ಮುನ್ನಲೆ ಪಡೆಯುವುದೇ ಹೊಸ ಪಕ್ಷಗಳ ಚುನಾವಣಾ ಹಣಾಹಣಿ

ರಾಜಕೀಯ ಪಕ್ಷಗಳಲ್ಲಿ ಬೇರೇ ಪಕ್ಷಗಳಂತೆ ಹೈಕಮಾಂಡ್ಇದ್ದರೆ, ತಮಿಳುನಾಡಿನ ರಾಜಕೀಯ ಪಕ್ಷಗಳಲ್ಲಿ ಕಮಾಂಡ್ ಆದೇಶವೇ ಅಂತಿಮ.

– ವಿನೋದ ಶ್ರೀರಾಮಪುರ

ರಾಜಕೀಯವೆಂದರೆ, ಅದಕ್ಕೆ ಹಲವು ಆಯಾಮಗಳನ್ನು ಗುರುತಿಸಬಹುದು. ಆದರೆ ತಮಿಳುನಾಡಿನ ರಾಜಕೀಯ ಪಕ್ಷಗಳಲ್ಲಿ ಒಂದು ದೊಡ್ಡ ಆಯಾಮವೆಂದರೆ ಚಿತ್ರರಂಗ. ತಮಿಳುನಾಡು ರಾಜಯಕೀಯ ಪಕ್ಷಗಳಲ್ಲಿ ಪ್ರಾಬಲ್ಯ ಮೆರೆದವರು ಸಿನಿಮಾರಂಗದ ಘಟಾನುಘಟಿ ವ್ಯಕ್ತಿಗಳೇ.

ಅಣ್ಣಾ ಡ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ), ಡ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷಗಳು ದಶಕಗಳ ಕಾಲ ಅಧಿಕಾರ ನಡೆಸಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಬಲವಾಗಿರುವ ಈ ಎರಡೂ ಪಕ್ಷಗಳ ಮೈತ್ರಿಕೂಟ ರಚಿಸಿಕೊಂಡು ಚುನಾವಣಾ ಕಣದಲ್ಲಿವೆ. ಈ ಪಕ್ಷಗಳಿಗೆ ಈಗ ಸವಾಲಾಗಿರುವುದು ಹೊಸದಾಗಿ ಉದಯಿಸಿರುವ ಪಕ್ಷಗಳಿಂದ.

ಟಿಟಿವಿ ದಿನಕರನ್‌ ಸ್ಥಾಪಿಸಿರುವ ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ (ಎಎಂಎಂಕೆ), ಕಮಲಹಾಸನ್‌ ಸ್ಥಾಪಿಸಿರುವ ಮಕ್ಕಳ್‌ ನೀಧಿ ಮಯ್ಯಂ (ಎಂಎನ್‌ಎಂ), ನಟ ಸೀಮನ್‌ ಸ್ಥಾಪಿಸಿರುವ ನಾಮ್‌ ತಮಿಳರ್‌ ಕಚ್ಚಿ(ಎನ್‌ಟಿಕೆ) ಪಕ್ಷಗಳು ತನ್ನದೇ ಆದ ಮೈತ್ರಿಯೊಂದಿಗೆ ಚುನಾವಣೆಗೆ ಇಳಿದಿದೆ.

