“ರೈತರ ಆಂದೋಲನದ ವಿರುದ್ಧ ಸುಳ್ಳು ಕಥನಗಳನ್ನು ಹರಡುವುದನ್ನು ನಿಲ್ಲಿಸಿ”
ನವದೆಹಲಿ: ರೈತರ ಆಂದೋಲನವನ್ನು ವಿದೇಶಿ ಮತ್ತು ಭಯೋತ್ಪಾದಕ ಶಕ್ತಿಗಳಿಂದ ಹಣ ಪಡೆದಿರುವ ದೇಶವಿರೋಧಿ ಎಂದು ಆರೋಪಿಸಿವ ನ್ಯೂಸ್‌ಕ್ಲಿಕ್ ವಿರುದ್ಧ ಸುಳ್ಳು ಎಫ್‌ಐಆರ್ ನ್ನು ಹಿಂಪಡೆಯಬೇಕು ಮತ್ತು ನ್ಯೂಸ್‌ಕ್ಲಿಕ್ ಪತ್ರಕರ್ತರಾದ ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ 2023 ರ ನವೆಂಬರ್ 1 ರಿಂದ 5 ರವರೆಗೆ ಸುಳ್ಳು FIR ಮತ್ತು ಮೋದಿ ಸರ್ಕಾರದ ಪರ ಕಾರ್ಪೊರೇಟ್ ನೀತಿಗಳ ವಿರುದ್ಧ ಗ್ರಾಮ ಮಟ್ಟದ ಅಭಿಯಾನ ಮತ್ತು ನವಂಬರ್ 6ರಂದು ಅಖಿಲ ಭಾರತ ಪ್ರತಿಭಟನಾ ದಿನದ ಆಚರಣೆಗೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.) ಕರೆ ನೀಡಿದೆ. ನ್ಯೂಸ್ ಕ್ಲಿಕ್
ಸುಳ್ಳು ಎಫ್‌ಐಆರ್ ಮತ್ತು ಮೋದಿ ಸರ್ಕಾರದ ವಿರುದ್ಧ ನವೆಂಬರ್ 1 ರಿಂದ 5, 2023 ರವರೆಗೆ ಗ್ರಾಮ ಮಟ್ಟದ ಅಭಿಯಾನವನ್ನು ಆಯೋಜಿಸಲಾಗುತ್ತದೆ, ಎಫ್‌ಐಆರ್‌ನ ದುರುದ್ದೇಶವನ್ನು ವಿವರಿಸಲು ಮತ್ತು ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸಹಾಯ ಮಾಡಲು ಮೋದಿ ಸರ್ಕಾರವು ರೈತರ ಅರ್ಥವ್ಯವಸ್ಥೆಯ ಕತ್ತು ಹಿಸುಕುವುದನ್ನು ತಡೆಯಲು ರೈತರನ್ನು ಒಟ್ಟುಗೂಡಿಸಲು ಕರಪತ್ರಗಳನ್ನು ಗ್ರಾಮಗಳಲ್ಲಿ ಮನೆ ಮನೆಗೆ ಹೋಗಿ ಹಂಚಲಾಗುತ್ತದೆ ಎಂದಿರುವ ಎಸ್‌ಕೆಎಂ ನವೆಂಬರ್ 6, 2023 ಅನ್ನು ಅಖಿಲ ಭಾರತ ಪ್ರತಿಭಟನಾ ದಿನವಾಗಿ ಆಚರಿಸಲಾಗುತ್ತದೆ ಮತ್ತು ಸುಳ್ಳು ಎಫ್‌ಐಆರ್‌ನ ಪ್ರತಿಗಳನ್ನು ತಹಸಿಲ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸುಡಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: “ಮಾಧ್ಯಮ ಸ್ವಾತಂತ್ರ್ಯ ಉಳಿಸಿ, ಪತ್ರಕರತ್ರನ್ನು ರಕ್ಷಿಸಿ” ರಾಷ್ಟ್ರಪತಿಗೆ ಪತ್ರ
ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ “ಕಾರ್ಪೊರೇಟ್ ಅನ್ನು ವಿರೋಧಿಸಿ, ಬಿಜೆಪಿಯನ್ನು ಶಿಕ್ಷಿಸಿ, ದೇಶವನ್ನು ಉಳಿಸಿ” ಎಂಬ ಘೋಷಣೆಗಳೊಂದಿಗೆ ಪ್ರಚಾರ ಮಾಡಲು ಕೂಡ ಎಸ್‌ಕೆಎಂ ನಿರ್ಧರಿಸಿದೆ.
