹುತೇಕ ಒಂಟಿಯಾಗಿದ್ದಾರೆ. ಪಕ್ಷ ವಿಭಜನೆಗೆ ಜೆಡಿಯು ಕಾರಣವಾಗಿದೆ. 2020ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ ಬಳಿಕ ಪಾಸ್ವಾನ್‌ ಅವರನ್ನು ಏಕಾಂಗಿ ಮಾಡಲು ಜೆಡಿಯು ಪ್ರಯತ್ನಿಸಲ್ಲೇ ಇತ್ತು ಎಂಬ ಎಂಬ ಅನುಮಾನಗಳು ಮೂಡುತ್ತಿವೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

ಪಾಸ್ವಾನ್ ತಮ್ಮ ಪಕ್ಷವನ್ನು ಜೆಡಿಯು ವಿರುದ್ಧ ಮುನ್ನಡೆಸಿದ್ದರಿಂದ  ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ ಲೋಕಜನಶಕ್ತಿ ಪಕ್ಷವು ಕಳಪೆ ಪ್ರದರ್ಶನ ಕಂಡಿತು ಎಂದು ಆರೋಪಿಸಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *