ಬೆಂಗಳೂರು: ಮಹಾನಗರದಲ್ಲಿ ಶುಕ್ರವಾರ(ಜೂನ್ 17) ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಇಬ್ಬರು ಮರಣ ಹೊಂದಿದ್ದಾರೆ. 24 ವರ್ಷದ ಮಿಥುನ್ ಸಾಗರ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರೆ, ದೇವಸಂದ್ರ ವಾರ್ಡ್ನಲ್ಲಿ ವಾಸವಾಗಿದ್ದ ಕಾವೇರಿನಗರದ ಮುನಿಯಮ್ಮ (60) ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ನಗರದ ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಶುಕ್ರವಾರ ಮಹದೇವಪುರ ವಲಯದಲ್ಲಿ 90 ರಿಂದ 180 ಮಿಲಿಮೀಟರ್ವರೆಗೆ ಮಳೆಯಿಂದಾಗಿ 250ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆ.ಆರ್ ಪುರಂ ಭಾಗದಲ್ಲಿ ಮಳೆ ಆರ್ಭಟ ಜೋರಾಗಿತ್ತು. ಕಾವೇರಿ ನಗರದಲ್ಲಿ ಗೋಡೆ ಕುಸಿದಿದೆ. ಇದೇ ವೇಳೆ ಮುನಿಯಮ್ಮ ಮನೆಯಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಗೆ ವೈದೇಹಿ ಆಸ್ಪತ್ರೆಗೆ ಮುನಿಯಮ್ಮ ಮೃತದೇಹವನ್ನು ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಮಹದೇವಪುರ ವಲಯ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಚಲಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರೀ ಮಳೆಯಿಂದಾಗಿ ತಡರಾತ್ರಿ 12ರ ಸುಮಾರಿಗೆ ಕೆ ಆರ್ ಪುರದ ಗಾಯತ್ರಿ ಬಡಾವಣೆ ನೀರಿನಲ್ಲಿ ಮುಳುಗಿತ್ತು. ಈ ವೇಳೆ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಯುವಕ ಮಿಥುನ್ ಸಾಗರ್ ವಾಸವಿದ್ದ ಕಟ್ಟಡದ ಬಳಿ ತಡೆಗೋಡೆ ಬಿದ್ದು, ಆತನ ದ್ವಿಚಕ್ರ ವಾಹನ ನೀರಲ್ಲಿ ಕೊಚ್ಚಿ ಹೋಗುತ್ತಿತ್ತು. ತಕ್ಷಣ ಯುವಕ ದ್ವಿಚಕ್ರ ವಾಹನವನ್ನು ರಕ್ಷಿಸಲು ಹೋದಾಗ ನೀರಿನಲ್ಲಿನ ಕೊಚ್ಚಿಕೊಂಡು ಹೋಗಿದ್ದಾರೆ.
ತಕ್ಷಣವೇ ಅಗ್ನಿಶಾಮಕದಳ ಹಾಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿ ಎರಡು ತಂಡಗಳಾಗಿ ಯುವಕನ ಹುಡುಕಾಟ ನಡೆಸಿವೆ. ರಾಜಕಾಲುವೆಯ ಅಂಡರ್ ಪಾಸ್ ಓಪನ್ ಮಾಡಿ ರಬ್ಬರ್ ಬೋಟ್ ಮೂಲಕ ಶೋಧ ಕಾರ್ಯ ನಡೆದಿದೆ. ಮಳೆ ನೀರು ವೇಗವಾಗಿ ಹರಿಯುತ್ತಿರುವ ಹಿನ್ನೆಲೆ ಕಾರ್ಯಾಚರಣೆ ಅಡ್ಡಿಯಾಗಿದೆ.
ಮಳೆಯಿಂದಾಗಿ ಕೆ.ಆರ್ ಪುರಂನ ಕೃಷ್ಣ ಥಿಯೇಟರ್ ಗೋಡೆ ಕುಸಿದು 24 ಬೈಕ್ಗಳು ಜಖಂ ಗೊಂಡಿದೆ. ಸೆಕೆಂಡ್ ಶೋ ಸಿನಿಮಾ ನೋಡಲು ಜನರು ಆಗಮಿಸಿದ್ದು, ತಡೆಗೋಡೆ ಬಳಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಸುಮಾರು 11 ಗಂಟೆ ಸಮಯದಲ್ಲಿ ಗೋಡೆ ಕುಸಿದು ಬಿದ್ದಿದೆ.
