ರಾಜಕೋಟ್ : ಗುಜರಾತ್ ತೂಗು ಸೇತುವೆ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 100ಕ್ಕೇರಿದೆ. 140 ವರ್ಷಗಳಿಂದ ಬಳಕೆಯಲ್ಲಿಲ್ಲದ ಸೇತುವೆಯನ್ನು ಇತ್ತೀಚೆಗಷ್ಟೇ ನವೀಕರಿಸಿ, ಐದು ದಿನಗಳ ಹಿಂದಷ್ಟೇ ಬಳಕೆಗೆ ತೆರೆಯಲಾಗಿತ್ತು. ಅಹಮದಾಬಾದ್‌ನಿಂದ 200 ಕಿಮೀ ದೂರದಲ್ಲಿರುವ ತೂಗು ಸೇತುವೆ ಭಾನುವಾರ ಸಂಜೆ 6.42ಕ್ಕೆ ಕುಸಿದು ಬಿದ್ದಿದ್ದು, ಛಾತ್ ಪೂಜೆಯ ಕೆಲವು ಆಚರಣೆಗಳನ್ನು ಮಾಡಲು ಸುಮಾರು 500 ಜನರು ಸೇತುವೆ ಮೇಲೆ ಜಮಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಗುಜರಾತ್‍ನ ರಾಜ್ಯ ಸಚಿವ ಮತ್ತು ಮೊರ್ಬಿ ಶಾಸಕ ಬ್ರಿಜೇಶ್ ಮೆರ್ಜಾ 60ಕ್ಕೂ ಹೆಚ್ಚು ಸಾವುಗಳನ್ನು ದೃಢಪಡಿಸಿದ್ದು, ದುರಂತ ಸಂಭವಿಸಿದ ನಾಲ್ಕು ಗಂಟೆಗಳ ಬಳಿಕ ಬದುಕಿ ಉಳಿದಿರುವ ಸಾಧ್ಯತೆ ಕ್ಷೀಣ ಎಂದು ತಡರಾತ್ರಿ ಹೇಳಿಕೆ ನೀಡಿದ್ದಾರೆ.
ಈಗಾಗಲೇ 50ಕ್ಕೂ ಹೆಚ್ಚು ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಡುಗತ್ತಲು ಮತ್ತು ಪಾಚಿಯ ದಪ್ಪ ಪದರಗಳು ಶೋಧ ಕಾರ್ಯಾಚರಣೆಗೆ ತೊಡಕು ಉಂಟು ಮಾಡಿವೆ ಎಂದು ರಾಜಕೋಟ್ ಸಂಸದ ಮೋಹನ್ ಕುಂದಾರಿಯಾ ಹೇಳಿದ್ದಾರೆ.
ಪರಿಹಾರ ಕಾರ್ಯಾಚರಣೆಗಾಗಿ ಗರುಡಾ ಕಮಾಂಡೊ ಪಡೆ ಮತ್ತು ಭಾರತೀಯ ವಾಯುಪಡೆಯ ತಂಡ ಜಾಮ್‍ನಗರದಿಂದ ಧಾವಿಸಿದೆ. ವೈದ್ಯಕೀಯ ಆಯಂಬುಲೆನ್ಸ್ ಮತ್ತು ಅಕ್ಕಪಕ್ಕದ ಜಿಲ್ಲೆಗಳ ವೈದ್ಯರನ್ನು ಮೊರ್ಬಿಗೆ ಕರೆಸಲಾಗಿದ್ದು, ಗಾಯಾಳುಗಳಿಗೆ ಗರಿಷ್ಠ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಬ್ರಿಟಿಷ್ ಯುಗದ ಸೇತುವೆ, ಜನದಟ್ಟಣೆಯ ಕಾರಣದಿಂದ ಕುಸಿದಿರುವ ಸಾಧ್ಯತೆ ಇದೆ. ಏಕೆಂದರೆ 400ಕ್ಕೂ ಹೆಚ್ಚು ಟಿಕೆಟ್‍ಗಳನ್ನು ಪ್ರವಾಸಿಗರಿಗೆ ಈ ವೇಳೆಗಾಗಲೇ ನೀಡಲಾಗಿತ್ತು ಎಂದು ರಸ್ತೆ ಮತ್ತು ಕಟ್ಟಡ ಖಾತೆ ರಾಜ್ಯ ಸಚಿವ ಜಗದೀಶ್ ಪಾಂಚಾಲ್ ಹೇಳಿದ್ದಾರೆ,
ಸರ್ಕಾರಿ ಟೆಂಡರ್ ಮೂಲಕ ಸೇತುವೆಯನ್ನು ನವೀಕರಿಸಿದ ಒರೆವಾ ಎಂಬ ಖಾಸಗಿ ಟ್ರಸ್ಟ್ ಪುನರಾರಂಭದ ಮೊದಲು ಅಧಿಕಾರಿಗಳಿಂದ ಗುಣಮಟ್ಟ ಪ್ರಮಾಣಪತ್ರವನ್ನು ತೆಗೆದುಕೊಂಡಿಲ್ಲ ಎಂದು ಮೊರ್ಬಿ ಮುನ್ಸಿಪಲ್ ಏಜೆನ್ಸಿ ಮುಖ್ಯಸ್ಥ ಸಂದೀಪ್‌ಸಿನ್ಹ್ ಜಲಾ ತಿಳಿಸಿದ್ದಾರೆ.
“ಒರೆವಾ ಸಮೂಹವು ಸೇತುವೆಯನ್ನು ತೆರೆಯುವ ಮೊದಲು ಅದರ ನವೀಕರಣದ ವಿವರಗಳನ್ನು ನೀಡಬೇಕಾಗಿತ್ತು. ಗುಣಮಟ್ಟ ಪರಿಶೀಲನೆಯ ಪ್ರಮಾಣಪತ್ರ ಪಡೆಯಬೇಕಿತ್ತು. ಆದರೆ ಸಂಸ್ಥೆ ಯಾವುದನ್ನು ಮಾಡಿಲ್ಲ. ಈ ಬಗ್ಗೆ ಸರ್ಕಾರಕ್ಕೆ ತಿಳಿದಿರಲಿಲ್ಲ,” ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ, “ಗುಜರಾತ್‌ನ ಕಳ್ಳಭಟ್ಟಿ ದುರಂತದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಯಿಂದ ಇದೀಗ ಚೇತರಿಸಿಕೊಂಡಿದೆ. ಇದರ ಬೆನ್ನಲ್ಲೇ ಈಗ ಸೇತುವೆ ಕುಸಿದು ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್ ಮಾಡೆಲ್ ಎಂದರೆ, ‘ಸಾವು’ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ತನಿಖಾ ಸಮಿತಿ ರಚನೆ : ಸಿಎಂ, ಐಎಎಸ್ ಅಧಿಕಾರಿ ನೇತೃತ್ವದ ಐದು ಸದಸ್ಯರ ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸಿದ್ದಾರೆ. ಪೌರಾಡಳಿತ ಆಯುಕ್ತ ರಾಜ್ಕುಮಾರ್ ಬೇನಿವಾಲ್, ಸಂದೀಪ್ ವಾಸವ, ಪೊಲೀಸ್ ಮಹಾನಿರೀಕ್ಷಕ ಸುಭಾಷ್ ತ್ರಿವೇದಿ ಮತ್ತು ರಚನಾತ್ಮಕ ಮತ್ತು ಗುಣಮಟ್ಟ ನಿಯಂತ್ರಣದಲ್ಲಿ ಪರಿಣತಿ ಹೊಂದಿರುವ ಇಬ್ಬರು ಎಂಜಿನಿಯರ್ಗಳು ಎಸ್ಐಟಿಯ ನೇತೃತ್ವ ವಹಿಸಲಿದ್ದಾರೆ.