ಮುಷ್ಕರ ಸಂದರ್ಭ ಕಾರ್ಮಿಕರ ಮೇಲೆ ಹೂಡಲಾದ ಪ್ರಕರಣಗಳು ಕೈಬಿಡುವಂತೆ ಸಾರಿಗೆ ನೌಕರರ ಆಗ್ರಹ

ಬೆಂಗಳೂರು: ಕಳೆದ ಆರು ತಿಂಗಳ ಹಿಂದೆ 2021ರ ಏಪ್ರಿಲ್‌ನಲ್ಲಿ ಸಾರಿಗೆ ನಿಗಮಗಳ ಕಾರ್ಮಿಕರು ನಡೆಸಿದ ಮುಷ್ಕರದ ನಂತರದಲ್ಲಿ ಸಾವಿರಾರು ಕಾರ್ಮಿಕರನ್ನು ವಜಾ, ಅಮಾನತು, ವರ್ಗಾವಣೆ ಹಾಗೂ ಸೆಕ್ಷನ್‌ 23ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕೆಂದು ಸಾರಿಗೆ ನೌಕರರು ಧರಣಿ ಸತ್ಯಾಗ್ರಹ ನಡೆಸಿದರು.

ನಗರದ ಪ್ರೀಡಂ ಪಾರ್ಕಿನಲ್ಲಿ ಜಮಾಯಿಸಿದ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಸಾವಿರಾರು ಕಾರ್ಮಿಕರಿಗೆ ನೋಟಿಸು ನೀಡಲಾಗಿದೆ ಅಲ್ಲದೆ ಅನಗತ್ಯವಾಗಿ ದಂಡ ವಸೂಲಿ ಮಾಡಲಾಗುತ್ತಿದೆ. ರಾಜ್ಯದ ಜನತೆಯ ದಿನನಿತ್ಯದ ಸಾರಿಗೆ ವ್ಯವಸ್ಥೆಯನ್ನು ಒದಗಿಸಲು ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಬದುಕು ಮಾತ್ರ ಸಂತೋಷ ಮತ್ತು ನೆಮ್ಮದಿಯಿಂದ ಕೂಡಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಇದನ್ನು ಓದಿ: ಜುಲೈ ತಿಂಗಳಲ್ಲಿ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ?

ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್‌ ಅವರು ಮಾತನಾಡಿ ʻಸಾರಿಗೆ ನೌಕರರು ಅತ್ಯಂತ ಕಠಿಣ ಸಂದರ್ಭದಲ್ಲಿಯೂ ರಾಜ್ಯದ ಕೋಟ್ಯಾಂತರ ಜನರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದಾರೆ. ಇಡೀ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಿಗಮಗಳೆಂದು ಪ್ರಶಂಸೆಗೆ ಪಾತ್ರವಾಗಿದೆ. ಇದು ಸಾಧ್ಯವಾಗಿರುವುದು, ಸಾರಿಗೆ ನಿಗಮಗಳ ಕಾರ್ಮಿಕರು, ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಒಟ್ಟಾರೆ ಶ್ರಮದ ಫಲವಾಗಿ ನೂರಾರು ಪ್ರಶಸ್ತಿಗಳನ್ನು ಗಳಿಸಲು ಸಾಧ್ಯವಾಗಿದೆ. ಸಾರಿಗೆ ನಿಗಮಗಳು ಇಂತಹ ಉನ್ನತಿ ಗಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿರುವ ಕಾರ್ಮಿಕರ ವೇತನಗಳು, ಮತ್ತಿತರೆ ಸೇವಾ ಸೌಲಭ್ಯಗಳು ಇಲ್ಲದಿರುವುದು ದುರಂತʼ ಎಂದು ಆರೋಪಿಸಿದರು.

ಸಂಘದ ರಾಜ್ಯ ಅಧ್ಯಕ್ಷರಾದ ಹೆಚ್‌.ಡಿ.ರೇವಪ್ಪ ಮಾತನಾಡಿ ʻ1996ರಿಂದ ಇಲ್ಲಿಯವರೆಗೂ ಕಾರ್ಮಿಕ ಸಂಘಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡಿಲ್ಲ. ಸರ್ಕಾರ ಮತ್ತು ಆಡಳಿತ ವರ್ಗದ ಏಕಪಕ್ಷೀಯ ನಿರ್ಧಾರಗಳಿಂದ ಕಾರ್ಮಿಕರ ವೇತನಗಳು, ಇಂಕ್ರಿಮೆಂಟ್‌ ಮತ್ತು ಇತರೆ ಆರ್ಥಿಕ ಸೌಲಭ್ಯಗಳು ಹಾಗೂ ಸೇವಾ ಸೌಲಭ್ಯಗಳು ಉತ್ತಮ ರೀತಿಯಲ್ಲಿ ಹೆಚ್ಚಳವಾಗಲಿಲ್ಲ. ಇದರಿಂದ ವೇತನ ತಾರತಮ್ಯ ವಿಪರೀತ ಹೆಚ್ಚಾಗಿದೆ. ಕಾರ್ಮಿಕರು ಮತ್ತು ಆಡಳಿತ ವರ್ಗದ ನಡುವೆ ಕೈಗಾರಿಕಾ ಬಾಂಧವ್ಯ ಉತ್ತಮವಾಗಿರಬೇಕೆಂಬ ದೃಷ್ಟಿಯಿಂದ ಕಾರ್ಮಿಕ ಸಂಘಗಳೊಂದಿಗೆ ಚರ್ಚಿಸಿ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡುವಂತೆ ಸಿಐಟಿಯು ಫೆಡರೇಷನ್‌ ಒತ್ತಾಯ ಮಾಡುತ್ತಲೇ ಬಂದಿದೆ. ಆದರೆ, ಅಂದಂದಿನ ಸರ್ಕಾರಗಳು ಮತ್ತು ಆಡಳಿತ ವರ್ಗಗಳು ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದೇವೆ. ಪ್ರಜಾಸತ್ತಾತ್ಮಕ ಆಡಳಿತವನ್ನು ಬಹುತೇಕ ಆಡಳಿತವನ್ನು ಬಹುತೇಕ ಇಲ್ಲವಾಗಿಸಲಾಗಿದೆ. ಇದರ ಜೊತೆಗೆ ಕಾರ್ಮಿಕರಿಗೆ ಕೆಲಸದ ಒತ್ತಡ ಹೆಚ್ಚಳ ಸೇರಿದಂತೆ, ಕಿರುಕುಳಗಳನ್ನು ವಿಪರೀತವಾಗಿ ಹರಿಯಬಿಡಲಾಗಿದೆ. ಇವೆಲ್ಲವೂಗಳ ಹಿನ್ನೆಲೆಯಲ್ಲಿ ಬೇಸತ್ತ ಕಾರ್ಮಿಕರು ಡಿಸೆಂಬರ್‌ 2020 ಮತ್ತು ಏಪ್ರಿಲ್‌ 2021ರಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸಬೇಕಾಗಿ ಬಂದಿತು. ಆದರೂ ಸರ್ಕಾರ ಅಥವಾ ಆಡಳಿತ ವರ್ಗ ಭರವಸೆಗಗಳು ಹಾಗೆ ಉಳಿದಿವೆʼ ಎಂದು ಹೇಳಿದರು.

ಇದನ್ನು ಓದಿ: ಸಾರಿಗೆ ನೌಕರರೊಂದಿಗೆ ಸರಕಾರ ಮಾತುಕತೆ ನಡೆಸಬೇಕು: ಹೈಕೋರ್ಟ್‌ ಆದೇಶ

ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಪ್ರಕಾಶ್‌ ಕೆ. ಮಾತನಾಡಿ ʻಆಡಳಿತ ವರ್ಗ ಕಾರ್ಮಿಕರ ಮೇಲೆ ಗದಾಪ್ರಹಾರ ಮಾಡಿ ವಿನಾಕಾರಣ ಸಾವಿರಾರು ಕಾರ್ಮಿಕರನ್ನು ತೀವ್ರವಾದ ಶಿಕ್ಷೆಗಳಿಗೆ ಗುರಿಪಡಿಸಿದೆ. ಆಡಳಿತ ವರ್ಗದ ಇಂತಹ ಕ್ರಮಗಳಿಂದ ಕಾರ್ಮಿಕರ ಮೂಲಕ ನಾಡಿನ ಜನತೆಗೆ ಉತ್ತಮ ಸೇವೆ ಒದಗಿಸಲು ಹಾಗೂ ಕೈಗಾರಿಕಾ ಬಾಂಧವ್ಯವನ್ನು ರೂಪಿಸಲು ಸಹಕಾರಿಯಾಗುವುದಿಲ್ಲ. ಧಮಕಾರಿ ಮತ್ತು ಕಿರುಕುಳದ ನೀತಿಯು ಸಾರಿಗೆ ನಿಗಮಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಅನಗತ್ಯ ಶಿಕ್ಷೆಯ ಕ್ರಮಗಳಿಂದ ಸಾವಿರಾರು ಕಾರ್ಮಿಕರ ಅವಲಂಬಿತ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿವೆ. ಪೋಷಕರ ಪಾಲನೆ, ಆರೋಗ್ಯ ರಕ್ಷಣೆ ಅಸಾಧ್ಯವಾಗಿದೆ. ಕುಟುಂಬದಲ್ಲಿ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿಯು ಎದುರಾಗಿದೆʼ ಎಂದು ಹೇಲಿದರು.

