ನಾ ದಿವಾಕರ
ನಾವು ಮೌನವಾಗಿದ್ದರೆ
ಅವರು ಕೈ ಎತ್ತುತ್ತಾರೆ
ಚಾಟಿ ಬೀಸುತ್ತಾರೆ
ಬಳಸಿ ಬಸವಳಿಸುತ್ತಾರೆ
ಅವರ ಬೈಗುಳಗಳಿಗೆ
ಪ್ರತಿಮೆ ರೂಪಕಗಳಾಗುತ್ತೇವೆ
ನಾವೆದ್ದು ನಿಲ್ಲದಿದ್ದರೆ ????
ನಾವು ನಿಷ್ಕ್ರಿಯರಾಗಿದ್ದರೆ
ಬೆತ್ತಲೆ ಮಾಡುತ್ತಾರೆ
ದೇಹಗಳ ಮಾರುತ್ತಾರೆ
ಘನತೆಯ ಒತ್ತೆ ಇಡುತ್ತಾರೆ
ಅವರ ಮಾರುಕಟ್ಟೆಗಳಿಗೆ
ನಾವು ಸರಕುಗಳಾಗುತ್ತೇವೆ
ನಾವೆದ್ದು ನಿಲ್ಲದಿದ್ದರೆ ????
ನಾವು ನಿರ್ಲಿಪ್ತರಾಗಿದ್ದರೆ
ಸಹನಶೀಲೆ ಎನ್ನುತ್ತಾರೆ
ಅಗ್ನಿಪರೀಕ್ಷೆಗೆ ಒಡ್ಡುತ್ತಾರೆ
ದಕ್ಷಿಣೆಗಾಗಿ ಖರೀದಿಸುತ್ತಾರೆ
ಅವರ ಯಜಮಾನಿಕೆಗೆ
ನಾವು ಅಡಿಯಾಳಾಗುತ್ತೇವೆ
ನಾವೆದ್ದು ನಿಲ್ಲದಿದ್ದರೆ ????
ನಾವು ದನಿ ಎತ್ತದಿದ್ದರೆ
ನಡುರಾತ್ರಿ ಸುಡುತ್ತಾರೆ
ದೇಹ ತುಂಡರಿಸುತ್ತಾರೆ
ಅಧ್ಯಾತ್ಮದಲಿ ತೇಲಿಸುತ್ತಾರೆ
ಅವರ ಬಲಿಪೀಠಗಳಲಿ
ನಾವು ಕುರಿಗಳಾಗುತ್ತೇವೆ
ನಾವೆದ್ದು ನಿಲ್ಲದಿದ್ದರೆ ????
ನಾವೆದ್ದು ನಿಲ್ಲದಿದ್ದರೆ !!!
ಭೂತ್ ಮಾಂಗೆ ಶಪಿಸುತ್ತಾಳೆ
ನಿರ್ಭಯ ರೋದಿಸುತ್ತಾಳೆ
ಬಿಲ್ಕಿಸ್ ಪರಿತಪಿಸುತ್ತಾಳೆ
ಫೂಲನ್ ಸಿಡಿದೇಳುತ್ತಾಳೆ;
ಅವರು ಸಂಭ್ರಮಿಸುತ್ತಾರೆ
ನಾವು ಇಲ್ಲವಾಗುತ್ತೇವೆ !!
ನಾವೆದ್ದು ನಿಲ್ಲದಿದ್ದರೆ
ಕಾಲವೂ ಕ್ಷಮಿಸುವುದಿಲ್ಲ !!!