ಜನಮತ-2023: ಪರ್ಯಾಯ ರಾಜಕಾರಣಕ್ಕಾಗಿ ಸ್ಪರ್ಧಿಸುತ್ತಿರುವ ಪಕ್ಷಗಳು

ವಸಂತರಾಜ ಎನ್.ಕೆ.-

ಕಾಂಗ್ರೆಸ್, ಬಿಜೆಪಿ, ಜೆಡಿ-ಎಸ್ – ಈ ಮೂರು ಪ್ರಮುಖ ಪಕ್ಷಗಳ ನೀತಿ ಮತ್ತು ಆಚರಣೆಗಳಲ್ಲಿ ಭಾರಿ ವ್ತ್ಯತ್ಯಾಸಗಳು ಕಾಣುತ್ತಿಲ್ಲ. ಬಹುಶಃ ಆಕಾರಣವಾಗಿಯೇ ಈ ಮೂರು ಪಕ್ಷಗಳ ನಡುವೆ ಒಂದು ಕಡೆ ಟಿಕೆಟ್ ಸಿಗದವರು ಇನ್ನೊಂದು ಕಡೆ ಯಾವುದೇ ಎಗ್ಗಿಲ್ಲದೆ  ಹೋಗುತ್ತಿದ್ದಾರೆ ಅವರನ್ನು ಬರ ಮಾಡಿಕೊಳ್ಳುತ್ತಿದ್ದಾರೆ.  ಈ ಸನ್ನಿವೇಶದಲ್ಲಿ ಈ ಮೂರು ಪ್ರಮುಖ ಪಕ್ಷಗಳನ್ನು ಹೊರತುಪಡಿಸಿ, ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಇತರ ಪಕ್ಷಗಳಿವೆ.  ಅವು ಈ ಮೂರು ಪಕ್ಷಗಳು ಪ್ರತಿನಿಧಿಸುವ ರಾಜಕಾರಣಕ್ಕೆ ಪರ್ಯಾಯ ರಾಜಕಾರಣ ಮಾಡಲು ಸ್ಪರ್ಧಿಸುತ್ತಿವೆ.  ಅವು ಮುಖ್ಯ ಸ್ಪರ್ಧಿಗಳು ಅಲ್ಲದಿರಬಹುದು, ಆದರೆ ವಿವಿಧ ರೀತಿಯಲ್ಲಿ ಚುನಾವಣೆಯ ಮೇಲೂ ರಾಜ್ಯದ ರಾಜಕಾರಣದ ಮೇಲೂ ಇವು ಗಣನೀಯ ಪ್ರಭಾವವನ್ನು ಹೊಂದಿವೆ.  ಇವರ ಪರ್ಯಾಯ ಸಕಾರಾತ್ಮಕವಾಗಿರಬಹುದು. ಅಲ್ಲದೆಯೂ ಇರಬಹುದು. ಇವುಗಳಲ್ಲಿ ಕೆಲವರಾದರೂ ಆಯ್ಕೆಯಾದರೆ ಮುಂದಿನ ವಿಧಾನಸಭೆಯಲ್ಲಿ  ಭಿನ್ನ ಧ್ವನಿಗಳು, ಜನಪರ ದನಿಗಳೂ ಕೇಳಿ ಬರಬಹುದು. ಇವುಗಳಲ್ಲಿ ಐದು ಎಡ ಪಕ್ಷಗಳು ಸೇರಿದ ಏಳು ಪಕ್ಷಗಳ ರಂಗ ಮತ್ತು ಎಎಪಿ, ಬಿಎಸ್‌ಪಿ, ಎಸ್‌ಡಿಪಿಐ, ಕೆಆರ್‌ಎಸ್‌ನಂತಹ ಪಕ್ಷಗಳು ಸೇರಿವೆ. ಅವುಗಳ ಸ್ಪರ್ಧೆಯತ್ತ  ಒಂದು ನೋಟ.

ಪರ್ಯಾಯ ರಾಜಕಾರಣಕ್ಕಾಗಿ ಸ್ಪರ್ಧಿಸುತ್ತಿರುವ ಪಕ್ಷಗಳಲ್ಲಿ ಪ್ರಧಾನವಾದದ್ದು ಐದು ಎಡಪಕ್ಷಗಳನ್ನು ಒಳಗೊಂಡ ಏಳು ಪಕ್ಷಗಳ ರಂಗ. ಸಿಪಿಐ-ಎಂ, ಸಿಪಿಐ, ಸಿಪಿಐ-ಎಂಎಲ್-ಲಿಬರೇಶನ್, ಎಸ್‌ಯುಸಿಐ-ಸಿ, ಫಾರ್ವರ್ಡ್ ಬ್ಲಾಕ್), ಸರ್ವೋದಯ ಪಕ್ಷ ಮತ್ತು ಆರ್‌ಪಿಐ (ಮೋಹನ್‌ರಾಜ್ ನೇತೃತ್ವ) – ಈ 7 ಪಕ್ಷಗಳು ಕಳೆದ ಹಲವು ವರ್ಷಗಳಿಂದ ಒಕ್ಕೂಟ ರಚಿಸಿಕೊಂಡಿದ್ದವು. ಹಲವು ವರ್ಷಗಳಿಂದ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಜನಪರ ಪರ್ಯಾಯಕ್ಕಾಗಿ ಹೋರಾಡುತ್ತಿವೆ. ಈ ಪಕ್ಷಗಳು ಮತ್ತು ಅವರ ನೇತೃತ್ವದ ಸಾಮೂಹಿಕ ಸಂಘಟನೆಗಳು, ಚಳುವಳಿಗಳು ಕಾರ್ಮಿಕರ, ರೈತರ, ದಲಿತರ, ಮಹಿಳೆಯರ ಅನೇಕ ಸಮಸ್ಯೆಗಳ ಕುರಿತು ಹೋರಾಟಗಳಲ್ಲಿ, ಹಾಗೂ ನವ-ಉದಾರವಾದ ಮತ್ತು ಕೋಮುವಾದದ ವಿರುದ್ಧದ ಅಭಿಯಾನದಲ್ಲಿ ಭಾಗವಹಿಸಿವೆ. ಅನೇಕ ಜಂಟಿ ಸಮಾವೇಶಗಳನ್ನು ನಡೆಸಲಾಯಿತು. ಜಂಟಿಯಾಗಿ ಪರ್ಯಾಯ ಜನಪರ ನೀತಿಗಳ ಗುಂಪನ್ನು ಯೋಜಿಸಿವೆ. ಚುನಾವಣೆ ಪೂರ್ವದಲ್ಲಿಯೂ ಚರ್ಚೆ ನಡೆಸಿದ್ದವು. ಚುನಾವಣೆಗಳಲ್ಲಿ ಭಾಗವಹಿಸಲು ಈ ಕೆಳಗಿನ ಸ್ಥೂಲ ಮಾರ್ಗಸೂಚಿಗಳನ್ನು ಗುರುತಿಸಲಾಗಿತ್ತು :

1) ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಪ್ರಮುಖ ಗುರಿಯಾಗಿದೆ. ನಮ್ಮ ಸ್ಪರ್ಧೆ ಬಿಜೆಪಿ ಗೆಲುವಿಗೆ ನೆರವಾಗುವ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ತಪ್ಪಿಸಬೇಕು.
2) ನಾವು ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಲು ಹೆಚ್ಚು ಸಜ್ಜಾಗಿರುವ ಅಭ್ಯರ್ಥಿಯ ಪರ ಪ್ರಚಾರ ಮಾಡಬೇಕು.
3) ರಾಜ್ಯದಾದ್ಯಂತ ನಮ್ಮ ಸ್ವತಂತ್ರ ಸಾಮಾನ್ಯ ಅಭಿಯಾನವು ಜನವಿರೋಧಿ ನವ-ಉದಾರವಾದಿ ಮತ್ತು ಕೋಮುವಾದಿ ನೀತಿಗಳ ವಿರುದ್ಧ ಮತ್ತು ಜನಪರ ಪರ್ಯಾಯ ನೀತಿಗಳ ಪರ ಪ್ರಚಾರಕ್ಕೆ ಒತ್ತು ಕೊಡುತ್ತದೆ.
4) ನಮಗೆ ಗೆಲ್ಲುವ ಅವಕಾಶವಿರುವ ಅಥವಾ ಎರಡನೇ ಸ್ಥಾನದಲ್ಲಿ ಬರಬಹುದಾದ  ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು. ವಿಧಾನಸಭೆಯಲ್ಲಿ ಜನರ ಧ್ವನಿ ಎತ್ತುವ ಪ್ರತಿನಿಧಿಗಳನ್ನು (ಈಗ ಒಬ್ಬರೂ ಇಲ್ಲ) ಹೊಂದಲು ನಾವು ಶ್ರಮಿಸಬೇಕು
5) ನಾವು ಪರಸ್ಪರ ವಿರುದ್ದವಾಗಿ ಸ್ಪರ್ಧಿಸಬಾರದು ಮತ್ತು ಪರಸ್ಪರ ಬೆಂಬಲಿಸಿ ಪ್ರಚಾರ ಮಾಡಬೇಕು

ಆದಾಗ್ಯೂ ಈ ಮಾರ್ಗಸೂಚಿಗಳ ಆಚರಣೆಯಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಕಾಂಗ್ರೆಸ್ ಮತ್ತು ಜೆಡಿ (ಎಸ್) ಕುರಿತು ಧೋರಣೆಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂದಿವೆ.

ಸಿಪಿಐ(ಎಂ) ಸ್ಪರ್ಧೆ

ಸಿಪಿಐ-ಎಂ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ನಿರ್ಧರಿಸಿದೆ. ಪಕ್ಷವು 1983 ರಲ್ಲಿ (ಕಾಂ ಎ ವಿ ಅಪ್ಪಸ್ವಾಮಿ ರೆಡ್ಡಿ ಅವರು), 1994 ಮತ್ತು 2004 ರಲ್ಲಿ (ಕಾಂ ಜಿ ವಿ ಎಸ್ ರೆಡ್ಡಿ ಅವರು) ಗೆದ್ದಿದ್ದ ಮತ್ತು ಇತರ ಹೆಚ್ಚಿನ ಚುನಾವಣೆಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಬಾಗೇಪಲ್ಲಿ (ಚಿಕ್ಕಬಳ್ಳಾಪುರ ಜಿಲ್ಲೆ) ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲಿದೆ. ಇದು ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದು, ಕರ್ನಾಟಕದ ಕಮ್ಯುನಿಸ್ಟ್ ಚಳುವಳಿಯ ಪ್ರಬಲ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂ. ಡಾಕ್ಟರ್ ಅನಿಲ್ ಕುಮಾರ್ ಅವುಲಪ್ಪ, ಪಕ್ಷದ ಅಭ್ಯರ್ಥಿಯಾಗಿ ಏಪ್ರಿಲ್ 15 ರಂದು ಪ್ರಧಾನ ಕಾರ್ಯದರ್ಶಿ ಕಾಂ ಸೀತಾರಾಮ್ ಯೆಚೂರಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಡಾ ಅನಿಲ್ ಕುಮಾರ್ ಹಲವು ವರ್ಷಗಳಿಂದ ಜನಪ್ರಿಯ ವೈದ್ಯ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ದುಡಿದಿದ್ದರೆ. ಪ್ರಸ್ತುತ ಸಿಪಿಐ(ಎಂ) ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯ ಸೆಕ್ರೆಟಾರಿಯಟ್ ಸದಸ್ಯರಾಗಿದ್ದಾರೆ.  ಬಾಗೇಪಲ್ಲಿ ತಾಲೂಕಿನ 160 ಹಳ್ಳಿಗಳಲ್ಲಿ 480 ಸ್ವಯಂಸೇವಕರೊಂದಿಗೆ ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಅವರ ನವೀನ ವಿಧಾನವು ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೇರಿದಂತೆ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ‘ಸಾಮಾಜಿಕ ಬಲವರ್ಧನೆ ತಂತ್ರ’ ಎಂದು ಕರೆಯಲಾದ ಅವರ ವಿಧಾನವು, ಅಸ್ತಿತ್ವದಲ್ಲಿರುವ ಆರೋಗ್ಯ ರಕ್ಷಣೆಯ ಮೂಲಸೌಕರ್ಯವು ಅಸಮರ್ಪಕವೆಂದು ಸಾಬೀತಾದಾಗ ಸಾಂಕ್ರಾಮಿಕ ರೋಗವನ್ನು ಎದುರಿಸುವ ಸರಳ, ಜನ-ಕೇಂದ್ರಿತ ಮತ್ತು ತಳಮಟ್ಟ-ಆಧಾರಿತ ಪ್ರಯತ್ನದ ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ. ಪಕ್ಷವು ಸೆಪ್ಟೆಂಬರ್ 18, 2022 ರಂದು ಸಿಪಿಐ(ಎಂ) ಪಿಬಿ ಸದಸ್ಯ ಮತ್ತು ಕೇರಳದ ಮುಖ್ಯಮಂತ್ರಿ ಕಾಂ ಪಿಣರಾಯಿ ವಿಜಯನ್ ಉದ್ಘಾಟಿಸಿದ ರಾಜಕೀಯ ಸಮಾವೇಶದೊಂದಿಗೆ ಪ್ರಚಾರವನ್ನು ಪ್ರಾರಂಭಿಸಿತು. ಪಕ್ಷದ ಕ್ರಿಯಾ ಯೋಜನೆಯಲ್ಲಿ ಸೇರಬೇಕಾದ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಲು ಪಕ್ಷವು ಕ್ಷೇತ್ರದ ಸಮೀಕ್ಷೆಯನ್ನು ಸಹ ನಡೆಸಿದೆ.