ಇನ್ನಿತರೆ ಪಕ್ಷಗಳು

ಅದೇ ರೀತಿಯಲ್ಲಿ ಕಾಂಗ್ರೆಸ್‌, ಬಿಜೆಪಿ, ಸಿಪಿಐ(ಎಂ), ಸಿಪಿಐ, ಎಸ್‌ಡಿಪಿಐ, ಫಾರ್ವಡ್‌ ಬ್ಲಾಕ್‌, ಜೆಡಿ(ಎಸ್‌), ಬಿಎಸ್‌ಪಿ, ಎಐಐಎಂಐಎಂ, ಐಯುಎಂಎಲ್‌, ಆರ್‌ಪಿಐ, ದೇಸಿಯ ಮುರ್‌ಪೊಕ್ಕೂ ಡ್ರಾವಿಡ ಕಳಗಂ(ಡಿಎಂಡಿಕೆ), ಪಟ್ಟಾಳಿ ಮಕ್ಕಳ್‌ ಕಚ್ಚಿ(ಪಿಎಂಕೆ), ವಿದುತಲೈ ಚಿರುಥೈಗಲ್ ಕಚ್ಚಿ(ವಿಸಿಕೆ), ಇಂಡಿಯಾ ಜನನಾಯಗ ಕಚ್ಚಿ(ಐಜೆಕೆ), ತಮಿಳ್‌ ಮಾನಿಲ ಕಾಂಗ್ರೆಸ್‌(ಟಿಎಂಸಿ), ಅಖಿಲ ಭಾರತ ಸಮಥುವ ಮಕ್ಕಳ್‌ ಕಚ್ಚಿ (ಎಐಎಸ್‌ಎಂಕೆ), ಕೊಂಗುನಾಡು ಮಕ್ಕಳ್‌ ದೇಸಿಯ ಕಚ್ಚಿ(ಕೆಎಂಡಿಕೆ), ಸಗಾಯಂ ಅರಸಿಯಲ್‌ ಪೆರವೈ(ಎಸ್‌ಎಪಿ), ಸೇರಿದಂತೆ ದೇಶದ ರಾಷ್ಟ್ರೀಯ ಪಕ್ಷಗಳು ಹಾಗೂ ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷಗಳು ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಮೈತ್ರಿಕೂಟ ಮತ್ತು ಪಕ್ಷವಾರು ಸ್ಪರ್ಧಿಸುತ್ತಿರುವ ಕ್ಷೇತ್ರಗಳು ಸಂಖ್ಯೆ

ನ್ಯಾಷನಲ್‌ ಡೆಮಾಕ್ರಟಿಕ್‌ ಅಲೈಯನ್ಸ್‌ ಮೈತ್ರಿಕೂಟ (ಒಟ್ಟು 10 ಪಕ್ಷಗಳು): ಎಐಎಡಿಎಂಕೆ-179 ಕ್ಷೇತ್ರ, ಪಿಎಂಕೆ-23 ಕ್ಷೇತ್ರ, ಬಿಜೆಪಿ-20 ಕ್ಷೇತ್ರ, ಟಿಎಂಸಿ-6 ಕ್ಷೇತ್ರ.  ಉಳಿದ 6 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳು.

ಸೆಕ್ಯೂಲರ್‌ ಪ್ರೋಗ್ರಸಿವ್‌ ಅಲೈಯನ್ಸ್‌ ಮೈತ್ರಿಕೂಟ (ಒಟ್ಟು 13 ಪಕ್ಷಗಳು) : ಡಿಎಂಕೆ-173, ಕಾಂಗ್ರೆಸ್‌-25, ಸಿಪಿಐ(ಎಂ)-6, ಸಿಪಿಐ-6, ಎಂಡಿಎಂಕೆ-6, ವಿಕೆಸಿ-6, ಕೆಎಂಡಿಕೆ-3, ಐಯುಎಂಎಲ್‌-3, ಎಂಎಂಕೆ-2 ಉಳಿದ 4 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳು.

ಎಎಂಎಂಕೆ ಮೈತ್ರಿಕೂಟ (ಒಟ್ಟು 8 ಪಕ್ಷಗಳು) : ಎಎಂಎಂಕೆ-161, ಡಿಎಂಡಿಕೆ-60, ಎಸ್‌ಡಿಪಿಐ-6, ಎಐಐಎಂಐಎಂ-3 ಉಳಿದ 4 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳು.

ಎಂಎನ್‌ಎಂ ಮೈತ್ರಿಕೂಟ (ಒಟ್ಟು 5 ಪಕ್ಷಗಳು) : ಎಂಎನ್‌ಎಂ-135, ಐಜೆಕೆ-40, ಎಐಎಸ್‌ಎಂಕೆ-37, ಟಿಎಂಜೆಕೆ-11, ಜೆಡಿ(ಎಸ್‌)-3,

ಸಗಾಯಂ ಮೈತ್ರಿಕೂಟ : ಎಸ್‌ಎಪಿ-20, ಟಿಎನ್‌ವೈಪಿ-16, ವಿಟಿಕೆ-1

ಎನ್‌ಟಿಕೆ-234, ಬಿಎಸ್‌ಪಿ-40, ಪುಥಿಯ ತಮಿಳಗಂ-60, ಆರ್‌ಪಿಐ-10 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಜೆ. ಜಯಲಲಿತಾ –ಎಂ.ಕರುಣಾನಿಧಿ

2016ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎರಡು ಪ್ರಮುಖ ಪಕ್ಷಗಳಾದ ಎಐಎಡಿಎಂಕೆ-ಡಿಎಂಕೆಯ ಅತ್ಯಂತ ಪ್ರಬಲ ನಾಯಕರಾದ ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತ ಮಾತ್ರ ಎದುರಾಳಿಗಳೆಂದು ಬಿಂಬಿಸಿದವು. ಆದರೆ, 2016ರಲ್ಲಿ ಜೆ. ಜಯಲಲಿತಾ ಮತ್ತು 2018ರಲ್ಲಿ ಎಂ ಕರುಣಾನಿಧಿ ನಿಧನದ ನಂತರ ಈ ಬಾರಿ ಇಬ್ಬರಲ್ಲ ಇನ್ನು ಹಲವು ಪ್ರಭಾವಿಗಳು ರಾಜ್ಯದ ಜನತೆಯ ಮುನ್ನಲೆಗೆ ಬಂದಿದ್ದಾರೆ.

ಕಮಲ್‌-ರಜನಿ

ರಾಜಕೀಯ ರಂಗ ಪ್ರವೇಶಿಸುವ ಕುರಿತು ಕಮಲ್‌ ಹಾಸನ್‌ ಮತ್ತು ರಜನಿಕಾಂತ್‌ ಹೆಸರುಗಳು ಸಾಕಷ್ಟು ಮುನ್ನಲೆಗೆ ಬಂದಿತು. ಕಮಲ್‌ ಹಾಸನ್‌ ತಮ್ಮದೇ ಪಕ್ಷವನ್ನು ಸ್ಥಾಪಿಸಿ ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ, ಮತಪ್ರಮಾಣವನ್ನು ಅಂದಾಜಿಸಿಕೊಂಡಿದ್ದಾರೆ. ಫಲಿತಾಂಶದ ನಂತರ ನಮಗೆ ಲೋಕಸಭೆ ಅಲ್ಲ, ವಿಧಾನಸಭೆ ಚುನಾವಣೆಯೇ ಅತ್ಯಂತ ಮುಖ್ಯವಾದದ್ದು ಎಂದು ತಿಳಿಸಿದ್ದರು.

ರಜನಿಕಾಂತ್‌ ರಾಜಕೀಯ ಪಕ್ಷದ ಸೇರ್ಪಡೆ ಕುರಿತು ಸಾಕಷ್ಟು ಮುನ್ನಲೆಗೆ ಬಂದಿತು. ಚುನಾವಣೆ ಘೋಷಣೆಗೆ ಮೊದಲು ಬಿಜೆಪಿ ಪಕ್ಷ ಸೇರುವರೆಂಬ ಸುದ್ದಿಯೂ ಹರಿದಾಡಿದವು. ಆಡಳಿತರೂಢ ಪಕ್ಷದ ನಾಯಕರು ಸಾಕಷ್ಟು ಮಾತುಕತೆಯೂ ನಡೆಸಿದರು. ಕಮಲ್‌ ಹಾಸನ್‌ ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಆಯಿತು. ಆದರೂ ಸಹ ಅಧಿಕೃತವಾಗಿ ರಾಜಕೀಯ ಸೇರ್ಪಡೆಯ ವಿಚಾರ ಹಿನ್ನೆಲೆಗೆ ಸರಿದಿದೆ.

ರಾಜಕೀಯ ಪಕ್ಷಗಳು ತಮ್ಮದೇ ಒಡೆತನದ ಪತ್ರಿಕೆ-ಟಿ.ವಿ. ಮಾಧ್ಯಮಗಳ ಮೂಲಕವು ಚುನಾವಣಾ ಕಾವು ಮತ್ತಷ್ಟು ಹೆಚ್ಚುವಂತೆ ಮಾಡುತ್ತಿದ್ದಾರೆ.

