ಪಾಟ್ನಾ: ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಒಂದೂ ಒಂದೂವರೆ ವರ್ಷಗಳು ಬಾಕಿ ಇದ್ದು, ಬಿಹಾರ ರಾಜ್ಯದಲ್ಲಿ ಚುನಾವಣಾ ಕಾವು ಈಗಿನಿಂದಲೇ ಆರಂಭವಾಗಿದೆ. 2024ರ ಮಹಾ ಚುನಾವಣಾ ಯುದ್ಧ ಒಂದು ರೀತಿ ರಾಮಾಯಣ-ಮಹಾ ಭಾರತಕ್ಕೆ ಸಮಾ ಎಂದು ಹೋಲಿಸಿ ಭಿತ್ತಿಚಿತ್ರಗಳ ಪ್ರದರ್ಶಿಸಲಾಗಿದೆ.
ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಭಿತ್ತಿಚಿತ್ರ ಅಭಿಯಾನವನ್ನು ಆರಂಭ ಮಾಡಿದ್ದು, ರಾಮಾಯಣ ಹಾಗೂ ಮಹಾ ಭಾರತದ ಚಿತ್ರಗಳ ನಂತರ ಮೂರನೇ ಚಿತ್ರದಲ್ಲಿ ರಾಮನಾಗಿ ನಿತೀಶ್ ಕುಮಾರ್ ಹಾಗೂ ರಾವಣನಾಗಿ ನರೇಂದ್ರ ಮೋದಿ ಭಾವಚಿತ್ರಗಳನ್ನು ಅಳವಡಿಸಿ ಪ್ರದರ್ಶಿಸಲಾಗಿದೆ.
ಇದನ್ನು ಓದಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 50 ಸ್ಥಾನಕ್ಕೆ ಸೀಮಿತಗೊಳಿಸಿ: ನಿತೀಶ್ ಕುಮಾರ್
ಛಾಪ್ರಾದ ಆರ್‌ಜೆಡಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂನಂ ರೈ ಅವರ ಚಿತ್ರದೊಂದಿಗೆ ಮಹಾಘಟಬಂಧನ್ ಜಿಂದಾಬಾದ್ ಘೋಷಣೆಗಳನ್ನು ಬರೆಯಲಾಗಿದೆ. ಈ ಭಿತ್ತಿಚಿತ್ರವು ನೋಡುಗರ ಗಮನ ಸೆಳೆದಿದ್ದು ಮುಂಬರುವ ಚುನಾವಣೆಯ ಬಗ್ಗೆ ಭಾರೀ ಕುತೂಹಲ ಮೂಡಿದೆ.
ಪಾಟ್ನಾದ ಆರ್‌ಜೆಡಿ ಕಚೇರಿ ಮುಂಭಾಗ ಮತ್ತು ಆರ್‌ಜೆಡಿ ನಾಯಕಿ ರಾಬ್ಡಿ ದೇವಿ ನಿವಾಸದ ಮುಂಭಾಗ ಭಿತ್ತಿಚಿತ್ರಗಳನ್ನು ಹಾಕಲಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿಯ ಸೋಲು ಮತ್ತು ಮಹಾಮೈತ್ರಿಕೂಟದ ಗೆಲುವನ್ನು ವಿವರಿಸಲು ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಬಳಸಿಕೊಳ್ಳಲಾಗಿದೆ. ಜೊತೆಗೆ ನಿತೀಶ್ ಕುಮಾರ್ (ಮಹಾಘಟಬಂಧನ ನಾಯಕ) ಅವರನ್ನು ಭಗವಾನ್ ರಾಮ/ಕೃಷ್ಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ/ಕಂಸ ಎಂದು ಉಲ್ಲೇಖಿಸಲಾಗಿದೆ. ರಾಮಾಯಣದಲ್ಲಿ ರಾಮ ರಾವಣನನ್ನು ಹೇಗೆ ಸೋಲಿಸಿದನೊ ಮತ್ತು ಮಹಾಭಾರತದಲ್ಲಿ ಕೃಷ್ಣನು ಕಂಸನನ್ನು ಹೇಗೆ ಸೋಲಿಸಿದನೊ ಅದೇ ರೀತಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯನ್ನು ಸೋಲಿಸುತ್ತದೆ ಎಂದು ಚಿತ್ರಿಸಲಾಗಿದೆ.
ಇದನ್ನು ಓದಿ: ಬಿಜೆಪಿ ಏಕಾಧಿಪತ್ಯಕ್ಕೆ ಬ್ರೇಕ್ ಹಾಕುವುದೇ ಈ ಚುನಾವಣೆಗಳು?
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮೃತುಂಜಯ್ ತಿವಾರಿ, ಭಿತ್ತಿಚಿತ್ರಗಳನ್ನು ಅಳವಡಿಸಿರುವ ಬಗ್ಗೆ ನಮಗೆ ತಿಳಿದಿಲ್ಲ. ಇದನ್ನು ಆರ್‌ಜೆಡಿ ಅಧಿಕೃತಗೊಳಿಸಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ನಮ್ಮ ಗುರಿ. ಅದರ ತಯಾರಿ ಬಿಹಾರದಿಂದಲೇ ಆರಂಭವಾಗಲಿದೆ. ಎಲ್ಲಾ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿ, ಬಡವರು, ಯುವಕರು ಮತ್ತು ರೈತರ ವಿರುದ್ಧದ ಪಕ್ಷ, ನಮ್ಮದು ಬಿಜೆಪಿ ವಿರುದ್ಧದ ಹೋರಾಟ ಎಂದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