ಸಿಪಿಐ(ಎಂ) – ಕೆಜಿಎಫ್ (ಕೋಲಾರ ಗೋಲ್ಡ್ ಫೀಲ್ಡ್ಸ್)-ಎಸ್‌ಸಿ, ಕಲ್ಬುರ್ಗಿ ಗ್ರಾಮಾಂತರ (ಎಸ್‌ಸಿ), ಕೆಆರ್ ಪುರಂ (ಬೆಂಗಳೂರು ಜಿಲ್ಲೆ) – ಈ ಮೂರು ಕ್ಷೇತ್ರಗಳಲ್ಲಿ ಸಹ ಸ್ಪರ್ಧಿಸಲಿದೆ.  ಅವುಗಳಲ್ಲಿ ಎರಡು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿದೆ. ಕೆಜಿಎಫ್ ಪಕ್ಷವು ಹಿಂದಿನಿಂದಲೂ ಸ್ಪರ್ಧಿಸುತ್ತಿರುವ ಮತ್ತೊಂದು ಕ್ಷೇತ್ರವಾಗಿದೆ. ಇದನ್ನು 1940 ರ ದಶಕದಿಂದ ಕಮ್ಯುನಿಸ್ಟ್ ಚಳುವಳಿಯ ಕೋಟೆ ಎಂದು ಪರಿಗಣಿಸಲಾಯಿತು ಮತ್ತು ಚಿನ್ನದ ಗಣಿ ಕಾರ್ಮಿಕರಲ್ಲಿ ಬಲವಾದ ನೆಲೆಯನ್ನು ಹೊಂದಿತ್ತು. ಅವಿಭಜಿತ ಸಿಪಿಐ ಈ ಸ್ಥಾನವನ್ನು ಮೊದಲ ಚುನಾವಣೆಯಲ್ಲಿಯೇ (1952) ಗೆದ್ದು 1957 ಮತ್ತು 1962 ರಲ್ಲಿ ಉಳಿಸಿಕೊಂಡಿತು. ಕರ್ನಾಟಕದ ಮೊದಲ ಕಮ್ಯುನಿಸ್ಟ್ ಶಾಸಕ ಕಾಂ ಕೆ ಎಸ್ ವಾಸನ್ ಅವರನ್ನು ಆಯ್ಕೆ ಮಾಡಿದ ಹೆಗ್ಗಳಿಕೆಯನ್ನು ಕೆಜಿಎಫ್ ಹೊಂದಿದೆ. ಸಿಪಿಐ(ಎಂ) ರಚನೆಯಾದ ನಂತರ ಚಿನ್ನದ ಗಣಿ ಕಾರ್ಮಿಕ ಮತ್ತು ಯೂನಿಯನ್ ನಾಯಕರಾಗಿದ್ದ ಕಾಂ. ಟಿ ಎಸ್ ಮಣಿ 1985 ರಲ್ಲಿ ಸ್ಥಾನವನ್ನು ಗೆದ್ದರು ಮತ್ತು 1983 ಮತ್ತು 1989 ರಲ್ಲಿ ಎರಡನೇ ಸ್ಥಾನದಲ್ಲಿದ್ದರು. ಕಾಂ ಪಿ ತಂಗರಾಜ್ ಅಭ್ಯರ್ಥಿಯಾಗಿದ್ದು, ಅವರು 2008ರ ಚುನಾವಣೆಯಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಯುವ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಮತ್ತು ಕೋಲಾರ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದರು.

