- ಆರ್ಥಿಕ ಸಂಕಷ್ಟದಿಂದ ಹೊರಬರಲು ಪರದಾಟ
- ಶಾಂತಿನಗರದಲ್ಲಿನ 7.15 ಎಕರೆ ಅಡಮಾನ
- 100 ಕೋಟಿ ಸಹಾಯಧನ ಸಿಕ್ಕರೂ ಸುಧಾರಿಸದ ಪರಿಸ್ಥಿತಿ
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈಗ ಸಾಲದ ಸುಳಿಯತ್ತ ಸಾಗುತ್ತಿದೆ. ಕೋಟಿ ಕೋಟಿ ಸಾಲ ಮಾಡಿದ್ದರಿಂದ ತನ್ನ ಕಟ್ಟಡವನ್ನೇ ಅಡವಿಡುವ ಹಂತಕ್ಕೆ ಹೋಗಿದೆ. ರಾಜಧಾನಿ ಜನರ ಜೀವನಾಡಿಯಾದ, ದೇಶದ ನಂಬರ್ 1 ಸಾರಿಗೆ ಸಂಸ್ಥೆ ಬಿಎಂಟಿಸಿ ಸಾಲದ ಶೂಲದಿಂದ ಹೊರಬರಲು ಆಗುತ್ತಿಲ್ಲ.
ಸಾಲಕ್ಕಾಗಿ ಸಂಸ್ಥೆಯ ಕಟ್ಟಡ ಹಾಗೂ ಸ್ಥಳವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ. 160 ಕೋಟಿ ರೂ. ಹಾಗೂ 230 ಕೋಟಿ ರೂ. ಸಾಲ ಪಡೆಯಲು ಶಾಂತಿನಗರ ಬಿಎಂಟಿಸಿಯನ್ನು ಅಡಮಾನ ಇಡಲಾಗಿದೆ ಎಂದು ಹೇಳಲಾಗುತ್ತಿದೆ.
ಆರ್‌ಟಿಐ ಕಾರ್ಯಕರ್ತ ಸಿದ್ದರಾಮಾರಾಧ್ಯ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖೆಲೆಯಿಂದಾಗಿ ಬಿಎಂಟಿಸಿಯ ಸಾಲಹೊರೆ ಎಷ್ಟು ಎಂಬುದು ಪತ್ತೆಯಾಗಿದೆ.
994 ಕೋಟಿ ಸಾಲ ಮಾಡಿರುವ ಬಿಎಂಟಿಸಿ..! : ರಾಜಧಾನಿಯ ಜನರ ಜೀವನಾಡಿ ಬಿಎಂಟಿಸಿ. ಒಂದು ದಿನ ಬಸ್ ಸಂಚಾರ ನಿಂತರೆ ಇಲ್ಲಿ ಎಲ್ಲವೂ ಅಯೋಮಯ. ಹೀಗಿರುವಾಗ ನಿಗಮವೇ ಈಗ ದಯನೀಯ ಪರಿಸ್ಥಿತಿಗೆ ಬಂದು ನಿಂತುಕೊಂಡಿದೆ. ಲಾಭದ ಹಳಿಗೆ ಬಾರದಷ್ಟು ಬಹುದೂರ ಹೋಗಿದ್ದು, ನಷ್ಟದಿಂದ ಪಾರಾಗಲು ನೂರಾರು ಕೋಟಿ ಸಾಲ ಪಡೆದು ಬಡ್ಡಿ ಕಟ್ಟೋಕೆ ಆಗದೆ ಹೆಣಗಾಡುತ್ತಿದೆ.
ಬಿಎಂಟಿಸಿ ಯಾವೆಲ್ಲಾ ವರ್ಷದಲ್ಲಿ ಎಷ್ಟೆಷ್ಟು ಸಾಲ ಮಾಡಿದೆ..?
ವರ್ಷ – ಕೋಟಿ – ಬ್ಯಾಂಕ್
2017-100 ಕೋಟಿ- ಕೆನರಾ ಬ್ಯಾಂಕ್ ನಿಂದ ಸಾಲ
2018 – 125 ಕೋಟಿ KUIDFC ಬ್ಯಾಂಕ್ ನಿಂದ ಸಾಲ
2019- 95 ಕೋಟಿ ಕೆನರಾ ಬ್ಯಾಂಕ್ ನಿಂದ ಸಾಲ
2019-2020-160 ಕೋಟಿ ಸಾಲ
2020-21- 407 ಕೋಟಿ ಸಾಲ
2022- ಮಾರ್ಚ್ 183 ಕೋಟಿ KUIDFC ಸಾಲ ಪಡೆಯಲಾಗಿದ್ದು ಒಟ್ಟು = 994 ಕೋಟಿ ರೂಪಾಯಿ ಸಾಲ ಮಾಡಿದೆ.
