ರೈತರ ಪ್ರತಿಭಟನೆಗಳು ಮತ್ತು ಇಂತಹ ಇತರ ಪ್ರತಿಭಟನೆಗಳು ತನ್ನನ್ನು ಆವರಿಸಿಕೊಳ್ಳುತ್ತಿರುವುದನ್ನು ಕಾಣುತ್ತಿರುವ ಸರಕಾರ ಇವನ್ನೆಲ್ಲ ವರದಿಮಾಡದಂತೆ ತಡೆದರೆ ಅವೆಲ್ಲ ನಿಂತು ಹೋಗುತ್ತವೆ ಎಂಬ ಯೋಚನೆಯಿಂದ ನ್ಯುಸ್‌ಕ್ಲಿಕ್‌ನಂತಹ ದನಿಗಳನ್ನು ಅಡಗಿಸುವ ಕೆಲಸಕ್ಕೆ ಕೈಹಾಕಿದೆ ಎಂಬುದು ಸ್ಪಷ್ಟ. ಇದೇ ಇ.ಡಿ.ದಾಳಿಯ ನಿಜವಾದ ಸಾರ.
ಫೆಬ್ರುವರಿ 8,2021ರ ಮುಂಜಾನೆ. ಜಾರಿ ನಿರ್ದೇಶನಾಯ(ಇ.ಡಿ.)ದ ಹತ್ತಾರು ಮಂದಿ ದಿಲ್ಲಿಯ ಎಂಟು ಸ್ಥಳಗಳಿಗೆ ಬಂದರು, ಏಕಕಾಲದಲ್ಲಿ ದಾಳಿ ಆರಂಭಿಸಿದರು. ಇವೆಲ್ಲವೂ ಸ್ವತಂತ್ರ ಸುದ್ದಿ ವೆಬ್ ತಾಣ ‘ನ್ಯುಸ್‌ಕ್ಲಿಕ್‌ಗೆ ಸಂಬಂಧಪಟ್ಟವುಗಳು -ಈ ಸಂಸ್ಥೆಯ ಪ್ರಧಾನ ಕಚೇರಿ ಆವರಣ, ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ, ಸಂಪಾದಕ ಪ್ರಾಂಜಲ್ ಪಾಂಡೆ, ಪ್ರಖ್ಯಾತ ಲೇಖಕಿ ಗೀತಾ ಹರಿಹರನ್ ಮತ್ತು ಇತರ ಆಡಳಿತ ಹಾಗೂ ತಾಂತ್ರಿಕ ಸಿಬ್ಬಂದಿಗಳ ನಿವಾಸಗಳು.
ಎಲ್ಲರ ಫೋನುಗಳನ್ನು ತೆಗೆದುಕೊಂಡರು, ಯಾರೂ ಮನೆಯಿಂದ ಹೊರಹೋಗಬಾರದು ಎಂದರು, ಪ್ರಶ್ನೆಗಳ ಸುರಿಮಳೆಗರೆದರು-ಮೌಖಿಕ ಮತ್ತು ಲಿಖಿತ ಎರಡೂ. ಸತತ ವಿಚಾರಣೆಗಳ ಮೂಲಕ ಸುಸ್ತುಗೊಳಿಸುವುದೇ ಅವರ ಉದ್ದೇಶವಿದ್ದಂತಿತ್ತು.
ಇದನ್ನು ಓದಿ : ನ್ಯೂಸ್ ಕ್ಲಿಕ್ ಮೇಲೆ ಇಡಿ ದಾಳಿ : ವಿಮರ್ಶಾತ್ಮಕ ಪತ್ರಿಕೋದ್ಯಮವನ್ನು ಬೆದರಿಸುವ ಕ್ರಮಕ್ಕೆ ವ್ಯಾಪಕ ವಿರೋಧ
ದಾಳಿ ಇತರೆಲ್ಲ ಸ್ಥಳಗಳಲ್ಲಿ 36 ಗಂಟೆಗಳ ಕಾಲ ಮುಂದುವರೆದರೆ, ಪ್ರಬೀರ್ ಪುರಕಾಯಸ್ಥರ ನಿವಾಸದಲ್ಲಿ 113 ಗಂಟೆಗಳ ವರೆಗೆ, ಅಂದರೆ ಸುಮಾರು ಐದು ದಿನಗಳ ವರೆಗೆ ಮುಂದುವರೆಯಿತು. ಹೋಗುವಾಗ ವೈಯಕ್ತಿಕ ಲ್ಯಾಪ್‌ಟಾಪ್‌ಗಳು, ಫೋನುಗಳು, ದಸ್ತಾವೇಜುಗಳು ಮುಂತಾದವುಗಳನ್ನು ಒಯ್ದರು. ನ್ಯುಸ್‌ಕ್ಲಿಕ್ ಕಚೇರಿಯಲ್ಲಿ ಇದ್ದ ಫೈಲುಗಳು, ದಸ್ತಾವೇಜುಗಳನ್ನಲ್ಲದೆ ವಿವಿಧ ರೀತಿಗಳ ವೀಡಿಯೋ ಸಾಧನಗಳು, ಪಿಸಿಗಳು, ಲ್ಯಾಪ್‌ಟಾಪ್‌ಗಳು ಇತ್ಯಾದಿಗಳನ್ನೂ ಒಯ್ದರು.
ಈ ವಿಲಕ್ಷಣ ದಾಳಿಯ ಉದ್ದೇಶವೇನು?
ಇ.ಡಿ. ಎಲ್ಲರಿಗೂ ತಿಳಿದಿರುವಂತೆ ವಿವಿಧ ರೀತಿಗಳ ಆರ್ಥಿಕ ಅಪರಾಧಗಳ ತನಿಖೆ ಮಾಡುವುದಕ್ಕಾಗಿ ಇರುವ ಹಣಕಾಸು ಇಲಾಖೆಯ ಒಂದು ವಿಭಾಗ. ದಾಳಿಗೆ ಬಂದವರು ತಾವು ಪಿ.ಎಂ.ಎಲ್.ಎ.(ಕಪ್ಪು ಹಣವನ್ನು ಬಿಳಿ ಮಾಡುವುದನ್ನು ತಡೆಯುವ ಕಾಯ್ದೆ) 2002ರ ಉಲ್ಲಂಘನೆಯನ್ನು ತನಿಖೆ ಮಾಡುತ್ತಿದ್ದೇವೆ ಎಂದರು. ಅಂದರೆ ಕ್ರಿಮಿನಲ್ ಚಟುವಟಿಕೆಗಳಿಂದ ಬಂದ ಹಣವನ್ನು ಹೊಂದಿರುವುದು, ಮುಚ್ಚಿಡುವುದು ಅಥವ ಬಳಸಿರುವುದರ ತನಿಖೆ. ನ್ಯುಸ್‌ಕ್ಲಿಕ್ ಇಂತಹ ಕಾನೂನುಬಾಹಿರ ಹಣವನ್ನು ಬಳಸುತ್ತಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ, ಅದನ್ನು ಕಂಡು ಹಿಡಿಯಲು ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಿದ್ದೇವೆ ಎಂಬುದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಇ.ಡಿ. ಅಧಿಕಾರಿಗಳ ಅಧಿಕೃತ ವಿವರಣೆ.
ತಮ್ಮಲ್ಲಿ ಮುಚ್ಚುಮರೆ ಮಾಡುವಂತದ್ದೇನೂ ಇಲ್ಲ, ತಾವು ಯಾವುದೇ ಕಾಯ್ದೆಯನ್ನು ಉಲ್ಲಂಘಿಸಿಲ್ಲ, ತಮ್ಮ ಚಟುವಟಿಕೆಗಳಿಗೆ ಅನ್ವಯವಾಗುವ ಎಲ್ಲ ನಿಯಂತ್ರಣ ವಿಧಿನಿಯಮಗಳನ್ನು ಪಾಲಿಸಿದ್ದೇವೆ ಮತ್ತು ಈ ಬಗ್ಗೆ ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಎಂದು ನ್ಯುಸ್‌ಕ್ಲಿಕ್ ಸಾರ್ವಜನಿಕ ಹೇಳಿಕೆಗಳನ್ನು ಮತ್ತೆ-ಮತ್ತೆ ಕೊಟ್ಟಿದೆ.
