ಚಿಕ್ಕಮಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆಯುತ್ತಿದ್ದು, ಈ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು, ನಾಡಿನ ಸಾಕ್ಷಿ ಪ್ರಜ್ಞೆ, ಕನ್ನಡದ ಅಸ್ಮಿತೆ ಕುವೆಂಪು ಅವರಿಗೆ ಮಾಡಿದ ಅವಮಾನ, ತನ್ನ ಹುಟ್ಟಿನ ಕುರುಹನ್ನು ನಿರಾಕರಿಸಿ ಲಿಂಗದೀಕ್ಷೆ ಪಡೆದು ಕಾಯಕ ತತ್ವವನ್ನು ಬೋಧಿಸಿದ, ಸರ್ವ ಸಮಾನತೆಯನ್ನು ಸಾಕ್ಷೀಕರಿಸಿದ ಬಸವಣ್ಣರಿಗೆ ಉಪನಯನ ಮಾಡಿಸಿದಂತೆ ಪಠ್ಯವನ್ನು ತಿರುಚಿದ, ಅಂಬೇಡ್ಕರ್ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂಬ ಶಬ್ದವನ್ನೇ ತೆಗೆದು ಹಾಕಿದ ದುರುದ್ದೇಶಪೂರಿತ ಮರು ಪರಿಷ್ಕರಣೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಕ್ಯಾತನಬೀಡು ಪ್ರತಿಷ್ಠಾನ, ಸಂಗಮ ಪ್ರತಿಷ್ಠಾನ, ಮತ್ತು ಜನದನಿ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ಇತರ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳ ಸಹಯೋಗದಲ್ಲಿ ಚಿಕ್ಕಮಗಳೂರಿನ ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿತ್ತು. ವಿಶ್ವ ಪರಿಸರ ದಿನವೂ ಆಗಿದ್ದರಿಂದ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಸಮಾವೇಶದಲ್ಲಿ ಭಾಗವಹಿಸಿದ ಮಾತನಾಡಿದ ಗಣ್ಯರೆಲ್ಲರೂ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಯಾವ ನಿಯಮಗಳನ್ನು ಪಾಲಿಸದ, ಲಿಂಗತ್ವ ಸಮನ್ಯಾಯ, ಸಾಮಾಜಿಕ ನ್ಯಾಯಗಳನ್ನು ಕಾಲ ಕಸದಂತೆ ಕಂಡ ರೋಹಿತ್ ಚಕ್ರತೀರ್ಥರ ಸಮಿತಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ಯಾವ ಅರ್ಹತೆಯೂ ಇಲ್ಲವೆಂದು ಖಂಡಿಸಿದರು.
ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಜನರ ದಾರಿ ತಪ್ಪಿಸುತ್ತಿರುವ ಸರಕಾರದ ಸುಳ್ಳುಕೋರತನದ ಬಗ್ಗೆಯೂ ಬಯಲಿಗೆಳೆಯಲಾಯಿತು. ಸಮಿತಿಯ ವಿಸರ್ಜನೆ ಜೊತೆಯೇ ಪರಿಷ್ಕರಿಸಿದ ಪಠ್ಯವನ್ನೂ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಎರಡು ವರ್ಷಗಳ ಕಾಲ ಕೋವಿಡ್ ಕಾರಣದಿಂದ ಶಿಕ್ಷಣ ವಂಚಿತರಾದ ಸರಕಾರಿ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಕಲಿಯುವ ಮಕ್ಕಳಿಗೆ ಸರಕಾರ ಅನ್ಯಾಯ ಎಸಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಐಚ್ಛಿಕ ಭಾಷೆಗಳನ್ನು ಓದುವ ಮಕ್ಕಳಿಗೆ ಯಾವ ತೊಂದರೆಯೂ ಇಲ್ಲದೇ ಶಿಕ್ಷಣ ಸಿಗುವಾಗ ಅಂಚಿಗೆ ತಳ್ಳಲ್ಪಟ್ಟ ಮಕ್ಕಳಿಗೆ ಸರಕಾರವೇ ವಂಚನೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಲಾಯಿತು.
ಶಾಖಾ ಪಠ್ಯಗಳನ್ನು ಶಾಲಾ ಪಠ್ಯಗಳನ್ನಾಗಿಸುವ ಸಂಘ ಪರಿವಾರದ ಹುನ್ನಾರನ್ನು ಖಂಡಿಸಲಾಯಿತು. ತಮಗಾಗುತ್ತಿರುವ ಅನ್ಯಾಯದ ಅರಿವಿಲ್ಲದ ಪೋಷಕರಿಗೆ ಮತ್ತು ನಾಡಿನ ನಾಗರಿಕರಿಗೆ ಈ ಪಠ್ಯ ಪುಸ್ತಕ ರಾಜಕಾರಣವನ್ನು ಅರ್ಥ ಮಾಡಿಸಬೇಕಿದೆ. ಇದೊಂದು ಕನ್ನಡದ ಅಸ್ಮಿತೆಯ ಪ್ರಶ್ನೆಯೇ ಆಗಿದ್ದು ಜನಾಂದೋಲನವೇ ಇದಕ್ಕೆ ಇರುವ ದಾರಿ. ಜಾಗೃತ ನಾಗರಿಕರು ಕರ್ನಾಟಕ ಈ ಸಂಬಂಧ ಮಾಡಿದ ಗೊತ್ತುವಳಿಯನ್ನು ಮಂಡಿಸಿ ಅಂಗೀಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವೈ.ಎಸ್.ವಿ.ದತ್ತ, ಶಿಕ್ಷಣ ತಜ್ಞ ಬಿ.ಶ್ರೀಪಾದಭಟ್, ಚಿಂತಕರು ವಿಮಲಾ.ಕೆ.ಎಸ್, ಜನಪರ ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ್, ವಿಶ್ರಾಂತ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಎಚ್.ಎಂ.ರುದ್ರಸ್ವಾಮಿ, ರಂಗಕರ್ಮಿ, ಅಂಕಣಕಾರ ಬಿ.ಚಂದ್ರೇಗೌಡ, ಪಾಲ್ಗೊಂಡಿದ್ದರು.
ಸಭೆಯ ಅಧ್ಯಕ್ಷತೆಯನ್ನು ಜನದನಿ ಸಂಘಟನೆ ಸಂಚಾಲಕ ಬಿ.ಅಮ್ಜದ್ ವಹಿಸಿದ್ದರು. ಸಾಹಿತಿ ರವೀಶ್ ಕ್ಯಾತನಬೀಡು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಗತಿಪರ ಚಿಂತಕ ಮಂಜುನಾಥ್ ನಿರ್ವಹಣೆ ಮಾಡಿದರು.