ಕಲ್ಬುರ್ಗಿ ಗ್ರಾಮಾಂತರ (ಎಸ್‌ಸಿ) ಸಿಪಿಐ(ಎಂ) ದೀರ್ಘಕಾಲದಿಂದ ಸ್ಪರ್ಧಿಸುತ್ತಿರುವ ಮತ್ತೊಂದು ಸ್ಥಾನ. ಇದನ್ನು ಕಮಲಾಪುರ ಎಂದು ಕರೆಯಲಾಗುತ್ತಿತ್ತು ಮತ್ತು 2008 ರ ಚುನಾವಣೆಗಾಗಿ ಮರುಸಂಘಟಿಸಲಾಯಿತು. ಕಾಂ ಮಾರುತಿ ಮಾನ್ಪಡೆ, ಹಿರಿಯ ಸಿಪಿಐ(ಎಂ) ಮತ್ತು ರೈತ ಮುಖಂಡ ಕೋವಿಡ್ ಸಾಂಕ್ರಾಮಿಕದಲ್ಲಿ ನಿಧನರಾಗುವವರೆಗೂ ಈ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದರು. ಕಾಂ ಪಾಂಡುರಂಗ ಮಾವಿನಕರ್ ಈ ಬಾರಿ ಅಭ್ಯರ್ಥಿಯಾಗಲಿದ್ದಾರೆ.

ಬೆಂಗಳೂರು ನಗರದ ಪೂರ್ವ ಕೈಗಾರಿಕಾ ಉಪನಗರ ಕೆಆರ್ ಪುರಂ ಕ್ಷೇತ್ರದಲ್ಲೂ ಸಿಪಿಐ(ಎಂ) ಸ್ಪರ್ಧಿಸುತ್ತಿದೆ. ‘ಆಪರೇಷನ್ ಕಮಲ’ದ ಭಾಗವಾಗಿ ಬಿಜೆಪಿಗೆ ಪಕ್ಷಾಂತರಗೊಂಡು ಸ್ಥಾನಕ್ಕೆ ರಾಜೀನಾಮೆ ನೀಡಿದ 19 ಶಾಸಕರಲ್ಲಿ ಒಬ್ಬರಾಗಿದ್ದ  ಬೈರತಿ ಬಸವರಾಜು ಅವರನ್ನು ಆರಿಸಿದ ಕುಖ್ಯಾತಿಯ ಕ್ಷೇತ್ರವಿದು. 2019 ರ ಉಪ ಚುನಾವಣೆಯಲ್ಲಿ ಅವರು ಮರು ಆಯ್ಕೆಯಾದರು. ಈ ಕ್ಷೇತ್ರವು 25,000 + ಕಾರ್ಮಿಕರು ಕೆಲಸ ಮಾಡುತ್ತಿದ್ದ ಪ್ರಸಿದ್ಧ ಸಾರ್ವಜನಿಕ ವಲಯದ ದೈತ್ಯ ಐಟಿಐ ಇದ್ದ  ಮತ್ತು ಕಾರ್ಮಿಕರ ಕೇಂದ್ರವಾಗಿದ್ದ ಕ್ಷೇತ್ರ. ಈಗ ಐಟಿಐ ಯನ್ನು ಬಹುತೇಕ ಮುಚ್ಚಲಾಗಿದೆ. ಕಾಂ ನಂಜೇಗೌಡ ಅವರು ಐಟಿಐ ಗುತ್ತಿಗೆ ಕಾರ್ಮಿಕರ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಮತ್ತು ಈಗ ಕಟ್ಟಡ ಕಾರ್ಮಿಕರ ಸಂಘದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದಾರೆ.