ರಾಜಕೀಯ ಪಕ್ಷಗಳಲ್ಲಿ ಬೇರೇ ಪಕ್ಷಗಳಂತೆ ಹೈಕಮಾಂಡ್ಇದ್ದರೆ, ತಮಿಳುನಾಡಿನ ರಾಜಕೀಯ ಪಕ್ಷಗಳಲ್ಲಿ ಕಮಾಂಡ್ ಆದೇಶವೇ ಅಂತಿಮ.

ಹೊಸ ಮುಖಗಳೇ ಹೆಚ್ಚು

ಡಿಎಂಕೆಯಿಂದ ಎಂ.ಕೆ.ಸ್ಟಾಲಿನ್‌, ಎಐಎಡಿಎಂಕೆಯಿಂದ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಓ ಪನ್ನೀರ್‌ಸೆಲ್ವಂ, ಎಎಂಎಂಕೆಯಿಂದ ಟಿಟಿವಿ ದಿನಕರನ್‌, ಎಂಎನ್‌ಎಂನಿಂದ ಕಮಲ್‌ಹಾಸನ್‌, ಎನ್‌ಟಿಕೆಯಿಂದ ಸೀಮನ್‌,  ಪಿಎಂಕೆಯಿಂದ ಎಸ್‌.ರಾಮದಾಸ್‌, ಕಾಂಗ್ರೆಸ್‌ನಿಂದ ಕೆ.ಎಸ್‌.ಅಳಗಿರಿ, ಬಿಜೆಪಿಯಿಂದ ಎಲ್‌.ಮುರುಗನ್‌, ಎಂಡಿಎಂಕೆಯಿಂದ ವೈಕೊ, ಡಿಎಂಡಿಕೆಯಿಂದ ವಿಜಯಕಾಂತ್‌, ಸಿಪಿಐ(ಎಂ) ಪಕ್ಷದಿಂದ ಕೆ.ಬಾಲಕೃಷ್ಣನ್‌, ಸಿಪಿಐ ಪಕ್ಷದಿಂದ ಆರ್‌.ಮುತ್ತುರಸನ್‌, ಟಿಎಂಸಿಯಿಂದ ಜಿ.ಕೆ.ವಾಸನ್‌, ವಿಸಿಕೆಯಿಂದ ಥೋ.ತಿರುಮಾವಲನ್‌, ಐಜೆಕೆಯಿಂದ ಟಿ.ಆರ್‌.ಪರಿವೆನ್ಧರ್‌, ಎಐಎಸ್‌ಎಂಕೆಯಿಂದ ಶರತ್‌ ಕುಮಾರ್‌, ಎಸ್‌ಎಪಿಯಿಂದ ಯು ಸಗಾಯಂ ಸೇರಿದಂತೆ ಇನ್ನು ಹಲವು ನಾಯಕರು ತಮ್ಮ ಪಕ್ಷದ ಪರವಾಗಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಕಾಂಗ್ರೆಸ್‌ ಡಿಎಂಕೆ ಮತ್ತು ಬಿಜೆಪಿ ಎಐಎಡಿಎಂಕೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಅದೇ ರೀತಿ ಎಐಎಡಿಎಂಕೆ ಭಾಗವಾಗಿದ್ದ ಡಿಎಂಡಿಕೆ ಮೈತ್ರಿಕೂಟದಿಂದ ಹೊರಬಂದು ಎಎಂಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಪಕ್ಷ ಅಥವಾ ಮೈತ್ರಿಕೂಟವು ಅಧಿಕಾರ ಹಿಡಿಯಲು 118 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.

