ಸಾರಿಗೆ ನೌಕರರ ಹೋರಾಟಕ್ಕೆ ಆಂಧ್ರ ಸಾರಿಗೆ ನೌಕರರ ಸಂಘದ ಬೆಂಬಲ

  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಮಧ್ಯಪ್ರವೇಶಕ್ಕೆ ಆಂಧ್ರಪ್ರದೇಶ ಸಾರಿಗೆ ನೌಕರರ ಫೆಡರೇಷನ್ ಆಗ್ರಹಿಸಿದೆ.

ಬೆಂಗಳೂರು: ಕಳೆದ ಹತ್ತು ದಿನಗಳಿಂದ ಬಿಎಂಟಿಸಿ ಒಳಗೊಂಡು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕು ನಿಗಮಗಳ ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರವನ್ನು ಇತ್ಯರ್ಥಗೊಳಿಸಲು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪನವರು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಗಳ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್(ಸಿಐಟಿಯು ಸಂಯೋಜಿತ) ಆಗ್ರಹಪಡಿಸಿದೆ ಮತ್ತು ಸಾರಿಗೆ ನೌಕರರ ಹೋರಾಟಕ್ಕೆ ಅದು ತನ್ನ ಸೌಹಾರ್ಧ ಬೆಂಬಲ ವ್ಯಕ್ತಪಡಿಸಿದೆ.

ಇಂದು ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಗಳ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್(ಸಿಐಟಿಯು ಸಂಯೋಜಿತ) ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಸುಂದರಯ್ಯ, ರಾಜ್ಯ ಉಪ ಪ್ರಧಾನ ಕಾರ್ಯದರ್ಶಿ ಕಟ್ಟಾಸುಬ್ರಮಣ್ಯ, ರಾಜ್ಯ ಸಮಿತಿ ಸದಸ್ಯರಾದ ಯಾಕೂಬ್ ಖಾನ್, ಆರ್ ಪ್ರವೀಣ್ ಕುಮಾರ್ ಅವರನ್ನೊಳಗೊಂಡ ನಿಯೋಗ ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಶಾಂತಿನಗರ ಬಸ್ ಡಿಪೋ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿತು.

ಇದನ್ನು ಓದಿ: ಸಾರಿಗೆ ಮುಷ್ಕರ ನಿಷೇಧಿಸುವುದು ದಮನಕಾರಿ ತೀರ್ಮಾನ ಸಿಐಟಿಯು ಆರೋಪ

ಎಚ್‌.ಸುಂದರಯ್ಯ ಅವರು ಮಾತನಾಡಿ ʻʻಆಂಧ್ರಪ್ರದೇಶದ ರಸ್ತೆ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ನೌಕರರು ಸದ್ಯ ಅಲ್ಲಿನ ಸರಕಾರಿ ನೌಕರರಗಿಂತ ಉತ್ತಮ ವೇತನ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅಲ್ಲಿನ ಸಾರಿಗೆ ನೌಕರರು ಕಾರ್ಮಿಕ ಕಾಯ್ದೆಯ ಪ್ರವಾಧಾನಗಳ ಅಡಿಯಲ್ಲಿರುವ ಸಾಮೂಹಿಕ ಚೌಕಾಸಿ ಹಕ್ಕಿನ ಅವಕಾಶಗಳನ್ನು ಬಳಸಿಕೊಂಡು ಹಾಲಿ 2019 ಫೆಬ್ರವರಿ 6 ರಿಂದಲೇ 11ನೇ ವೇತನ ಒಪ್ಪಂದದ ಅನ್ವಯ ಶೇ 25 ರಷ್ಟು ವೇತನ ಹೆಚ್ಚಳ ಒಪ್ಪಂದ ಮಾಡಿಕೊಂಡಿದ್ದಾರೆ ಮತ್ತು ಮತ್ತು ಇನ್ನೂ ಕೆಲವೇ ತಿಂಗಳುಗಳಲ್ಲಿ 12ನೇ ವೇತನ ಒಪ್ಪಂದದ ಅನ್ವಯ ಶೇ 34 ರಿಂದ 35 ರಷ್ಟು ವೇತನ ಒಪ್ಪಂದ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ ಎಂದು ಹೇಳಿದರು.

ಕಟ್ಟಾಸುಬ್ರಮಣ್ಯ ಅವರು ಮಾತನಾಡಿ ʻʻವೈದ್ಯಕೀಯ ಸೌಲಭ್ಯಗಳ ವಿಚಾರದಲ್ಲೂ ಕೂಡ ಆಂಧ್ರದ ಸರ್ಕಾರಿ ನೌಕರರಿಗಿಂತ ಸಾರಿಗೆ ನೌಕರರು ಒಂದು ಹೆಜ್ಜೆ ಮುಂದೆ ಇದ್ದಾರೆ. ಮಾತ್ರವಲ್ಲ ಮಹಿಳಾ ಸಬಲೀಕರಣದ ಭಾಗವಾಗಿ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ ಮಹಿಳಾ ನಿರ್ವಾಹಿಯಕಿಯರು ಪುರುಷ ನಿರ್ವಾಹಕರಿಗಿಂತ ವಾರ್ಷಿಕ 5 ವೇತನ ಸಹಿತ ಹೆಚ್ಚುವರಿ ರಜೆಗಳನ್ನು ಈಗ ಪಡೆಯುತ್ತಿದ್ದಾರೆ. ಜೊತೆಗೆ ಆಂಧ್ರ ಪ್ರದೇಶ ಸರ್ಕಾರ ಅಲ್ಲಿನ ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಸೇರ್ಪಡೆ ಮಾಡಿಕೊಂಡಿರುವುದರಿಂದ 2021 ಏಪ್ರಿಲ್ ನಿಂದ ಅವರು ಕಾರ್ಮಿಕರ ಸಂಘಗಳ ಹಕ್ಕುಗಳನ್ನು ಕಳೆದುಕೊಂಡರೂ ಸರ್ಕಾರಿ ವೇತವವನ್ನು ಪಡೆಯುವ ಕಾತುರತೆಯಲ್ಲಿದ್ದಾರೆ. ಇನ್ನು ಮುಂದೆ ಆಂಧ್ರ ಸರಕಾರ ವಾರ್ಷಿಕವಾಗಿ ರೂ 3600 ಕೋಟಿಯಷ್ಟು ಹಣವನ್ನು ಸಾರಿಗೆ ನೌಕರರ ವೇತನಕ್ಕಾಗಿ ಬಜೆಟ್ ನಲ್ಲಿ ಮೀಸಲಿಡಲಿದೆ ಅಲ್ಲದೆ ಗ್ರಾಮೀಣ ಸೇವೆ ಸಲ್ಲಿಸುವ ಸಾರಿಗೆ ವಾಹನಗಳ ತೆರಿಗೆಯನ್ನು ರಾಜ್ಯ ಸರ್ಕಾರ ರದ್ದು ಭರವಸೆ ನೀಡಿದೆ. ಇದೆಲ್ಲವೂ ಸಾಧ್ಯವಾಗಿದ್ದು ಆಂಧ್ರ ಪ್ರದೇಶ ಸಾರಿಗೆ ನೌಕರರ ಐಕ್ಯ ಹೋರಾಟದಿಂದ ಎಂದು ವಿವರಣೆ ನೀಡಿದರು.

ಇದನ್ನು ಓದಿ: ಸಾರಿಗೆ ಮುಷ್ಕರ – ಸೌಹಾರ್ದ ಪರಿಹಾರಕ್ಕೆ ಸಿಪಿಐ(ಎಂ) ಒತ್ತಾಯ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್(ಸಿಐಟಿಯು) ರಾಜ್ಯ ಅಧ್ಯಕ್ಷರಾದ ಹೆಚ್.ಡಿ. ರೇವಪ್ಪ ಅವರು ಮಾತನಾಡಿ ಆಂಧ್ರ ಪ್ರದೇಶದ ಸಾರಿಗೆ ನೌಕರರ ವೇತನ, ಭತ್ಯೆ ಮತ್ತು ಇತರೆ ಸೌಲಭ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದ ಸಾರಿಗೆ ನೌಕರರ ಪರಿಸ್ಥಿತಿ ಹೀನಾಯ ಸ್ಥಿತಿಯಲ್ಲಿದೆ. ಅತ್ಯಂತ ಕಡಿಮೆ ವೇತನ ಭತ್ಯೆಗಳು ಮಾತ್ರವಲ್ಲ, ಅಧಿಕಾರಿಗಳಿಂದ ನೌಕರರಿಗೆ ಅದರಲ್ಲೂ ಮಹಿಳಾ ನೌಕರರಿಗೆ ನಿತ್ಯ ಕಿರುಕುಳ, ಕೆಲಸ ನಿರಾಕರಣೆ, ವಿವಿಧ ರೀತಿಯ ದಂಡಗಳ ಹಿಂಸೆಗಳು, ದೌರ್ಜನ್ಯ ಮತ್ತು ವ್ಯಾಪಕವಾದ ಭ್ರಷ್ಟಚಾರದಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ ಈ ಒತ್ತಡ ತಾಳಲಾರದೇ ಹಲವಾರು ನೌಕರರು ಆತ್ಮಹತ್ಯಗೆ ಶರಣರಾಗುತ್ತಿರುವುದು ಅತ್ಯಂತ ಕಳವಳದ ಸಂಗತಿ.

ಇಂತಹ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರ ಮತ್ತು ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳು ವಿಫವಾಗಿದ್ದಾರೆ. ಇದರಿಂದಾಗಿ ತೀವ್ರ ಬೇಸರ, ಆಕ್ರೋಶ ಇಲ್ಲಿನ ನೌಕರರಲ್ಲಿ ಮಡುಗಟ್ಟಿರುವ ಪರಿಣಾಮವೇ ಇವತ್ತು ಸರಕಾರ ಎದುರಿಸುತ್ತಿರುವ ಈ ಅನಿರ್ದಿಷ್ಟ ಪ್ರತಿಭಟನೆಯಾಗಿದೆ.

ಯಾಕೂಬ್ ಖಾನ್ ಕರ್ನಾಟಕ ರಾಜ್ಯ ಸರಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳು ಈ ಅನಿರ್ದಿಷ್ಟವಾದ ಹೋರಾಟವನ್ನು ಅಂತ್ಯಗೊಳಿಸಲು ಕೂಡಲೇ ಸಾರಿಗೆ ನಿಗಮಗಳಲ್ಲಿ ಕ್ರಿಯಾಶೀಲವಾಗಿರುವ ಮತ್ತು ನೊಂದಾವಣೆಯಾಗಿರುವ ಎಲ್ಲಾ ನೌಕರರ ಸಂಘಗಳ ಜೊತೆ ಮಾತುಕತೆ ನಡೆಸಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿರುವ ಕರ್ನಾಟಕ ಸಾರಿಗೆ ನೌಕರರ ಬದುಕನ್ನು ಉತ್ತಮಪಡಿಸಲು ಬೇಕಾದ ಹಣಕಾಸಿನ ನೆರವನ್ನು ಪ್ರಕಟಿಸಬೇಕೆಂದು ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಗಳ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್(ಸಿಐಟಿಯು ಸಂಯೋಜಿತ) ರಾಜ್ಯ ಸರ್ಕಾರವನ್ನು ಮತ್ತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಲ್ಲಿ ಆಗ್ರಹಪೂರ್ವಕ ವಿನಂತಿ ಮಾಡುತ್ತದೆ ಮತ್ತು ಹೋರಾಟ ನಿರತ ಸಾರಿಗೆ ನೌಕರರು ಮತು ಅವರ ಕುಟುಂಬಗಳ ಜೊತೆ ತನ್ನ ಸೌಹಾರ್ಧಯುತ ಬೆಂಬಲವನ್ನು ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಗಳ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್(ಸಿಐಟಿಯು ಸಂಯೋಜಿತ) ವ್ಯಕ್ತಪಡಿಸುತ್ತದೆ ಎಂದರು.

ಇದನ್ನು ಓದಿ: ತಟ್ಟೆ, ಲೋಟ ಬಾರಿಸಿ ವಿನೂತನವಾಗಿ ಪ್ರತಿಭಟಿಸಿದ ಸಾರಿಗೆ ನೌಕರರು

ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಗಳ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಬೆಂಗಳೂರಿನ ವಿವಿಧ ಡಿಪೋಗಳಿಗೆ ಭೇಟಿ ನೀಡಿದ ನಂತರ ಸಿಐಟಿಯು ರಾಜ್ಯ ಸಮಿತಿ ಕಚೇರಿಗೆ ತೆರಳಿ ಅಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್(ಸಿಐಟಿಯು) ಮತ್ತು ಸಿಐಟಿಯು ರಾಜ್ಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಗಳ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್(ಸಿಐಟಿಯು ಸಂಯೋಜಿತ) ನಿಯೋಗದ ಜೊತೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್(ಸಿಐಟಿಯು) ರಾಜ್ಯ ಅಧ್ಯಕ್ಷರಾದ ಹೆಚ್.ಡಿ. ರೇವಪ್ಪ ಮತ್ತು ಜಂಟಿ ಕಾರ್ಯದರ್ಶಿ ಚಂದ್ರಪ್ಪ ರಾಜ್ಯದ ಪರವಾಗಿ ಮಾತುಕತೆ ನಡೆಸಿದರು.

Donate Janashakthi Media

Leave a Reply

Your email address will not be published. Required fields are marked *