ಎಲ್ಲಾ ಅಭ್ಯರ್ಥಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದನ್ನು ಗಮನಿಸಬಹುದು.

ಇತರ ಪಕ್ಷಗಳ ಸ್ಪರ್ಧೆ

ಸಿಪಿಐ 7 ಕ್ಷೇತ್ರಗಳಲ್ಲಿ –  ಮೂಡಿಗೆರೆ, ಆಳಂದ, ಜೇವರ್ಗಿ, ಕೂಡ್ಲಿಗಿ, ಶಿರಾ, ಕೊಡಗು, ಕೆ.ಜಿ.ಎಫ್ –  ಸ್ಪರ್ಧಿಸಲು ನಿರ್ಧರಿಸಿದೆ. ಬಾಗೇಪಲ್ಲಿಯಲ್ಲಿ ಸಿಪಿಐ(ಎಂ) ಅಭ್ಯರ್ಥಿಗೆ ಮತ್ತು ಮೇಲುಕೋಟೆಯಲ್ಲಿ ಸರ್ವೋದಯ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದು, ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದೆ. ಸಿಪಿಐ(ಎಂಎಲ್-ಲಿಬರೇಷನ್) ಎರಡು – ಕನಕಗಿರಿ, ಕೆ.ಆರ್ ಪುರಂ –  ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಎಸ್‌ಯುಸಿಐ 13 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಫಾರ್ವರ್ಡ್ ಬ್ಲಾಕ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ.

ಸರ್ವೋದಯ ಪಕ್ಷವು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕೆಲವು ದಲಿತ ಗುಂಪುಗಳ ರಾಜಕೀಯ ವೇದಿಕೆಯಾಗಿ ರೂಪುಗೊಂಡಿತು ಮತ್ತು ಪ್ರಸಿದ್ಧ ಲೇಖಕ ದೇವನೂರ ಮಹಾದೇವ ಸೇರಿದಂತೆ ಕೆಲವು ದಲಿತ ಮತ್ತು ಪ್ರಗತಿಪರ ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ಅದನ್ನು ಬೆಂಬಲಿಸಿದರು. ಇದು ಮೊದಲು ಸ್ವರಾಜ್ ಇಂಡಿಯಾದೊಂದಿಗೆ ವಿಲೀನಗೊಂಡಿತ್ತು. ಸ್ವರಾಜ್ ಇಂಡಿಯಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ ನಂತರ ಅದು ತನ್ನ ಮೂಲ ಗುರುತನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಿತು. ರೈತ ನಾಯಕ ಪುಟ್ಟಣ್ಣಯ್ಯ ಅವರು ಅದರ ಜನಪ್ರಿಯ ನಾಯಕರಾಗಿದ್ದರು ಮತ್ತು 1994 ರಲ್ಲಿ ಪಕ್ಷೇತರರಾಗಿ ಮೇಲುಕೋಟೆ ಕ್ಷೇತ್ರವನ್ನು ಗೆದ್ದಿದ್ದರು. ಅವರು ಸತತವಾಗಿ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು,  2013 ರಲ್ಲಿ ಆಯ್ಕೆಯಾಗಿದ್ದರು. ಅವರು ಚುನಾವಣೆಗೆ ಮುನ್ನ 2018 ರಲ್ಲಿ ನಿಧನರಾದರು. 2018ರಲ್ಲಿ ಮೇಲುಕೋಟೆಯಲ್ಲಿ ಪುಟ್ಟಣ್ಣಯ್ಯನವರ ಪುತ್ರ ದರ್ಶನ್ ಅವರನ್ನು ಸರ್ವೋದಯ ಕಣಕ್ಕಿಳಿಸಿ ಎರಡನೇ ಸ್ಥಾನ ಪಡೆದಿದ್ದರು. ಅವರನ್ನು ಮತ್ತೆ ಕಣಕ್ಕಿಳಿಸಲಾಗುತ್ತಿದ್ದು, ಈ ಸ್ಥಾನಕ್ಕೆ ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಸರ್ವೋದಯ ಒಟ್ಟು 25 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಮೋಹನರಾಜ್ ನೇತೃತ್ವದ ಆರ್‌ಪಿಐ 20 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ.

ಇತರ ಗಮನಾರ್ಹ ಸ್ಪರ್ಧೆಗಳು

ಈಗ ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಆಮ್ ಆದ್ಮಿ ಪಕ್ಷ (ಎಎಪಿ) ಎಲ್ಲಾ 224 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಎಎಪಿ ತನ್ನ ‘ಭ್ರಷ್ಟಾಚಾರ-ವಿರೋಧಿ ಮತ್ತು ಉತ್ತಮ ಆಡಳಿತದ’ ವೇದಿಕೆಯೊಂದಿಗೆ ತನ್ನ ಅಭಿಯಾನವನ್ನು ಸಾಕಷ್ಟು ಮುಂಚೆಯೇ ಪ್ರಾರಂಭಿಸಿತು. ಮಾಜಿ ಎಡಿಜಿಪಿ ಭಾಸ್ಕರ ರಾವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅದು ಬಿಂಬಿಸಿತು. ಆದರೆ ನಂತರ ಅವರು ಎಎಪಿಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದರು ಮತ್ತು ಬಿಜೆಪಿ ಟಿಕೆಟ್ ಕೂಡ ಪಡೆದರು! ಎಎಪಿ ಕೆಲವು ನಗರ ಕ್ಷೇತ್ರಗಳಲ್ಲಿ ಒಂದಷ್ಟು ಛಾಪು ಮೂಡಿಸುವ ಸಾಧ್ಯತೆಯಿದೆ.

ದಲಿತರ ಪಕ್ಷವೆಂದು ಹೇಳಿಕೊಳ್ಳುವ ಬಿ.ಎಸ್.ಪಿ 2018 ರ ಚುನಾವಣೆಯಲ್ಲಿ JD-S ನೊಂದಿಗೆ ಮೈತ್ರಿ ಮಾಡಿಕೊಂಡು 18 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು ಮತ್ತು ಗೆಲುವು ಸಾಧಿಸಿದ ಒಬ್ಬರೇ ಶಾಸಕ ನಂತರ ಬಿಜೆಪಿಗೆ ಸೇರಿದರು. ಇದು ಇನ್ನೂ ತನ್ನ ಯೋಜನೆಯನ್ನು ಅಂತಿಮಗೊಳಿಸಿಲ್ಲ. ಎಎಪಿ ಯಲ್ಲಿ ಸಕ್ರಿಯವಾಗಿದ್ದು ಅದನ್ನು ತೊರೆದ ರವಿ ಕೃಷ್ಣ ರೆಡ್ಡಿ ಆರಂಭವಾದ ಕರ್ನಾಟಕ ರಾಷ್ಟ್ರ ಸಮಿತಿ ಮತ್ತೊಂದು ಹೊಸ ಪಕ್ಷವಾಗಿದ್ದು, ಭ್ರಷ್ಟಾಚಾರ ವಿರೋಧ ವನ್ನು ತನ್ನ ಪ್ರಮುಖ ಗುರಿಯಾಗಿಟ್ಟುಕೊಂಡು ಸ್ಪರ್ಧೆಗೆ ಇಳಿದಿದೆ. ಇದು ಆಗಲೇ 110 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