ಎಸ್‌ಕೆಎಂ ಮತ್ತು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಒಕ್ಕೂಟಗಳ ಜಂಟಿ ವೇದಿಕೆಯ ಬ್ಯಾನರ್ ಅಡಿಯಲ್ಲಿ 2023 ರ ನವೆಂಬರ್ 26ರಿಂದ 28 ರ ವರೆಗೆ ಎಲ್ಲ ರಾಜ್ಯ ರಾಜಧಾನಿಗಳಲ್ಲಿ ರಾಜಭವನದ ಮುಂದೆ ರೈತರು ಮತ್ತು ಕಾರ್ಮಿಕರ 72 ಗಂಟೆಗಳ ಹಗಲು ರಾತ್ರಿ ಧರಣಿ ಹೋರಾಟವನ್ನು ಆಯೋಜಿಸಲಾಗುವುದು ಎಂದೂ ಅದು ಹೇಳಿದೆ.
ರೈತರು ಮತ್ತು ಕಾರ್ಮಿಕರು ಈ ಪ್ರತಿಭಟನಾ ಹೋರಾಟಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪಾಲ್ಗೊಂಡು ರೈತ ವಿರೋಧಿ, ಕಾರ್ಮಿಕ ವಿರೋಧಿ ನರೇಂದ್ರ ಮೋದಿ ಸರ್ಕಾರವನ್ನು ಜನರ ನಡುವೆ ಬಯಲಿಗೆಳೆಯಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ವಿನಂತಿಸಿದೆ.
ಅಭಿಯಾನದ ಕರಪತ್ರ:
2023 ರ ಅಕ್ಟೋಬರ್ 20 ರಂದು ನವದೆಹಲಿಯಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಭೆಯು ಐತಿಹಾಸಿಕ ರೈತರ ಹೋರಾಟದ ವಿರುದ್ಧ ನ್ಯೂಸ್‌ಕ್ಲಿಕ್ ಎಫ್‌ಐಆರ್‌ನಲ್ಲಿ ಆಧಾರರಹಿತ, ಅಪ್ರಾಮಾಣಿಕ ಮತ್ತು ಸುಳ್ಳು ಆರೋಪಗಳ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಆರ್‌ಎಸ್‌ಎಸ್-ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ವಿದೇಶಿ ಮತ್ತು ಭಯೋತ್ಪಾದಕ ಶಕ್ತಿಗಳಿಂದ ಹಣ ಪಡೆದ ರೈತರ ಚಳವಳಿ ದೇಶವಿರೋಧಿ ಎಂದು ಎಫ್ಐಆರ್ ಆರೋಪಿಸಿದೆ.
“ಭಾರತದಲ್ಲಿ ಸಮುದಾಯದ ಜೀವನಕ್ಕೆ ಅಗತ್ಯವಾದ ಸರಬರಾಜು ಮತ್ತು ಸೇವೆಗಳನ್ನು ಅಡ್ಡಿಪಡಿಸುವ ಪಿತೂರಿ ಮತ್ತು ಇಂತಹ ಅಕ್ರಮ ವಿದೇಶಿ ನಿಧಿಯ ಮೂಲಕ ರೈತರ ಪ್ರತಿಭಟನೆಯನ್ನು ದೀರ್ಘಗೊಳಿಸುವ ಮೂಲಕ ಆಸ್ತಿ ಹಾನಿ ಮತ್ತು ನಾಶಕ್ಕೆ ಪ್ರಚೋದನೆ ” ನೀಡಲಾಗಿದೆ ಎಂದು ಎಫ್ಐಆರ್ ಆರೋಪಿಸಿದೆ. ಮುಂದುವರೆದು “ಭಾರತದ ಅರ್ಥವ್ಯವಸ್ಥೆಗೆ ನೂರಾರು ಕೋಟಿಗಳಷ್ಟು ಅಪಾರ ನಷ್ಟವನ್ನು ಉಂಟುಮಾಡುವ ಮತ್ತು ಭಾರತದಲ್ಲಿ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟುಮಾಡುವ ಉದ್ದೇಶದಿಂದ ರೈತರ ಆಂದೋಲನವನ್ನು ಬೆಂಬಲಿಸುವ, ಧನಸಹಾಯ ಮಾಡುವ ಉದ್ದೇಶಕ್ಕಾಗಿ ಪರಸ್ಪರ ಉತ್ತೇಜಿಸುವುದು, ಬೆಂಬಲಿಸುವುದು ಈ ನಂಟಿನ ಉದ್ದೇಶವಾಗಿತ್ತು. ಎಂದೂ ಎಫ್‍ಐಆರ್ ಆರೋಪಿಸಿದೆ.
ಇದನ್ನು ಸಂಪೂರ್ಣವಾಗಿ ನಿರಾಕರಿಸುತ್ತ ಎಸ್.ಕೆ.ಎಂ., ರೈತರ ಆಂದೋಲನವು 1857 ಮತ್ತು ವಿದೇಶಿ ಲೂಟಿಯ ವಿರುದ್ಧದ ಸ್ವಾತಂತ್ರ್ಯ ಚಳುವಳಿಯಂತಹ ಬದ್ಧತೆಯುಳ್ಳ, ದೇಶಪ್ರೇಮಿ ಚಳುವಳಿ ಎಂದು ಹೇಳಿದೆ. ಕೃಷಿಗೆ ಸರ್ಕಾರದ ಬೆಂಬಲವನ್ನು ಹಿಂತೆಗೆದುಕೊಳ್ಳಲು ಮತ್ತು ಕೃಷಿ, ಮಂಡಿಗಳು ಮತ್ತು ಆಹಾರ ವಿತರಣೆಯನ್ನು ಅದಾನಿ, ಅಂಬಾನಿ, ಟಾಟಾ, ಕಾರ್ಗಿಲ್, ಪೆಪ್ಸಿ, ವಾಲ್ಮಾರ್ಟ್, ಬೇಯರ್, ಅಮೆಜಾನ್ ಮತ್ತು ಇತರರ ನೇತೃತ್ವದ ಕಾರ್ಪೊರೇಟ್‍ಗಳಿಗೆ ಹಸ್ತಾಂತರಿಸುವ 3 ಕೃಷಿ ಕಾನೂನುಗಳ ನೀಚ ಯೋಜನೆಯನ್ನು ಅದು ಸರಿಯಾಗಿಯೇ ಗ್ರಹಿಸಿದೆ ಎಂದು ಈ ಅಭಿಯಾನಕ್ಕೆಂದು ಎಸ್.ಕೆ.ಎಂ. ಪ್ರಕಟಿಸಿರುವ ಕರಪತ್ರ ಹೇಳಿದೆ.
ಇದನ್ನೂ ಓದಿ: ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್ ಆರೋಪ
ಕರಪತ್ರ ಮುಂದುವರೆದು “3 ಕೃಷಿ ಕಾನೂನುಗಳು ದೇಶದ ಮೇಲೆ ಹೇರಲ್ಪಟ್ಟವು, ಕಾಂಟ್ರಾಕ್ಟ್ ಕಾಯ್ದೆಯು ಕಾರ್ಪೊರೇಟ್ ಗಳು ಖರೀದಿಸುವ ಬೆಳೆಗಳನ್ನೇ ಬೆಳೆಯಲು, ದುಬಾರಿ ಲಾಗುವಾಡುಗಳನ್ನು (ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು, ಇಂಧನ, ನೀರಾವರಿ, ತಂತ್ರಜ್ಞಾನ, ಸೇವೆಗಳು) ಖರೀದಿಸಲು ಮತ್ತು ತಮ್ಮ ಬೆಳೆಗಳನ್ನು ಕಾರ್ಪೊರೇಟ್‍ಗಳಿಗೆ ಮಾರಲು ಬದ್ಧಗೊಳಿಸಿತು; ಮಂಡಿಕಾಯ್ದೆ ಆನ್‌ಲೈನ್ ನೆಟ್‌ವರ್ಕಿಂಗ್ ಮತ್ತು ಖಾಸಗಿ ಹಗೇವುಗಳೊಂದಿಗೆ ಕಡಿಮೆ ಬೆಲೆಯಲ್ಲಿ ಬೆಳೆ ವ್ಯಾಪಾರದಲ್ಲಿ ಪ್ರಾಬಲ್ಯ ಸಾಧಿಸಲು ದೊಡ್ಡ ಕಂಪನಿಗಳ ನಂಟಿಗೆ ಅವಕಾಶ ಕೊಡುವುದಕ್ಕಾಗಿ ಸರ್ಕಾರಿ ಕಾರ್ಯಾಚರಣೆ, ಸರ್ಕಾರಿ ಸಂಗ್ರಹಣೆ ಮತ್ತು ಬೆಲೆ ನಿಗದಿಯನ್ನು (ಕನಿಷ್ಟ ಬೆಂಬಲ ಬೆಲೆ)) ನಿಷೇಧಿಸಿತು. ಅಗತ್ಯ ಸರಕುಗಳ ತಿದ್ದುಪಡಿ ಕಾಯಿದೆಯು ಕಳ್ಳದಾಸ್ತಾನುಗಾರರಿಗೆ ಮತ್ತು ಕಾಳಸಂತೆಕೋರರಿಗೆ ಸ್ವಾತಂತ್ರ್ಯವನ್ನು ನೀಡಿತು” ಎಂದು ವಿಶ್ಲೇಷಿಸಿದೆ. ನ್ಯೂಸ್ ಕ್ಲಿಕ್