ಇದನ್ನು ಓದಿ : ನ್ಯೂಸ್ ಕ್ಲಿಕ್ ಕಚೇರಿ ಹಾಗೂ ಸಿಬ್ಬಂದಿಗಳ ಮನೆ ಮೇಲೆ “ಇಡಿ” ದಾಳಿ! : ವ್ಯಾಪಕ ಖಂಡನೆ
ಆದರೆ ಇವೆಲ್ಲದರ ಮರೆಯಲ್ಲಿ ಈ ‘ತನಿಖೆ’ ಎಂಬುದರ ನಿಜ ಉದ್ದೇಶವನ್ನು ಕಾಣದಿರುವುದು ಸತ್ಯಕ್ಕೆ ಬಗೆವ ಅಪಚಾರವಾಗುತ್ತದೆ.
ವಾಸ್ತವ ಸಂಗತಿಯೆಂದರೆ ನರೇಂದ್ರ ಮೋದಿ ನೇತೃತ್ವದ ಪ್ರಸಕ್ತ ಸರಕಾರ ತಮ್ಮ ಧೋರಣೆಗಳಿಗೆ ಯಾವುದೇ ರೀತಿಯ ಟೀಕೆ ಮತ್ತು ವಿರೋಧವನ್ನು ದಮನ ಮಾಡಲು ಸರಕಾರೀ ಏಜೆನ್ಸಿಗಳನ್ನು ನಯವಾಗಿ, ನಿರ್ವಿಘ್ನತೆಯಿಂದ ಬಳಸುವ ವಿಜ್ಞಾನವನ್ನು ಸಿದ್ಧಿಸಿಕೊಂಡಿದೆ. ಕಳೆದ ಆರು ವರ್ಷಗಳಲ್ಲಿ ವ್ಯಕ್ತಿಗಳ ಮತ್ತು ಸಂಘಟನೆಗಳ ದನಿಯನ್ನು ಅಡಗಿಸಲು ಅಥವ ಭಯದ ವಾತಾವರಣ ಸೃಷ್ಟಿಸಲು ಮೋದಿ ಸರಕಾರ ತನ್ನ ಅಡಿಯಲ್ಲಿರುವ ಎಲ್ಲ ಸಂಸ್ಥೆಗಳನ್ನು ಬಳಸಿಕೊಂಡಿದೆ. ಸಿಬಿಐ, ಎನ್‌ಐಎ ಮುಂತಾದ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಮಾತ್ರವಲ್ಲ, ಇ.ಡಿ., ಆದಾಯ ತೆರಿಗೆ ವಿಭಾಗ ಮುಂತಾದ ಸರಕಾರೀ ವಿಭಾಗಗಳನ್ನು ಕೂಡ ಪ್ರತಿಪಕ್ಷಗಳ ರಾಜಕಾರಣಿಗಳನ್ನು, ಮತ್ತು ಭಿನ್ನ ಮತೀಯರನ್ನು ಮಾತ್ರವಲ್ಲ, ವಿವಿಧ ರಂಗಗಳ ಸಕ್ರಿಯ ಕಾರ್ಯಕರ್ತರನ್ನು, ಪ್ರತಿಭಟನಾಕಾರರನ್ನು, ಲೇಖಕರನ್ನು, ಪತ್ರಕರ್ತರನ್ನು ಬೆನ್ನಟ್ಟಲು, ಕಿರುಕುಳ ಕೊಡಲು ಬಳಸಿಕೊಂಡಿದೆ ಎಂಬುದು ಸರ್ವವಿದಿತ ಸಂಗತಿ.
ನ್ಯುಸ್‌ಕ್ಲಿಕ್ ಮೇಲೆ ಈ ದಾಳಿಯನ್ನು ಈ ಗಂಭೀರ ಸನ್ನಿವೇಶದ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಇದು ವಿಮರ್ಶಾತ್ಮಕ ದನಿಗಳನ್ನು ಅಡಗಿಸುವ ಘಟನಾವಳಿಗಳಲ್ಲಿ ಇನ್ನೊಂದು.
ನ್ಯುಸ್‌ಕ್ಲಿಕ್ ಪಾತ್ರ : ನ್ಯುಸ್‌ಕ್ಲಿಕ್ ಕಳೆದ ಸುಮಾರು 12 ವರ್ಷಗಳಿಂದ ಅನ್ಯಾಯ ಮತ್ತು ಶೋಷಣೆಗಳ ವಿರುದ್ಧ ಎಲ್ಲ ಜನವಿಭಾಗಗಳ ಹೋರಾಟಗಳನ್ನು ಎತ್ತಿ ತೋರುವ ಸುದ್ದಿಗಳು, ವಿಡಿಯೋಗಳನ್ನು ಪ್ರಕಟಿಸುತ್ತ ಬಂದಿರುವ ಸುದ್ದಿ ವೆಬ್ ತಾಣ. ಮಲಹೊರುವವರು, ಅಂಗನವಾಡಿ ಕಾರ್ಯಕರ್ತೆಯರು, ತಮ್ಮ ಸಣ್ಣ ಹಿಡುವಳಿಗಳನ್ನು ದರೋಡಿಕೋರ ಕಳಗಳಿಂದ ಉಳಿಸಿಕೊಳ್ಳಲು ಹೋರಾಡುತಿರುವ ಬುಡಕಟ್ಟು ಜನಗಳು, ಗಣಿಗಳು, ಕಾಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಮೀನುಗಾರರು, ಅಲ್ಲದೆ ವಿದ್ಯಾರ್ಥಿಗಳು, ಅಧ್ಯಾಪಕರು ಮುಂತಾದ ಎಲ್ಲ ಜನವಿಭಾಗಗಳಿಗೆ ಸಂಬಂಧಪಟ್ಟ ಕಥನಗಳಿಗೆ ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಮರೆಯಲ್ಲೆ ಉಳಿದುಹೋಗಬಹುದಾಗಿದ್ದ ಹಲವು ಸಂಗತಿಗಳನ್ನು ಬೆಳಕಿಗೆ ತಂದಿದೆ.
ಇತ್ತೀಚೆಗೆ ನ್ಯುಸ್ ಕ್ಲಿಕ್ ರೈತರ ಹೋರಾಟಗಳನ್ನು ಎಳೆ-ಎಳೆಯಾಗಿ ದಾಖಲಿಸಿದೆ, ಪ್ರತಿಭಟನೆಗಳ ಸ್ಥಳಗಳಿಂದ ಅದು ಪ್ರಸಾರ ಮಾಡಿರುವ ಆಘಾತಕಾರಿ ಪರಿಸ್ಥಿತಿಗಳ ವೀಡಿಯೋಗಳನ್ನು, ಕರಾರುವಾಕ್ಕಾದ ವರದಿಗಳನ್ನು ಲಕ್ಷಾಂತರ ಮಂದಿ ನೊಡಿದ್ದಾರೆ, ಓದಿದ್ದಾರೆ. ಮೂರು ಕೃಷಿ ಕಾಯ್ದೆಗಳ ವಿರುದ್ಧ ಮತ್ತು ಬೆಂಬಲ ಬೆಲೆಗಳಿಗಾಗಿ ರೈತರ ದೃಢ ಸಂಕಲ್ಪವನ್ನು, ಸರಕಾರದ ವಿರುದ್ದ ಕ್ರೋಧವನ್ನು ಅದು ಬಿಂಬಿಸಿದೆ.
ಇದನ್ನು ಓದಿ : ಗೋದಿ ಮೀಡಿಯಾ ನೊಣಗಳು ಹೂವನ್ನು ತೊರೆದು ಹೊಲಸು ವಾಸನೆಯತ್ತ ಹಾರಿದ್ದೇಕೆ?
ರೈತರ ಪ್ರತಿಭಟನೆಗಳು ಮತ್ತು ಇಂತಹ ಇತರ ಪ್ರತಿಭಟನೆಗಳು ತನ್ನನ್ನು ಆವರಿಸಿಕೊಳ್ಳುತ್ತಿರುವುದನ್ನು ಕಾಣುತ್ತಿರುವ ಮೋದಿ ಸರಕಾರ ಇವನ್ನೆಲ್ಲ ವರದಿಮಾಡದಂತೆ ತಡೆದರೆ ಅವೆಲ್ಲ ನಿಂತು ಹೋಗುತ್ತವೆ ಎಂಬ ಯೋಚನೆಯಿಂದ ನ್ಯುಸ್‌ಕ್ಲಿಕ್‌ನಂತಹ ದನಿಗಳನ್ನು ಅಡಗಿಸುವ ಕೆಲಸಕ್ಕೆ ಕೈಹಾಕಿದೆ ಎಂಬುದು ಸ್ಪಷ್ಟ.
ಇದೇ ನ್ಯುಸ್‌ಕ್ಲಿಕ್ ಮೇಲೆ ಇ.ಡಿ.ದಾಳಿಯ ನಿಜವಾದ ಸಾರ.
ಬಹುಶಃ ದೊಡ್ಡ-ದೊಡ್ಡ ಕಾರ್ಪೊರೇಟ್ ಕುಳಗಳು ತಮ್ಮ ಶೋಷಣಾತ್ಮಕ ಚಟುವಟಿಕೆಗಳು, ಕಾರ್ಯವಿಧಾನಗಳನ್ನು ಬೆಳಕಿಗೆ ಬಾರದಂತೆ ತಡೆಯುವುದಕ್ಕಾಗಿಯೂ ಸರಕಾರದ ಮೇಲೆ ಒತ್ತಡ ಹಾಕುತ್ತಿರಬಹುದು. ಏಕೆಂದರೆ ನ್ಯುಸ್‌ಕ್ಲಿಕ್ ಇವನ್ನೆಲ್ಲ ಬಯಲಿಗೆ ತರುತ್ತಿದೆ. ಭಾರತದಲ್ಲಿ ಹೆಚ್ಚುತ್ತಿರುವ ಹೊಲಸು ಅಸಮಾನತೆ, ಕೆಲವೇ ಕಾರ್ಪೊರೇಟ್‌ಗಳ ಬಳಿ ಸಂಪತ್ತಿನ ಶೇಖರಣೆ ಮತ್ತು ಸರಕಾರೀ ಧೋರಣೆಗಳ ಸಂಪೂರ್ಣ ಶಾಮೀಲು ಮುಖ್ಯಧಾರೆಯ ಮಾಧ್ಯಮಗಳ ಮೇಲೆ ಕಾರ್ಪೊರೇಟ್‌ಗಳ ಬಿಗಿ ಹತೋಟಿಯಿಂದಾಗಿ ಮತ್ತು ಅವುಗಳ ಸಂಪೂರ್ಣ ಮೌನದಿಂದಾಗಿ ಬೆಳಕಿಗೆ ಬರದಂತೆ ತಡೆಯುವದು ನ್ಯುಸ್‌ಕ್ಲಿಕ್‌ನಂತಹ ಸ್ವತಂತ್ರ ಸುದ್ದಿ ಸಂಸ್ಥೆಗಳಿಂದಾಗಿ ಸಾಧ್ಯವಾಗುತ್ತಿಲ್ಲ ಇದು ಅವರನ್ನು ರೇಗಿಸುತ್ತಿದೆ.