2018ರಲ್ಲಿ 3 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಕಣಕ್ಕೆ ಇಳಿದಿದ್ದರೂ ಒಂದನ್ನೂ ಗೆಲ್ಲಲಾಗಲಿಲ್ಲ. ಆದಾಗ್ಯೂ ಅದು ಸ್ಪರ್ಧಿಸಿದ ಸ್ಥಳದಲ್ಲಿ 10.5% ಮತಗಳನ್ನು ಗಳಿಸಿತ್ತು. ಅಲ್ಪಸಂಖ್ಯಾತ ಕೋಮುವಾದವನ್ನು ಪ್ರತಿನಿಧಿಸುವ ಎಸ್‌ಡಿಪಿಐ ಪಕ್ಷವು ಕಳೆದ ಚುನಾವಣೆಗಳಿಂದ ತನ್ನ ನೆಲೆಯನ್ನು, ಸಂಘ ಬ್ರಿಗೇಡ್ ಮತ್ತು ಬಿಜೆಪಿ ಸರ್ಕಾರದ ಅವಿರತ ಕೋಮು ಧ್ರುವೀಕರಣ ಅಭಿಯಾನದ ಫಲವಾಗಿ, ಗಣನೀಯವಾಗಿ ವಿಸ್ತರಿಸಿದೆ. ಅದು ತನ್ನ ಸ್ಪರ್ಧೆಯನ್ನು ಅಂತಿಮಗೊಳಿಸದಿದ್ದರೂ, ಸಾಕಷ್ಟು ಮುಸ್ಲಿಂ ಜನಸಂಖ್ಯೆಯಿರುವ ಹೆಚ್ಚಿನ ಕ್ಷೇತ್ರಗಳಲ್ಲಿ ಅದು ಸ್ಪರ್ಧಿಸಲಿದೆ ಎಂದು ತಿಳಿದು ಬಂದಿದೆ. ಅದು ಸಂಭವಿಸಿದಲ್ಲಿ, ಫಲಿತಾಂಶಗಳ ಮೇಲೆ ಗಣನೀಯ ಪರಿಣಾಮ ಬೀರುವ ಸಾಧ್ಯತೆಯಿದೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಹೊಸ ಪಕ್ಷವಾಗಿದೆ. ಇದು ಇತ್ತೀಚೆಗೆ ಗಣಿ ಧಣಿ, ಮೊದಲ ‘ಆಪರೇಷನ್ ಕಮಲ’ದ ರೂವಾರಿಯಲ್ಲೊಬ್ಬ ಮತ್ತು ಅನೇಕ ಭ್ರಷ್ಟಾಚಾರ ಪ್ರಕರಣಗಳು ಮತ್ತು ಹಗರಣಗಳೊಂದಿಗೆ ಬಿಜೆಪಿಯ ಪ್ರಭಾವಿ ಮಾಜಿ ಸಚಿವ ಜನಾರ್ದನ ರೆಡ್ಡಿ  ಅವರು ಸ್ಫಾಪಿಸಿದ ಪಕ್ಷ.. ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಮುಂತಾದ ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಆಳವಾಗಿಯೇ ಇದೆ. ಅವರ ಉದ್ದೇಶಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ತನ್ನ ರಾಜಕೀಯ ಬೆಂಬಲವನ್ನು ಪ್ರದರ್ಶಿಸಿ ಕನಿಷ್ಠ ಕಿಂಗ್ ಮೇಕರ್ ಆಗಿ ರಾಜಕೀಯ ಮರುಪ್ರವೇಶ ಮಾಢುವುದು ಅವರ ಉದ್ದೇಶವಿದ್ದಂತಿದೆ. ಅವರು ತಮ್ಮ ಪಕ್ಷದ ಸ್ಪರ್ಧೆಯನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಅವರ ಪಕ್ಷದ ಸ್ಪರ್ಧೆಯು ಈ ನಾಲ್ಕು ಜಿಲ್ಲೆಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

 

 

Donate Janashakthi Media

Leave a Reply

Your email address will not be published. Required fields are marked *