ಪರಿಹಾರ ಹಣ ಕೊಟ್ಟರೆ ನನ್ನ ಮಗ ವಾಪಸ್ ಬರುವನೇ?: ಅಜಯ್ ಮಿಶ್ರಾ ರಾಜಿನಾಮೆ ನೀಡಲೇಬೇಕು

ಭೂಪಾಲ್: ಕೇಂದ್ರ ಗೃಹ ರಾಜ್ಯ ಸಹಾಯಕ ಸಚಿವ ಅಜಯ್ ಮಿಶ್ರಾ ರಾಜಿನಾಮೆ ನೀಡಲೇಬೇಕು, ಅವರ ಪುತ್ರನನ್ನು ತಕ್ಷಣವೇ ಬಂಧಿಸಬೇಕೆಂದು ಲಖೀಂಪುರ ಖೇರಿ ಹಿಂಸಾಚಾರ ಘಟನೆಯಲ್ಲಿ ಸಾವಿಗೀಡಾದ ಲವ್ ಪ್ರೀತ್ ಸಿಂಗ್ ಅವರ ತಂದೆ ಸತ್ನಾಮ್ ಸಿಂಗ್ ಒತ್ತಾಯಿಸಿದ್ದಾರೆ.

ಇದನ್ನು ಓದಿ: ಲಖಿಂಪುರ್ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಸೇರಿ ಇತರರ ವಿರುದ್ಧ ಎಫ್ಐಆರ್

ಅಕ್ಟೋಬರ್‌ 03ರಂದು ರೈತರ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಏಕಾಏಕಿಯಾಗಿ ಕಾರು ನುಗ್ಗಿಸಿದರಿಂದ ಹಿಂಸಾಚಾರ ಘಟನೆಯಲ್ಲಿ ಒಟ್ಟು 8 ಮಂದಿ ನಿಧನರಾಗಿದ್ದರು. ಕೇಂದ್ರ ಸಚಿವ ಅಶಿಶ್ ಮಿಶ್ರಾ ಅವರಿಗೆ ಸೇರಿದ ವಾಹನಕ್ಕೆ ಬಲಿಯಾದವರಲ್ಲಿ 19 ವರ್ಷದ ಲವ್ ಪ್ರೀತ್ ಸಿಂಗ್ ಸಹ ಒಬ್ಬರು. ಪರಿಹಾರದ ಹಣದಿಂದ ನನ್ನ ಮಗ ವಾಪಸ್ ಬರುವುದಿಲ್ಲ, ಆತನನ್ನು ಕೊಲೆ ಮಾಡಿದ ಎಲ್ಲರನ್ನು ಬಂಧಿಸಿದಾಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ, ಸರ್ಕಾರದಿಂದ ಪರಿಹಾರ ಘೋಷಿಸಿದ ಮಾತ್ರಕ್ಕೆ ನನ್ನ ಮಗನ ಹಂತಕರನ್ನು ಮುಕ್ತವಾಗಿ ತಿರುಗಾಡಲು ಯಾರಾದರೂ ಅನುಮತಿಸಬಹುದೇ? ಎಂದು ಸತ್ನಾಮ್ ಸಿಂಗ್ ಪ್ರಶ್ನಿಸಿದ್ದಾರೆ.

ಸತ್ನಾಮ್ ಸಿಂಗ್ ಮತ್ತು ಸತ್ವಿಂದರ್ ಕೌರ್ ಅವರ ಮೂವರು ಮಕ್ಕಳಲ್ಲಿ ಲವ್ ಪ್ರೀತ್ ಸಿಂಗ್ ಹಿರಿಯರು.  ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಕೆನಡಾಕ್ಕೆ ಹೋಗಲು ಅಂತಾರಾಷ್ಟ್ರೀಯ ಇಂಗ್ಲೀಷ್ ಭಾಷಾ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಅಕ್ಟೋಬರ್ 3 ರಂದು  ನಡೆದ ಘಟನೆ ಕುಟುಂಬದ ಕನಸುಗಳನ್ನು ಭಗ್ನಗೊಳಿಸಿತು ಎಂದು ಹಳ್ಳಿಯ ಪ್ರಧಾನ ಸುಖದೇವ್ ಸಿಂಗ್ ಹೇಳಿದರು.

ಲವ್‌ ಪ್ರೀತ್‌ ಸಿಂಗ್‌ ಸರಳ ಮತ್ತು ಸ್ನೇಹಪರ ಯುವಕನಾಗಿದ್ದ,  ಜೊತೆಗೆ ಎಲ್ಲರಿಗೂ ಸಹಾಯ ಮಾಡಲು ಸಿದ್ಧನಾಗಿದ್ದ. ಕೃಷಿ ಆಂದೋಲನದಲ್ಲಿಯೂ ಭಾಗವಹಿಸುತ್ತಿದ್ದನು. ಅಕ್ಟೋಬರ್ 3 ರಂದು, ಹಳ್ಳಿಯ ಇತರ ಕೆಲವು ಯುವಕರೊಂದಿಗೆ ಲವ್‌ಪ್ರೀತ್ ಟಿಕುನಿಯಾ ಪಟ್ಟಣದಲ್ಲಿ ಪ್ರತಿಭಟನೆಗೆ ಹೋದರು ಆದರೆ ಸಚಿವರ ಮಗನ ವಾಹನಕ್ಕೆ ಬಲಿಯಾಗಿದ್ದಾರೆ ಎಂದು ವಿವರಿಸಿದರು.

ಮಗನ ಸಾವಿನ ನಂತರ ಗಂಭೀರ ಸ್ಥಿತಿಯಲ್ಲಿದ್ದ ಲವ್‌ಪ್ರೀತ್ ತಾಯಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ಸೂಚಿಸಿತ್ತು.

Donate Janashakthi Media

Leave a Reply

Your email address will not be published. Required fields are marked *