ಬೆಂಗಳೂರು : ಗುಜರಾತ್ ನಲ್ಲಿ 2002ರಲ್ಲಿ ನಡೆದದ್ದಕ್ಕಿಂತ ಬಹಳ ದೊಡ್ಡ ಪ್ರಮಾಣದ, ಭಯಾನಕ ಹಾಗೂ ವ್ಯವಸ್ಥಿತ ಹಿಂದೂ ಮುಸ್ಲಿಂ ಗಲಭೆ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ ಎಂದು ಖ್ಯಾತ ನಟ ಪ್ರಕಾಶ್ ಬೆಳವಾಡಿ ಫೇಸ್ ಬುಕ್ ಪೋಸ್ಟ್ ಹಾಕಿ ವಿವಾದ ಸೃಷ್ಟಿಸಿದ್ದಾರೆ.
ಅದನ್ನಿನ್ನು ತಡೆಯಲು ಅಸಾಧ್ಯ, ತುಂಬಾ ತಡವಾಗಿ ಬಿಟ್ಟಿದೆ, ಅದು ಈಗ ಅನಿವಾರ್ಯವಾಗಿಬಿಟ್ಟಿದೆ ಎಂದು ದುಃಖದಿಂದ ಹೇಳಬೇಕಾಗಿದೆ ಎಂದು ಪ್ರಕಾಶ್ ಬರೆದಿದ್ದಾರೆ. ಪ್ರಕಾಶ್ ರ ಈ ಪೋಸ್ಟ್ ಗೆ ತಕ್ಷಣ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರವರ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ವಿಚಲಿತರಾದ ಪ್ರಕಾಶ್ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿ “ಈಗ ವಾದ ವೈಯಕ್ತಿಕ ರೂಪ ತೆಗೆದುಕೊಳ್ಳುವುತ್ತಿರುವುದರಿಂದ ನಾನು ಫೇಸ್ ಬುಕ್ ನಿಂದ ಕೆಲವು ತಿಂಗಳು ದೂರ ಇರುತ್ತೇನೆ” ಎಂದು ಇನ್ನೊಂದು ಪೋಸ್ಟ್ ಹಾಕಿದ್ದಾರೆ.
ಪ್ರಕಾಶ್ ಬೆಳವಾಡಿಯವರು CommunalViolence ಹ್ಯಾಶ್ ಟ್ಯಾಗ್ ಹಾಕಿ ಇಂಗ್ಲೀಷ್ ನಲ್ಲಿ ಬರೆದ ಪೋಸ್ಟ್ ನ ಅನುವಾದ ಹೀಗಿದೆ:
2002ರ ಫೆಬ್ರವರಿ 27ರಂದು ಗೋಧ್ರಾದಲ್ಲಿ ರೈಲೊಂದರಲ್ಲಿ 59 ಯಾತ್ರಾರ್ಥಿಗಳನ್ನು ಜೀವಂತ ದಹಿಸಿದಾಗ ಒಬ್ಬ ಅಹ್ಮದಾಬಾದ್ ನಿಂದ ಒಬ್ಬ ಲಿಬರಲ್ ಮಿತ್ರ ಕಾಲ್ ಮಾಡಿ ಇದು ಸಂಘಿಗಳಿಗೆ ಸರಿಯಾದ ಪಾಠ ಕಲಿಸುತ್ತದೆ ಎಂಬರ್ಥದಲ್ಲಿ ಹೇಳಿದ.
ಅದಕ್ಕೆ ಅಷ್ಟೇ ವೇಗದ ಹಾಗು ಭಯಾನಕ ಪ್ರತಿಕ್ರಿಯೆ ಬರುತ್ತದೆ ಎಂದು ನಾನು ಹೇಳಿದೆ. ಗುಜರಾತ್ ನಲ್ಲಿ ಮುಸ್ಲಿಮರು 8% ಮಾತ್ರ ಇರುವುದರಿಂದ ಅಲ್ಲಿನ ಗಲಭೆ ಸಂಪೂರ್ಣ ಏಕಪಕ್ಷೀಯವಾಗಿ ನಡೆಯಿತು. ಆದರೆ ಪಶ್ಚಿಮ ಬಂಗಾಳದಲ್ಲಿ ಇದು ಭಿನ್ನ. ಅಲ್ಲಿ ಮುಸ್ಲಿಂ ಜನಸಂಖ್ಯೆ 30% ಕ್ಕಿಂತ ಜಾಸ್ತಿ ಇದೆ. ಹಾಗಾಗಿ ಅಲ್ಲಿ ಪ್ರತಿ ದಾಳಿ ಅಷ್ಟು ಬೇಗ ಸಾಧ್ಯವಿಲ್ಲ. ಆದರೆ ಅದು ಬರುವುದಿಲ್ಲ ಅಂತ ತಪ್ಪು ತಿಳ್ಕೊಬೇಡಿ. ಅದು ಬರುತ್ತದೆ. ಆ ದಾಳಿ ಬಹಳ ದೊಡ್ಡ ಪ್ರಮಾಣದಲ್ಲಿ ಹಿಂದೂ ಮುಸ್ಲಿಂ ಗಲಭೆಯ ರೂಪದಲ್ಲಿ ಬರುತ್ತದೆ. ಅದು ನಡೆದಾಗ ಅದು ಬಹಳ ಭಯಾನಕವಾಗಿರುತ್ತದೆ, ಕ್ರೂರವಾಗಿರುತ್ತದೆ ಮತ್ತು ವ್ಯವಸ್ಥಿತವಾಗಿರುತ್ತದೆ. ಈಗ ನಡೆಯುತ್ತಿರುವ ದಾಳಿಗಳ ಬಗ್ಗೆ ಕೂಲ್ ಆಗಿರುವ ಅಲ್ಲಿನ ರಾಜ್ಯ ಸರಕಾರ ಹಾಗು ಸಂಘಿಗಳಿಗೆ ಹೀಗೇ ಆಗಬೇಕು ಎಂದು ಭಾವಿಸಿರುವ ಲಿಬರಲ್ ಗಳು ಇದರ ಲೆಕ್ಕ ಒಪ್ಪಿಸಬೇಕಾಗುತ್ತದೆ. ಅದನ್ನು ಇನ್ನು ತಡೆಯಲು ಬಹಳ ತಡವಾಗಿದೆ, ಅದು ದುಃಖದಾಯಕವಾಗಿದ್ದರೂ ಈಗ ಅನಿವಾರ್ಯವಾಗಿದೆ”.
ಪ್ರಕಾಶ್ ಬೆಳವಾಡಿ ಬಹಳಷ್ಟು ವರ್ಷಗಳಿಂದ ಕೋಮು ಪ್ರಚೋದನ ನೀಡುತ್ತಲೆ ಬಂದಿದ್ದಾರೆ . ಬೌದ್ಧಿಕವಾಗಿ ಪ್ರಕಾಶ್ ದಿವಾಳಿಯಾಗಿದ್ದಾರೆ ಎಂದೆಲ್ಲ ಆಕ್ರೋಶಗಳು ವ್ಯಕ್ತವಾಗಿವೆ.