  • 2016 ವಿಧಾನಸಭಾ ಚುನಾವಣೆ
  • ಎಐಎಡಿಎಂಕೆ ಮೈತ್ರಿಕೂಟ 133 ಸ್ಥಾನಗಳಲ್ಲಿ ಗೆದ್ದಿತು ಶೇ.40.8 ಮತಗಳಿಕೆ.
  • ಡಿಎಂಕೆ ಪಕ್ಷ 89 ಸ್ಥಾನಗಳಲ್ಲಿ ಗೆದ್ದಿತು ಶೇ.31.6 ಮತಗಳಿಕೆ
  • ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಗೆದ್ದು ಶೇ.6.47ರಷ್ಟು ಮತಗಳಿಕೆ
  • ಐಯುಎಂಎಲ್ಒಂದು ಸ್ಥಾನವನ್ನು ಗೆದ್ದಿತು.
  • 2016ರಲ್ಲಿ ಒಂದು ಸ್ಥಾನವನ್ನು ಗೆಲ್ಲದ ಪಕ್ಷಗಳು. ಪಿಎಂಕೆ ಶೇ.5.3, ಬಿಜೆಪಿ ಶೇ.2.8ರಷ್ಟು, ಡಿಎಂಡಿಕೆ ಶೇ.2.41ರಷ್ಟು, ಎನ್‌ಟಿಕೆ ಶೇ.1.07ರಷ್ಟು ಮತಗಳಿಸಿದ್ದರು.
  • ಜಯಲಲಿತಾ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ 2017 ನಡದ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
  • ಬಂಡೆದ್ದ ಶಾಸಕರ ರಾಜೀನಾಮೆ ಸೇರಿದಂತೆ ಒಟ್ಟು 24 ಕ್ಷೇತ್ರಗಳಲ್ಲಿ 2019ರಲ್ಲಿ ಉಪಚುನಾವಣೆ ನಡೆದಿದೆ.

ಎಐಎಡಿಎಂಕೆ

ಕಳೆದ ಬಾರಿ 134 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಎಐಎಡಿಎಂಕೆ ಪಕ್ಷವು ಸತತ ಮೂರನೇ ಬಾರಿ ಅಧಿಕಾರವನ್ನು ಪಡೆಯಬೇಕೆಂಬ ಉಮೇದಿನಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರಕಾರದೊಂದಿಗೆ ಮೃದುಧೋರಣೆಯನ್ನು ಅನುಸರಿಸಿಕೊಂಡು ಬಂದಿದೆ. ರಾಜ್ಯಕ್ಕೆ ಕೇಂದ್ರವು ಅನುಸರಿಸಿದ ಮಲತಾಯಿ ಧೋರಣೆಯನ್ನು ಖಂಡಿಸಲಿಲ್ಲ ಮತ್ತು ಪಕ್ಷದೊಳಗಿನ ಗುಂಪುಗಾರಿಕೆಯೂ ಬಹಿರಂಗಗೊಂಡಿದ್ದವು.

2018ರಲ್ಲಿ ಎಐಎಡಿಎಂಕೆ ಸರ್ಕಾರದ ವಿರುದ್ಧ ಬಂಡೆದ್ದ ​ವಿ.ಕೆ.ಶಶಿಕಲಾ ಬೆಂಬಲಿಗರ ಬಣ ಎಎಂಎಂಕೆ ಪಕ್ಷ ಸ್ಥಾಪನೆ ಮಾಡಿದರು. ಪಕ್ಷದ ಸಂಸ್ಥಾಪಕ ಟಿ.ಟಿ.ವಿ.ದಿನಕರನ್‌ ಪರ ವಾಲಿದ್ದ ತಮಿಳುನಾಡಿನ 18 ಶಾಸಕರರು ಅನರ್ಹಗೊಂಡರು.

2019ರಲ್ಲಿ ಒಟ್ಟು 24 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಡಿಎಂಕೆ-13, ಎಐಎಡಿಎಂಕೆ-11 ಸ್ಥಾನಗಳಲ್ಲಿ ಗೆಲುವು ಸಾಧಿಸಿದವು.

ಜಯಲಲಿತಾ ನಿಧನದ ನಂತರ ಶಶಿಕಲಾ ಪಕ್ಷದ ಮುಖ್ಯಸ್ಥರ ಹುದ್ದೆಯನ್ನು ಕೈಗೆ ತೆಗೆದುಕೊಂಡಿದ್ದರು. 2016ರಲ್ಲಿ ಜೈಲಿಗೆ ಹೋಗುವಾಗ ಅವರು ಎಡಪ್ಪಾಡಿ ಪಳನಿಸ್ವಾಮಿಯನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿ ತೆರಳಿದ್ದರು. ಆದರೆ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಬಂಡಾಯವೆದ್ದಿದ್ದರಿಂದ ಪಕ್ಷ ಇಬ್ಭಾಗವಾಗುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ ಶಶಿಕಲಾ ಜೈಲುಪಾಲಾಗುತ್ತಿದ್ದಂತೆ ಒಟ್ಟಾದ ಪಳನಿಸ್ವಾಮಿ ಹಾಗೂ ಪನ್ನೀರ್‌ಸೆಲ್ವಂ ಆಕೆಯನ್ನೇ ಪಕ್ಷದಿಂದ ಹೊರಗಟ್ಟಿದರು.

