ಧಾರ್ಮಿಕ ಭಾವನೆಗಳು ಮತ್ತು “ಗೋ ರಕ್ಷಣೆ” ರಾಜಕೀಯದ ಹೆಸರಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಕೇವಲ ರಾಜಕೀಯ ಚರ್ಚೆಗೆ ಸೀಮಿತವಾಗಿಲ್ಲ; ಅವು ಈಗ ಗ್ರಾಮೀಣ ಆರ್ಥಿಕತೆಯ ನಾಡಿಯನ್ನೇ ತಟ್ಟುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಜಾನುವಾರು ಮಾರಾಟ ಮತ್ತು ಗೋವಧೆಗೆ ಸಂಬಂಧಿಸಿದ ಹೊಸ ನಿಯಂತ್ರಣ ಕ್ರಮಗಳು ರೈತರು, ಹೈನುಗಾರರು, ಚರ್ಮೋದ್ಯಮ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳ ಬದುಕಿನ ಮೇಲೆಯೇ ದೊಡ್ಡ ಪರಿಣಾಮ ಬೀರುವ ಭೀತಿ ಮೂಡಿಸಿವೆ. “ಗೋ ರಕ್ಷಣೆ” ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯದ ಹೊರೆ ಕೊನೆಗೆ ರೈತರ ಭುಜಗಳ ಮೇಲೆಯೇ ಬೀಳುತ್ತಿದೆಯೇ ಎಂಬ ಪ್ರಶ್ನೆ ಈಗ ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಪಶ್ಚಿಮ ಬಂಗಾಳ
ಗುರುರಾಜ ದೇಸಾಯಿ
ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಜಾನುವಾರು ಮಾರಾಟ ಮತ್ತು ಗೋವಧೆಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದು ಗ್ರಾಮೀಣ ಆರ್ಥಿಕತೆಯ ಮೇಲೆಯೇ ಭಾರೀ ಪರಿಣಾಮ ಬೀರುತ್ತಿದೆ ಎಂಬ ಚರ್ಚೆ ಆರಂಭವಾಗಿದೆ. ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ನಿರ್ಧಾರಗಳು ವಾಸ್ತವದಲ್ಲಿ ಲಕ್ಷಾಂತರ ಜನರ ಬದುಕಿನ ಮೇಲೆ ನೇರ ಹೊಡೆತ ನೀಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಹೊಸ ನಿಯಮಗಳ ಪ್ರಕಾರ, 14 ವರ್ಷ ದಾಟಿದ ಹಸುಗಳನ್ನು ಮಾತ್ರ ವಧೆಗೆ ಅನುಮತಿಸಲಾಗುತ್ತದೆ. ಅದಕ್ಕೂ ಮುನ್ನ ಪುರಸಭೆ ಅಥವಾ ಪಂಚಾಯತ್ ಅಧ್ಯಕ್ಷರು ಹಾಗೂ ಸರ್ಕಾರಿ ಪಶುವೈದ್ಯರಿಂದ ಪ್ರಮಾಣಪತ್ರ ಕಡ್ಡಾಯವಾಗಿದೆ. ಮುಸ್ಲಿಂ ಸಮುದಾಯದ ಈದ್ ಹಬ್ಬದ ಮುನ್ನವೇ ಈ ನಿರ್ಬಂಧಗಳನ್ನು ಜಾರಿಗೊಳಿಸಿರುವುದು ರಾಜಕೀಯ ಉದ್ದೇಶಪೂರ್ವಕ ನಡೆ ಎಂಬ ಟೀಕೆಗಳು ಕೇಳಿ ಬರುತ್ತಿವೆ
ಗ್ರಾಮೀಣ ಬಂಗಾಳದಲ್ಲಿ ಪಶುಸಂಗೋಪನೆ ಕೇವಲ ಧಾರ್ಮಿಕ ವಿಷಯವಲ್ಲ; ಅದು ದೊಡ್ಡ ಮಟ್ಟದ ಆರ್ಥಿಕ ಚಟುವಟಿಕೆಯ ಭಾಗವಾಗಿದೆ. ಹೈನುಗಾರಿಕೆ, ಜಾನುವಾರು ವ್ಯಾಪಾರ, ಮೇವು ಉತ್ಪಾದನೆ, ಹಾಲು ಆಧಾರಿತ ಕೈಗಾರಿಕೆ, ಚರ್ಮೋದ್ಯಮ ಇವೆಲ್ಲವೂ ಪರಸ್ಪರ ಜೋಡಿಕೊಂಡಿರುವ ಜೀವನೋಪಾಯ ವ್ಯವಸ್ಥೆಗಳು. ಇದರಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಲಕ್ಷಾಂತರ ಜನರು ತೊಡಗಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳ
ರೈತರ ಪ್ರತಿಕ್ರಿಯೆ ಹೇಗಿದೆ?