ಸಂಘಟನೆಯು ಮುಷ್ಕರದ ವೇಳೆಯಲ್ಲಿ ಸೇವೆಯಿಂದ ವಜಾ ಮಾಡಲ್ಪಟ್ಟಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನರ್‌ ನೇಮಿಸಬೇಕು. ಸೇವೆಯಿಂದ ಕೈಬಿಡಲಾಗಿರುವ ಎಲ್ಲಾ ಟ್ರೈನಿ ನೌಕರರನ್ನು ಪುನರ್‌ ನೇಮಕ ಮಾಡಬೇಕು. ವಿಭಾಗದಿಂದ ವಿಭಾಗಗಕ್ಕೆ ವರ್ಗವಣೆ ಮಾಡಿರುವ ನೌಕರರನ್ನು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೇ ಆಡಳಿತಾತ್ಮಕ ವರ್ಗಾವಣೆ ಆಧಾರದಲ್ಲಿ ವಾಪಸ್ಸು ತರಬೇಕು. ಅಮಾನತ್ತು ಮಾಡಲ್ಪಟ್ಟಿರುವ ನೌಕರರ ಅಮಾನತ್ತುಗಳನ್ನು ತೆರವು ಮಾಡಬೇಕು ಹಾಗೂ ಎಲ್ಲಾ ಶಿಸ್ತು ಕ್ರಮಗಳನ್ನು ರದ್ದುಮಾಡಬೇಕು. ಮುಷ್ಕರದ ಅವಧಿಗೆ ಸಂಬಂಧಿಸಿ ಕಾರ್ಮಿಕರಿಗೆ ಅಪಾದನಾ ಪತ್ರ ನೀಡಲಾಗುತ್ತಿದೆ. ಅದನ್ನು ರದ್ದುಗೊಳಿಸಿ ಹಾಗೂ ಎಲ್ಲಾ ಶಿಸ್ತು ಪ್ರಕ್ರಿಯೆಗಳನ್ನು ನಿಲ್ಲಿಸಬೇಕು. 2020ರ ಜನವರಿಯಿಂದ ಬಾಕಿಯಿರುವ ವೇತನ ಮಾತುಕತೆಯನ್ನು ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಸಾರಿಗೆ ನೌಕರರ ಹೋರಾಟಕ್ಕೆ ಆಂಧ್ರ ಸಾರಿಗೆ ನೌಕರರ ಸಂಘದ ಬೆಂಬಲ

ಪ್ರತಿಭಟನೆಯಲ್ಲಿ ಸಂಘದ ಪರವಾಗಿ ಉಪಾಧ್ಯಕ್ಷ ಚಂದ್ರಪ್ಪ, ಜಂಟಿ ಕಾರ್ಯದರ್ಶಿ ಆರ್.ವೇಣುಗೋಪಾಲ್‌, ಜಂಟಿ ಕಾರ್ಯದರ್ಶಿ ಕುಸುಮ ಓಂಪ್ರಕಾಶ್‌ ಮತ್ತಿತರರು ಭಾಗವಹಿಸಿದ್ದರು.

ಸಾರಿಗೆ ಸಚಿವರಿಗೆ ಮನವಿ

ಸಾರಿಗೆ ನೌಕರರು ಪ್ರತಿಭಟನೆಯ ನಂತರ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ ರಾಜ್ಯ ಮುಖಂಡತ್ವದೊಂದಿಗೆ ಚರ್ಚಿಸಿದ ಸಚಿವರು ಪ್ರತಿಭಟನೆ ವೇಳೆ ನೌಕರರ ಮೇಲೆ ದಾಖಲಾಗಿದ್ದ ಎಲ್ಲಾ ರೀತಿಯ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಅಮಾನತು, ವಜಾ, ವರ್ಗಾವಣೆ ಸೇರಿದಂತೆ ಬಹುತೇಕ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದ್ದು, ಇಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ.

ಎರಡು ಹಂತದಲ್ಲಿ ನೌಕರರ ಮೇಲಿನ ಪ್ರಕರಣಗಳ ವಾಪಸ್ಸಿಗೆ ಸರ್ಕಾರ ಯೋಜಿಸಿದ್ದು, ಸದ್ಯಕ್ಕೆ ಎಫ್ಐಆರ್ ದಾಖಲಾಗಿರುವ ಪ್ರಕರಣಗಳು ಹೊರತುಪಡಿಸಿ ಉಳಿದ ಪ್ರಕರಣಗಳು ಹಿಂಪಡೆದು, ಎಫ್ಐರ್ ದಾಖಲಾಗಿರುವ ಪ್ರಕರಣಗಳು ಎರಡನೇ ಹಂತದಲ್ಲಿ ವಾಪಸ್ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

Donate Janashakthi Media

Leave a Reply

Your email address will not be published. Required fields are marked *