“ಭಾರತದ ರೈತರು ಈ ಕುತಂತ್ರವನ್ನು ಅರಿತುಕೊಂಡರು. ಅವರು ಆರ್‌ಎಸ್‌ಎಸ್-ಬಿಜೆಪಿ -ಕಾರ್ಪೊರೇಟ್‍ಗಳ ಭಾರತದ ಜನರನ್ನು ಆಹಾರ ಭದ್ರತೆಯಿಂದ ವಂಚಿತಗೊಳಿಸುವ, ರೈತರನ್ನು ದರಿದ್ರರಾಗಿಸುವ, ಕಾರ್ಪೊರೇಟ್‌ಗಳ ಅನುಕೂಲಕ್ಕೆ ತಕ್ಕಂತೆ ಬೆಳೆ ಪದ್ಧತಿಯನ್ನು ಬದಲಾಯಿಸುವ ಮತ್ತು ಭಾರತದ ಆಹಾರ ಸಂಸ್ಕರಣಾ ಮಾರುಕಟ್ಟೆಗೆ ಬಹುರಾಷ್ಟ್ರೀಯ ಕಂಪನಿಗಳ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಯೋಜನೆಯನ್ನು ಬಯಲಿಗೆಳೆದರು. ಅವರು ಒಂದಾಗಿ ಎದ್ದು ನಿಂತರು, ಪ್ರಕ್ಷುಬ್ಧ ಸಾಗರದಲ್ಲಿ ಅಲೆಯಂತೆ ಎದ್ದು ಬಂದರು, ದಿಲ್ಲಿಯನ್ನು ಸುತ್ತುವರೆದರು ಮತ್ತು ಮೊಂಡು ಮೋದಿ ಸರ್ಕಾರ ಮಣಿಯುವಂತೆ ಮಾಡಿದರು”ಎಂದು ಈ ಕರಪತ್ರ ನೆನಪಿಸುತ್ತಿದೆ. ನ್ಯೂಸ್ ಕ್ಲಿಕ್
“ಈ ಪ್ರಕ್ರಿಯೆಯಲ್ಲಿ ರೈತರು ಜಲಫಿರಂಗಿ, ಅಶ್ರುವಾಯು, ಶೆಲ್ ದಾಳಿ, ಬೃಹತ್ ಕಂಟೈನರ್‌ಗಳೊಂದಿಗೆ ರಸ್ತೆ ತಡೆ, ಆಳವಾಗಿ ಅಗೆದ ರಸ್ತೆ ಗುಂಡಿಗಳು, ಲಾಠಿ ಪ್ರಹಾರ, ಚಳಿ ಮತ್ತು ಬಿಸಿಲ ಬೇಗೆಯನ್ನು ಎದುರಿಸಿದರು. 13 ತಿಂಗಳುಗಳಲ್ಲಿ ಅವರು 732 ಹುತಾತ್ಮರ ಬಲಿ ನೀಡಿದರು. ಅವರು ಭಾರತದ ಅತ್ಯಂತ ಅಸಹಾಯಕ ಮತ್ತು ವಂಚಿತ ವರ್ಗಗಳಿಗೆ ಮತ್ತು ಮಾಧ್ಯಮಗಳು ಮತ್ತು ನ್ಯಾಯಾಲಯಗಳಲ್ಲಿ ನ್ಯಾಯಕ್ಕೆ ದನಿ ನೀಡಿದರು. ಇದು ಸಾಮ್ರಾಜ್ಯಶಾಹಿ ಶೋಷಕರ ಹಿತಾಸಕ್ತಿಗಳನ್ನು ಪೂರೈಸುವ ಒಂದು ಫ್ಯಾಸಿಸ್ಟ್ ಸರ್ಕಾರದ ದಮನವನ್ನೂ ಎದುರಿಸಿದ ಒಂದು ಅತ್ಯುನ್ನತ ಗುಣಮಟ್ಟದ ದೇಶಪ್ರೇಮಿ ಆಂದೋಲನವಾಗಿತ್ತು” ಎಂದಿರುವ ಎಸ್.ಕೆ.