ಹಿಂದೂ ಅಲ್ಲಾ ಎಂಬ ಕಾರಣಕ್ಕೆ ಭರತನಾಟ್ಯ ಪ್ರದರ್ಶನಕ್ಕೆ ನಕಾರ

ತಿರುವನಂತಪುರ: ಕರ್ನಾಟಕದಲ್ಲಿ ಜಾತ್ರೆ, ಹಬ್ಬ ಮತ್ತು ದೇವಸ್ಥಾನಗಳ ಸುತ್ತಮುತ್ತ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ಒತ್ತಾಯಗಳ ಬೆನ್ನಲ್ಲೇ, ಕೇರಳದಲ್ಲಿ ಹಿಂದೂ ಅಲ್ಲ ಎಂಬ ಕಾರಣಕ್ಕೆ ದೇವಸ್ಥಾನದ ಉತ್ಸವವೊಂದರಲ್ಲಿ ಶಾಸ್ತ್ರೀಯ ನೃತ್ಯಗಾರ್ತಿಯೊಬ್ಬರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ.

ಮದ್ರಾಸ್ ವಿ.ವಿಯಿಂದ ಎಂ.ಎ ಭರತನಾಟ್ಯಂ ಕೋರ್ಸ್‌ನಲ್ಲಿ ಮೊದಲ ರ‍್ಯಾಂಕ್ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮಾನ್ಸಿಯಾ ವಿ.ಪಿ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ತ್ರಿಶ್ಶೂರು ಜಿಲ್ಲೆಯ ಇರಿಂಜಲಕುಡ್ಡದಲ್ಲಿರುವ ಕೂಡಲ್‌ಮಾಣಿಕ್ಯಂ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ವಿಚಾರದ ಬಗ್ಗೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ದೇವಸ್ಥಾನದ ಈ ನಿರ್ಧಾರಕ್ಕೆ ಕೇರಳದ ಮಾಜಿ ಆರೋಗ್ಯ ಸಚಿವೆ ಹಾಗೂ ಸಿಪಿಎಂ ಹಿರಿಯ ನಾಯಕಿ ಕೆ.ಕೆ ಶೈಲಜಾ ಅವರು ಸೇರಿದಂತೆ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಬ್ಬದ ಉತ್ಸವದ ಭಾಗವಾಗಿ ಏಪ್ರಿಲ್ 21ರಂದು ಮಾನ್ಸಿಯ ಅವರ ನೃತ್ಯ ಪ್ರದರ್ಶನ ನಿಗದಿಯಾಗಿತ್ತು. ಈ ಕುರಿತು ಜಾಹೀರಾತನ್ನು ದೇವಸ್ಥಾನ ಪ್ರಕಟಿಸಿತ್ತು. ಆದರೆ ಕೆಲ ದಿನಗಳ ಬಳಿಕ ಹಿಂದೂ ಧರ್ಮಕ್ಕೆ ಸೇರಿದವರು ಅಲ್ಲ ಎಂಬ ಕಾರಣಕ್ಕೆ ದೇವಸ್ಥಾನದಲ್ಲಿ ನೃತ್ಯಕ್ಕೆ ಅವಕಾಶ ನೀಡಲಾಗದು ಎಂದು ಮಾನ್ಸಿಯಾ ಅವರಿಗೆ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ದೇವಸ್ಥಾನದ ಸಂಪ್ರದಾಯದ ಪ್ರಕಾರ ಹಿಂದೂ ಧರ್ಮದ ನಂಬಿಕಸ್ತರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ ನೀಡಲಾಗುತ್ತದೆ. ನೃತ್ಯದ ವೇದಿಕೆ ದೇವಸ್ಥಾನದ ಒಳಗಿರುವ ಕಾರಣ ಮಾನ್ಸಿಯಾ ಅವರ ನೃತ್ಯಕ್ಕೆ ಅವಕಾಶ ನೀಡಲಾಗದು ಎಂದು ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ಇಂತಹದ್ದೆ ಅವಮಾನವನ್ನು ಮಾನ್ಸಿಯಾ ಎದುರಿಸಿದ್ದಾರೆ. ಅವರು ಮುಸ್ಲಿಮರಾಗಿದ್ದರಿಂದ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರದರ್ಶನ ನೀಡುತ್ತಾರೆ ಎಂಬ ಕಾರಣಕ್ಕಾಗಿ ಇಸ್ಲಾಮಿಕ್ ಧರ್ಮಗುರುಗಳ ಕೋಪ ಮತ್ತು ಬಹಿಷ್ಕಾರವನ್ನು ಎದುರಿಸಿದ್ದರು. ಸಂಗೀತಗಾರ ಶ್ಯಾಮ್ ಕಲ್ಯಾಣ್ ಅವರನ್ನು ಮದುವೆಯಾದ ನಂತರ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದರು. ಧರ್ಮದ ಹೆಸರಿನಲ್ಲಿ ನಾನು ಅವಮಾನಕ್ಕೆ ಒಳಗಾಗುತ್ತಿದ್ದೇನೆ. ನಾನು ಎಲ್ಲಿಗೆ ಹೋಗಬೇಕು,” ಎಂದು ಅವರು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *