ಗಂಗಾವತಿ : ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನದ ಎರಡನೇ ದಿನದಂದು ಇತ್ತೀಚಿಗೆ ಶಾಲೆಗಳಲ್ಲಿ ಮೊಟ್ಟೆ ನೀಡುವ ಪ್ರಸ್ತಾಪವನ್ನು ವಿರೋಧಿಸಿದ ಮಠಾಧೀಶರ ವಿರುದ್ಧ ʻಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಏನು ಮಾಡುತ್ತೀರಿ?ʼ ಎಂದು ಬಹಿರಂಗ ಸವಾಲು ಹಾಕಿದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಎಸ್‌ಎಫ್‌ಐ ಸದಸ್ಯೆ ಸರ್ಕಾರಿ ಪ್ರೌಡಶಾಲೆಯ 8ನೇ ತರಗತಿಯ ಅಂಜಲಿಗೆ ಸನ್ಮಾನಿಸಲಾಯಿತು.
ಸಿಪಿಐ(ಎಂ) ರಾಷ್ಟ್ರೀಯ ಮುಖಂಡ ಪ್ರಕಾಶ್ ಕಾರಟ್ ಕಿರುಕಾಣಿಕೆ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಾಲಿಟ್ ಬ್ಯೂರೋ ಸದಸ್ಯರಾದ ಬಿ.ವಿ.ರಾಘವಲು ಮತ್ತು ಎಂ.ಎ. ಬೇಬಿ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿದ್ದ ಕೋಳಿ ಮೊಟ್ಟೆ ಕೊಡುವುದನ್ನು ನಿಲ್ಲಿಸಿದ್ದರ ವಿರುದ್ಧ ರಾಜ್ಯಾದ್ಯಂತ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಸದಸ್ಯೆ ಅಂಜಲಿ ಹೇಳಿದ ಮಾತುಗಳು ಸಾಕಷ್ಟು ವೈರಲ್ ಆಗಿತ್ತು. ” ಮೊಟ್ಟೆಗೆ ವಿರೋಧ ಮಾಡಿದರೆ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಅಂಜಲಿ ಆಕ್ರೋಶ ಹೊರ ಹಾಕಿದ್ದಳು.
ಅಪೌಷ್ಠಿಕತೆಯನ್ನು ತಡೆಯುವ ಉದ್ದೇಶದಿಂದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆ ನೀಡಬೇಕೆಂಬ ಆಗ್ರಹ ರಾಜ್ಯದ ಹಲವು ಕಡೆಗಳಲ್ಲಿ ಕೇಳಿ ಬರುತ್ತಿವೆ. ಇದರಿಂದ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗುತ್ತದೆ ಎಂಬುದು ಗಮನಾರ್ಹ ಅಂಶವಾಗಿದೆ.