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮತ್ತು ಹೈನುಗಾರರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಲು ಕೊಡುವುದನ್ನು ನಿಲ್ಲಿಸಿದ ಹಸುಗಳನ್ನು ಮಾರಾಟ ಮಾಡಿ ಹೊಸ ಹಸು ಖರೀದಿಸುವುದು, ಹಳೆಯ ಸಾಲ ತೀರಿಸುವುದು ಅಥವಾ ಮನೆಯ ತುರ್ತು ಖರ್ಚುಗಳನ್ನು ನಿರ್ವಹಿಸುವುದು ಗ್ರಾಮೀಣ ಆರ್ಥಿಕತೆಯ ಸಾಮಾನ್ಯ ಚಕ್ರವಾಗಿದೆ. ಆದರೆ ಈಗ ಸರ್ಕಾರದ ಹೊಸ ನಿಯಮಗಳು ಮತ್ತು ಗೋ ರಾಜಕೀಯದ ಸುತ್ತ ನಿರ್ಮಾಣವಾಗಿರುವ ಭೀತಿಯ ವಾತಾವರಣದಿಂದ ಈ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಗ್ರಾಮೀಣ ಮಾರುಕಟ್ಟೆಗಳಲ್ಲಿ ಈಗ ಜಾನುವಾರುಗಳ ಖರೀದಿ-ಮಾರಾಟವೇ ಕುಂಠಿತಗೊಂಡಿದೆ ಎನ್ನಲಾಗುತ್ತಿದೆ. ಗೋ ಕಳ್ಳಸಾಗಣೆ, ಗೋಹತ್ಯೆ ಎಂಬ ಆರೋಪಗಳ ಹೆಸರಿನಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸುತ್ತಿರುವ ಘಟನೆಗಳ ಭೀತಿ ರೈತರಲ್ಲಿದೆ. ಪರಿಣಾಮವಾಗಿ ಅನೇಕರು ಜಾನುವಾರುಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಹೆದರುತ್ತಿದ್ದಾರೆ. ಖರೀದಿದಾರರೂ ಮುಂದೆ ಬರುತ್ತಿಲ್ಲ.
ಕೆಲವು ಪ್ರದೇಶಗಳಲ್ಲಿ ಕಸಾಯಿಖಾನೆಗಳಿಗೆ ತರಲಾಗಿದ್ದ ವಯಸ್ಸಾದ ದನಗಳನ್ನು ಕೂಡ ಹಿಂತಿರುಗಿಸಲಾಗುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ. ಸರ್ಕಾರದ ನಿಯಮಗಳ ಗೊಂದಲ, ಸ್ಥಳೀಯ ಒತ್ತಡಗಳು ಮತ್ತು ಕಾನೂನು ಭೀತಿಯಿಂದ ಯಾರೂ ಅಪಾಯ ತೆಗೆದುಕೊಳ್ಳಲು ಸಿದ್ಧರಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ. ಇದು ನಿಜವಾಗಿದ್ದರೆ, ಅದರ ಅತ್ಯಂತ ದೊಡ್ಡ ಹೊರೆ ರೈತರ ಮೇಲೆಯೇ ಬೀಳುತ್ತದೆ.
ಏಕೆಂದರೆ ಹಾಲು ಕೊಡುವುದನ್ನು ನಿಲ್ಲಿಸಿದ ಅಥವಾ ವಯಸ್ಸಾದ ಹಸುಗಳನ್ನು ಸಾಕುವುದು ರೈತರಿಗೆ ಸುಲಭದ ವಿಷಯವಲ್ಲ. ಪ್ರತಿದಿನ ಮೇವು, ನೀರು, ಔಷಧಿ, ಆರೈಕೆ ಮಾಡಲು ಸಾಕಷ್ಟು ಹಣ ಖರ್ಚಾಗುತ್ತದೆ. ಆದರೆ ಅದರಿಂದ ಯಾವುದೇ ಆದಾಯ ಬರುತ್ತಿಲ್ಲ. ಈಗಾಗಲೇ ಬೆಲೆ ಏರಿಕೆ, ಸಾಲದ ಒತ್ತಡ, ಕೃಷಿ ವೆಚ್ಚದ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಸಣ್ಣ ರೈತರಿಗೆ ಇದು ಹೆಚ್ಚುವರಿ ಭಾರವಾಗಿದೆ.