ಎಂ., “ಭಾರತೀಯ ರೈತರು 140 ಕೋಟಿ ಜನರಿಗೆ ಉಣಬಡಿಸುತ್ತಾರೆ. ಅವರು 68.6% ಜನಸಂಖ್ಯೆಗೆ ಜೀವನಾಧಾರ ಮತ್ತು ಕೆಲಸವನ್ನು ಒದಗಿಸುತ್ತಾರೆ. ಕೃಷಿ ಮೂಲಸೌಕರ್ಯಗಳಲ್ಲಿ ಸರ್ಕಾರದ ಹೂಡಿಕೆ, ಲಾಭದಾಯಕ ಕೃಷಿಗೆ ಉತ್ತೇಜನ, ಹಳ್ಳಿಯ ಬಡವರ ಜೀವನದ ಅಭಿವೃದ್ಧಿ ಮತ್ತು ಆಧುನಿಕ ಆಹಾರ ಸಂಸ್ಕರಣೆ, ಮಾರುಕಟ್ಟೆ ಮತ್ತು ಗ್ರಾಹಕ ಜಾಲವನ್ನು ಸುಗಮಗೊಳಿಸುವುದು ಮತ್ತು ರೈತ-ಕಾರ್ಮಿಕ ಸಹಕಾರ ಸಂಘಗಳ ಸಾಮೂಹಿಕ ಮಾಲೀಕತ್ವ ಮತ್ತು ನಿಯಂತ್ರಣದಡಿಯಲ್ಲಿ ಸುರಕ್ಷಿತಗೊಳಿಸುವುದು ಜನರ ಆರ್ಥಿಕತೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತದೆ. ಇದು ಭಾರತವನ್ನು ಮತ್ತು ಭಾರತದ ಜನರನ್ನು ಶ್ರೀಮಂತರನ್ನಾಗಿ ಮಾಡುತ್ತದೆ” ಎಂದು ಹೇಳಿದೆ. ನ್ಯೂಸ್ ಕ್ಲಿಕ್
ಆದಾಗ್ಯೂ, ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಸೇವೆಯಲ್ಲಿ, ಮೋದಿ ಸರ್ಕಾರವು ರೈತರ ಮೇಲೆ ಮತ್ತೊಂದು ದಾಳಿಯನ್ನು ಪ್ರಾರಂಭಿಸಿದೆ. ಅದು ಪ್ರಜಾಸತ್ತಾತ್ಮಕವಲ್ಲದ ಕಾನೂನಾದ ಯು.ಎ.ಪಿ.ಎ.ಯನ್ನು, ನಾಗರಿಕರನ್ನು ಭಯೋತ್ಪಾದಕರು ಎಂದು, ಆಮೂಲಕ ನಿಸ್ಸಂಶಯವಾಗಿ ರಾಷ್ಟ್ರ-ವಿರೋಧಿಗಳೆಂದು ಆರೋಪಿಸಲು, ಆ ಆರೋಪವನ್ನು ದಶಕಗಳ ವರೆಗೂ ಸಾಬೀತುಪಡಿಸದೆ, ಜಾಮೀನು ಸಹ ನಿರಾಕರಿಸಲು ಸರ್ಕಾರಕ್ಕೆ ಅವಕಾಶ ನೀಡುವ ಕಾಯ್ದೆಯನ್ನು ಬಳಸಿದೆ ಎಂದು ಎಸ್.ಕೆ.ಎಂ.ನ ಈ ಅಭಿಯಾನದ ಕರಪತ್ರ ಹೇಳುತ್ತದೆ. ನ್ಯೂಸ್ ಕ್ಲಿಕ್
ರೈತರ ಆಂದೋಲನವನ್ನು ಬೆಂಬಲಿಸಿ ಬರೆದ ನ್ಯೂಸ್‌ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ಅವರು ಯುಎಪಿಎಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನ್ಯೂಸ್‌ಕ್ಲಿಕ್ ನಿಜವಾದ ಮಾಧ್ಯಮ ಮಾಡಬೇಕಾದ ಕರ್ತವ್ಯವನ್ನು ಮಾತ್ರ ಮಾಡಿದೆ- ಅಂದರೆ ಸತ್ಯವನ್ನು ವರದಿ ಮಾಡುವುದು, ರೈತರ ಸಮಸ್ಯೆಗಳನ್ನು ಮತ್ತು ಒಗ್ಗಟ್ಟಿನ ಹೋರಾಟದ ಬಗ್ಗೆ ವರದಿ ಮಾಡುವುದು. ಬಿಜೆಪಿ ಸರ್ಕಾರವು ರೈತರ ಆಂದೋಲನ ಜನವಿರೋಧಿ, ರಾಷ್ಟ್ರವಿರೋಧಿ ಮತ್ತು ನ್ಯೂಸ್‌ಕ್ಲಿಕ್ ಮೂಲಕ ಭಯೋತ್ಪಾದಕ ನಿಧಿಯಿಂದ ಬೆಂಬಲಿತವಾಗಿದೆ ಎಂಬ ಸುಳ್ಳು ಕಥನವನ್ನು ಹರಡಲು ಈ ಪ್ರಹಸನಕಾರೀ ಎಫ್‌ಐಆರ್ ಅನ್ನು ಬಳಸುತ್ತಿದೆ. ಈ ಕಥನ ತಪ್ಪಾಗಿದೆ ಮತ್ತು ಚಳವಳಿಯನ್ನು ಕೆಟ್ಟದಾಗಿ ಚಿತ್ರಿಸಲು ಮತ್ತು ನಮ್ಮ ದೇಶದ ರೈತರ ಕೈಯಲ್ಲಿ ಅನುಭವಿಸಿದ ಅವಮಾನಕರ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಿಡಿಗೇಡಿತನದಿಂದ ಇದನ್ನು ಸೇರಿಸಲಾಗಿದೆ ಎಂದು ಎಸ್.ಕೆ.ಎಂ. ಕರಪತ್ರ ಹೇಳುತ್ತದೆ.
3 ಕರಾಳ ಕಾಯಿದೆಗಳನ್ನು ಹಿಂತೆಗೆದುಕೊಂಡ ಮೋದಿ ಸರ್ಕಾರ ಇದೀಗ ಮತ್ತೆ ರೈತರ ಚಳವಳಿಯ ಮೇಲೆ ವಿದೇಶಿ ನಿಧಿ ಮತ್ತು ಭಯೋತ್ಪಾದಕ ಶಕ್ತಿಗಳಿಂದ ಪ್ರಾಯೋಜಿತವಾಗಿದೆ ಎಂದು ಸುಳ್ಳು ಆರೋಪ ಹೊರಿಸುತ್ತಿದೆ! ಅದೇ ವೇಳೆಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕೃಷಿಯೊಳಕ್ಕೆ ಎಫ್‌ಡಿಐ, ವಿದೇಶಿ ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ಕಂಪನಿಗಳನ್ನು ಉತ್ತೇಜಿಸುತ್ತಿವೆ! ಅವರು ಭಾರತೀಯ ರೈತರನ್ನು ಖಂಡಿಸಲು ಮತ್ತು ನಾಶಮಾಡಲು ಆಳವಾಗಿ ಬದ್ಧರಾಗಿದ್ದಾರೆ. ರೈತರ ಅರ್ಥವ್ಯವಸ್ಥೆಯನ್ನು ಉಳಿಸಲು, ವಿದೇಶಿ ಲೂಟಿಯನ್ನು ತಡೆಗಟ್ಟಲು ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸಲು ಹಳ್ಳಿಯ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ತಾನು ಬದ್ಧ ಎಂದು ಎಸ್.ಕೆ.ಎಂ.ಬದ್ಧವಾಗಿದೆ.