ಜಯಲಲಿತರೊಂದಿಗೆ ಜೈಲು ಸೇರಿ ಶಿಕ್ಷೆಯನ್ನು ಪೂರ್ಣಗೊಳಿಸಿ ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಯಾದ ವಿ.ಕೆ.ಶಶಿಕಲಾ ರಾಜಕೀಯದಿಂದ ದೂರ ಉಳಿಯುವುದಾಗಿ ಪ್ರಕಟಿಸಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ಎಐಎಡಿಎಂಕೆ ಪಕ್ಷವು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಶೇ.18.48ರಷ್ಟು ಮತವನ್ನು ಪಡೆದುಕೊಂಡಿದ್ದವು. ಸರಿಸುಮಾರು ಶೇ.59ರಷ್ಟು ಮತವನ್ನು ಕಳೆದುಕೊಂಡಿದ್ದವು ಎಂಬುದು ಲೋಕಸಭಾ ಚುನಾವಣಾ ಫಲಿತಾಂಶದಿಂದ ಸ್ಪಷ್ಟಗೊಂಡಿದೆ.

ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಶೇ.32.7ರಷ್ಟು ಮತಗಳನ್ನು ಗಳಿಸಿಕೊಂಡಿದ್ದವು.

ಅದೇ ರೀತಿಯಲ್ಲಿ ಎಎಂಎಂಕೆ, ಎಂಎನ್‌ಎಂ ಮತ್ತು ಎನ್‌ಟಿಕೆ ಪಕ್ಷಗಳು ಶೇ. 12.85ರಷ್ಟು ಮತವನ್ನು ಗಳಿಸಿದ್ದವು. ಈ ಪಕ್ಷಗಳ ಚುನಾವಣಾ ಕಣವು ಅತ್ಯಂತ ನಿರ್ಣಾಯಕವಾಗುವುದಿದೆ.

ಹಿಂದಿನ ಚುನಾವಣೆಯ ಹೊತ್ತಿಗೆ ಆಗಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ಅಕ್ರಮ ಆಸ್ತಿ ಸಂಪಾದನೆ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ಜೈಲುಶಿಕ್ಷೆಯನ್ನು ಅನುಭವಿಸಿದ ಸಂದರ್ಭವಾಗಿದ್ದವು.

ನಂತರದ ಐದು ವರ್ಷದ ಅವಧಿಯಲ್ಲಿ ಓ.ಪನ್ನೀರ್‌ಸೆಲ್ವಂ ಎರಡು ಬಾರಿ ಮತ್ತು ದಿವಂಗತ ಜೆ. ಜಯಲಲಿತಾ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಪ್ರಸಕ್ತ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿಎಂಕೆ ಪಕ್ಷವು ಚುನಾವಣಾ ಕಣದಲ್ಲಿದೆ.

ಡಿಎಂಕೆ

ಡಿಎಂಕೆ ಪಕ್ಷದಲ್ಲಿ ಅಂದಿನ ಮುತ್ಸದ್ಧಿ ನಾಯಕರಾಗಿದ್ದ ಎಂ.ಕರುಣಾನಿಧಿ ರವರ ವಯೋಸಹಜ ಅನಾರೋಗ್ಯದ ಪರಿಣಾಮ ಪಕ್ಷದ ನಾಯಕತ್ವವನ್ನು ವಹಿಸಿಕೊಂಡ ಅವರ ಪುತ್ರ ಎಂ.ಕೆ. ಸ್ಟಾಲಿನ್‌ ಅವರು ಡಿಎಂಕೆ ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯ ಮುಂಚಿನಿಂದಲೂ ಕಾಂಗ್ರೆಸ್‌ ಬಿಜೆಪಿ ರಾಷ್ಟ್ರೀಯ ಮುಖಂಡರುಗಳು ಭೇಟಿ ನೀಡುವ ಮೂಲಕ, ಜಲ್ಲಿಕಟ್ಟು ಒಳಗೊಂಡು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅದಾಗಲೇ ಚುನಾವಣಾ ಪ್ರಚಾರ ಪ್ರಾರಂಭಿಸಿದರು.