ಹೈನುಗಾರರ ಪ್ರಕಾರ, “ಆದಾಯ ನಿಂತಿದೆ, ಆದರೆ ವೆಚ್ಚ ಮಾತ್ರ ಹೆಚ್ಚುತ್ತಿದೆ.” ಒಂದು ಹಸು ದಿನಕ್ಕೆ ಹಾಲು ಕೊಡದಿದ್ದರೂ ಅದರ ಮೇವು ಮತ್ತು ಆರೈಕೆಗೆ ಹಣ ಖರ್ಚಾಗಲೇಬೇಕು. ಗ್ರಾಮೀಣ ಕುಟುಂಬಗಳಲ್ಲಿ ಇದು ನೇರವಾಗಿ ಅಡುಗೆ ಮನೆಯ ಆರ್ಥಿಕತೆಯ ಮೇಲೆಯೇ ಪರಿಣಾಮ ಬೀರುತ್ತಿದೆ. ಅನೇಕ ಕುಟುಂಬಗಳು ಈಗ ಪಶುಸಂಗೋಪನೆ ವೃತ್ತಿಯನ್ನೇ ಬಿಟ್ಟು ಬೇರೆ ಕೆಲಸ ಹುಡುಕುವ ಪರಿಸ್ಥಿತಿಗೆ ತಳ್ಳಲ್ಪಡುತ್ತಿವೆ.
ಇದರಿಂದ ಮುಂದೆ ಇನ್ನೊಂದು ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ರೈತರು ವಯಸ್ಸಾದ ದನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅವುಗಳನ್ನು ಬೀದಿಗೆ ಬಿಡುವ ಘಟನೆಗಳು ಹೆಚ್ಚಾಗಬಹುದು. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕಂಡುಬಂದಂತೆ ಬೀದಿದನಗಳ ಸಂಖ್ಯೆ ಹೆಚ್ಚಾದರೆ, ಕೃಷಿ ಜಮೀನುಗಳಿಗೆ ಹಾನಿ, ರಸ್ತೆ ಅಪಘಾತಗಳು ಮತ್ತು ನಗರ-ಗ್ರಾಮ ಪ್ರದೇಶಗಳಲ್ಲಿ ಹೊಸ ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಳ್ಳುವ ಸಾಧ್ಯತೆಯಿದೆ.
ವಯಸ್ಸಾದ ಮತ್ತು ಉತ್ಪಾದಕತೆಯಿಲ್ಲದ ದನಗಳ ನಿರ್ವಹಣೆ ಹೇಗೆ? ಅದರ ವೆಚ್ಚವನ್ನು ಯಾರು ಹೊರುತ್ತಾರೆ? ರೈತರಿಗೆ ಸರ್ಕಾರ ಯಾವುದೇ ಪರಿಹಾರ ಅಥವಾ ಬೆಂಬಲ ನೀಡುತ್ತದೆಯೇ? ಎಂಬುದಾಗಿದೆ. ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿಲ್ಲದೆ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ಗ್ರಾಮೀಣ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳ
ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಬುಲ್ಡೋಜರ್ ಆಡಳಿತ? : ಬಡವರ ಬದುಕಿನ ಮೇಲೆ ದಾಳಿ

ಪರಿಣಾಮ ಕೇವಲ ರೈತರಿಗಷ್ಟೇ ಸೀಮಿತವಲ್ಲ
ಈ ಕ್ರಮಗಳ ಪರಿಣಾಮ ಬಹುಮಟ್ಟಿಗೆ ವ್ಯಾಪಿಸುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಗಳು ಕೇಳಿಬರುತ್ತಿವೆ. ಹೈನುಗಾರಿಕೆ ಕುಸಿದರೆ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಹಾಲಿನ ಬೆಲೆ ಏರಿಕೆಯಾಗುವುದರಿಂದ ಪನೀರ್, ಕಡಲೆ, ಸಿಹಿತಿಂಡಿಗಳಂತಹ ಡೈರಿ ಉತ್ಪನ್ನಗಳ ಬೆಲೆಯೂ ಏರಲಿದೆ.