ಈ ದುಸ್ಥಿತಿಗೆ ಕಾರಣ ಯಾರು: ಆಡಳಿತ ವೈಫಲ್ಯ ಹಾಗೂ ದುಂದುವೆಚ್ಚಕ್ಕೆ ನಿಯಂತ್ರಣ ಹಾಕಲು ಸಾಧ್ಯವಾಗದೇ ಇರುವುದರಿಂದ ನಿಗಮ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ಕಳೆದ ಹಲವು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರೂ ಅದನ್ನ ಮೇಲಕ್ಕೆತ್ತಲು ಸಾಧ್ಯವಾಗದ ಸ್ಥಿತಿಯಲ್ಲಿದೆ ಸರ್ಕಾರ. ಬಿಎಂಟಿಸಿಯಂತಹ ದಯನೀಯ ಪರಿಸ್ಥಿತಿಗೆ ನಿಜವಾದ ಕಾರಣ ಯಾರು ಅನ್ನುವ ಪ್ರಶ್ನೆಗೆ ನಿಗಮದ ಅಧಿಕಾರಿಗಳು, ಸಾರಿಗೆ ಸಚಿವರೇ ಉತ್ತರ ನೀಡಬೇಕಿದೆ. ಬಿಎಂಟಿಸಿ ಇತಿಹಾಸದಲ್ಲೇ ಅತ್ಯಧಿಕ ಸಾಲ ಪಡೆದಿದ್ದು 2017 ರಿಂದ 2022 ಮಾರ್ಚ್ ವರಿಗೆ ಬರೋಬ್ಬರಿ 994 ಕೋಟಿ ಸಾಲ ಪಡೆದಿದೆ.
ಸಾಲ ಸಾಲದ ಮೇಲಿನ ಬಡ್ಡಿ ಹೀಗೆ ಏಕಾಏಕಿ ಸಾಲವನ್ನು ಪಡೆಯದೆ ಹಂತಹಂತವಾಗಿ ಸಾಲವನ್ನು ಪಡೆದು 994 ಕೋಟಿ ಸಾಲವನ್ನು ಪಡೆಯುವ ಮೂಲಕ ಬಿಎಂಟಿಸಿ ತನ್ನ ದಿವಾಳಿತವನ್ನು ಜಗಜ್ಜಾಹೀರು ಮಾಡಿದೆ.
ಬಿಎಂಟಿಸಿ ನಿಗಮದ ಆಡಳಿತ ವೈಫಲ್ಯ, ನಿಯಂತ್ರಣಕ್ಕೆ ಬಾರದ ಅಕ್ರಮಗಳಿಂದ ನಿಗಮ ದಿವಾಳಿಯಾಗಿದ್ದು 2013 ರಿಂದಲೂ ಆರ್ಥಿಕವಾಗಿ ಚೇತರಿಕೆ ಕಾಣುತ್ತಿಲ್ಲ. ಇದರಿಂದ ಪಾರಾಗಲು ಕೋಟಿ ಕೋಟಿ ಸಾಲ ಪಡೆದು ಮರುಪಾವತಿಸಲು ಹೆಣಗಾಡುತ್ತಿದೆ. ನಿಗಮ ಹೀಗೆ ಸಾಲ ಮಾಡಿದರೆ ಮುಂದೊಂದು ದಿನ ಬಿಎಂಟಿಸಿಗೆ ಬೀಗ ಹಾಕುವ ಸ್ಥಿತಿ ನಿರ್ಮಾಣವಾಗಬಹುದು.
ಶಾಂತಿನಗರ ಬಸ್ ನಿಲ್ದಾಣ ಅಡಮಾನ : ನಗರದ ಹೃದಯ ಭಾಗದಲ್ಲಿರುವ ಶಾಂತಿನಗರದ ಕೆ.ಎಚ್.ರಸ್ತೆಯಲ್ಲಿ ಬಿಎಂಟಿಸಿ ಕೇಂದ್ರ ಕಚೇರಿ ಮತ್ತು 4 ಬಸ್‌ಬೇಗಳನ್ನು ಒಳಗೊಂಡ ನಿಲ್ದಾಣವಿದೆ. ಬಹುಮಹಡಿ ವಾಹನ ನಿಲ್ದಾಣ ಕಟ್ಟಡವೂ ಇದೆ. ಟಿಟಿಎಂಸಿ ನಿಲ್ದಾಣದ ಕಟ್ಟಡದಲ್ಲಿ ಸಾರಿಗೆ ಇಲಾಖೆ, ಅಬಕಾರಿ ಸೇರಿದಂತೆ ಹಲವು ಸರಕಾರಿ ಇಲಾಖೆಗಳು ಹಾಗೂ ಖಾಸಗಿ ವಾಣಿಜ್ಯ ಮಳಿಗೆಗಳೂ ಇವೆ.
ಸುಮಾರು 7.15 ಎಕರೆ ಜಾಗವು ಒಂದು ಸಾವಿರ ಕೋಟಿ ರೂ. ಬೆಲೆ ಬಾಳುತ್ತದೆ. ಈ ಜಾಗವನ್ನು ರಾಜ್ಯ ಸರಕಾರದ ಅನುಮತಿ ಪಡೆದು 230 ಕೋಟಿ ರೂ. ಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ವೊಂದರಲ್ಲಿ ಅಡಮಾನವಿಟ್ಟು ಸಾಲ ಪಡೆಯಲಾಗಿದೆ ಎಂಬ ಅಂಶ ಮಾಹಿತಿ ಹಕ್ಕಿನಿಂದ ಬಯಲಾಗಿದೆ.