40 ವರ್ಷದ ಹಳೆಯ ಚಿತ್ರಮಂದಿರವಾಗಿದ್ದು, ತಡೆಗೋಡೆ ಕುಸಿದು ಬಿದ್ದಿದೆ. ಮಾಲೀಕರು ಥಿಯೇಟರ್ ಸರಿಯಾಗಿ ನಿರ್ವಹಣೆ ಮಾಡದೇ ಇದ್ದಿದ್ದರಿಂದ ಘಟನೆ ಜರುಗಿದೆ ಎಂದು ಗಾಡಿ ಕಳೆದುಕೊಂಡ ಮಾಲೀಕರು, ಥಿಯೇಟರ್ನವರ ಜೊತೆ ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದರು.
ಮತ್ತೊಂದೆಡೆ ಕಲ್ಕೆರೆ ಗ್ರಾಮ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಸುಮಾರು 1 ಕಿ.ಮೀ.ವರೆಗೆ ನಿಂತಿದೆ. ಕೆ.ವಿ ಲೇಔಟ್ ಸಂಪೂರ್ಣ ಮುಳುಗಿದೆ. 20ಕ್ಕೂ ಹೆಚ್ಚು ಮನೆಗಳ ವಸ್ತುಗಳೆಲ್ಲಾ ನೀರು ಪಾಲಾಗಿದೆ. ರಾತ್ರಿಯಿಡೀ ನೀರು ಹೊರಹಾಕುವುದರಲ್ಲಿ ಜನ ಜಾಗರಣೆ ಮಾಡಿದ್ದರು.
ನಗರದ ಬನ್ನೇರುಘಟ್ಟ, ನೆಲಮಂಗಲ, ರಿಚ್ಮಂಡ್ ವೃತ್ತ, ಶಾಂತಿನಗರ, ಮೆಜೆಸ್ಟಿಕ್, ಎಂ.ಜಿ ರಸ್ತೆ, ಲಾಲ್ಬಾಗ್, ಬಸವನಗುಡಿ, ಜಯನಗರ, ಜೆ.ಪಿ ನಗರ, ಕೋರಮಂಗಲ, ಹಲಸೂರು, ಶೇಷಾದ್ರಿಪುರ, ಮಲ್ಲೇಶ್ವರ, ಸ್ವಾತಂತ್ರ್ಯ ಉದ್ಯಾನವನ, ಕೆ.ಆರ್.ವೃತ್ತ, ಕಾರ್ಪೋರೇಷನ್ ವೃತ್ತ, ಮೈಸೂರು ರಸ್ತೆ, ಜಯನಗರ, ಲಾಲ್ ಬಾಗ್ ಪ್ರದೇಶಗಳಲ್ಲಿ ರಾತ್ರೀ ಇಡೀ ಮಳೆ ಸುರಿದಿದೆ. ಇದರಿಂದ ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ರಾಜ್ಯ ರಾಜಧಾನಿಯ ಬಹುತೇಕ ಕಡೆಗಳಲ್ಲಿ ಸುರಿಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು . ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿ, ರಾತ್ರಿ ಮನೆಗೆ ತೆರಳುತ್ತಿರುವ ವಾಹನ ಸವಾರರು ಹೈರಾಣಾದರು.
ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ, ಸಚಿವ ಬೈರತಿ ಬಸವರಾಜ್ ಪರಿಶೀಲನೆ ನಡೆಸಿದರು. ಯಾರೂ ಭಯ ಪಡಬೇಡಿ. ಸರ್ಕಾರವಿದೆ ಎಂದು ತಿಳಿಸಿದರು. ಈ ಮಧ್ಯೆ ಕಳೆದ ತಿಂಗಳ 17ರಂದೇ ಹೊರಮಾವು ಸಾಯಿಲೇಔಟ್ ಮುಳುಗಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಸ್ಯೆಗಳ ಪರಿಹಾರಕ್ಕೆ ಜವಾಬ್ದಾರಿಯನ್ನು ಹಂಚಿಕೆ ಮಾಡಿದ್ದರು.