ಡಿಎಂಕೆ ಪಕ್ಷದೊಂದಿಗೆ ಕಾಂಗ್ರೆಸ್‌ ಮೈತ್ರಿಯಲ್ಲಿ ವಿಧಾನಸಭಾ ಕ್ಷೇತ್ರಗಳ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಅಸಮಾಧಾನ ಹೊಗೆಯಾಡುತ್ತಿತ್ತು. ಅಂತಿಮವಾಗಿ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಕಾಂಗ್ರೆಸ್‌ ಪಕ್ಷಕ್ಕೆ ಬಿಟ್ಟುಕೊಡುವ ಮೂಲಕ ಮೈತ್ರಿಯನ್ನು ಗಟ್ಟಿಗೊಳಿಸಿಕೊಂಡವು.

ದಶಕಗಳ ಕಾಲ ಅಧಿಕಾರ ನಡೆಸಿದ ಡಿಎಂಕೆಗೆ ದಶಕದಿಂದ ಕೈ ತಪ್ಪಿದ್ದ ಅಧಿಕಾರವನ್ನು ಮರಳಿ ಪಡೆಯಬೇಕೆಂಬುದಾಗಿದೆ,  ಎಐಎಡಿಎಂಕೆಗೆ ಸತತ ಮೂರನೇ ಬಾರಿ ಜಯಭೇರಿ ಬಾರಿಸಬೇಕೆಂಬ ಹಂಬಲ.

ಈ ಹಿಂದೆ ಎಐಎಡಿಎಂಕೆ ಪಕ್ಷವು ʻಅಮ್ಮʼ ಹೆಸರಿನ ಯೋಜನೆಗಳು ಜಾರಿಮಾಡುವ ಮೂಲಕ ಜನಪ್ರಿಯತೆ ಉತ್ತುಂಗಕ್ಕೆ ಹೋದವು. ಈ ಸರಿಯ ಪ್ರಣಾಳಿಕೆಗಳಲ್ಲಿ ಜನಪ್ರಿಯ ಯೋಜನೆಗಳ ಬದಲಾಗಿದೆ. ವಿಭಾಗವಾರು, ನಿರ್ದಿಷ್ಠ ಕ್ಷೇತ್ರಗಳ ಬಗ್ಗೆ ತಮ್ಮ ಕಾರ್ಯದ ಬಗ್ಗೆ ಘೋಷಣೆಗಳನ್ನು ಮಂಡಿದ್ದಾರೆ.

ಚುನಾವಣಾ ಪ್ರಚಾರದ ತುಂಬಾ ಜೋರಾಗಿರುವ ಈ ಸಂದರ್ಭದಲ್ಲಿ ಮೈತ್ರಿಪಕ್ಷಗಳ ಆರೋಪ-ಪ್ರತ್ಯಾರೋಪಗಳು ಮಾಡುತ್ತಿರುವ ತಮಿಳುನಾಡಿನಲ್ಲಿ ಮತದಾನದ ಬದಲಾವಣೆ ಆಗಬಹುದೆಂಬ ಚಿತ್ರಣ ಗೊತ್ತಾಗುತ್ತಿವೆ.

ಚುನಾವಣೆಗೆ ಮಾರ್ಚ್‌ 12ರಂದು ಗೆಜೆಟ್ ಅಧಿಸೂಚನೆ ಪ್ರಕಟವಾಗಿದ್ದು, ಮಾರ್ಚ್‌ 19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮಾರ್ಚ್‌ 20 ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನವಾಗಿದೆ. ಏಪ್ರಿಲ್ 6ರಂದು ತಮಿಳುನಾಡಿನ ಎಲ್ಲ 234 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *