ಬಂಗಳೂರು: ನನ್ನೆ ಗುರುವಾರದಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನು ಅಂಗೀಕರಿಸಿದೆ. ಹೊಸ
ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಒಳಮೀಸಲಾತಿ ವರ್ಗೀಕರಣಕ್ಕೆ ಹೊಸ ಸಮೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ನಾಗಮೋಹನ್ ದಾಸ್ ಆಯೋಗವು ಈ ಸಂಬಂಧ ನಾಲ್ಕು ಪ್ರಮುಖ ಶಿಫಾರಸ್ಸುಗಳನ್ನು ಮಾಡಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು ಎಂದು ಹೇಳಿದೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 40 ದಿನದೊಳಗೆ ಹೊಸ ಸಮೀಕ್ಷೆಯನ್ನು ನಡೆಸಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಟ್ರಸ್ಟ್ ದಾಖಲೆ – ₹18,380 ಕೋಟಿ ಸಂಗ್ರಹ
ಈ ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕು. ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು, ಸಮೀಕ್ಷೆಗೆ ಅಗತ್ಯವಿರುವ ತರಬೇತಿ, ಸಂಪನ್ಮೂಲ ಕ್ರೋಢೀಕರಣಗಳ ಉಸ್ತುವಾರಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದು ಸೂಕ್ತ ಎಂದು ಆಯೋಗವು ಅಭಿಪ್ರಾಯಪಟ್ಟಿದೆ. ಈ ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆಯೇ ಈ ವರದಿಯಲ್ಲಿ ತಿಳಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವರ್ಗೀಕರಣಗೊಳಿಸಲಾಗುವುದು. ಬಳಿಲ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ ಎಂದು ವಿವರಿಸಿದ್ದಾರೆ.
ನಾಗಮೋಹನ್ ದಾಸ್ ಆಯೋಗದ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಈಗಾಗಲೇ ಅಂಗೀಕರಿಸಿದೆ. ಒಳಮೀಸಲಾತಿ ವರ್ಗೀಕರಣವನ್ನು ಶೀಘ್ರವಾಗಿ ಕೈಗೊಳ್ಳುವ ಸಂಬಂಧ, ಹೊಸ ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನು ಕೂಡ ನಾಗಮೋಹನ್ ದಾಸ್ ಸಮಿತಿಗೆ ವಹಿಸಲು ಸಚಿವ ಸಂಪುಟ ನಿರ್ಧರಿಸಿದೆ. ಈ ಸಮೀಕ್ಷಾ ಕಾರ್ಯವನ್ನು 60 ದಿನದೊಳಗೆ ಪೂರ್ಣಗೊಳಿಸಿ, ವರದಿ ಸಲ್ಲಿಸಲು ಅನುಕೂಲವಾಗುವಂತೆ ಸಮಿತಿಯ ಅವಧಿಯನ್ನು ಮತ್ತೆ ಮುಂದಿನ ಎರಡು ತಿಂಗಳವೆರೆಗೆ ವಿಸ್ತರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಶಿಷ್ಠ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಂಪುಟ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆಯೂ ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘ ಸಮಾಲೋಚನೆ ನಡೆಸಿದರು. ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳದೆ ಒಳಮೀಸಲಾತಿ ಅನುಷ್ಠಾನ ಅತಿ ಶೀಘ್ರದಲ್ಲಿ ಆಗಲಿದ್ದು, ಕೊಟ್ಟ ಮಾತಿನಂತೆ ನಡೆಯುತ್ತೇವೆ. ನಮ್ಮ ಸರ್ಕಾರ ಒಳಮೀಸಲಾತಿ ಅನುಷ್ಠಾನದಲ್ಲಿ ಬದ್ಧವಾಗಿದೆ ಎಂದಿದ್ದಾರೆ.
ಸಾಮಾಜಿಕ ನ್ಯಾಯದ ಅನುಷ್ಠಾನದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿಯ ಪರವಾಗಿ ನಿರ್ಣಯ ಕೈಗೊಂಡಿದ್ದೇವೆ. ಸಾಮಾಜಿಕ ನ್ಯಾಯವು ಹಾಗೆಯೇ ಬರುವುದಿಲ್ಲ, ಇಂತಹ ನಿರ್ಣಯಗಳನ್ನು ಕೈಗೊಳ್ಳಬೇಕು. ಅಲ್ಲದೆ ಒಳಮೀಸಲಾತಿ ವಿಷಯವು ಬಹಳ ಸೂಕ್ಷ್ಮವಾಗಿದ್ದು, ಈ ವರದಿಯ ಮೇಲೆ ಕೋರ್ಟ್‌ಗೆ ಹೋಗಬಾರದು ಎಂಬ ಉದ್ದೇಶದಿಂದ ನಾವು ಸರಿಯಾದ ಮಾಹಿತಿ ಸಂಗ್ರಹಿಸಿ ನಂತರ ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ನೋಡಿ: ಚಾತುರ್ವರ್ಣ ಪ್ರತಿಪಾದಿಸುವ ಆರೆಸ್ಸೆಸ್ ಗೆ ಜಾತಿ ವಿನಾಶ ಕುರಿತು ಮಾತನಾಡುವ ನೈತಿಕತೆ ಇದೆಯೇ? Janashakthi Media