ಮಸಿ ಬಳೆವ ತಂತ್ರ
ನ್ಯುಸ್‌ಕ್ಲಿಕ್ ಪ್ರಕರಣದಲ್ಲಿ ಸರಕಾರದ ಕಾರ್ಯತಂತ್ರದ ಒಂದು ಪೂರ್ಣ ದೃಶ್ಯವೂ ಕಾಣ ಬಂದಿದೆ. ಇದು ಅದರ ಕಾರ್ಯತಂತ್ರದ ಅಭಿನ್ನ ಅಂಗ ಕೂಡ. ತಪ್ಪು ಕೃತ್ಯಗಳನ್ನು ಕಂಡು ಹಿಡಿಯಲೆಂಬ ದಾಳಿಗಳು ನಡೆಯುತ್ತಿದ್ದಂತೆಯೇ, ಕೆಲವು ‘ಮಾಧ್ಯಮ ಗುಂಪು’ಗಳಿಗೆ ಬೇಕೆಂದೇ ಕೆಲವು ಆಯ್ದ “ಮಾಹಿತಿ”ಗಳನ್ನು ಸೋರಿ ಹೋಗಲು ಬಿಡಲಾಗಿದೆ. ಕೆಲವು ವಿದೇಶಿ ಸಂಸ್ಥೆಗಳಿಂದ ನ್ಯುಸ್‌ಕ್ಲಿಕ್‌ಗೆ ಹಣ ವರ್ಗಾವಣೆಯಾಗುತ್ತಿದೆ, ಅಂದರೆ ದುಷ್ಟ ಉದ್ದೇಶಗಳಿಗಾಗಿ ಕೆಲವು ಸಂಶಯಾಸ್ಪದ ವ್ಯಕ್ತಿಗಳು ಈ ಮೂಲಕ ಭಾರತಕ್ಕೆ ಹಣ ಕಳಿಸುತ್ತಿದ್ದಾರೆ ಎಂಬರ್ಥ ಬರುವಂತಹ ಕತೆಗಳನ್ನು ಈ ಮಾಧ್ಮಮಗಳಲ್ಲಿ ಇ.ಡಿ.. ಮೂಲಗಳ ಹೆಸರಿನಲ್ಲಿ ಹರಿಯ ಬಿಡಲಾಗುತ್ತಿದೆ.
ತನಿಖೆ ಇನ್ನೂ ನಡೆಯುತ್ತಿರುವಾಗ, ಯಾರ ಮೆಲೂ ಆರೋಪ ಹಾಕಿರದಿರುವಾಗ ಇಂತಹ ವರದಿಗಳನ್ನು ಹರಡಿಸುತ್ತಿರುವುದು, ಅಲ್ಲದೆ ಇವೆಲ್ಲ ಬಹಿರಂಗವಾಗಿಯೇ ಆರೆಸ್ಸೆಸ್/ಬಿಜೆಪಿಯೊಂದಿಗಿರುವ ವಿವಿಧ ವೆಬ್ ತಾಣಗಳಲ್ಲಿ ಪ್ರಕಟಗೊಳ್ಳುತ್ತಿರುವುದು ಕೇವಲ ಆಕಸ್ಮಿಕವೇನಲ್ಲ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಇದು, ಸಾಕ್ಷ್ಯಗಳೇನೂ ಇಲ್ಲದಿದ್ದರೂ ತಮ್ಮ ಕ್ರಿಯೆಗಳಿಗೆ ಸಾರ್ವಜನಿಕರ ಸಮ್ಮತಿಯನ್ನು ಪಡೆಯುವಂತಹ ವಾತಾವರಣವನ್ನು ಸೃಷ್ಟಿ ಮಾಡಲು ಮೋದಿ ಸರಕಾರ ಈಗ ಅನುಸರಿಸುತ್ತಿರುವ ಒಂದು ಸಾಮಾನ್ಯ ವಿಧಾನ ತಾನೇ!
(ಪೀಪಲ್ಸ್ ಡೆಮಾಕ್ರಸಿ, ಫೆ.15-21, 2021ರಲ್ಲಿ ಪ್ರಕಟವಾಗಿರುವ ಸವೇರಾ ಅವರ ಲೇಖನದಿಂದ)