ಅದರ ಪ್ರಮುಖ ಆಗ್ರಹಗಳೆಂದರೆ:
- ಎಲ್ಲಾ ಬೆಳೆಗಳಿಗೆ ಕಾನೂನು ಪ್ರಕಾರ ಖಾತರಿಪಡಿಸಿದ ಕನಿಷ್ಟ ಬೆಂಬಲ ಬೆಲೆಗಳನ್ನು ಸಿ2+50% ಸೂತ್ರದಂತೆ ಕೊಡಬೇಕು 2. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ತಿಂಗಳಿಗೆ ಕನಿಷ್ಠ ವೇತನ 26000ರೂ. ಖಾತ್ರಿಪಡಿಸಬೇಕು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ರೂ 2 ಲಕ್ಷ ಕೋಟಿಗಳನ್ನು ನೀಡುವ ಮೂಲಕ ಅದನ್ನು ಬಲಪಡಿಸಿ 200 ದಿನಗಳ ಕೆಲಸ ಮತ್ತು ರೂ.600 ದಿನಕೂಲಿಯನ್ನು ಖಾತ್ರಿಪಡಿಸಬೇಕು,
- ಖಾಸಗೀಕರಣ ಮತ್ತು ವಿದ್ಯುತ್ ವಲಯದ ಮೇಲಿನ ನಿಯಂತ್ರಣಗಳನ್ನು ತೆಗೆದು ಖಾಸಗೀಕರಿಸುವ ಗುರಿ ಹೊಂದಿರುವ ವಿದ್ಯುಚ್ಛಕ್ತಿ ಬಿಲ್ 2022 ನ್ನು ರದ್ದು ಮಾಡಬೇಕು, ರೈಲ್ವೆ, ವಿಮಾನಯಾನ, ಬಂದರುಗಳು, ಎಫ್‍ಸಿಐ, ವಿಮೆ, ಬ್ಯಾಂಕ್, ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಕ್ಷಣಾ ವಲಯವೂ ಸೇರಿದಂತೆ ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣ ಮತ್ತು ಗುತ್ತಿಗೆಕರಣವನ್ನು ನಿಲ್ಲಿಸಬೇಕು,
- ರೈತರು ಮತ್ತು ಕೃಷಿ ಕಾರ್ಮಿಕರ ಕುಟುಂಬಗಳಿಗೆ ಸಮಗ್ರ ಸಾಲಮನ್ನಾ ಮತ್ತು ಆಹಾರ ಭದ್ರತೆ, ಶಿಕ್ಷಣ, ಆರೋಗ್ಯ ಮತ್ತು ವಸತಿಗಳ ಲಭ್ಯತೆಯ ಹಕ್ಕಿನೊಂದಿಗೆ 10000 ರೂ.ಪೆನ್ಶನ್.
ಪ್ರಧಾನಿ ಮೋದಿಯವರು 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿನ ಯಾವುದೇ ಭರವಸೆಗಳನ್ನು ಜಾರಿಗೆ ತರದೆ ಭಾರತದ ರೈತರಿಗೆ ಮತ್ತು ಜನರಿಗೆ ಕ್ರೂರವಂಚನೆಯನ್ನು ಮಾಡಿದ್ದಾರೆ, ಇದೀಗ ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ದೇಶದ ರೈತರ ವಿರುದ್ಧ ಸುಳ್ಳು ಕಥನಗಳನ್ನು ಹರಡುವ ಮೂಲಕ ರೈತರ ಆಂದೋಲನವನ್ನು ಗುರಿಯಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ನಡೆದ ಎಸ್‌ಕೆಎಂ ಮಹಾಸಭೆಯು ತೀವ್ರ ಆಕ್ರೋಶ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು, ಸುಳ್ಳು ನ್ಯೂಸ್‌ಕ್ಲಿಕ್ ಎಫ್‌ಐಆರ್ ಅನ್ನು ತಕ್ಷಣವೇ ಹಿಂಪಡೆದು ಪತ್ರಕರ್ತರಾದ ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಬಿಡುಗಡೆ ಮಾಡುವಂತೆ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ನ್ಯೂಸ್ ಕ್ಲಿಕ್
ವಿಡಿಯೋ ನೋಡಿ:ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