ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ (2023-24) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗಾ)ಅಡಿಯಲ್ಲಿನ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ನೂತನ ವೇತನ ದರವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಅಧಿಸೂಚನೆಯ ಪ್ರಕಾರ ಹರಿಯಾಣದಲ್ಲಿ ಗರಿಷ್ಠ ವೇತನ ಅಂದರೆ ದಿನಕ್ಕೆ ₹357, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಕನಿಷ್ಠ ಅಂದರೆ ದಿನಕ್ಕೆ ₹221 ವೇತನ ನಿಗದಿಪಡಿಸಲಾಗಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದೇ 24ರಂದು ನರೇಗಾ ಯೋಜನೆಯಡಿಯಲ್ಲಿನ ಕೂಲಿಯ ದರವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ₹ 7ರಿಂದ ₹ 26ರ ತನಕ ವೇತನ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ : ಗರ್ಭಿಣಿ-ಬಾಣಂತಿಯರಿಗೆ ನರೇಗಾ ಕೆಲಸದ ಪ್ರಮಾಣದಲ್ಲಿ ಶೇ 50 ರಿಯಾಯಿತಿ
ಕಳೆದ ವರ್ಷದ ದರಗಳಿಗೆ ಹೋಲಿಸಿದರೆ, ರಾಜಸ್ಥಾನವು ಹೆಚ್ಚಿನ ಶೇಕಡಾವಾರು ವೇತನ ಹೆಚ್ಚಳ ದಾಖಲಿಸಿದೆ. ರಾಜಸ್ಥಾನದಲ್ಲಿ 2022-23ರಲ್ಲಿ ವೇತನವು ₹ 231 ಇತ್ತು. ನೂತನ ಪರಿಷ್ಕೃತ ವೇತನವು ದಿನಕ್ಕೆ ₹ 255 ಆಗಿದೆ. ಅಂತೆಯೇ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ವೇತನ ದರವು ಕಳೆದವರ್ಷಕ್ಕಿಂತ ಶೇಕಡ 8ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ರಾಜ್ಯಗಳಲ್ಲಿ ದಿನಕ್ಕೆ ₹ 210 ವೇತನವಿತ್ತು. ಇದೀಗ ₹ 228ಕ್ಕೆ ವೇತನ ಹೆಚ್ಚಳವಾಗಿದೆ.
ಇದನ್ನೂ ಓದಿ : ಮನರೇಗಾದಲ್ಲಿ ಹಾಜರಾತಿ “ಆ್ಯಪ್” ಪರಿಹಾರದ ಬದಲು ಅವ್ಯವಸ್ಥೆ ಸೃಷ್ಟಿ
ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ಕಳೆದ ವರ್ಷ ₹ 204 ವೇತನವಿತ್ತು. ಈ ವರ್ಷ ಶೇ 17ರಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದ್ದು ವೇತನದರವು ₹221 ಆಗಿದೆ. ಕರ್ನಾಟಕ, ಗೋವಾ, ಮೇಘಾಲಯ ಮತ್ತು ಮಣಿಪುರ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಲಾಗಿದೆ.