ಚಿತ್ರದುರ್ಗ: ಮಠದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮೀಜಿ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಿದೆ.
ಬುಧವಾರದಂದು ಶಿವಮೂರ್ತಿ ಸ್ವಾಮೀಜಿಯ ನ್ಯಾಯಾಂಗ ಬಂಧನ ಅಂತ್ಯವಾಗಿದ್ದರಿಂದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೀಗ ಮತ್ತೆ ಸೆಪ್ಟಂಬರ್ 14 ದಿನಗಳ ಕಾಲ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ಇನ್ನು ಪ್ರಕರಣದ ಎ2 ಆರೋಪಿ ಹಾಸ್ಟೆಲ್ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಸೆಪ್ಟೆಂಬರ್ 27ರವರೆಗೆ ವಿಸ್ತರಣೆ ಮಾಡಿದೆ. ಈ ಪ್ರಕರಣದ 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, 5ನೇ ಆರೋಪಿ ವಕೀಲ ಗಂಗಾಧರಯ್ಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಏನಿದು ಪ್ರಕರಣ? ಮಠದ ಹಾಸ್ಟೆಲ್‌ನಲ್ಲಿ ವಾಸವಿದ್ದ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ನೀಡಿದ ದೂರಿನ ಮೇರೆಗೆ ಶಿವಮೂರ್ತಿ ಮುರುಘಾ ಸ್ವಾಮಿ ವಿರುದ್ಧ ಪೋಕ್ಸೊ ಕಾಯ್ದೆಯಡಿ (ಪೋಕ್ಸೊ) ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಹಾಸ್ಟೆಲ್ ಮುಖ್ಯಸ್ಥ ಪರಶಿವಯ್ಯ ಬಸವಾದಿತ್ಯ, ಮಠದ ಉದ್ಯೋಗಿ ಅಕ್ಕಮಹಾದೇವಿ ರಶ್ಮಿ, ವಕೀಲ ಗಂಗಾಧರಯ್ಯ ಸೇರಿದಂತೆ ಒಟ್ಟು 5 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ ಮೈಸೂರು ಮೂಲದ ಎನ್‌ಜಿಒ ಒಡನಾಡಿ ಸೇವಾ ಸಂಸ್ಥಾನದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.