ಬಂಗಾಳದ ಪ್ರಸಿದ್ಧ ಸಿಹಿತಿಂಡಿ ಉದ್ಯಮವೇ ಹಾಲಿನ ಆಧಾರಿತವಾಗಿದೆ. ಈ ವಲಯದಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಾರೆ. ಹೀಗಾಗಿ ಗೋ ರಾಜಕೀಯದ ಪರಿಣಾಮ ಆಹಾರ ಕೈಗಾರಿಕೆಯವರೆಗೂ ತಲುಪುವ ಭೀತಿ ವ್ಯಕ್ತವಾಗಿದೆ.
ಇನ್ನೊಂದು ದೊಡ್ಡ ಸಂಕಷ್ಟ ಚರ್ಮೋದ್ಯಮದ ಮೇಲೆ ಬೀಳುವ ಸಾಧ್ಯತೆಯಿದೆ. ಪೂರ್ವ ಭಾರತದ ಪ್ರಮುಖ ಚರ್ಮೋದ್ಯಮ ಕೇಂದ್ರವಾದ ಬಂಟಲ ಕೈಗಾರಿಕಾ ಪ್ರದೇಶಕ್ಕೆ ಪಶುಚರ್ಮದ ಪೂರೈಕೆ ಕಡಿಮೆಯಾಗುವ ಆತಂಕ ವ್ಯಕ್ತವಾಗಿದೆ. ಇದರಿಂದ ಸಾವಿರಾರು ಕಾರ್ಮಿಕರ ಉದ್ಯೋಗಕ್ಕೂ ಅಪಾಯ ಎದುರಾಗಬಹುದು.
ಬಿಜೆಪಿ ಇಂತಹ ವಿವಾದಗಳನ್ನು ಯಾಕೆ ಮುಂದಿಟ್ಟಿದೆ?
ರಾಜಕೀಯ ವಲಯದಲ್ಲಿ ಇದನ್ನು ಕೇವಲ ಆಡಳಿತಾತ್ಮಕ ಕ್ರಮವಾಗಿ ನೋಡಲಾಗುತ್ತಿಲ್ಲ. ಧಾರ್ಮಿಕ ಧ್ರುವೀಕರಣದ ಮೂಲಕ ರಾಜಕೀಯ ಲಾಭ ಪಡೆಯುವ ಹಿಂದುತ್ವ ರಾಜಕೀಯದ ಭಾಗವೆಂದು ವಿರೋಧ ಪಕ್ಷಗಳು ವಿಶ್ಲೇಷಿಸುತ್ತಿವೆ.
ಆರ್ಥಿಕ ಸಂಕಷ್ಟ, ನಿರುದ್ಯೋಗ, ಬೆಲೆ ಏರಿಕೆ ಮೊದಲಾದ ಮೂಲಭೂತ ಪ್ರಶ್ನೆಗಳಿಂದ ಜನರ ಗಮನ ಬೇರೆಡೆಗೆ ತಿರುಗಿಸಲು ಗೋ ರಾಜಕೀಯವನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ವಿಶೇಷವಾಗಿ “ಹಿಂದೂ ಭಾವನೆಗಳ ರಕ್ಷಣೆ” ಎಂಬ ಹೆಸರಿನಲ್ಲಿ ಗ್ರಾಮೀಣ ಸಮಾಜದಲ್ಲೇ ಧಾರ್ಮಿಕ ವಿಭಜನೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.
ಜಾನುವಾರು ವ್ಯಾಪಾರವನ್ನು ಮುಸ್ಲಿಂ ಸಮುದಾಯದೊಂದಿಗೆ ಕೊಂಡಿಹಾಕಿ ರಾಜಕೀಯ ಪ್ರಚಾರ ಮಾಡಲಾಗುತ್ತಿದ್ದರೂ, ವಾಸ್ತವದಲ್ಲಿ ಅದರ ಹೊಡೆತ ಹೆಚ್ಚಾಗಿ ಹಿಂದೂ ರೈತರು ಮತ್ತು ಹೈನುಗಾರರ ಮೇಲೆಯೇ ಬೀಳುತ್ತಿದೆ. ಏಕೆಂದರೆ ಗ್ರಾಮೀಣ ಬಂಗಾಳದಲ್ಲಿ ಪಶುಸಂಗೋಪನೆ ನಡೆಸುವವರಲ್ಲಿ ದೊಡ್ಡ ಪ್ರಮಾಣದವರು ಹಿಂದೂ ಸಮುದಾಯದವರೇ ಆಗಿದ್ದಾರೆ.
ಜೀವನೋಪಾಯ ವಿರುದ್ಧ ಮತಾಂಧ ರಾಜಕೀಯ
ಬಿಜೆಪಿ ಚುನಾವಣೆಗೆ ಮುನ್ನ ಉದ್ಯೋಗ, ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಜೀವನೋಪಾಯ ಆಧಾರಿತ ವಲಯಗಳ ಮೇಲೆಯೇ ನಿರ್ಬಂಧ ಹೇರಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ರೈಲ್ವೆ ನಿಲ್ದಾಣಗಳು ಮತ್ತು ಬೀದಿ ವ್ಯಾಪಾರಿಗಳ ವಿರುದ್ಧ ನಡೆಯುತ್ತಿರುವ ಕ್ರಮಗಳನ್ನೂ ಇದೇ ಸರಣಿಯ ಭಾಗವೆಂದು ಕಾಣಿಸುತ್ತಿದೆ. “ಜನರು ಭ್ರಷ್ಟರನ್ನು ಓಡಿಸಲು ಮತ ಹಾಕಿದ್ದರು; ತಮ್ಮ ಬದುಕೇ ಕಸಿದುಕೊಳ್ಳಲು ಅಲ್ಲ” ಎಂಬ ಅಸಮಾಧಾನ ಗ್ರಾಮೀಣ ಮತ್ತು ಬಡಜನರ ನಡುವೆ ಹೆಚ್ಚುತ್ತಿದೆ.
ಗೋವು ಕೇವಲ ಧಾರ್ಮಿಕ ಸಂಕೇತವಲ್ಲ; ಅದು ಲಕ್ಷಾಂತರ ಗ್ರಾಮೀಣ ಕುಟುಂಬಗಳ ಜೀವನೋಪಾಯದ ಭಾಗ. ಹೀಗಿರುವಾಗ ಭಾವನಾತ್ಮಕ ರಾಜಕೀಯದ ಒತ್ತಡದಲ್ಲಿ ರೂಪುಗೊಳ್ಳುವ ನೀತಿಗಳು ಆರ್ಥಿಕ ವಾಸ್ತವಗಳನ್ನು ಕಡೆಗಣಿಸಿದರೆ ಅದರ ಪರಿಣಾಮ ಅನೇಕ ಸಂಕಷ್ಟಗಳು ಸೃಷ್ಟಿಯಾಗಬಹುದು. ಹಾಲು ಉತ್ಪಾದನೆಯಿಂದ ಹಿಡಿದು ಚರ್ಮೋದ್ಯಮದವರೆಗೆ ಹಲವು ವಲಯಗಳು ಈಗಾಗಲೇ ಆತಂಕ ವ್ಯಕ್ತಪಡಿಸುತ್ತಿವೆ. “ಗೋ ರಕ್ಷಣೆ” ಎಂಬ ಹೆಸರಿನಲ್ಲಿ ರೈತರಿಗೆ ಉತ್ಪಾದಕತೆಯಿಲ್ಲದ ದನಗಳ ಹೊರೆಯನ್ನು ಹೊರುವ ಪರಿಸ್ಥಿತಿ ನಿರ್ಮಾಣವಾದರೆ, ಅದು ಕೇವಲ ರೈತರ ಸಂಕಷ್ಟವಲ್ಲ, ಗ್ರಾಮೀಣ ಆರ್ಥಿಕತೆಯ ಸಮಗ್ರ ಸಂಕಷ್ಟವಾಗಬಹುದು. ರಾಜಕೀಯ ಧ್ರುವೀಕರಣಕ್ಕಿಂತ ಜೀವನೋಪಾಯದ ಪ್ರಶ್ನೆಗಳಿಗೆ ಆದ್ಯತೆ ನೀಡಬೇಕು.
ಇದನ್ನೂ ನೋಡಿ : ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media
