ಸಕಲೇಶಪುರ: ಈ ಭಾಗಗಳಲ್ಲಿನ ಕಾಫಿ ತೋಟಗಳಲ್ಲಿ ಹಲವು ವರ್ಷಗಳಿಂದ ಅಡ್ಡಾಡಿಕೊಂಡಿರುವ ಕಾಡಾನೆ ಜನರ ಜೀವ, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡುತ್ತಿವೆ. ಇದರಿಂದ ವೃದ್ದ ವ್ಯಕ್ತಿಯೊಬ್ಬ ಕಾಫಿ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ಕೃಷ್ಣೇಗೌಡ (67) ಎಂದು ಗುರುತಿಸಲಾಗಿದೆ. ತಾಲೂಕಿನ ಸುಂಡೆಕೆರೆ ಸಮೀಪದ ಕೆಲಗಳಲೆ ಗ್ರಾಮದ ತಮ್ಮ ಕಾಫಿ ತೋಟದಲ್ಲಿ ಇಂದು(ಜುಲೈ 02) ಬೆಳಿಗ್ಗೆ ಮಗ ಸುದೀಶ್, ಮೊಮ್ಮಗ ಪ್ರಥಮ್ ಜೊತೆ ತೋಟಕ್ಕೆ ತೆರಳುವ ಸಂದರ್ಭದಲ್ಲಿ ಕಾಡಾನೆಯೊಂದು ದಾಳಿ ನಡೆಸಿ ವೃದ್ಧನನ್ನು ತುಳಿದು ಸಾಯಿಸಿದೆ. ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಮೃತ ಶರೀರವನ್ನು ರವಾನಿಸಲಾಗಿದೆ.
ವೃದ್ದನ ಸಾವಿಗೆ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದ್ದು, ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಮಂಗಳವಾರ ತಾಲ್ಲೂಕಿನ ಉದೇವಾರ ಗ್ರಾಮದ ಮನೆಯೊಂದರ ಮೇಲೆಯೂ ಕಾಡಾನೆ ದಾಳಿ ಮಾಡಿ ಸಾಕಷ್ಟು ಹಾನಿ ಮಾಡಿದೆ. ಮರುದ ಕಾಫಿತೋಟದಲ್ಲಿ ಆನೆಯನ್ನು ಅರಣ್ಯ ಇಲಾಖೆ ಪತ್ತೆ ಮಾಡಿ ಸೆರೆ ಹಿಡಿದರು.